ವಿವಿಧ ವಸತಿ ಯೋಜನೆಗಳ ಪ್ರಗತಿ ಪರಿಶೀಲನೆಗಾಗಿ ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆ ಕೊಪ್ಪಳದ ಗೊಂಡಬಾಳ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಪರಿಶೀಲಿಸಿದರು.
“ಗ್ರಾಮ ಪಂಚಾಯತಿಯಿಂದ ವಿವಿಧ ವಸತಿ ಯೋಜನೆಯಡಿ ಫಲಾನುಭವಿಗಳನ್ನು ಆಯ್ಕೆ ಮಾಡುತ್ತಿದ್ದು, ಹಂತವಾರು ಸಹಾಯಧನ ಫಲಾನುಭವಿಗಳಿಗೆ ದೊರಕುವಂತೆ ಕ್ರಮವಹಿಸಬೇಕು. ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ಕಾಯ್ದಿರಿಸಿದ ಪಟ್ಟಿಯಲ್ಲಿರುವವರಿಗೆ ಮನೆ ಮಂಜೂರಾತಿ ಮಾಡಬೇಕು” ಎಂದು ಪಂಚಾತ್ ಅಭಿವೃದ್ದಿ ಅಧಿಕಾರಿಗೆ ಸೂಚಿಸಿದರು.
2018-19 ರಿಂದ 2025-26ನೇ ಸಾಲಿನ ವರೆಗೆ ಮನೆ ಮಂಜೂರಾತಿಯಾಗಿರುವ ಫಲಾನುಭವಿಗಳ ಪಟ್ಟಿಯನ್ನು ಖುದ್ದು ಪರಿಶೀಲಿಸಿ, ಗ್ರಾಮ ಪಂಚಾಯತಿಯಲ್ಲಿ ವಸತಿರಹಿತರು ಮತ್ತು ನಿವೇಶನರಹಿತರ ಒಂದು ಅಂತಿಮ ಪಟ್ಟಿಯನ್ನು ಸಿದ್ದಪಡಿಸಿಕೊಂಡು ಗ್ರಾಮ ಪಂಚಾಯತಿಗೆ ಮನೆ ಮಂಜೂರಾದ ಸಂದರ್ಭದಲ್ಲಿ ಅರ್ಹರಿಗೆ ಮನೆ ಮಂಜೂರಾತಿ ನೀಡಬೇಕೆಂದು ನಿರ್ದೇಶಿಸಿದರು.
ಸಂಜೀವಿನಿ ಒಕ್ಕೂಟದ ಸದಸ್ಯರು ಪ್ರತಿ ಮನೆಗೆ ತೆರಳಿ ತ್ಯಾಜ್ಯ ಸಂಗ್ರಹಣೆ ಶುಲ್ಕವನ್ನು ಪಾವತಿಸುವಂತೆ ಮನವೊಲಿಸುವಂತೆ ಒಕ್ಕೂಟದ ಸದಸ್ಯರಿಗೆ ಸೂಚಿಸಿದರು. ಇದರಿಂದ ಗ್ರಾಮದಲ್ಲಿ ಕಸ ವಿಲೇವಾರಿಯಾಗುವುದರ ಜೊತೆಗೆ ಗ್ರಾಮ ನೈರ್ಮಲ್ಯದಿಂದ ಕೂಡಿರುತ್ತದೆ. ಕಸ ಸಂಗ್ರಹಣೆ ಮತ್ತು ಪ್ರತ್ಯೇಕಿಸುವ ಸಲುವಾಗಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ವೇತನ ಪಾವತಿಗೆ ಅನುಕೂಲವಾಗುತ್ತದೆ ಎಂದರು.
ಪ್ರತಿ ಮನೆಗೆ ತಿಂಗಳಿಗೆ ರೂ.30 ಹಾಗೂ ಹೊಟೆಲ್‌ಗಳಿಗೆ ರೂ.50 ನಿಗದಿಪಡಿಸಲಾಗಿದ್ದು, ಈ ತಿಂಗಳು ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ಸಂಗ್ರಹಣೆ ಶುಲ್ಕವನ್ನು ವಸೂಲಾತಿ ಮಾಡಬೇಕೆಂದು ಒಕ್ಕೂಟದ ಸದಸ್ಯರಿಗೆ ಸೂಚಿಸಿದರು.
ಇದನ್ನೂ ಓದಿ: ಕೊಪ್ಪಳ | ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ; ಅಪರಾಧಿಗೆ 4 ವರ್ಷ ಜೈಲು ಶಿಕ್ಷೆ
ಗ್ರಾಮದ ಕೂಸಿನ ಮನೆಗೆ ಭೇಟಿ ನೀಡಿ ಮಕ್ಕಳು ದಾಖಲಾಗಿರುವ ಕುರಿತು ಕೇರ್ ಟೇಕರ್ಸ್‌ಗಳ ಬಳಿ ಮಾಹಿತಿ ಪಡೆದರು. ಪ್ರಸ್ತುತ 29 ಮಕ್ಕಳು ಪ್ರತಿ ದಿನ ಕೂಸಿನ ಮನೆಗೆ ಬರುತ್ತಿದ್ದು ಬೆಳಗ್ಗೆ ಹಾಲು, ಬಾಳೆಹಣ್ಣು, ದಾಲ್ ಕಿಚಡಿ, ಹೆಸರುಬೇಳೆ ಪಾಯಸ, ಶಾವಿಗೆ ಪಾಯಸ, ಮೊಟ್ಟೆ ನೀಡುತ್ತಿರುವ ಕುರಿತು ವಿವರಿಸಿದರು. ಕೇರ್ ಟೇಕರ್ಸ್‌ಗಳಿಗೆ ಸರಿಯಾದ ಸಮಯಕ್ಕೆ ವೇತನ ನೀಡವಂತೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಪ್ರಕಾಶ ವಿ, ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಮಹೇಶ್, ಪಂಚಾಯತ್ ಅಭಿವೃದ್ದಿ ಅಧಿಕಾರಿ ಜಯಲಕ್ಷ್ಮೀ, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ಗ್ರಾಮ ಪಂಚಾಯತಿ ಸದಸ್ಯ ಕೊಟ್ರೇಶ್, ಗ್ರಾಮ ಪಂಚಾಯತ್ ಕಾರ್ಯದರ್ಶಿ ಗವಿಸಿದ್ದಯ್ಯ ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿಗಳು ಇದ್ದರು.