ಸಾಮಾಜಿಕ ನ್ಯಾಯದ ಹರಿಕಾರ ಎಂದೇ ಹೆಸರಾದ ದೇವರಾಜ ಅರಸು ಅವರು ಜೂನ್ 6, 1982ರಂದು ಇಹಲೋಕ ತ್ಯಜಿಸಿದ ದಿನ. ಅವರ ಪುತ್ರಿ ಭಾರತಿ ಅರಸು ಅವರ ನೆನಪುಗಳು...
ಅವಕಾಶ ಕೊಡಬೇಕು
ಅಪ್ಪಾಜಿ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು ‘ಅಧಿಕಾರ ಎನ್ನುವುದು ಜನ ನನಗೆ ಕೊಟ್ಟಿರುವುದು, ಅದು ನನ್ನದಲ್ಲ. ಅವರು ಕೊಟ್ಟಿರುವ ಅಧಿಕಾರ ಅವರಿಗಾಗಿಯೇ ಬಳಕೆಯಾಗಬೇಕು; ಎಲ್ಲರೂ ಚೆನ್ನಾಗಿರಬೇಕು; ಎಲ್ಲರಿಗೂ ಅವಕಾಶ ಕೊಡಬೇಕು. ಅವಕಾಶನೇ ಇಲ್ಲದಿದ್ದರೆ ಅವರು ಮುಂದೆ ಬರಲು ಹೇಗೆ ಸಾಧ್ಯ’ ಎನ್ನುತ್ತಿದ್ದರು. ಆ ಕಾರಣಕ್ಕಾಗಿಯೇ ರಾಜಕೀಯದಲ್ಲಿ ಮೀಸಲಾತಿಯನ್ನು ಜಾರಿಗೆ ತಂದರು. ಆದರೆ ಆ ಮೀಸಲಾತಿ ಕಾಯ್ದೆಯ ಮೂಲಕ ಮೇಲ್ಜಾತಿಯವರನ್ನು ಕಡೆಗಣಿಸಲಿಲ್ಲ, ಬಗ್ಗುಬಡಿಯಲು ಬಳಸಿಕೊಳ್ಳಲಿಲ್ಲ. ನಮ್ಮ ತಂದೆಯ ಕ್ಯಾಬಿನೆಟ್‌ನಲ್ಲಿ ಬ್ರಾಹ್ಮಣರ ಗುಂಡೂರಾವ್, ಲಿಂಗಾಯತರ ಕೆ.ಎಚ್.ಪಾಟೀಲ್, ಒಕ್ಕಲಿಗರ ಎಸ್.ಎಂ.ಕೃಷ್ಣ… ಹೀಗೆ ಎಲ್ಲ ಜಾತಿಯ ಜನರೂ ಇದ್ದರು. ಅವರಿಗೆಲ್ಲ ಫ್ರೀ ಹ್ಯಾಂಡ್ ಕೊಟ್ಟಿದ್ದರು. ಅಪ್ಪಾಜಿ ಕೊಟ್ಟ ಫ್ರೀಡಂ ಅನ್ನು ಕೆಲವರು ದುರುಪಯೋಗಪಡಿಸಿಕೊಂಡರು. ಸರಕಾರಕ್ಕೆ ಕೆಟ್ಟ ಹೆಸರು ತಂದರು.
ಆದರೆ ಅಪ್ಪಾಜಿ ಎಂದೂ ಕರಪ್ಟ್ ಆಗಲಿಲ್ಲ. ನಮಗಾಗಿ ಆಸ್ತಿ ಮಾಡಲಿಲ್ಲ. ‘ಏನು ಮಾಡೋಕ್ರಿ ಆಸ್ತಿ, ಮೂರು ಹೆಣ್ಣು ಮಕ್ಕಳು ಅವರವರ ಗಂಡನ ಮನೆಗೆ ಹೋಗ್ತರೆ, ನಾನು ನನ್ನ ಹೆಂಡ್ತಿ ಜನರು ರಾಜಕೀಯ ಮಾಡಿ ಎನ್ನುವವರೆಗೆ ಮಾಡ್ತೀವಿ, ಬೇಡ ಅಂದ್ರೆ ಊರಿಗೆ ಹೋಗ್ತಿವಿ, ಜಮೀನಿದೆ, ಕೃಷಿ ಗೊತ್ತಿದೆ. ಎರಡು ಹೊತ್ತು ಊಟಕ್ಕೇನು ತೊಂದರೆ ಇಲ್ಲ’ ಎನ್ನುತ್ತಿದ್ದರು. ನಿರೀಕ್ಷೆಗಳಿರಲಿಲ್ಲ, ಲೆಕ್ಕಾಚಾರವಿರಲಿಲ್ಲ, ದ್ವೇಷ ಅಸೂಯೆಗಳಿರಲಿಲ್ಲ, ಸ್ವಾರ್ಥವಿರಲಿಲ್ಲ, ಅವರ ಬಳಿ ಕ್ಷಮೆಗೂ ಒಂದು ಅವಕಾಶ ವಿತ್ತು… ಅದನ್ನೆಲ್ಲ ಈಗ ನೆನೆದರೆ ಅವರು ನನ್ನ ತಂದೆ ಎನ್ನುವುದಕ್ಕೆ ಬಹಳ ಹೆಮ್ಮೆ ಆಗುತ್ತದೆ.
ನೀವೂ ಕೂಡ ಮೈನಾರಿಟಿ…
ಮೊದಲನೆ ಸಲ, 1972ರಲ್ಲಿ ಅಪ್ಪಾಜಿ ಮುಖ್ಯಮಂತ್ರಿಯಾದರಲ್ಲ, ಆಗ ಕೆಲವು ಸ್ವಾರಸ್ಯಕರ ಸಂಗತಿಗಳು ಜರುಗಿದವು. ನಮ್ಮ ತಂದೆ ಪಾರ್ಟಿ ಪ್ರೆಸಿಡೆಂಟ್ ಆಗಿದ್ದರು, ರಾಜ್ಯದ ಎಲ್ಲಾ ಕಡೆ ಟೂರ್ ಮಾಡಬೇಕು, ಪಕ್ಷ ಗೆಲ್ಲಿಸಬೇಕು ಎಂದು ಹೇಳಿ ಚುನಾವಣೆಗೆ ನಿಲ್ಲದಂತೆ ನೋಡಿಕೊಳ್ಳಲಾಯಿತು. ನಮ್ಮೂರಲ್ಲಿ ಅಪ್ಪಾಜಿ ಬದಲಿಗೆ ಕರಿಯಪ್ಪಗೌಡರನ್ನು ಕಣಕ್ಕಿಳಿಸಲಾಯಿತು. ಅಭೂತಪೂರ್ವ ಜಯಭೇರಿ. ಆದರೆ ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ವಿಷಯ ಬಂದಾಗ, ಹಲವರು ಹಲವು ರೀತಿಯ ವೇಷಗಳನ್ನೇ ಹಾಕಿದರು. ಅಧಿಕಾರ ಅಲ್ಲವೇ?
ಅದರಲ್ಲೂ ಕೆಂಗಲ್ ಹನುಮಂತಯ್ಯನವರು, ಬೆಳಗಿನ ಬ್ರೇಕ್ ಫಾಸ್ಟ್‌ಗೆ ಮನೆಗೇ ಬಂದುಬಿಟ್ಟರು. ನಮಗೆ ಕೆಂಗಲ್ ಹನುಮಂತಯ್ಯನವರು ಹೀಗೆ ಇದ್ದಕ್ಕಿದ್ದಂತೆ ಮನೆಗೆ ಬಂದದ್ದು ನೋಡಿ ಆಶ್ಚರ್ಯ. ತಿಂಡಿ ತಿನ್ನುತ್ತಾ ಕೆಂಗಲ್ ಹನುಮಂತಯ್ಯನವರು, ‘ಅರಸು, ಈ ಸಲ ನಾನೇ ಸಿಎಂ ಆಗಿಬಿಡ್ತಿನಪ್ಪ, ಮುಂದಿನ ಸಲ ನೀನೇ ಆಗು, ನಿನ್ನ ಬೆನ್ನಿಗೆ ನಾನು ನಿಂತು ಬೆಂಬಲಿಸುತ್ತೇನೆ, ಈಗ ನೀನಿನ್ನೂ ಯುವಕ, ಚಿಕ್ಕ ವಯಸ್ಸು, ನನಗೆ ವಯಸ್ಸಾಗಿದೆ, ಈ ಬಾರಿ ಬೆಂಬಲಿಸು’ ಎಂದು ವಿನಂತಿಸಿಕೊಂಡರು.
ಇದನ್ನು ಓದಿದ್ದೀರಾ?: ಬೆಂಗಳೂರು ದುರಂತ | ಭೀಕರ ಘಟನೆಗೆ ಏನೆಲ್ಲ ಕಾರಣಗಳು– ಸಂಪೂರ್ಣ ವರದಿ
ಅದಕ್ಕೆ ಅಪ್ಪಾಜಿ, ಶಾಂತವಾಗಿ, ‘ನೋಡಿ, ನನ್ನ ಹಣೆಬರಹದಲ್ಲಿ ಬರೀದೆ ಇದ್ರೆ ನೂರು ಹನುಮಂತಯ್ಯನವರು ಸೇರಿದರೂ ಸಿಎಂ ಮಾಡಲಿಕ್ಕಾಗಲ್ಲ, ಬರದಿದ್ರೆ ನೂರು ಜನ ಹನುಮಂತಯ್ಯನವರು ಸೇರಿದ್ರು ತಪ್ಪಿಸೋಕ್ಕಾಗಲ್ಲ, ಈಗ ಬನ್ನಿ, ಮೇಡಂ ಬಂದಿದಾರೆ, ಅಲ್ಲಿಗೆ ಹೋಗೋಣ’ ಎಂದು ನಮ್ಮನೆಯಿಂದಾನೆ ಕುಮಾರಕೃಪಾ ಗೆಸ್ಟ್ ಹೌಸ್‌ಗೆ ಹೋದರು.
ಅಲ್ಲಿ ಅಪ್ಪಾಜಿಗಿಂತ ಹಿರಿಯರು, ಅನುಭವಿಗಳು, ಜಾತಿ ಬಲಾಢ್ಯರು, ಹಣವಂತರು ಹಲವರಿದ್ದರು. ಅವರ ಅಭಿಪ್ರಾಯಗಳನ್ನು ಕೇಳಿದ ಮೇಲೆ ಇಂದಿರಾ ಗಾಂಧಿ, ಅಪ್ಪಾಜಿಯನ್ನು ಕರೆಸಿದರು. ಅಪ್ಪಾಜಿಗೆ, ‘ಯೂ ಬಿಲಾಂಗ್ಸ್ ಟು ಮೈಕ್ರೋಸ್ಕೋಪಿಕ್ ಮೈನಾರಿಟಿ, ಹೌ ಕೆನ್ ಯೂ ಮ್ಯಾನೇಜ್’ ಎಂದರಂತೆ. ಅದಕ್ಕೆ ಅಪ್ಪಾಜಿ ನನ್ನ ಅಭಿಪ್ರಾಯ ಹೇಳಬಹುದೆ ಎಂದು ಕೇಳಿ ಓಕೆ ಎಂದ ಮೇಲೆ, ‘ನೀವು ಕೂಡ ಮೈನಾರಿಟಿನೇ ಅಲ್ವಾ, ನಿಮಗೆ ಅವಕಾಶ ಸಿಕ್ತು, ನಿಭಾಯಿಸಿದಿರಿ, ನನಗೊಂದು ಅವಕಾಶ ಕೊಟ್ಟು ನೋಡಿ’ ಎಂದರಂತೆ. ಒಂದು ಕ್ಷಣ ಸ್ಟನ್ ಆದ ಇಂದಿರಾ ಗಾಂಧಿ, ಅಪ್ಪಾಜಿಯ ಮಾತಿನಲ್ಲಿ ಚಿಂತನೆಗೆ ಯೋಗ್ಯವಾದದ್ದಿದೆ ಎಂದು ನಿರ್ಧರಿಸಿ, ‘ಅರಸು ಮುಖ್ಯಮಂತ್ರಿ’ ಎಂದು ಘೋಷಿಸಿದರಂತೆ. ಮುಂದಿನದು ಇತಿಹಾಸ… ನಿಮಗೇ ಗೊತ್ತು.
ನಮ್ಮನೆಯ ಮ್ಯಾನ್‌ಫ್ರೈಡೆ
ಕಲ್ಲಳ್ಳಿಯಲ್ಲಿದ್ದಾಗ ನಮ್ಮ ಮನೆ ಕೆಲಸಕ್ಕೆಂದು ಒಬ್ಬ ಆಳಿದ್ದ. ಆತನ ಹೆಸರು ಚೆಲುವಯ್ಯ. ಆತ ನಮ್ಮನೆಯಲ್ಲಿ ಚಿಕ್ಕವನಿಂದಲೂ ಇದ್ದು ನಮ್ಮನೆಯವನೇ ಆಗಿಹೋಗಿದ್ದ. ಅವನಿಗೆ ಮೂರು ಜನ ಹೆಂಡತಿಯರು, ಹತ್ತೋ ಹನ್ನೊಂದೋ ಮಕ್ಕಳು. ಅವನಿಗೆ ಅಪ್ಪಾಜಿ ಅಂದರೆ ಪ್ರಾಣ. ಮನೆ, ಮಠ, ಹೆಂಡತಿ-ಮಕ್ಕಳು ಎಲ್ಲರನ್ನು ಬಿಟ್ಟು ಅವರೊಂದಿಗೇ ಇದ್ದುಬಿಡುತ್ತಿದ್ದ. ಅವರೆಲ್ಲಿಗೆ ಹೋದರೂ ಹೋಗುತ್ತಿದ್ದ. ಅವನು ಎಷ್ಟು ಸ್ವಾಮಿಭಕ್ತ, ನಂಬಿಕಸ್ಥ ಅಂದರೆ, ಅಪ್ಪಾಜಿ ಬಿಟ್ಟು ಬೇರೆ ಜಗತ್ತೇ ಗೊತ್ತಿಲ್ಲದ ವ್ಯಕ್ತಿ. ಅವನದೊಂದು ವಿಶೇಷವಿತ್ತು, ಊರಿನದ್ದು ಮತ್ತು ಬೆಂಗಳೂರಿನದ್ದು, ಎಲ್ಲ ಸುದ್ದಿಯನ್ನು ಪಿನ್ ಟು ಪಿನ್ ಹೇಳುತ್ತಿದ್ದ. ಅದೇನು ಗಾಸಿಪ್ ಅಲ್ಲ, ಸತ್ಯ ಸುದ್ದಿಗಳು, ಎಲ್ಲರಿಗಿಂತ ಮುಂಚೆ ಗ್ರಹಿಸಿ, ಅದರ ಆಳ-ಅಗಲ ತೂಗಿ ನೋಡಿ, ಅಪ್ಪಾಜಿ ಕಿವಿಗೆ ಮುಟ್ಟಿಸುತ್ತಿದ್ದ.
ಅವನದೊಂಥರಾ ಪ್ಯಾರಲಲ್ ಇಂಟಲಿಜೆನ್ಸ್. ಅದಕ್ಕೆಂದೇ ಒಂದು ಇಲಾಖೆ, ಸಿಬ್ಬಂದಿ, ಅಧಿಕಾರಿಗಳು ಇದ್ದರೂ, ಅವರಿಗೂ ಸಿಗದ ಸಿಕ್ರೆಟ್ ವಿಷಯಗಳನ್ನು; ಅವರಿಗಿಂತ ಮುಂಚೆ ಪತ್ತೆ ಹಚ್ಚಿ ಅಪ್ಪಾಜಿಗೆ ತಿಳಿಸುತ್ತಿದ್ದ. ಅವನು ಏನು ಹೇಳುತ್ತಿದ್ದನೋ ಅದು ನಿಜವಾಗಿ, ಕೆಲವೇ ದಿನಗಳಲ್ಲಿ ಅದು ಗೋಚರಿಸುತ್ತಿತ್ತು. ಅವನನ್ನು ನೋಡಿದರೆ ಎಲ್ಲರೂ ಹೆದರುತ್ತಿದ್ದರು. ನಾವೆಲ್ಲ ಅವನನ್ನು ಮ್ಯಾನ್‌ಫ್ರೈಡೆ(ಡೇನಿಯಲ್ ಡೆಫೋನ ರಾಬಿನ್‌ಸನ್ ಕ್ರೂಸೋ ಪುಸ್ತಕದ ಒಂದು ಪಾತ್ರ) ಎನ್ನುತ್ತಿದ್ದೆವು.
ಅವನಿಗೂ ಅಪ್ಪಾಜಿಗೂ ಎಂಥ ಆತ್ಮೀಯತೆ ಇತ್ತೆಂದರೆ, ಅವರಿಬ್ಬರೂ ರಕ್ತ ಹಂಚಿಕೊಂಡು ಹುಟ್ಟಿದ್ದಾರೇನೋ ಎನಿಸುತ್ತಿತ್ತು. ವಿಪರ್ಯಾಸಕರ ಸಂಗತಿ ಎಂದರೆ, ಅಪ್ಪಾಜಿ ಹೋದ ಮೇಲೆ ಮಂಕಾದ, ಮೌನಿಯಾದ, ಒಬ್ಬಂಟಿಯಾದ. ಕೆಲವೇ ತಿಂಗಳಲ್ಲಿ ಅದೇ ಕೊರಗಿನಲ್ಲಿ ಸತ್ತು ಹೋದ. ಭೂ ಸುಧಾರಣೆ ಕಾಯ್ದೆ ಜಾರಿಗೆ ಬಂದಾಗ, ಅಪ್ಪಾಜಿ ಅದು ನನ್ನಿಂದಲೇ ಆರಂಭವಾಗಲಿ, ಇಡೀ ರಾಜ್ಯಕ್ಕೆ ಮಾದರಿಯಾಗಲಿ ಎಂದು ನನ್ನ ಹೆಸರಿನಲ್ಲಿದ್ದ 15 ಎಕರೆ ಜಮೀನನ್ನು ಈ ಚೆಲುವಯ್ಯನ ಹೆಸರಿಗೆ ಬರೆದುಕೊಟ್ಟಿದ್ದರು. ಆಗಲೂ ಆತ ನಮ್ಮನೆಯವನೇ ಆಗಿದ್ದ. ಯಜಮಾನನಂತೆ ಬೀಗಲಿಲ್ಲ, ದರ್ಪ ತೋರಲಿಲ್ಲ, ಮನೆ ಬಿಟ್ಟು ಹೋಗಲಿಲ್ಲ.
ಪ್ರತಿ ಹಬ್ಬಕ್ಕೆ ಮನೆಯವರಾದ ನಮಗಿಂತಲೂ ಮುಂಚೆ ಆತನಿಗೆ ಹೊಸ ಬಟ್ಟೆ, ಹೊಸ ಚಪ್ಪಲಿ ತರುತ್ತಿದ್ದರು. ನಮ್ಮ ಮನೆಯಲ್ಲಿ ಅವನದೇ ದರ್ಬಾರು. ಆತ ಏನು ಮಾಡಿದರು ಯಾರೂ ಪ್ರಶ್ನಿಸುತ್ತಿರಲಿಲ್ಲ. ಆತನೂ ಅಷ್ಟೆ, ಹೊರಗಿನವನು ಎಂದು ಯಾವತ್ತೂ ಯೋಚಿಸಿದ್ದಿಲ್ಲ. ಅಪ್ಪಾಜಿ ಊರಿಗೆ ಬಂದರೆ, ಆತನೊಂದಿಗೆ ಬೆಳಗಿನ ಜಾವ ಐದಕ್ಕೆಲ್ಲ ಎದ್ದು ತೋಟಕ್ಕೆ ಇಬ್ಬರೇ ವಾಕ್ ಹೋಗುತ್ತಿದ್ದರು. ಅಲ್ಲೆಲ್ಲ ಸುತ್ತಾಡಿಕೊಂಡು ಬರುವಾಗ, ನಮ್ಮ ತಂದೆ ಸೊಗದೆ ಎಲೆ ಕೊಯ್ದು ತರುತ್ತಿದ್ದರು. ಆ ಹಸಿ ಎಲೆಯಲ್ಲಿ ಎರಡು ಬೀಡಿ ಕಟ್ಟಿ, ಅವರೊಂದು, ಚೆಲುವಯ್ಯನಿಗೊಂದು ಕೊಟ್ಟು, ಇಬ್ಬರೂ ಜಗಲಿಯ ಮೇಲೆ ಕೂತು ಸೇದುತ್ತಿದ್ದರು. ಅವರಿಬ್ಬರು ಆ ಕ್ಷಣವನ್ನು ಅತ್ಯಂತ ಆನಂದದಿಂದ, ಸಂಭ್ರಮದಿಂದ ಸವಿಯುತ್ತಿದ್ದರು. ಅದಾದ ನಂತರ, ಮುಂದಿನ ಕೆಲಸ ಕಾರ್ಯಗಳಿಗೆ ಹೋಗುತ್ತಿದ್ದರು. ಅದನ್ನೆಲ್ಲ ಗಮನಿಸಿದ ನಮ್ಮನೆಯವರು ಮತ್ತು ಊರಿನವರು ಆತನನ್ನು ಅಪ್ಪಾಜಿಯ ‘ದತ್ತು ಪುತ್ರ’ ಎಂದೇ ಕರೆಯುತ್ತಿದ್ದರು. ಈಗಲೂ ಊರಿಗೆ ಹೋದರೆ, ಆತನ ಹೆಂಡತಿ ಮನೆಯ ಹತ್ತಿರ ಬಂದು ಯೋಗಕ್ಷೇಮ ವಿಚಾರಿಸಿಕೊಂಡು ಹೋಗುತ್ತಾರೆ.

ಅಪ್ಪಾಜಿ ಅಂದರೆ ಸಾಗರ
ಅಪ್ಪಾಜಿಯದು ಅಪರೂಪದ ಅಸಾಮಾನ್ಯ ವ್ಯಕ್ತಿತ್ವ. ಸಾಮಾನ್ಯರಲ್ಲಿ ಸಾಮಾನ್ಯರು, ರಾಜರಲ್ಲಿ ರಾಜರು. ಆಲ್‌ವೇಸ್ ಪಾಸಿಟಿವ್, ನೆಗಟಿವ್ ಯೋಚನೆ ಮಾಡಿದ್ದೇ ಇಲ್ಲ. ದೊಡ್ಡತನ, ಧಾರಾಳತನ. ಅದು ಈ ಕಾಲಕ್ಕೆ ದಡ್ಡತನದಂತೆ ಕಾಣಬಹುದು. ಅವರಿಂದಲೇ ರಾಜಕಾರಣಕ್ಕೆ ಬಂದವರು ತಿರುಗಿ ನೋಡದಿದ್ದಾಗ, ‘ನಾನು ಕಾರ್ಖಾನೆ, ತಯಾರು ಮಾಡುತ್ತಲೇ ಇರುತ್ತೇನೆ’ ಎಂದಿದ್ದರು. ನನ್ನ ಪ್ರಕಾರ ಅಪ್ಪಾಜಿ ಸಾಗರವಿದ್ದಂತೆ. ಸಾಗರದೊಡಲಲ್ಲಿ ಏನುಂಟು, ಏನಿಲ್ಲ? ದೊಡ್ಡ ಹಡಗಿರಲಿ, ಚಿಕ್ಕ ತೆಪ್ಪವಿರಲಿ, ಎರಡನ್ನೂ ತನ್ನ ಮೇಲೆ ತೇಲಲು ಬಿಡುತ್ತದೆ. ದಡ ಸೇರಿಸುತ್ತದೆ. ಹಾಗೆಯೇ ನಮ್ಮ ತಂದೆ, ಬಲಾಢ್ಯರಾಗಲಿ, ಬಡವರಾಗಲಿ ಎಲ್ಲರನ್ನು ತಬ್ಬಿದರು, ಎಲ್ಲರೂ ಚೆನ್ನಾಗಿರಲಿ ಎಂದು ಆಶಿಸಿದರು.
ನನಗೆ ಇನ್ನೊಂದು ಜನ್ಮ ಅಂತ ಇದ್ದರೆ ಮತ್ತೆ ನಮ್ಮ ತಂದೆ-ತಾಯಿಗೆ ಮಗಳಾಗಿ ಹುಟ್ಟಬೇಕು ಎನ್ನುವುದು ನನ್ನ ಆಸೆ. ಅಂತಹ ಧೀಮಂತ ವ್ಯಕ್ತಿಗೆ ಮಗಳಾಗಿ ಹುಟ್ಟುವುದು ನಿಜಕ್ಕೂ ನನ್ನ ಪುಣ್ಯ.
(ಕೃಪೆ: ‘ನಮ್ಮ ಅರಸು’ ಕೃತಿ, ಲೇ: ಬಸವರಾಜು ಮೇಗಲಕೇರಿ, ಪ್ರ: ಪಲ್ಲವ ಪ್ರಕಾಶನ, ಸಂ: 94803 53507)