ಮನುಷ್ಯನಲ್ಲಿ ಉತ್ತಮ ಸಂಸ್ಕಾರ ಬೆಳೆಸುವ ಶಕ್ತಿಯನ್ನು ಸಾಹಿತ್ಯ ಹೊಂದಿದ್ದು, ಜನಸಾಮಾನ್ಯರೂ ತಮ್ಮ ಇಷ್ಟದ ಕೃತಿಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ, ಬೆಂಗಳೂರು ಆಕಾಶವಾಣಿ ಕೇಂದ್ರದ ನಿವೃತ್ತ ನಿರ್ದೇಶಕ ಡಾ. ಬಸವರಾಜ ಸಾದರ ಹೇಳಿದರು.
ಕೇಂದ್ರ ಸಾಹಿತ್ಯ ಅಕಾಡೆಮಿಯ ದಕ್ಷಿಣ ಪ್ರಾದೇಶಿಕ ಕಚೇರಿ ನೇತೃತ್ವದಲ್ಲಿ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹುಲ್ಲಂಬಿಯಲ್ಲಿ ಬೇಗೂರು ಗ್ರಾಮ ಪಂಚಾಯಿತಿ, ಕೃಷಿ ಜ್ಯೋತಿ ರೈತ ಉತ್ಪಾದಕ ಕಂಪನಿ, ಗ್ರಾಮದ ಹಲವು ಯುವಕ ಮಂಡಳಿಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಗ್ರಾಮಲೋಕ ಕಾರ್ಯಕ್ರಮದಲ್ಲಿ ಮಾತನಾಡಿದರು.
“ನಮ್ಮ ಪರಂಪರೆಯಲ್ಲಿನ ಶರಣರು, ಸಂತರು, ದಾಸರು, ಸಮಾಜ ಸುಧಾರಕರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸಾಹಿತ್ಯವನ್ನು ಆಶ್ರಯಿಸಿ ಮನುಕುಲದ ಕಲ್ಯಾಣಕ್ಕೆ ದುಡಿದಿದ್ದಾರೆ. ತಮ್ಮ ಸಾಹಿತ್ಯದಲ್ಲಿ ಹುಟ್ಟೂರು ಮತ್ತು ಬಾಲ್ಯದ ಸಂಗತಿಗಳೇ ತುಂಬಿದ್ದು, ಬರೆದರೂ ತೀರದಷ್ಟು ಸಾಮಗ್ರಿಯನ್ನು ಒದಗಿಸುತ್ತಿದೆ. ಊರಿನ ಋಣವನ್ನು ತೀರಿಸಲು ಸಾಧ್ಯವಿಲ್ಲದಿದ್ದರೂ ಅದರ ಬಗೆಗಿನ ಕೃತಜ್ಞತಾ ಭಾವವು ನಮ್ಮಲ್ಲಿ ಮಾನವೀಯ ಸೆಲೆಯನ್ನು ಹುಟ್ಟುಹಾಕುತ್ತದೆ” ಎಂದರು.
ತಮ್ಮ ತಂದೆ ತಾಯಿಯವರ ಹೆಸರಿನಲ್ಲಿ ಹುಲ್ಲಂಬಿ ಸರ್ಕಾರಿ ಶಾಲೆಯ ಏಳನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸುವ ಇಬ್ಬರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲು ₹25,000 ಶಾಶ್ವತ ಠೇವಣಿಯನ್ನು ಮುಖ್ಯೋಪಾದ್ಯಾಯ ದ್ಯಾವಪ್ಪವನವರ ಅವರಿಗೆ ಹಸ್ತಾಂತರಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಪೂರ್ವ ಪ್ರಾಥಮಿಕ ಶಿಕ್ಷಣ ಕೇಂದ್ರಗಳಿಗೆ ಬೇಕಿದೆ ಪ್ರಥಮ ಚಿಕಿತ್ಸೆ
ಶಿವಪ್ಪ ಕುಡಬಾಯಿ, ಶಂಕ್ರಪ್ಪ ಸಾದರ, ಗುರುನಾಥ ಹರಿಜನ, ಶಿವಪ್ಪ ನೀರಲಕಟ್ಟಿ, ರಾಚಪ್ಪ ಬಿಸರಳ್ಳಿ, ಸ್ಕೋಪ್ ಸಂಸ್ಥೆಯ ಬಂಡೇರಾವ ಪಟವಾರಿ, ನಿಡಗುಂದಿ, ಬಸಪ್ಪ ಶೀಗಿಗಟ್ಟಿ, ಸಾವಕ್ಕ ಮನಗುಂಡಿ, ನಾಗಲಿಂಗ ಸಾದರ ಸೇರಿದಂತೆ ಅಪಾರ ಸಂಖ್ಯೆಯ ಗ್ರಾಮಸ್ಥರು, ಯುವಜನರು, ಮಕ್ಕಳು ಸಭೆಯಲ್ಲಿ ಇದ್ದರು.