ಜೂನ್ 4ರಂದು ನಡೆದ ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತ ಘಟನೆಯ ‘ನೈತಿಕ ಹೊಣೆ’ ಹೊತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ನ (ಕೆಎಸ್‌ಸಿಎ) ಕಾರ್ಯದರ್ಶಿ ಎ ಶಂಕರ್ ಮತ್ತು ಖಜಾಂಚಿ ಇ.ಎಸ್ ಜೈರಾಮ್ ರಾಜೀನಾಮೆ ನೀಡಿದ್ದಾರೆ.
“ಕಳೆದ ಎರಡು ದಿನಗಳಲ್ಲಿ ನಡೆದ ಅನಿರೀಕ್ಷಿತ ಮತ್ತು ದುರದೃಷ್ಟಕರ ಘಟನೆಗಳಿಂದಾಗಿ ಬಹಳಷ್ಟು ನೊಂದಿದ್ದೇವೆ. ನಮ್ಮ ಅಧಿಕಾರ ಮತ್ತು ಪಾತ್ರವು ತುಂಬಾ ಸೀಮಿತವಾಗಿದ್ದರೂ, ನೈತಿಕ ಜವಾಬ್ದಾರಿಯ ಕಾರಣದಿಂದಾಗಿ, ಕೆಎಸ್‌ಸಿಎ ಕಾರ್ಯದರ್ಶಿ ಮತ್ತು ಖಜಾಂಚಿ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದೇವೆ. ಅಸೋಸಿಯೇಷನ್‌ನ ಅಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿದ್ದೇವೆ” ಎಂದು ಎ ಶಂಕರ್ ಮತ್ತು ಇ.ಎಸ್ ಜೈರಾಮ್ ಹೇಳಿದ್ದಾರೆ.
ಬುಧವಾರ ಸಂಭವಿಸಿದ ಕಾಲ್ತುಳಿತ ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ದುರಂತ ಘಟನೆ ಬೆನ್ನಲ್ಲೇ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಸೇರಿದಂತೆ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಆರ್‌ಸಿಬಿ ಫ್ರಾಂಸೈಸಿಯ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್ ಅವರನ್ನು ವಜಾಗೊಳಿಸಲಾಗಿದೆ. ಗುಪ್ತಚರ ಇಲಾಖೆಯ ಎಡಿಜಿಪಿ ಹೇಮಂತ್ ನಿಂಬಾಳ್ಕರ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಈ ಲೇಖನ ಓದಿದ್ದೀರಾ?: ಬೆಂಗಳೂರು ದುರಂತ | ಭೀಕರ ಘಟನೆಗೆ ಏನೆಲ್ಲ ಕಾರಣಗಳು– ಸಂಪೂರ್ಣ ವರದಿ
ದುರ್ಘಟನೆಯ ಬಳಿಕ ಕೆಎಸ್‌ಸಿಎ ಮತ್ತು ಆರ್‌ಸಿಬಿ ಮೃತ್ರಪಟ್ಟವರ ಸಂತ್ರಸ್ತ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದೆ. “ಬುಧವಾರ, ಬೆಂಗಳೂರಿನಲ್ಲಿ ನಡೆದ ದುರದೃಷ್ಟಕರ ಘಟನೆಯು ಆರ್‌ಸಿಬಿ ಕುಟುಂಬಕ್ಕೆ ತುಂಬಾ ದುಃಖ ಮತ್ತು ನೋವನ್ನುಂಟು ಮಾಡಿದೆ” ಎಂದು ಆರ್‌ಸಿಬಿ ಹೇಳಿಕೊಂಡಿದೆ.
ಸದ್ಯ, ದುರಂತ ಘಟನೆಯ ಕುರಿತು ಮ್ಯಾಜಿಸ್ಟೀರಿಯಲ್ (ಜಿಲ್ಲಾಧಿಕಾರಿ ನೇತೃತ್ವದಲ್ಲಿ) ತನಿಖೆ ನಡೆಯುತ್ತಿದೆ. 15 ದಿನಗಳ ಒಳಗಾಗಿ ತನಿಖಾ ವರದಿ ಸಲ್ಲಿಸುವಂತೆ ಸರ್ಕಾರ ಸೂಚಿಸಿದೆ. ಆರ್‌ಸಿಬಿ ವಿರುದ್ಧ ಈವರೆಗೆ ಮೂರು ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ಆರ್‌ಸಿಬಿಯ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ವಿರುದ್ಧವೂ ದೂರು ದಾಖಲಾಗಿದೆ.