ಭಾರತ ಎರಡು ಬಾರಿ ವಿಶ್ವಕಪ್ ಗೆದ್ದಿದ್ದ ಸಂದರ್ಭದಲ್ಲಿ ತಂಡದ ಪ್ರಮುಖ ಬೌಲರ್ ಆಗಿದ್ದ ಲೆಗ್ ಸ್ಪಿನ್ನರ್ ಪಿಯೂಶ್ ಚಾವ್ಲಾ ಅವರು ಎಲ್ಲ ಮಾದರಿಯ ಕ್ರಿಕೆಟ್‌ಗೆ ಇಂದು ನಿವೃತ್ತಿ ಘೋಷಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿರುವ ಅವರು, “ಎರಡು ದಶಕಗಳಿಗೂ ಹೆಚ್ಚು ಕಾಲ ಮೈದಾನದಲ್ಲಿದ್ದ ನಂತರ, ಸೊಗಸಾದ ಆಟಕ್ಕೆ ವಿದಾಯ ಹೇಳುವ ಸಮಯ ಬಂದಿದೆ” ಎಂದು 36 ವರ್ಷದ ಪಿಯೂಶ್ ಚಾವ್ಲಾ ಬರೆದುಕೊಂಡಿದ್ದಾರೆ.
ಪಿಯೂಶ್ ಚಾವ್ಲಾ ಅವರು ಭಾರತ ತಂಡ 2007ರ ಟಿ20 ಹಾಗೂ 2011ರ ಏಕದಿನ ವಿಶ್ವಕಪ್ ಗೆದ್ದ ತಂಡದ ಸದಸ್ಯರಾಗಿದ್ದರು. ಮೂರು ಟೆಸ್ಟ್, 25 ಏಕದಿನ ಹಾಗೂ 7 ಟಿ20 ಆಡಿರುವ ಪಿಯೂಷ್, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 446 ವಿಕೆಟ್ ಹಾಗೂ 5486 ರನ್‌ಗಳನ್ನು ಪೇರಿಸಿದ್ದಾರೆ.
ಇದನ್ನು ಓದಿದ್ದೀರಾ? ಚಿನ್ನಸ್ವಾಮಿ ಸ್ಟೇಡಿಯಂ ದುರಂತ: ಆರ್‌ಸಿಬಿ, ರಾಜ್ಯ ಕ್ರಿಕೆಟ್ ಸಂಸ್ಥೆಯ ವಿರುದ್ಧ ಎಫ್‌ಐಆರ್ ದಾಖಲು
“ಭಾರತವು ಅತ್ಯುನ್ನತ ಟೂರ್ನಿಯಾದ 2007ರ ಟಿ20 ಹಾಗೂ 2011ರ ಏಕದಿನ ವಿಶ್ವಕಪ್ ಜಯಿಸಿದ ತಂಡದ ಸದಸ್ಯನಾಗಿದ್ದು, ಈ ಅದ್ಭುತ ಪ್ರಯಾಣದ ಪ್ರತಿಯೊಂದು ಕ್ಷಣವೂ ಅಭೂತಪೂರ್ವವಾದುದು. ಈ ನೆನಪುಗಳು ನನ್ನ ಹೃದಯದಲ್ಲಿ ಸದಾ ಕಾಲ ಉಳಿದುಕೊಳ್ಳುತ್ತದೆ” ಎಂದು ಬರೆದುಕೊಂಡಿದ್ದಾರೆ.
“ಐಪಿಎಲ್ ಟೂರ್ನಿಯಲ್ಲಿ ನನಗೆ ಅವಕಾಶ ಕೊಟ್ಟ ಪ್ರಾಂಚೈಸಿಗಳಾದ ಪಂಜಾಬ್ ಕಿಂಗ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳಿಗೆ ಹೃದಯಪೂರ್ವಕ ಧನ್ಯವಾದಗಳು. ಐಪಿಎಲ್ ಟೂರ್ನಿ ನನ್ನ ಕ್ರಿಕೆಟ್ ವೃತ್ತಿ ಜೀವನದಲ್ಲಿ ನಿಜವಾದ ವಿಶೇಷ ಅಧ್ಯಾಯವಾಗಿದೆ. ಅದರಲ್ಲಿ ಆಡುವ ಪ್ರತಿ ಕ್ಷಣವನ್ನು ನಾನು ಪ್ರೀತಿಸುತ್ತೇನೆ. ನನ್ನನ್ನು ಉತ್ತಮ ಕ್ರಿಕೆಟರ್ ಆಗಿ ರೂಪಿಸಿದ ನನ್ನ ಕೋಚ್‌ಗಳಿಗೂ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದು ತಿಳಿಸಿದ್ದಾರೆ.