ಈ ದಿನ ಸಂಪಾದಕೀಯ | ಆರ್‌ಜಿಕರ್‌ ಆಸ್ಪತ್ರೆ, ಅಣ್ಣಾ ವಿ ವಿ ರೀತಿ ಎಲ್ಲ ಅತ್ಯಾಚಾರ ಪ್ರಕರಣಗಳಲ್ಲೂ ತ್ವರಿತ ನ್ಯಾಯದಾನ ಅತ್ಯಗತ್ಯ

Date:

Advertisements

ಆರ್‌ಜಿಕರ್‌ ಆಸ್ಪತ್ರೆ  ಮತ್ತು ಅಣ್ಣಾಮಲೈ ವಿವಿಯ ಈ ಎರಡು ಪ್ರಕರಣಗಳಲ್ಲಿ ಕೋರ್ಟ್‌, ಪೊಲೀಸರು, ಸರ್ಕಾರ ನಡೆದುಕೊಂಡಂತೆ ಎಲ್ಲಾ ಅತ್ಯಾಚಾರ ಪ್ರಕರಣಗಳಲ್ಲೂ ನಡೆದುಕೊಂಡರೆ ಇಂತಹ ಪ್ರಕರಣಗಳು ಹತ್ತಾರು ವರ್ಷಗಳ ಕಾಲ ಕೋರ್ಟ್‌ನಲ್ಲಿ ಕೊಳೆಯುತ್ತಾ, ಸಂತ್ರಸ್ತ ಕುಟುಂಬಗಳು ಅವಮಾನ, ನೋವು, ಹತಾಶೆಯಲ್ಲಿ ನರಳುವುದನ್ನು ತಪ್ಪಿಸಬಹುದು.

2024ರ ಡಿಸೆಂಬರ್ 23ರಂದು ಅಣ್ಣಾಮಲೈ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ಆರೋಪಿ ಎ. ಜ್ಞಾನಶೇಖರನ್ ದೋಷಿ ಎಂದು ಹೇಳಿರುವ ಚೆನ್ನೈನ ಮಹಿಳಾ ನ್ಯಾಯಾಲಯ ಅಪರಾಧಿಗೆ 30 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಮೂರೇ ತಿಂಗಳಲ್ಲಿ ವಿಚಾರಣೆ ನಡೆದು ತೀರ್ಪು ಹೊರಬಿದ್ದಿದೆ. ತ್ವರಿತ ನ್ಯಾಯದಾನದ ಇತ್ತೀಚಿನ ಅಪರೂಪದ ಪ್ರಕರಣವಿದು.

ಜ್ಞಾನಶೇಖರನ್ ವಿರುದ್ಧ ಬಿಎನ್‌ಎಸ್ ಮತ್ತು ಬಿಎನ್‌ಎಸ್‌ಎಸ್‌ನ ಸೆಕ್ಷನ್ 329, 126(2), 87, 127(2), 75(2) ಜೊತೆಗೆ 75(1), (2), (3), 76, 64(1), 35(3), 238(b), ಐಟಿ ಕಾಯ್ದೆಯ ಸೆಕ್ಷನ್ 66 ಮತ್ತು ತಮಿಳುನಾಡು ಮಹಿಳಾ ಕಿರುಕುಳ ತಡೆ ಕಾಯ್ದೆಯ ಸೆಕ್ಷನ್ 4 ರ ಅಡಿಯಲ್ಲಿ ಆರೋಪ ಹೊರಿಸಲಾಗಿತ್ತು. ಅಣ್ಣಾ ವಿವಿ ಬಳಿ ಹೋಟೆಲ್‌ ನಡೆಸುತ್ತಿದ್ದ ಜ್ಞಾನಶೇಖರನ್‌ ಹಲವು ಅಪರಾಧ ಕೃತ್ಯಗಳ ಆರೋಪಿಯಾಗಿದ್ದ. ಸಂಜೆ ವೇಳೆ ವಿದ್ಯಾರ್ಥಿನಿ ತನ್ನ ಸ್ನೇಹಿತನ ಜೊತೆಗಿದ್ದಾಗ ಲೈಂಗಿಕ ಕಿರುಕುಳ ನೀಡಿದ್ದ. ಆಕೆಯ ಸ್ನೇಹಿತನಿಗೆ ಥಳಿಸಿ ಅತ್ಯಾಚಾರ ನಡೆಸಿದ್ದಷ್ಟೇ ಅಲ್ಲ ಅದನ್ನು ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡು ಬೆದರಿಕೆ ಹಾಕಿದ್ದ. ಮರುದಿನ (ಡಿ.24) ಸಂತ್ರಸ್ತೆಯು ಕೊಟ್ಟೂರುಪುರಂ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿತ್ತು.

Advertisements

“ಸ್ನೇಹಿತನೊಂದಿಗೆ ಇದ್ದಾಗ ಆರೋಪಿ ತನಗೆ ಬೆದರಿಕೆ ಹಾಕಿ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಮತ್ತು ಬೆದರಿಕೆ ಹಾಕಿ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿದ್ದಾನೆ” ಎಂದು ವಿದ್ಯಾರ್ಥಿನಿ ಆರೋಪಿಸಿದ್ದಳು. ದೂರು ದಾಖಲಿಸಿದ ಮರುದಿನವೇ ಜ್ಞಾನಶೇಖರ್‌ನನ್ನು ಪೊಲೀಸರು ಬಂಧಿಸಿದ್ದರು. ಸಿ ಸಿ ಟಿವಿ ಫೂಟೇಜ್‌ ನಲ್ಲೂ ಪುರಾವೆ ಸಿಕ್ಕಿತ್ತು. ಈ ಪ್ರಕರಣ ಭಾರೀ ಸದ್ದು ಮಾಡಿತ್ತು. ಮದ್ರಾಸ್‌ ಹೈಕೋರ್ಟ್‌ ಪ್ರಕರಣವನ್ನು ಸಂಪೂರ್ಣ ಮಹಿಳಾ ವಿಶೇಷ ತಂಡಕ್ಕೆ ವರ್ಗಾಯಿಸಿತ್ತು. 2025 ಫೆಬ್ರವರಿ ಅಂತ್ಯಕ್ಕೆ ಎಸ್‌ಐಟಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಮುಂದೆ ಆರೋಪಪಟ್ಟಿ ಸಲ್ಲಿಸಿತ್ತು. 

“ಯಾವುದೇ ವ್ಯಕ್ತಿ ಪ್ರಕರಣದಲ್ಲಿ ಭಾಗಿಯಾಗಿದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಆರೋಪಿಗಳ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸಲಾಗುವುದು. 60 ದಿನಗಳೊಳಗೆ ಚಾರ್ಜ್‌ಶೀಟ್‌ ಸಲ್ಲಿಸಲಾಗುವುದು ಮತ್ತು ಆರೋಪಿಗಳಿಗೆ ಕಾನೂನು ರೀತಿ ಗರಿಷ್ಠ ಮಟ್ಟದಲ್ಲಿ ಶಿಕ್ಷೆಯನ್ನು ನೀಡಲಾಗುವುದು” ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ವಿಧಾನಸಭಾ ಅಧಿವೇಶನದಲ್ಲಿ ಹೇಳಿದ್ದರು. ಅದೇ ರೀತಿ ಎರಡೇ ತಿಂಗಳಲ್ಲಿ ಎಸ್‌ಐಟಿ ಆರೋಪ ಪಟ್ಟಿ ಸಲ್ಲಿಸಿತ್ತು. ಇಂತಹ ಬದ್ಧತೆ ಬಹಳ ಮುಖ್ಯ. ಬಹುತೇಕ ಪ್ರಕರಣಗಳಲ್ಲಿ ಸರ್ಕಾರಗಳು ಇದೇ ಭರವಸೆ ನೀಡುತ್ತವೆ. ನಂತರ ಮರೆತುಬಿಡುತ್ತವೆ. ಬೆರಳೆಣಿಕೆಯ ಪ್ರಕರಣಗಳಲ್ಲಿ ಮಾತ್ರ ತ್ವರಿತ ವಿಚಾರಣೆ, ಕಠಿಣ ಶಿಕ್ಷೆ ಸಾಧ್ಯವಾಗುತ್ತಿದೆ.

2024ರ ಆಗಸ್ಟ್‌ನಲ್ಲಿ ಪಶ್ಚಿಮ ಬಂಗಾಳದ ಆರ್‌ಜಿ ಕರ್‌ ಆಸ್ಪತ್ರೆಯ ಟ್ರೈನಿ ವೈದ್ಯೆಯ ಮೇಲೆ ಆಸ್ಪತ್ರೆಯ ಕೊಠಡಿಯಲ್ಲಿಯೇ ಅತ್ಯಾಚಾರ ನಡೆಸಿ ಭೀಕರವಾಗಿ ಕೊಲೆ ಮಾಡಿದ ಪ್ರಕರಣದ ತೀರ್ಪು ಕೂಡ ಐದೇ ತಿಂಗಳಲ್ಲಿ ಹೊರಬಿದ್ದಿತ್ತು. ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 

ಅತ್ಯಾಚಾರ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವುದು ಮತ್ತು ಪ್ರಕರಣಗಳನ್ನು ಕೋರ್ಟ್‌ಗಳು ತ್ವರಿತವಾಗಿ ವಿಚಾರಣೆ ನಡೆಸದಿರುವುದು, ಈ ನಿಧಾನಗತಿಯಿಂದಾಗಿ ಸಾಕ್ಷ್ಯನಾಶ ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರಿ ವಿಚಾರಣೆಗೆ ಸಹಕರಿಸದಿರುವುದು, ರಾಜೀ ಮಾಡಿಕೊಳ್ಳುವುದು ಹೀಗೆ ನಾನಾ ಕಾರಣಗಳಿಂದಾಗಿ ಸಂತ್ರಸ್ತೆಯರಿಗೆ ನ್ಯಾಯ ಮರೀಚಿಕೆಯಾಗುತ್ತಿದೆ. ಅಪರಾಧಿಗಳು ಹೊರಬಂದು ಮತ್ತೆ ಇನ್ನಷ್ಟು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂಬುದಕ್ಕೆ ನಮ್ಮ ಮುಂದೆಯೇ ಹಲವು ಉದಾಹಣೆಗಳಿವೆ. ಭಾರೀ ಜನಾಕ್ರೋಶ, ರಾಜಕೀಯ ತಿರುವು ಪಡೆದ ಪ್ರಕರಣಗಳು ಮಾತ್ರ ತ್ವರಿತವಾಗಿ ಇತ್ಯರ್ಥವಾಗುತ್ತಿವೆ. ಬಡವರು, ಶೋಷಿತ ವರ್ಗ, ಜಾತಿ ಬಲ ಇಲ್ಲದ ಸಂತ್ರಸ್ತರಿಗೆ ನ್ಯಾಯ ಮರೀಚಿಕೆಯಾಗಿದೆ ಎಂಬ ಆರೋಪಕ್ಕೂ ಈ ಎರಡು ಪ್ರಕರಣಗಳು ಉದಾಹರಣೆಯಾಗಿ ನಿಲ್ಲುತ್ತವೆ.

ದೇಶದಲ್ಲಿ ಲಕ್ಷಾಂತರ ಪೋಕ್ಸೊ ಪ್ರಕರಣಗಳು ಕೋರ್ಟಿನ ಕಟಕಟೆಯಲ್ಲೇ ಉಳಿದುಬಿಟ್ಟಿವೆ. ಅವುಗಳ ತ್ವರಿತ ಇತ್ಯರ್ಥವಾಗುತ್ತಿಲ್ಲ. ಪೋಕ್ಸೊ ಪ್ರಕರಣಗಳನ್ನು ವರ್ಷದೊಳಗೆ ಮುಗಿಸಬೇಕು ಎಂದು ಕಾಯ್ದೆ ಹೇಳುತ್ತದೆ. ಆದರೆ, ಹಣ, ಜಾತಿ, ರಾಜಕೀಯ ಬಲ ಇರುವ ಆರೋಪಿಗಳಾದರೆ ಅವರ ರಕ್ಷಣೆಗೆ ಇಡೀ ವ್ಯವಸ್ಥೆ ನಿಲ್ಲುತ್ತದೆ. ಸಾಮಾನ್ಯ ಆರೋಪಿಯನ್ನು ತಕ್ಷಣ ಬಂಧಿಸುವ ಪೊಲೀಸರು ಪ್ರಭಾವಿಗಳನ್ನು ವರ್ಷ ಕಳೆದರೂ ಬಂಧಿಸುವುದಿಲ್ಲ. ಕೋರ್ಟ್‌ಗಳೂ ರಕ್ಷಣೆ ಕೊಡುತ್ತವೆ ಎಂಬುದಕ್ಕೆ ಕರ್ನಾಟಕದ ಹಿರಿಯ ರಾಜಕಾರಣಿ ಬಿ ಎಸ್‌ ಯಡಿಯೂರಪ್ಪ ಅವರ ಪ್ರಕರಣವೇ ಪುರಾವೆ. 2023ರ ಮಾರ್ಚ್‌ ನಲ್ಲಿ ಯಡಿಯೂರಪ್ಪ ಅವರ ವಿರುದ್ಧ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಪೋಕ್ಸೊ ಪ್ರಕರಣ ದಾಖಲಾಗಿದೆ. ವಿಚಾರಣೆಗೆ ಹಾಜರಾಗದ ಕಾರಣ ಕೆಳಹಂತದ ಕೋರ್ಟ್‌ ಸಮನ್ಸ್‌ ಜಾರಿ ಮಾಡಿದ್ದರೆ, ಹೈಕೋರ್ಟ್‌ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಲ್ಲದೇ, ಆರೋಪಿ ಮಾಜಿ ಮುಖ್ಯಮಂತ್ರಿ ಹಾಗಾಗಿ ಅವರನ್ನು ಬಂಧಿಸದೇ ವಿಚಾರಣೆ ನಡೆಸಬೇಕು ಎಂದು ಆದೇಶಿಸಿದೆ. ಪ್ರಕರಣಕ್ಕೆ ಭರ್ತಿ ಎರಡು ವರ್ಷ ತುಂಬಿದೆ. ವಿಚಾರಣೆ ಇನ್ನೂ ಕುಂಟುತ್ತಾ ಸಾಗಿದೆ. ಇದು ಕೋರ್ಟ್‌, ಕಾನೂನುಗಳ ಮೇಲೆ ನಾಗರಿಕರು ವಿಶ್ವಾಸ ಕಳೆದುಕೊಳ್ಳುವಂತಹ ಪ್ರಕರಣಗಳು.

ಉತ್ತರಪ್ರದೇಶದ ಬಿಜೆಪಿ ಸಂಸದ, ಕುಸ್ತಿ ಫೆಡರೇಷನ್‌ ಅಧ್ಯಕ್ಷನಾಗಿದ್ದ ಬ್ರಿಜ್‌ಭೂಷಣ್‌ ಶರಣ್‌ಸಿಂಗ್‌ ಮೇಲೆ 2023ರ ಜನವರಿ 18ರಂದು ಅಪ್ರಾಪ್ತ ಕುಸ್ತಿಪಟು ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದರು. ಆಪಾದಿತನ ವಿರುದ್ಧ ಸಾಕ್ಷ್ಯ ಇಲ್ಲವೆಂದು ದೆಹಲಿ ಪೊಲೀಸರು ಸಲ್ಲಿಸಿರುವ ಅಂತಿಮ ತನಿಖಾ ವರದಿಯನ್ನು ಪಟಿಯಾಲ ಹೌಸ್ ನ್ಯಾಯಾಲಯ ಅನುಮೋದಿಸಿದೆ.  ಬ್ರಿಜ್‌ ಭೂಷಣ್‌ ಖುಲಾಸೆಗೊಂಡಿದ್ದಾರೆ. ತೀರ್ಪಿನ ಬೆನ್ನಲ್ಲೇ ನೂರಾರು ಬೆಂಬಲಿಗರೊಂದಿಗೆ ಅಯೋಧ್ಯೆಗೆ ತೆರಳಿ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿ ತನ್ನ ವಿರುದ್ಧ ಸುಳ್ಳು ದೂರು ದಾಖಲಿಸಲಾಗಿತ್ತು ಎಂದು ಹೇಳಿಕೊಂಡಿದ್ದಾರೆ.

ದೆಹಲಿ ಪೊಲೀಸರು ಆತನ ವಿರುದ್ಧ ಪೂರಕ ಸಾಕ್ಷ್ಯ ಇಲ್ಲ ಎಂದು ವರದಿ ನೀಡಿದ್ದರು. ಇದು ನಿರೀಕ್ಷಿತ. ಯಾಕೆಂದರೆ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ, ಅಪ್ರಾಪ್ತ ಮಹಿಳಾ ಕುಸ್ತಿಪಟು ದೆಹಲಿ ಪೊಲೀಸರ ತನಿಖೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಲ್ಲದೇ, ಪೊಲೀಸರ ಅಂತಿಮ ವರದಿಗೆ ಯಾವುದೇ ವಿರೋಧ ತೋರಿರಲಿಲ್ಲ ಎಂದು ವರದಿಯಾಗಿತ್ತು. ಅಷ್ಟೇ ಅಲ್ಲ ಆಕೆಯ ತಂದೆ “ಅಂತಹದ್ದೇನೂ ನಡೆದಿಲ್ಲ, ತಪ್ಪು ತಿಳಿವಳಿಕೆಯಿಂದ ಮಗಳು ದೂರು ನೀಡಿದ್ದಾಳೆ” ಎಂದು ಆರಂಭದಲ್ಲಿಯೇ ಹೇಳಿದ್ದರು. ಆತ ಹಾಗೆ ಹೇಳಿರುವುದರ ಹಿಂದೆ ಯಾವ ಪ್ರಭಾವ ಕೆಲಸ ಮಾಡಿದೆ ಎಂಬುದು ಕೂಡ ಮುಖ್ಯವಾಗುತ್ತದೆ. ಆತನಿಗೆ ಬೆದರಿಕೆ ಹಾಕಲಾಗಿದೆಯೇ ಅಥವಾ ಹಣ ಕೊಟ್ಟು ಬಾಯಿ ಮುಚ್ಚಿಸಲಾಗಿದೆಯೇ ಎಂಬುದು ಗೊತ್ತಿಲ್ಲ. ಆದರೆ ಪ್ರಭಾವಿ ಗೂಂಡಾ ಸಂಸದನ ವಿರುದ್ಧ ತಿಂಗಳ ಕಾಲ ಒಲಿಂಪಿಕ್‌ ಮತ್ತು ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕವಿಜೇತ ಕುಸ್ತಿಪಟುಗಳಾದ ವಿನೇಶ್‌ ಫೋಗಟ್‌ ಮತ್ತು ಸಾಕ್ಷಿ ಮಲಿಕ್‌ ಹಾಗೂ ಪುರುಷ ಕುಸ್ತಿಪಟುಗಳು ದೆಹಲಿಯ ಬೀದಿಯಲ್ಲಿ ಪ್ರತಿಭಟನೆ ನಡೆಸಿದ್ದು, ಮೋದಿ ಸರ್ಕಾರ ಅವರ ನೋವುಗಳನ್ನು ಆಲಿಸದೇ ನಿರ್ಲಕ್ಷಿಸಿದ್ದು, ಬಿಜೆಪಿ ನಾಯಕರು ಕುಸ್ತಿಪಟುಗಳ ವಿರುದ್ಧವೇ ಮಾನಹಾನಿಕರ ಆರೋಪ ಮಾಡಿರುವುದನ್ನು ಈ ದೇಶ ನೋಡಿದೆ. ಆತನನ್ನು ಕುಸ್ತಿ ಫೆಡರೇಷನ್‌ನಿಂದ ಕೆಳಗಿಳಿಸದೇ ಪಕ್ಷದಲ್ಲೂ ಶಿಸ್ತುಕ್ರಮ ಜರುಗಿಸದೇ ಭಂಡತನ ತೋರಿತ್ತು ಬಿಜೆಪಿ. ಇದು ಈ ನೆಲದ ಕಾನೂನು ಹಣ ಮತ್ತು ಅಧಿಕಾರ ಬಲ ಇರುವವರ ಪಕ್ಷಪಾತಿಯಾಗಿದೆ ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ.

ಆರ್‌ಜಿಕರ್‌ ಆಸ್ಪತ್ರೆ  ಮತ್ತು ಅಣ್ಣಾಮಲೈ ವಿವಿಯ ಈ ಎರಡು ಪ್ರಕರಣಗಳಲ್ಲಿ ಕೋರ್ಟ್‌, ಪೊಲೀಸರು, ಸರ್ಕಾರ ನಡೆದುಕೊಂಡಂತೆ ಎಲ್ಲಾ ಅತ್ಯಾಚಾರ ಪ್ರಕರಣಗಳಲ್ಲೂ ನಡೆದುಕೊಂಡರೆ ಇಂತಹ ಪ್ರಕರಣಗಳು ಹತ್ತಾರು ವರ್ಷಗಳ ಕಾಲ ಕೋರ್ಟ್‌ನಲ್ಲಿ ಕೊಳೆಯುತ್ತಾ, ಸಂತ್ರಸ್ತ ಕುಟುಂಬಗಳು ಅವಮಾನ, ನೋವು, ಹತಾಶೆಯಲ್ಲಿ ನರಳುವುದನ್ನು ತಪ್ಪಿಸಬಹುದು. ಅಷ್ಟೇ ಅಲ್ಲ ಅತ್ಯಾಚಾರದಂತಹ ಕೃತ್ಯಗಳಲ್ಲಿ ಭಾಗಿಯಾಗುವ ಲಂಪಟರಿಗೆ ಭಯ ಹುಟ್ಟಿಸಬಹುದು. ಅತ್ಯಾಚಾರ ಪ್ರಕರಣಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಸರ್ಕಾರಗಳು, ಪೊಲೀಸರು, ಕೋರ್ಟ್‌ ಪೂರಕವಾಗಿ ಕೆಲಸ ಮಾಡಬೇಕಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

Download Eedina App Android / iOS

X