ರಾಜ್ಯ ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ನಾಲ್ವರು ಎಂಎಲ್‌ಸಿಗಳ ನಾಮನಿರ್ದೇಶನ ಬಹುತೇಕ ಖಚಿತಗೊಂಡಿದೆ ಎನ್ನಲಾಗಿದೆ.
ದಲಿತ ಮುಖಂಡ ಡಿ.ಜಿ.ಸಾಗರ್, ಹಿರಿಯ ಪತ್ರಕರ್ತ ದಿನೇಶ್ ಅಮಿನ್‌ಮಟ್ಟು, ಮಾಜಿ ಎಂಎಲ್‌ಸಿ ರಮೇಶ್ ಬಾಬು ಹಾಗೂ ಎನ್‌ಆರ್‌ಐ ಅಧ್ಯಕ್ಷೆಯಾಗಿರುವ ಆರತಿ ಕೃಷ್ಣ ಹೆಸರುಗಳು ಹೈಕಮಾಂಡ್ ಕಡೆಯಿಂದ ಫೈನಲ್ ಆಗಿದೆ ಎಂದು ತಿಳಿದುಬಂದಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರೊಂದಿಗೆ ವಿಧಾನ ಪರಿಷತ್‌ನ ನಾಮನಿರ್ದೇಶನ ಸ್ಥಾನ ಭರ್ತಿ ವಿಚಾರವಾಗಿ ಸಾಕಷ್ಟು ಚರ್ಚೆಯ ಬಳಿಕ ಈ ನಾಲ್ಕು ಹೆಸರುಗಳು ಅಂತಿಮವಾಗಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದೆ ಎಂದು ಹೇಳಲಾಗಿದೆ.
ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ನಾಮನಿರ್ದೇಶನ ಮಾಡುವ ಸಂದರ್ಭದಲ್ಲಿ ಸಮುದಾಯದ ಸಮೀಕರಣದ ಮೇಲೆ ನಾಯಕರ ಆಯ್ಕೆ ಪರಿಗಣಿಸುವಂತೆ ಸಿಎಂ ಸಿದ್ದರಾಮಯ್ಯ ಅವರು ಮಲ್ಲಿಕಾರ್ಜುನ್ ಖರ್ಗೆ ಅವರೊಂದಿಗೆ ಚರ್ಚೆ ನಡೆಸಿದ್ದರು. ಪರಿಷತ್‌ನ ನಾಲ್ಕು ಸ್ಥಾನಗಳಿಗೆ ನಾಮನಿರ್ದೇಶನ ಮಾಡುವಾಗ ಮುಖ್ಯವಾಗಿ ಒಕ್ಕಲಿಗ, ಇತರೆ ಹಿಂದುಳಿದ ವರ್ಗಗಳು ಹಾಗೂ ದಲಿತ ಸಮುದಾಯಕ್ಕೆ ಒತ್ತು ಕೊಡಬೇಕು ಎಂದು ಹೈಕಮಾಂಡ್ ಮುಂದೆ ಸಿದ್ದರಾಮಯ್ಯ ಮನವಿ ಮಾಡಿದ್ದರು.
ಆರಂಭದಲ್ಲಿ ಒಕ್ಕಲಿಗ ಸಮುದಾಯದಿಂದ ಬಿ.ಎಲ್.ಶಂಕರ್, ರಘುನಂದನ್ ರಾಮಣ್ಣ ಹಾಗೂ ವಿನಯ್ ಕಾರ್ತಿಕ್ ಹೆಸರುಗಳು ಮುನ್ನೆಲೆಗೆ ಬಂದಿವೆ. ಇನ್ನು ಒಬಿಸಿ ಸಮುದಾಯದಿಂದ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಮತ್ತು ಈಡಿಗ ಸಮುದಾಯದ ಹಿರಿಯ ಪತ್ರಕರ್ತ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಜಿ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್‌ಮಟ್ಟು ಹಾಗೂ ಹಿಂದುಳಿಗ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ ಎಸ್ ದ್ವಾರಕಾನಾಥ್ ಅವರ ಹೆಸರು ಪ್ರಸ್ತಾಪವಾಗಿತ್ತು. ಹಾಗೆಯೇ ದಲಿತ ಸಮುದಾಯದಿಂದ ಡಿ.ಜಿ.ಸಾಗರ್ ಅಥವಾ ಮೈಸೂರು ಮೂಲದ ಪತ್ರಕರ್ತ ಶಿವಕುಮಾರ್ ಅವರನ್ನು ಪರಿಗಣಿಸುವಂತೆ ಸೂಚಿಸಲಾಗಿತ್ತು.
ಈಗ ಅಂತಿಮವಾಗಿ ಡಿ.ಜಿ.ಸಾಗರ್, ದಿನೇಶ್ ಅಮಿನ್‌ಮಟ್ಟು, ರಮೇಶ್ ಬಾಬು ಹಾಗೂ ಆರತಿ ಕೃಷ್ಣ ಹೆಸರುಗಳು ಹೈಕಮಾಂಡ್ ಕಡೆಯಿಂದ ಫೈನಲ್ ಆಗಿದೆ ಎಂದು ಮೂಲಗಳು ಖಚಿತಪಡಿಸಿವೆ.