ಆರ್.ಸಿ.ಬಿ. ಮಹಿಳಾ ತಂಡ ವರ್ಷದ (ಮಾರ್ಚ್ 2024) ಹಿಂದೆಯೇ ಪ್ರೀಮಿಯರ್ ಲೀಗ್ ಟ್ರೋಫಿ ಗೆದ್ದಿತ್ತು! ಎಷ್ಟು ಮಂದಿಗೆ ನೆನಪಿದೆ? ಆರ್‌ಸಿಬಿಗೆ ಮೊದಲ ಜಯ ಮತ್ತು ಟ್ರೋಫಿ ತಂದುಕೊಟ್ಟವರು ಮಹಿಳಾ ಆಟಗಾರ್ತಿಯರು.
18 ವರ್ಷಗಳ ಐಪಿಎಲ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಆರ್‌ಸಿಬಿ ಪುರುಷರ ತಂಡ ಗೆಲುವು ಸಾಧಿಸಿದೆ. ಆದರೆ, ಮಹಿಳಾ ಪ್ರೀಮಿಯಂ ಲೀಗ್ (ಡಬ್ಲ್ಯೂಪಿಎಲ್) ಆರಂಭವಾದ ಮೂರೇ ವರ್ಷದಲ್ಲಿ, 2024ರಲ್ಲಿ ಸ್ಮೃತಿ ಮಂಧಾನಾ ನಾಯಕತ್ವದ ಆರ್‌ಸಿಬಿ ಮಹಿಳಾ ತಂಡ ಟ್ರೋಫಿ ಗೆದ್ದಿತು. ಆರ್‌ಸಿಬಿಗೆ ಮೊದಲ ಕಪ್ ತಂದುಕೊಟ್ಟಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಎಂಟು ವಿಕೆಟ್ ಗಳ ಘನ ಗೆಲುವು ಸಾಧಿಸಿತ್ತು.
ಆದರೆ ಆರ್‌ಸಿಬಿ ಅಭಿಮಾನಿಗಳು, ರಾಜ್ಯ ಸರ್ಕಾರ, ಕ್ರಿಕೆಟ್ ಅಸೋಸಿಯೇಷನ್, ಪ್ರಾಂಚೈಸಿ ಯಾರೊಬ್ಬರೂ ಸಂಭ್ರಮಾಚರಣೆ ಮಾಡಲಿಲ್ಲ, ವಿಜಯೋತ್ಸವ ನಡೆಸಲಿಲ್ಲ. ಮಾಧ್ಯಮಗಳು ಕೂಡ ಆರ್‌ಸಿಬಿ ಪುರುಷ ತಂಡದ ಗೆಲುವಿನ ಕುರಿತು ಅಬ್ಬರಿಸಿದಷ್ಟು ಮಹಿಳೆಯರ ಗೆಲುವನ್ನು ಸುದ್ದಿ ಮಾಡಲಿಲ್ಲ. ಸರ್ಕಾರ ಕೂಡ ಆಟಗಾರ್ತಿಯರನ್ನು ಸನ್ಮಾನಿಸಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈಗ ಗೆದ್ದವರನ್ನು ಸನ್ಮಾನಿಸಿದಂತೆ ಮಹಿಳಾ ಆಟಗಾರ್ತಿಯರನ್ನು ವಿಧಾನಸೌಧಕ್ಕೆ ಕರೆಸಲಿಲ್ಲ. ಒಂದು ಟ್ವೀಟ್‌ನಲ್ಲಿ ಶುಭಾಶಯ ಕೋರಿ ಕೈ ಬಿಟ್ಟಿದ್ದರು.
‘ಜನ ಮರುಳೋ ಜಾತ್ರೆ ಮರುಳೋ’ ಎಂಬಂತೆ 2025ರ ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದ ಬೆನ್ನಲ್ಲೇ ತಂಡದ ಅಭಿಮಾನಿಗಳು ರಸ್ತೆಗಿಳಿದು ರಾತ್ರಿಯೆಲ್ಲ ಪಟಾಕಿ ಸಿಡಿಸಿ ವಿಜೃಂಭಿಸಿದರು. ಅವರ ಸಂಭ್ರಮವು ವಿಜಯೋತ್ಸವ ಮಾತ್ರವೇ ಆಗಿರಲಿಲ್ಲ. ದಾಂಧಲೆಯೂ ಆಗಿತ್ತು. ಪಟಾಕಿ, ಚೀರಾಟದ ಸದ್ದು ಬೆಂಗಳೂರಿನ ನಿದ್ರೆಗೆಡಿಸಿತ್ತು. ಗೆಲುವಿನ ಜೋಶ್‌ನಲ್ಲಿದ್ದ ಆರ್‌ಸಿಬಿ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಆಟಗಾರರು ಬೆಂಗಳೂರಿನ ಬರುತ್ತಿದ್ದಾರೆ ಎಂಬ ಸುದ್ದಿಯು ಮತ್ತಷ್ಟು ಪ್ರಚೋದನೆ ನೀಡಿತು. ಲಕ್ಷಾಂತರ ಮಂದಿ ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದತ್ತ ಧಾವಿಸಿದರು. ಕ್ರಿಡಾಂಗಣದ ಒಳಗೆ ನುಗ್ಗಲು ಯತ್ನಿಸಿ, ಕಾಲ್ತುಳಿತ ಸಂಭವಿಸಿ, 11 ಮಂದಿ ದಾರುಣವಾಗಿ ಜೀವ ತೆತ್ತರು. ಆರ್‌ಸಿಬಿ ಅಭಿಮಾನಿಗಳ ಸಂಭ್ರಮವನ್ನು ನಿಭಾವಿಸುವಲ್ಲಿ ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ಹಾಗೂ ಆರ್‌ಸಿಬಿ ಪ್ರಾಂಚೈಸಿ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ವಿಫಲವಾಗಿದೆ ಎಂಬ ಆರೋಪಗಳಿವೆ.
ಈ ಸಂಭ್ರಮ, ವಿಜಯೋತ್ಸವ, ಅತ್ಯುತ್ಸಾಹ, ಅತಿರೇಕ, ಅವಿವೇಕ, ಸಾವು, ಶೋಕ, ಕಣ್ಣೀರಿನ ಮರೆಯಲ್ಲಿ ಕಾಣುತ್ತಿರುವವರು ಇದೇ ಐಪಿಎಲ್, ಇದೇ ಆರ್‌ಸಿಬಿಯ ಮಹಿಳಾ ಆಟಗಾರ್ತಿಯರು.
ಈ ಲೇಖನ ಓದಿದ್ದೀರಾ?:ಬೆಂಗಳೂರು ದುರಂತ | ಭೀಕರ ಘಟನೆಗೆ ಏನೆಲ್ಲ ಕಾರಣಗಳು– ಸಂಪೂರ್ಣ ವರದಿ
ಆಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಚೊಚ್ಚಲ ಚಾಂಪಿಯನ್ ಆಗಿ ಹೊರಹೊಮ್ಮಿದ ಆರ್‌ಸಿಬಿ ಮಹಿಳಾ ತಂಡಕ್ಕೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದರು. ಈಗ, ಆರ್‌ಸಿಬಿ ಪುರುಷರ ತಂಡ ಚಾಂಪಿಯನ್ಸ್ ಆಗಿದ್ದಕ್ಕೆ ಅಬ್ಬರದ ಸಂಭ್ರಮದಲ್ಲಿ ಸಿದ್ದರಾಮಯ್ಯ ಅವರೂ ಭಾಗಿಯಾದರು. ತಾವೇ ಸರ್ಕಾರದಿಂದ ವಿಧಾನಸೌಧದ ಬಳಿ ಸಂಭ್ರಮಾಚರಣೆ ಮತ್ತು ಸನ್ಮಾನ ಕಾರ್ಯಕ್ರಮ ನಡೆಸಿದರು. ಆದರೆ, ಮಹಿಳಾ ತಂಡ ಗೆದ್ದಾಗ, ಭೇಟಿಯನ್ನೂ ಮಾಡಲಿಲ್ಲ. ಮಾಧ್ಯಮಗಳು ಸಹ ಅಬ್ಬರಿಸಲಿಲ್ಲ.
ಪುರುಷರ ತಂಡ ಗೆದ್ದಾಗ ಸರ್ಕಾರ ಇಷ್ಟೊಂದು ಸಂಭ್ರಮಿಸಿದ್ದೇಕೆ? ಅಂದಹಾಗೆ, ಆರ್‌ಸಿಬಿ ತಂಡದಲ್ಲಿ ಮಯಾಂಕ್ ಅಗರ್ವಾಲ್ ಹೊರತುಪಡಿಸಿ ಉಳಿದವರಾರೂ ಕನ್ನಡಿಗರಲ್ಲ? ಕಳೆದ 18 ವರ್ಷದಿಂದ ಆರ್‌ಸಿಬಿಯಲ್ಲಿ ನೆಲೆನಿಂತಿರುವ ವಿರಾಟ್ ಕೊಹ್ಲಿ ಸ್ವಲ್ಪವಾದರೂ ಕನ್ನಡ ಮಾತನಾಡುವುದನ್ನು ಕಲಿತಿದ್ದಾರಾ? ಇಲ್ಲ! ಇದೇನು ಕನ್ನಡದ ಫ್ರಾಂಚೈಸಿಯಾ? ಅಥವಾ ಸರ್ಕಾರದ್ದಾ? ಇದಾವುದೂ ಅಲ್ಲ. ಆದರೂ, ಆರ್‌ಸಿಬಿ ಪುರುಷ ತಂಡವನ್ನು ತಲೆ ಮೇಲೆ ಹೊತ್ತು ಮೆರೆಸಲಾಗಿದೆ.
ಅದೇ, ಮಹಿಳಾ ತಂಡದಲ್ಲಿ ಉತ್ತರ ಕರ್ನಾಟಕದ ಶ್ರೇಯಾಂಕ ಪಾಟೀಲ ಇದ್ದರು. ಕನ್ನಡ ಕಂಪನ್ನು ಕ್ರಿಕೆಟ್ ಅಂಗಳದಲ್ಲಿ ಹರಡಿಸಿದ್ದರು. ಆದರೂ, ಅವರ ಗೆಲುವನ್ನು ಸಂಭ್ರಮಿಸಲಿಲ್ಲ. ಇತಿಹಾಸದುದ್ದಕ್ಕೂ ಪಿತೃಪ್ರಧಾನ ವ್ಯವಸ್ಥೆಯು ಮಹಿಳೆಯರನ್ನು ತುಳಿದು, ಅಂಧಕಾರದಲ್ಲಿ ಇರಿಸುತ್ತ ಬಂದಿದೆ. ಈಗಲೂ, ಅದು ಮುಂದುವರೆದಿದೆ. ಹಳ್ಳಿಯಿಂದ ದಿಲ್ಲಿಯವರೆಗೂ ವ್ಯಾಪ್ತಿಸಿಕೊಂಡು ಬೇರೂರಿದೆ. ಹೀಗಾಗಿಯೇ, ಮಹಿಳಾ ತಂಡ ಗೆದ್ದಾಗ ಈ ಗಂಡಾಳಿಕೆಯ ವ್ಯವಸ್ಥೆ ಸಂಭ್ರಮಿಸಲಿಲ್ಲ. ಇದು ಸಾಮಾಜಿಕ ಸಮಸ್ಯೆಯೊಳಗಿನ ಪುರುಷಾಧಿಪತ್ಯದ ಧೋರಣೆಯನ್ನು ಎತ್ತಿ ತೋರಿಸುತ್ತದೆ. ಲಿಂಗ ತಾರತಮ್ಯ ವ್ಯಾಧಿಯ ಕುರುಹು ಸ್ಪಷ್ಟವಾಗಿ ಕಾಣುತ್ತದೆ.
ಈ ಲೇಖನ ಓದಿದ್ದೀರಾ?: ಅಭಿಮಾನಿಗಳ ಅತಿರೇಕ ಮತ್ತು ಸರ್ಕಾರದ ಅವಿವೇಕ
ಮಹಿಳಾ ಕ್ರಿಕೆಟ್‌ಗೆ ಸಿಗುವ ಗೌರವ, ಮಾಧ್ಯಮದ ಗಮನ, ಮತ್ತು ಸಾರ್ವಜನಿಕ ಉತ್ಸಾಹ ಪುರುಷರ ಕ್ರಿಕೆಟ್‌ಗೆ ಸಿಗುವ ಮನ್ನಣೆಯ ಮುಂದೆ ಏನೇನೂ ಅಲ್ಲ.. ಮಹಿಳಾ ಕ್ರೀಡಾಪಟುಗಳಾದ ಸ್ಮೃತಿ ಮಂಧಾನಾ, ಎಲಿಝೆ ಪೆರಿ ಹಾಗೂ ರಿಚಾ ಘೋಷ್ರಂತಹವರು ತಮ್ಮ ಅಸಾಧಾರಣ ಕೌಶಲ್ಯದಿಂದ ಡಬ್ಲ್ಯೂಪಿಎಲ್‌ನಲ್ಲಿ ಆರ್‌ಸಿಬಿಯನ್ನು ಗೆಲುವಿನ ಶಿಖರಕ್ಕೆ ಕೊಂಡೊಯ್ದರು. ಆದರೆ, ಅವರ ಗೆಲುವಿಗೆ ಸಿಕ್ಕ ಗೌರವ ಪುರುಷ ತಂಡದ ಗೆಲುವಿಗೆ ಸಿಕ್ಕ ಗೌರವಕ್ಕಿಂತ ಗಣನೀಯವಾಗಿ ಕಡಿಮೆಯಾಗಿತ್ತು. ಇದು ಕೇವಲ ಆರ್‌ಸಿಬಿ ಅಭಿಮಾನಿಗಳಿಗೆ ಮಾತ್ರವಲ್ಲ, ಒಟ್ಟಾರೆ ಸಮಾಜದ ನಾನಾ ಕ್ಷೇತ್ರಗಳಲ್ಲಿ ಮಹಿಳೆಯರ ಕುರಿತ ತಾತ್ಸಾರಕ್ಕೆ ಹಿಡಿದ ಕನ್ನಡಿಯಾಗಿದೆ.
ಮಹಿಳೆಯರ ಸಾಧನೆಗಳನ್ನು ನಗಣ್ಯ ಮಾಡಿ, ಪುರುಷರ ಸಾಧನೆಗಳನ್ನು ಆಕಾಶಕ್ಕೇರಿಸುವ ಈ ಮನಸ್ಥಿತಿಯು ಬದಲಾಗಬೇಕಿದೆ.
ಕ್ರೀಡೆಯಲ್ಲಿ ಲಿಂಗ ತಾರತಮ್ಯವಿಲ್ಲದೆ, ಎಲ್ಲ ಸಾಧನೆಗಳಿಗೂ ಸಮಾನ ಗೌರವ ದೊರೆಯಬೇಕಿದೆ. ಜೊತೆಗೆ, ಸಂಭ್ರಮ-ಆಚರಣೆಗಳು ಅತಿರೇಕ ಅಂಧಭಕ್ತಿ ಹುಚ್ಚಾಟ ಉನ್ಮಾದಗಳಿಲ್ಲದೆ ಸುರಕ್ಷಿತವಾಗಿ ನಡೆಯುವಂತೆ ಎಚ್ಚರಿಕೆ ವಹಿಸುವ ಅಗತ್ಯವೂ ಇದೆ.