ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ವಿರುದ್ಧವೂ ಪೊಲೀಸರಿಗೆ ಶುಕ್ರವಾರ ದೂರು ನೀಡಲಾಗಿದೆ.
ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರ್‌ಸಿಬಿ, ಕೆಎಸ್‌ಸಿಎ, ಡಿಎನ್‌ಎ ವಿರುದ್ಧ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ.
ಇದೀಗ ವಿರಾಟ್ ಕೊಹ್ಲಿ ವಿರುದ್ಧವೂ ಎಫ್ಐಆರ್ ದಾಖಲಿಸುವಂತೆ ನೈಜ ಹೋರಾಟಗಾರರ ವೇದಿಕೆ ಆಗ್ರಹಿಸಿದೆ. ಅಲ್ಲದೆ ಈ ಸಂಬಂಧ ನೈಜ ಹೋರಾಟಗಾರರ ವೇದಿಕೆಯ ಎಚ್ ಎಂ ವೆಂಕಟೇಶ್ ಅವರು ವಿರಾಟ್ ಕೊಹ್ಲಿ ವಿರುದ್ಧ ದೂರು ನೀಡಿದ್ದಾರೆ.
ಇದನ್ನು ಓದಿದ್ದೀರಾ? ಚಿನ್ನಸ್ವಾಮಿ ಸ್ಟೇಡಿಯಂ ದುರಂತ: ಆರ್‌ಸಿಬಿ, ರಾಜ್ಯ ಕ್ರಿಕೆಟ್ ಸಂಸ್ಥೆಯ ವಿರುದ್ಧ ಎಫ್‌ಐಆರ್ ದಾಖಲು
ಮೊದಲು ದೂರು ಸ್ವೀಕರಿಸಲು ಹಿಂದೇಟು ಹಾಕಿದ ಕಬ್ಬನ್ ಪಾರ್ಕ್ ಪೊಲೀಸರು, ಹಲವು ಗಂಟೆಗಳ ಬಳಿಕ ಕೊನೆಗೂ ವಿರಾಟ್ ಕೊಹ್ಲಿ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಈಗಾಗಲೇ ದಾಖಲಾಗಿರುವ ಎಫ್ಐಆರ್ ಜತೆ ಇದನ್ನು ಪರಿಗಣಿಸುವುದಾಗಿ ಹಿಂಬರಹ ನೀಡಿದ್ದಾರೆ.
ಬೆಂಗಳೂರಿನ ಮತ್ತು ರಾಜ್ಯದ ವಿವಿಧ ಕಡೆಗಳಿಂದ ಬಂದವರಲ್ಲಿ ವಿರಾಟ್ ಕೊಹ್ಲಿ ಅಭಿಮಾನಿಗಳೇ ಹೆಚ್ಚಾಗಿದ್ದು ವಿರಾಟ್ ಕೊಹ್ಲಿಯನ್ನು ನೋಡಿ ಕಣ್ಣುಂಬಿಸಿಕೊಳ್ಳಬೇಕೆಂಬ ಹುಚ್ಚು ಹಂಬಲದಿಂದ ಬಂದವರು ಕಾಲ್ತುಳಿತದಲ್ಲಿ ಮರಣ ಹೊಂದಿದ್ದಾರೆ. ಇವರನ್ನು ನಿಯಂತ್ರಿಸುವಲ್ಲಿ ಪೊಲೀಸರು ತಮ್ಮ ಕರ್ತವ್ಯ ಲೋಪವನ್ನು ಮಾಡಿರುತ್ತಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವಿರಾಟ್ ಕೊಹ್ಲಿ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಪಾರ ಬಂಧುಗಳಿಗೆ ಈ ಸಮಾರಂಭದಲ್ಲಿ ಭಾಗವಹಿಸಲು ಪ್ರಚೋದನೆ ನೀಡಿದ್ದರು ಅವರು ಯಾವುದೇ ಸಾರ್ವಜನಿಕ ಸುರಕ್ಷತೆ ಬಗ್ಗೆ ಎಚ್ಚರಿಕೆ ನೀಡಿರಲಿಲ್ಲ ಎಂದು ಉಲ್ಲೇಖಿಸಿ ವಿರಾಟ್ ಕೊಹ್ಲಿ ವಿರುದ್ಧ ದೂರು ನೀಡಲಾಗಿದೆ.