ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ಕತ್ತರಘಟ್ಟದಲ್ಲಿ ದಲಿತ ಯುವಕನನ್ನು ಜೀವಂತವಾಗಿ ಸುಟ್ಟುಹಾಕಿಲಾದ ದುರಂತ ಘಟನೆ ಮಾಸುವ ಮುನ್ನವೇ ಮಂಡ್ಯ ಜಿಲ್ಲೆಯ ಮತ್ತೊಂದು ಗ್ರಾಮದಲ್ಲಿ ಜಾತಿ ದೌರ್ಜನ್ಯದ ಉದ್ವಿಗ್ನತೆ ಹೆಚ್ಚಾಗಿದೆ. ಮಂಡ್ಯ ತಾಲೂಕಿನ ಎಲೆಚಾಕನಹಳ್ಳಿ ಗ್ರಾಮದಲ್ಲಿ ದಲಿತರಿಗೆ ಸವರ್ಣೀಯರು ಸಾಮಾಜಿಕ ಬಹಿಷ್ಕಾರ ಹಾಕಿದ್ದು, ಪ್ರಕ್ಷ್ಯುಬ್ದ ಸ್ಥಿತಿ ನಿರ್ಮಾಣವಾಗಿದೆ. ಜೀವಭಯದಲ್ಲಿ ದಲಿತರು ದಿನದೂಡುತ್ತಿದ್ದಾರೆ.
ಎಲೆಚಾಕನಹಳ್ಳಿ ಗ್ರಾಮದಲ್ಲಿ ಪ್ರಬಲ ಜಾತಿಯ 500ಕ್ಕೂ ಹೆಚ್ಚು ಕುಟುಂಬಗಳು ಹಾಗೂ ದಲಿತ (ಮಾದಿಗ) ಸಮುದಾಯದ 40 ಕುಟುಂಬಗಳು ವಾಸಿಸುತ್ತಿವೆ. ಇತ್ತೀಚೆಗೆ, ದಲಿತರು ಗ್ರಾಮದ ಮಾರಮ್ಮನ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದರು. ಇದೇ ಕಾರಣಕ್ಕೆಸವರ್ಣೀಯರು ದಲಿತರ ಮೇಲೆ ಸಾಮಾಜಿಕ ಬಹಿಷ್ಕಾರ ಹೇರಿದ್ದಾರೆ. ಸವರ್ಣೀಯರು ತಮ್ಮ ಮೇಲೆ ಹಲ್ಲೆ ನಡೆಸಿಬಹುದು ಎಂಬ ಆತಂಕ ದಲಿತರನ್ನು ಆವರಿಸಿಕೊಂಡಿದೆ.
ಪರಿಸ್ಥಿತಿ ಉದ್ವಿಗ್ನಗೊಂಡ ಬಳಿಕ ಅಧಿಕಾರಿಗಳು ಮಾರಮ್ಮನ ದೇವಾಲಯಕ್ಕೆ ಬೀಗ ಹಾಕಿದ್ದಾರೆ. ಅಧಿಕಾರಿಗಳು ಒಂದು ಬೀಗ ಹಾಕಿದ್ದರೆ, ಗ್ರಾಮದ ಸವರ್ಣೀಯರು ಮತ್ತೊಂದು ಬೀಗ ಹಾಕಿದ್ದಾರೆ. ಪ್ರಬಲ ಜಾತಿಯವರು ಮತ್ತು ದಲಿತರ ನಡುವೆ ಅಧಿಕಾರಿಗಳು ಶಾಂತಿ-ಸಂಧಾನಕ್ಕೆ ಯತ್ನಿಸಿದ್ದಾರೆ. ಆದರೆ, ಅಧಿಕಾರಿಗಳ ಮಾತನ್ನು ಸವರ್ಣೀಯರು ಆಲಿಸುತ್ತಿಲ್ಲ. ಹೀಗಾಗಿ, ಶಾಂತಿ ಸಭೆ ಅರ್ಧಕ್ಕೆ ಮೊಟಕುಗೊಂಡಿದೆ ಎಂದು ತಿಳಿದುಬಂದಿದೆ.
ಈ ವರದಿ ಓದಿದ್ದೀರಾ?: ಕತ್ತರಘಟ್ಟ ದಲಿತ ಯುವಕನ ಸಾವು ಪ್ರಕರಣ: ಎಎಸ್‌ಐ ಅಮಾನತು; ನೈಜ ತಪ್ಪಿತಸ್ಥ ಅಧಿಕಾರಿಗಳ ಅಮಾನತಿಗೆ ಆಗ್ರಹ
ಗ್ರಾಮಕ್ಕೆ ಮಂಡ್ಯ ತಹಸೀಲ್ದಾರ್ ಶಿವಕುಮಾರ್ ಬಿರಾದರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಬಂದಿದ್ದು, ಶಾಂತಿ ಸಭೆ ನಡೆಸಿದೆ. ಸಭೆಯಲ್ಲಿ, ಮಾರಮ್ಮನ ದೇವಾಲಯಕ್ಕೆ ತಮಗೂ ಪೂಜೆ ಸಲ್ಲಿಸಲು ಅವಕಾಶ, ಪ್ರವೇಶ ನೀಡಬೇಕೆಂದು ದಲಿತರು ಒತ್ತಾಯಿಸಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ದಲಿತರು ದೇವಾಲಯ ಪ್ರವೇಶಿಸಲು ಬಿಡುವುದಿಲ್ಲವೆಂದು ಪ್ರಬಲ ಜಾತಿಯವರು ಪಟ್ಟು ಹಿಡಿದಿದ್ದಾರೆ. ಅಧಿಕಾರಿಗಳ ಎದುರೇ ದಲಿತರನ್ನು ಅವಾಚ್ಯ, ಅಶ್ಲೀಲವಾಗಿ ನಿಂದಿಸಿದ್ದಾರೆ.
ಸಭೆ ವಿಫಲವಾದ ಬಳಿಕ, ಗ್ರಾಮದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಪೊಲೀಸರನ್ನು ನಿಯೋಜಿಸಿದ್ದರೂ ಗ್ರಾಮದಲ್ಲಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಸವರ್ಣೀಯರು ದಲಿತರ ಬೀದಿಗೆ ನುಗ್ಗಿ ಹಲ್ಲೆ ನಡೆಸುವುದಾಗಿ ಸಾರ್ವಜನಿಕವಾಗಿಯೇ ಮಾತನಾಡುತ್ತಿದ್ದಾರೆ ಎಂದು ದಲಿತ ಯುವಕರು ಆರೋಪಿಸಿದ್ಧಾರೆ. ತಮಗೆ ಜೀವಭಯ ಇರುವುದಾಗಿ ಆತಂಕ ವ್ಯಕ್ತಪಡಿಸಿದ್ದಾರೆ.
ದಲಿತರ ವಸತಿ ಪ್ರದೇಶಕ್ಕೆ ನುಗ್ಗಿ ಸವರ್ಣೀಯರ ದಾಂಧಲೆ
ಜೂನ್ 3ರ ರಾತ್ರಿ 12:30ರ ಸುಮಾರಿಗೆ ಗ್ರಾಮದ ಸವರ್ಣೀಯರು ದಲಿತರ ವಸತಿ ಪ್ರದೇಶಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಬೀದಿಯಲ್ಲಿ ನಿಂತಿದ್ದ ಕಾರಿನ ಗಾಜುಗಳನ್ನು ಹೊಡೆದು ಹಾಕಿದ್ದಾರೆ. ‘ಮಾದಿಗ ಬಡ್ಡಿ ಮಕ್ಕಳ ನಿಮಗೆ ದೇವಸ್ಥಾನ ಪ್ರವೇಶ ಬೇಕಾ’ ಎಂದು ಅವಾಚ್ಯ, ಅಶ್ಲೀಲವಾಗಿ ನಿಂದಿಸಿದ್ದಾರೆ. ಮಾತ್ರವಲ್ಲದೆ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದಲಿತ ಯುವಕ ವಿಜಯ್ ಕುಮಾರ್ ಆರೋಪಿಸಿದ್ದಾರೆ. ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ಧಾರೆ.
ವಿಜಯಕುಮಾರ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಬಲ ಜಾತಿಯ ಶಿವಲಿಂಗ ಅಲಿಯಾಸ್ ಪಾಪು, ದಿನೇಶ್, ಜನಾರ್ದನ, ಚೇತನ್ ಕುಮಾರ್, ರೋಪೇಶ ಹಾಗೂ ಮನು ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.