ಜೋಳಿಗೆ | ಮೈಸೂರು ಎಂಬ ಚಳವಳಿ-ಹೋರಾಟಗಳ ಕುಲುಮೆಯಲ್ಲಿ…

Date:

Advertisements

ಮಾರ್ಕ್ಸ್‌ವಾದಿ ಅಧ್ಯಯನ ಕೂಟದಲ್ಲಿನ ಓದು-ಚರ್ಚೆಗಳು, ಮಹದೇವಪ್ಪ ಸ್ಮಾರಕ ಮಾರ್ಕ್ಸ್‌ವಾದಿ ಲೈಬ್ರೆರಿಯಲ್ಲಿ ಏರ್ಪಡುತ್ತಿದ್ದ ಚರ್ಚೆ-ಸಂವಾದಗಳು, ನಿರಂತರ ಪ್ರತಿಭಟನೆ ಹೋರಾಟಗಳು, ಅನುಭವಿ ಹೋರಾಟಗಾರರ ಒಡನಾಟಗಳು, ಒಂದಷ್ಟು ಸ್ವತಂತ್ರ ಓದು, ಎಲ್ಲ ಸೇರಿ ನನ್ನ ವಿಚಾರಗಳು ಭಾರತದ ಕ್ರಾಂತಿಯ ಕಡೆಗೆ ಖಚಿತಗೊಳ್ಳುತ್ತ ಬಂದವು…

1970ರ ದಶಕ ಮತ್ತು 1980ರ ದಶಕದ ಕಾಲಘಟ್ಟದ ಮೈಸೂರಿನ ವಾತಾವರಣ ವಿವಿಧ ರೀತಿಯ ಚಳವಳಿಗಳ ಕುಲುಮೆಯಾಗಿತ್ತು. ಆ ಅವಧಿಯ ನಿರಂತರವಾದ ಪ್ರಜಾಸತ್ತಾತ್ಮಕ, ಪ್ರಗತಿಪರ ಚಟುವಟಿಕೆ-ಚಳವಳಿ-ಹೋರಾಟಗಳ ಈ ಕುಲುಮೆ ನನ್ನನ್ನು ಹೋರಾಟಗಳ ನಿಟ್ಟಿನಲ್ಲಿ ಸಾಕಷ್ಟು ಮಟ್ಟಿಗೆ ಗಟ್ಟಿಗೊಳಿಸಿತು ಎನ್ನಬಹುದು.

ಕೇಂದ್ರ ಸರ್ಕಾರದ ಅಂಚೆ-ತಂತಿ ಇಲಾಖೆಯ ಆರ್‌ಎಂಎಸ್‌ ವಿಭಾಗದಲ್ಲಿ 1973ರ ಫೆಬ್ರವರಿಯಲ್ಲಿ ಕೆಲಸಕ್ಕೆ ಸೇರಿದ್ದ ನಾನು 1975ರ ಫೆಬ್ರವರಿಯಲ್ಲಿ ಅದೇ ಇಲಾಖೆಯ ಟೆಲಿಫೋನ್‌ ವಿಭಾಗಕ್ಕೆ ಬದಲಾಯಿಸಿಕೊಂಡೆ. ಆ ವರ್ಷ ಜೂನ್‌ 25ರಂದು ಪ್ರಧಾನಿ ಇಂದಿರಾ ಗಾಂಧಿ ದೇಶದ ಮೇಲೆ ತುರ್ತುಪರಿಸ್ಥಿತಿಯನ್ನು ಹೇರಿದರು. ಅದು 1977ರ ಮಾರ್ಚ್‌ 21ರವರೆಗೆ ಮುಂದುವರಿಯಿತು. ಈ 21 ತಿಂಗಳ ಅವಧಿಯನ್ನು ಸ್ವತಂತ್ರ ಭಾರತದ ಕರಾಳ ಅಧ್ಯಾಯ ಎಂದು ಪರಿಗಣಿಸಲಾಗಿದೆ. ಕರ್ನಾಟಕದಲ್ಲಿ ಮುಖ್ಯಮಂತ್ರಿ ದೇವರಾಜ ಅರಸರ ಸರ್ಕಾರದ ಹಲವಾರು ಜನೋಪಯೋಗಿ ಕಾರ್ಯಕ್ರಮಗಳಿಂದಾಗಿ ತುರ್ತುಪರಿಸ್ಥಿತಿಯ ಪ್ರಭಾವ ಉತ್ತರ ಭಾರತದಷ್ಟು ಕರಾಳವಾಗಿರಲಿಲ್ಲ ಎಂದು ಹೇಳಲಾಗುತ್ತದೆಯಾದರೂ ಅದರ ಕರಿನೆರಳು ಇಲ್ಲಿಯೂ ಸಾಕಷ್ಟು ದಟ್ಟವಾಗಿಯೇ ಬಿದ್ದಿತ್ತು.

ಆಂತರಿಕ ಭದ್ರತಾ ಕಾಯ್ದೆ ʻಮಿಸಾ’ (MISA – Maintenance of Internal Security Act) ಮತ್ತು ಭಾರತದ ಆಂತರಿಕ ಭದ್ರತೆಯ ರಕ್ಷಣಾ ನಿಯಮಗಳ (Defense of Internal Security Rules of India) ಅಡಿಯಲ್ಲಿ ಕರ್ನಾಟಕದಲ್ಲೂ ಸಾವಿರಾರು ಜನರನ್ನು ಬಂಧಿಸಲಾಗಿತ್ತು ಎಂದು ಅಂದಾಜಿಸಲಾಗಿದೆ. ಎಸ್.ಆರ್. ಬೊಮ್ಮಾಯಿ, ರಾಮಕೃಷ್ಣ ಹೆಗಡೆ ಅವರಂತಹ ಪ್ರಮುಖ ರಾಜಕೀಯ ನಾಯಕರನ್ನು ಮತ್ತು ಸ್ವಾತಂತ್ರ್ಯ ಸೇನಾನಿ ಎಚ್.ಎಸ್.ದೊರೆಸ್ವಾಮಿ, ಸ್ನೇಹಲತಾ ರೆಡ್ಡಿ ಮುಂತಾದ ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಜನಸಾಮಾನ್ಯರು, ವಿದ್ಯಾರ್ಥಿಗಳು, ಪತ್ರಕರ್ತರು, ಸತ್ಯಾಗ್ರಹಗಳಲ್ಲಿ ಭಾಗವಹಿಸಿದ ನೂರಾರು ಹೋರಾಟಗಾರರು ಹಾಗೂ ಕೆಲ ಮಂದಿ ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಸಹ ಬಂಧಿಸಿ ಜೈಲಿಗೆ ಹಾಕಲಾಗಿತ್ತು. ಅನೇಕರು ತಲೆ ಮರೆಸಿಕೊಳ್ಳಬೇಕಾಯಿತು. ಹಾಗೆ ಅಜ್ಞಾತವಾಸಿಯಾಗಿದ್ದ ಜಾರ್ಜ್ ಫರ್ನಾಂಡಿಸ್ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಲಾಗಿದ್ದ ಖ್ಯಾತ ನಟಿ ಮತ್ತು ಸಾಮಾಜಿಕ ಕಾರ್ಯಕರ್ತೆ ಸ್ನೇಹಲತಾ ರೆಡ್ಡಿ ಅವರು ಜೈಲಿನಲ್ಲಿ ತೀವ್ರ ಅನಾರೋಗ್ಯಕ್ಕೆ ಈಡಾದರು; ಅದು ಉಲ್ಬಣಗೊಂಡ ಕಾರಣ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಆದರೆ ಅದಾಗಿ ಕೆಲವೇ ದಿನಗಳಲ್ಲಿ ಅವರು ನಿಧನರಾದರು. ಅವರ ಸಾವು ಕರ್ನಾಟಕದಲ್ಲಿ ತುರ್ತುಪರಿಸ್ಥಿತಿಯ ದೌರ್ಜನ್ಯಗಳಿಗೆ ಒಂದು ಉದಾಹರಣೆಯಾಗಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

deccanherald import sites dh files article images emergency
ಹೋರಾಟಗಾರ್ತಿ ಮತ್ತು ನಟಿ ಸ್ನೇಹಲತಾ ರೆಡ್ಡಿ

ಇತ್ತ, 1974ರಲ್ಲಿ ನಾನು ನನ್ನ ಹಳೆಯ ನಂಬಿಕೆ ಚಿಂತನೆ ಆಚಾರ ವಿಚಾರಗಳನ್ನೆಲ್ಲ ತ್ಯಜಿಸಿ, ಜನಪರ ಜಾತ್ಯತೀತ ಪ್ರಜಾಸತ್ತಾತ್ಮಕ ಆಚಾರ ವಿಚಾರಗಳ ಬೆಳಗಿಗೆ ತೆರೆದುಕೊಂಡ ಬಳಿಕದ ಒಂದೆರಡು ವರ್ಷಗಳು ಹೆಚ್ಚಾಗಿ ನನ್ನ ಬೌದ್ಧಿಕ ವಿಕಸನದ ವರ್ಷಗಳಾಗಿದ್ದವು. ಮಾರ್ಕ್ಸ್‌ವಾದಿ ಅಧ್ಯಯನ ಕೂಟದಲ್ಲಿನ ಓದು-ಚರ್ಚೆಗಳು, ಮಹದೇವಪ್ಪ ಸ್ಮಾರಕ ಮಾರ್ಕ್ಸ್‌ವಾದಿ ಲೈಬ್ರೆರಿಯಲ್ಲಿ ಏರ್ಪಡುತ್ತಿದ್ದ ಚರ್ಚೆ-ಸಂವಾದಗಳು, ನಿರಂತರ ಪ್ರತಿಭಟನೆ ಹೋರಾಟಗಳು, ಅನುಭವಿ ಹೋರಾಟಗಾರರ ಒಡನಾಟಗಳು, ಒಂದಷ್ಟು ಸ್ವತಂತ್ರ ಓದು, ಎಲ್ಲ ಸೇರಿ ನನ್ನ ವಿಚಾರಗಳು ಭಾರತದ ಕ್ರಾಂತಿಯ ಕಡೆಗೆ ಖಚಿತಗೊಳ್ಳುತ್ತ ಬಂದವು. ಮೈಸೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ, ಇತಿಹಾಸ, ಅರ್ಥಶಾಸ್ತ್ರ, ರಾಜನೀತಿ, ತತ್ವಶಾಸ್ತ್ರ ಮತ್ತಿತರ ʻಹ್ಯುಮ್ಯಾನಿಟೀಸ್ʼ ಎಂದು ಕರೆಯಲಾಗುವ ವಿಭಾಗಗಳಲ್ಲಿ ದೇಶದ ಬೇರೆ ಬೇರೆ ವಿವಿಗಳಿಂದ ಹೆಸರಾಂತ ಪ್ರೊಫೆಸರ್‌ಗಳು, ವಿಷಯ ತಜ್ಞರು, ಬೇರೆ ರಾಜ್ಯಗಳ ಹೆಸರಾಂತ ಹೋರಾಟಗಾರರು, ಮುಖಂಡರುಗಳನ್ನು ಉಪನ್ಯಾಸ ನೀಡಲು ಕರೆಸಲಾಗುತ್ತಿತ್ತು. ಅಂಥವರಲ್ಲಿ ಕೆಲವರನ್ನು ನಮ್ಮ ಹಿರಿಯರು ನಮ್ಮ ಲೈಬ್ರೆರಿಗೂ ಕರೆಸಿ ಸಂವಾದ-ಚರ್ಚೆಗಳನ್ನು ಏರ್ಪಡಿಸುತ್ತಿದ್ದರು. ದೆಹಲಿ-ಜೆಎನ್‌ಯುಗಳ ವಿಖ್ಯಾತ ಇತಿಹಾಸಜ್ಞರಾದ ಪ್ರೊ. ಆರ್.‌ಎಸ್.‌ ಶರ್ಮ, ಪ್ರೊ. ಇರ್ಫಾನ್‌ ಹಬೀಬ್, ಪ್ರೊ. ರೋಮಿಲಾ ಥಾಪರ್, ಭಾರತದ ಹೆಸರಾಂತ ಕಮ್ಯೂನಿಸ್ಟ್‌ ನಾಯಕ ಇ.ಎಂ.ಎಸ್‌. ನಂಬೂದರಿಪಾದ್‌, ಹೀಗೆ ಅದೆಷ್ಟೋ ಜನರ ವಿಚಾರಗಳನ್ನು ಕೇಳುವ ಅವಕಾಶ ಲಭಿಸುತ್ತಿತ್ತು. ಆಗ ಅವೆಲ್ಲವೂ ಪೂರ್ತಿ ಅರ್ಥವಾಗಿಬಿಡುತ್ತಿದ್ದವು ಎಂದಲ್ಲ. ಆದರೂ ನನ್ನ ಅರಿವಿನ ದಿಗಂತದ ಅಂಚು ಕೊಂಚಕೊಂಚವೇ ವಿಸ್ತಾರವಾಗುತ್ತಿತ್ತು.

Advertisements
Devanuru Mahadeva Ananthamurthy U R
ದೇವನೂರು ಮಹಾದೇವ ಮತ್ತು ಡಾ ಯು ಆರ್‌ ಅನಂತಮೂರ್ತಿ

ಒಡನಾಟಗಳ ವಿಚಾರಕ್ಕೆ ಬಂದರೆ, ಪ್ರೊಫೆಸರ್‌ಗಳಾದ ವೀರ್ರಾಜು, ನರೇಂದ್ರ ಸಿಂಗ್‌, ರಾಮಲಿಂಗಂ ಅವರಂತಹ ಮಾವೋವಾದಿ ಒಲವಿನ ಕಮ್ಯೂನಿಸ್ಟರು, ಉಗ್ರಪ್ಪ, ರಹಮಾನ್‌ ಮತ್ತಿತರ ಸಿಪಿಐ-ಸಿಪಿಎಂ ನಾಯಕರು, ಖ್ಯಾತ ಸಮಾಜವಾದಿಗಳೂ ವಕೀಲರೂ ಆದ ಪ. ಮಲ್ಲೇಶ್‌, ಉದ್ಯಮಿ ಟಿ.ಎನ್.ನಾಗರಾಜ್, ಪ್ರೊ. ಯು.ಆರ್. ಅನಂತಮೂರ್ತಿ, ಪ್ರೊ. ಎಲ್‌. ಶ್ರೀಕಂಠಯ್ಯ, ಪ್ರೊ. ಶ್ರೀನಿವಾಸನ್‌ (ಇವರು ಯುವರಾಜಾ ಕಾಲೇಜಿನಲ್ಲಿ ನನಗೆ ಪ್ರೊಫೆಸರ್‌ ಆಗಿದ್ದವರು), ಮುಂತಾಗಿ ಅಂದಿನ ಬಹುಪಾಲು ಅಕಾಡೆಮಿಕ್‌ ವಲಯ, ಫೈರ್‌ಬ್ರಾಂಡ್ ಯುವ‌ ಸಮಾಜವಾದಿ ಪ್ರೊ. ಬಿ.ರಾಮದಾಸ್, ʻಆಂದೋಲನʼದ ಯುವ ಸಂಪಾದಕ ರಾಜಶೇಖರ ಕೋಟಿ, ಕ್ರಿಯಾಶೀಲ ಯುವ ಚಿಂತಕರಾಗಿದ್ದ ದೇವನೂರ ಮಹಾದೇವ, ದೇವಯ್ಯ ಹರವೆ, ಸಿದ್ಧಲಿಂಗಯ್ಯ, ಕಿಕ್ಕೇರಿ ನಾರಾಯಣ, ಲಿಂಗದೇವರು ಹಳೆಮನೆ, ಹೊರೆಯಾಲ ದೊರೆಸ್ವಾಮಿ, ಇಂದೂಧರ ಹೊನ್ನಾಪುರ, ಮಾವೋವಾದಿ ಚಿಂತನೆಯ ದಲಿತ ಚಿಂತಕ-ಸಂಘಟನೆಗಾರ ಡಾ. ವಿ. ಲಕ್ಷ್ಮೀನಾರಾಯಣ (ಲಕ್ಷ್ಮಿ), ʻಆಂದೋಲನʼದ ಜನಪ್ರಿಯ ʻಹಾಡುಪಾಡುʼ ಅಂಕಣಕಾರ ಟಿ.ಎಸ್.ರಾಮಸ್ವಾಮಿ (ರಾಮು), ಅವನ ತಮ್ಮ ವೇಣು (ಟಿ.ಎಸ್.ವೇಣುಗೋಪಾಲ್, ಪ್ರೊಫೆಸರ್‌ ಆಗಿ ಈಗ ನಿವೃತ್ತ), ತುಮಕೂರು ವಿವಿ ಕುಲಪತಿಯಾಗಿ ನಿವೃತ್ತರಾಗಿರುವ ಡಾ. ಎ.ಎಚ್.ರಾಜಾಸಾಬ್, ಡಾ. ಎಂ.‌ ಮೋಹನದಾಸ್ ಶೆಣೈ (ಹುಣಸೂರಿನ ತಂಬಾಕು ಮಂಡಳಿಯ ಡೈರೆಕ್ಟರ್ ಆಗಿ ನಿವೃತ್ತ), ಎ.ಸಿ./ಎ.ಡಿ.ಸಿ. ಆಗಿ ನಿವೃತ್ತರಾಗಿರುವ ಡಾ. ಸೋಮಶೇಖರಪ್ಪ, ಡಾ. ರತಿರಾವ್‌, ಮೀನಾಕ್ಷಿ, ಹೇಮಾ, ಟೆಲಿಫೋನ್‌ನ ಹಿರಿಯ ಸಹೋದ್ಯೋಗಿ ಎಸ್.‌ ನಾರಾಯಣ, ಆರೆಮ್ಮೆಸ್‌ನ ಹಿರಿಯ ಸಹೋದ್ಯೋಗಿ ಬಿ.ಗಂಗಾಧರ ಮೂರ್ತಿ ಮತ್ತು ಸಮವಯಸ್ಕ ಸಹೋದ್ಯೋಗಿ ಕೆ.ಕೆ.ಗಂಗಾಧರನ್‌, ಕುಕ್ಕರಹಳ್ಳಿಯ ಕಿರಿಯ ಸಂಗಾತಿಗಳಾದ ಎಸ್.‌ ತುಕಾರಾಮ, ಸ. ಬಸವರಾಜು, ಎಸ್.‌ ನಾಗರಾಜು, ಕೃಷ್ಣಮೂರ್ತಿ ….. ಹೀಗೆ ಅದೆಷ್ಟೋ ಜನ ಹಿರಿಯ ಮತ್ತು ಯುವ ತಲೆಮಾರಿನ ಚಿಂತಕರು-ಕ್ರಿಯಾಶೀಲರು ಆಗಿನ ನಿರಂತರ ಚರ್ಚೆ-ಹೋರಾಟ-ಚಟುವಟಿಕೆಗಳಲ್ಲಿ ಜೊತೆಗೂಡುತ್ತಿದ್ದರು.

ನನ್ನ ಉದ್ಯೋಗದ ವಿಚಾರಕ್ಕೆ ಬರುವುದಾದರೆ – ಟೆಲಿಫೋನ್ಸ್‌ ಇಲಾಖೆಯಲ್ಲಿ ಮೊದಲಿಗೆ ಎರಡು ತಿಂಗಳು ಥಿಯರಿಟಿಕಲ್ ತರಬೇತಿ, ನಂತರ ಪೋಸ್ಟಿಂಗ್‌ ಆದ ಕಚೇರಿಯಲ್ಲಿ ಒಂದು ತಿಂಗಳ ಪ್ರೊಬೇಶನ್‌ ಮುಗಿದು ಟೆಲಿಫೋನ್ಸ್‌ನ ಮೈಸೂರು ಇಂಜಿನಿಯರಿಂಗ್ ವಿಭಾಗದಲ್ಲಿ 1975ರ ಮೇ ತಿಂಗಳಲ್ಲಿ ಇಂಜಿನಿಯರಿಂಗ್ ಆಫೀಸ್‌ ಕ್ಲಾರ್ಕ್‌ ಎಂಬ ಪೂರ್ಣ ಪ್ರಮಾಣದ ಉದ್ಯೋಗ ಖಾಯಂ ಆಯಿತು. ಆಗಿನ ಒಂದು ಆಸಕ್ತಿದಾಯಕ ಸಂಗತಿ ಹೇಳಬೇಕೆನಿಸುತ್ತದೆ. ನನ್ನ ಪ್ರೊಬೇಶನ್‌ ಅವಧಿ ಮೈಸೂರು ಫೋನ್ಸ್ ಉಪವಿಭಾಗ ಕಚೇರಿಯಲ್ಲಿ ಉಪವಿಭಾಗ ಇಂಜಿನಿಯರ್‌ ಎಸ್‌.ಜಿ. ಸುಬ್ಬಣ್ಣ ಅವರ ಮಾರ್ಗದರ್ಶನದಲ್ಲಿ ನಡೆಯಿತು. ಅವರೊಬ್ಬ ಬಹಳ ಕಟ್ಟುನಿಟ್ಟಿನ, ಆದರೆ ಬಹಳ ಸಹೃದಯಿಯಾದ ಅಧಿಕಾರಿಯಾಗಿದ್ದರು. ಅವರಿಗೆ ಕೆಲಸ ಸಕಾಲದಲ್ಲಿ ಮತ್ತು ಬಹಳ ಅಚ್ಚುಕಟ್ಟಾಗಿ ಆಗಬೇಕು. ಕೆಲಸದ ವಿಷಯದಲ್ಲಿ ನಾನು ಆರೆಮ್ಮೆಸ್‌ನಲ್ಲೂ ಒಳ್ಳೆಯ ಹೆಸರು ಗಳಿಸಿದ್ದೆ. ಇಲ್ಲೂ ಅಷ್ಟೆ, ಈ ಅಧಿಕಾರಿಗೆ ನನ್ನ ಕೆಲಸ ಬಹಳ ಮೆಚ್ಚುಗೆಯಾಯಿತು. ಎಂಟ್ಹತ್ತು ಮಂದಿ ಗುಮಾಸ್ತರ ಪೈಕಿ ಅತಿ ಹಿರಿಯ ಸಿಬ್ಬಂದಿಗೆ ಕೊಡುವ ಅಕೌಂಟ್ಸ್‌ ಸ್ಥಾನವನ್ನು ನನ್ನ ಪ್ರೊಬೇಶನ್‌ ಮುಗಿದ ಸ್ವಲ್ಪ ಕಾಲದಲ್ಲೇ ನನಗೆ ಕೊಟ್ಟುಬಿಟ್ಟರು. ಸುಮಾರು ಒಂದೂವರೆ ವರ್ಷ ಆ ಕಚೇರಿಯಲ್ಲಿ ಕೆಲಸ ಮಾಡಿದ ನಂತರ ನನಗೆ ವಿಭಾಗ ಕಚೇರಿಗೆ ವರ್ಗವಾಯಿತು. ಆದರೆ ಸುಬ್ಬಣ್ಣನವರು ನನ್ನನ್ನು ಬಿಟ್ಟುಕೊಡಲು ಒಪ್ಪಲಿಲ್ಲ. ತನ್ನ ಮೇಲಧಿಕಾರಿಯಾದ ವಿಭಾಗ ಇಂಜಿನಿಯರ್‌ ಎಚ್.ವಿ.ಭಟ್‌ ಅವರ ಜೊತೆ, “ನನ್ನ ಆಫೀಸಿನಿಂದ ಬೇಕಾದರೆ ಇಬ್ಬರನ್ನು ಕರೆದುಕೊಳ್ಳಿ, ನಾಗರಾಜನನ್ನು ನನಗೆ ಬಿಡಿ” ಅಂತ ಹಟ ಹಿಡಿದರು. ಅವರೂ ಅದೇ ಹೇಳಿದರು: “ನಿಮಗೆ ಬೇಕಾದರೆ ಡಿವಿಜನಲ್‌ ಆಫೀಸಿನಿಂದ ನಿಮಗೆ ಬೇಕಾದ ಇಬ್ಬರನ್ನು ಕೇಳಿ, ಕೊಟ್ಬಿಡ್ತೀನಿ, ನಾಗರಾಜ ಡಿವಿಜನಲ್‌ ಆಫೀಸಿಗೆ ಬೇಕು” ಅಂತ! ಕೊನೆಗೂ ಹಿರಿಯ ಅಧಿಕಾರಿಯ ಮಾತೇ ಗೆದ್ದಿತು!

ಹಾಗೆ ನೋಡಿದರೆ ಇಲ್ಲಿ ಯಾವುದೇ ವಶೀಲಿಬಾಜಿ ಇಲ್ಲದೆ ಮೆರಿಟ್‌ ಆಧಾರದಲ್ಲಿ ಮಾತ್ರವೇ ನೇಮಕಾತಿ ಆಗುತ್ತಿದ್ದುದರಿಂದ ಎಲ್ಲರೂ ಒಳ್ಳೆಯ ಕೆಲಸಗಾರರೇ ಆಗಿರುತ್ತಿದ್ದರು. ಮೀಸಲಾತಿಯಲ್ಲಿ ನೇಮಕವಾಗುವವರ ಕೆಲಸದ ಸಾಮರ್ಥ್ಯದ ಬಗ್ಗೆ ಮೂಗುಮುರಿಯುವ ಚಾಳಿ ಸಮಾಜದಲ್ಲಿ ಇದೆಯಾದರೂ ಇಲ್ಲಿ ಎಸ್‌ಸಿ/ಎಸ್‌ಟಿ ಸಿಬ್ಬಂದಿ ಕೂಡ ಯಾರಿಗೇನೂ ಕಡಿಮೆ ಇಲ್ಲದಂತೆ ಕೆಲಸದಲ್ಲಿ ನಿಷ್ಣಾತರಾಗಿರುತ್ತಿದ್ದರು. ಜೊತೆಗೆ ಇಷ್ಟು ದೊಡ್ಡ ಕಚೇರಿಯಲ್ಲಿ ಅಷ್ಟಾಗಿ ಯಾವುದೇ ಒಳಜಗಳ ಕಿರಿಕಿರಿಗಳಿಲ್ಲದೆ, ತಾರತಮ್ಯ-ಗುಂಪುಗಾರಿಕೆ-ಪಕ್ಷಪಾತಗಳಿಲ್ಲದೆ ಬಹುಮಟ್ಟಿಗೆ ಅನ್ಯೋನ್ಯವಾದ ವಾತಾವರಣವಿತ್ತು.

ಅವಿಭಜಿತ ಮೈಸೂರು ಜಿಲ್ಲೆ, ಮಂಡ್ಯ, ಹಾಸನ ಮತ್ತು ಚಿಕ್ಕಮಗಳೂರು ಈ ನಾಲ್ಕು ಜಿಲ್ಲೆಗಳನ್ನು ಒಳಗೊಂಡಿದ್ದ ಮೈಸೂರು ಇಂಜಿನಿಯರಿಂಗ್ ವಿಭಾಗದ ಕಚೇರಿ ಮೈಸೂರು ಅರಮನೆಯ ವಿಶಾಲವಾದ ಬಿಡದಿ ಬ್ಲಾಕ್‌ನಲ್ಲಿತ್ತು. ಇಲ್ಲಿಯೂ ಯೂನಿಯನ್ನಿನಲ್ಲಿ ನಾನು ಸಕ್ರಿಯವಾಗಿ ತೊಡಗಿಸಿಕೊಂಡೆ. ಹಿರಿಯರು ಅನುಭವಿಗಳೆಲ್ಲರ ನಡುವೆ ಕೇವಲ 23 ವರ್ಷದ ನನ್ನನ್ನು ವಿಭಾಗ ಕಚೇರಿಯ ಶಾಖಾ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಿದರು. ಇದರ ಜೊತೆಜೊತೆಯಲ್ಲಿ ಮರು ವರ್ಷವೇ ವಿಭಾಗ ಖಜಾಂಚಿಯಾಗಿಯೂ ಆಯ್ಕೆಯಾದೆ. 1979ರಲ್ಲಿ ಕೆಲಸಕ್ಕೆ ರಾಜೀನಾಮೆ ಕೊಡುವವರೆಗೂ ಈ ಎರಡೂ ಹುದ್ದೆಗಳನ್ನು ನಿರ್ವಹಿಸಿದೆ. ಜೊತೆಗೆ, ಅಂಚೆ-ತಂತಿ ಯೂನಿಯನ್‌ಗಳೊಂದಿಗೆ ಮೈಸೂರಿನಲ್ಲಿದ್ದ ಇನ್ನೆರಡು ಕೇಂದ್ರ ಸರ್ಕಾರದ ಸಂಸ್ಥೆಗಳಾದ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ಮತ್ತು ಡಿಫೆನ್ಸ್‌ ಫುಡ್ ರೀಸರ್ಚ್‌ ಲ್ಯಾಬೊರೇಟರಿ (ಡಿಎಫ್‌ಆರ್‌ಎಲ್)‌ ಇವುಗಳಲ್ಲಿನ ಯೂನಿಯನ್‌ಗಳನ್ನೂ ಒಟ್ಟುಗೂಡಿಸಿ, 1978ರಲ್ಲಿ ಆರಂಭಿಸಲಾದ ಕೇಂದ್ರೀಯ ಯೂನಿಯನ್‌ಗಳ ಸಮನ್ವಯ ಸಮಿತಿಯಲ್ಲೂ ಸಕ್ರಿಯ ಪಾತ್ರ ವಹಿಸಿದೆ. ಇದರ ಸ್ಥಾಪನೆಯಲ್ಲಿ ಹಿರಿಯ ಸಂಗಾತಿಗಳಾದ ವೀರ್ರಾಜು, ನರೇಂದ್ರ ಸಿಂಗ್‌ ಅವರ ಪಾತ್ರ ಪ್ರಮುಖವಾಗಿತ್ತು.

ಇಂದೂಧರ
ಇಂದೂಧರ ಹೊನ್ನಾಪುರ

ದಲಿತ ಚಳವಳಿಯ ಆರಂಭದಿಂದಲೂ ಅದರ ಮುಂದಾಳುಗಳಲ್ಲಿ ಒಬ್ಬರಾದ ಮತ್ತು ಈಗ ʻಸಂವಾದʼ ಪತ್ರಿಕೆಯ ಸಂಪಾದಕರಾಗಿರುವ ಇಂದೂಧರ ಹೊನ್ನಾಪುರ ಅವರು ನನಗಿಂತ ಎರಡೋ ಮೂರೋ ವರ್ಷದ ಬಳಿಕ ಟೆಲಿಫೋನ್‌ ಆಪರೇಟರ್‌ ಆಗಿ ಸೇರಿ, ಬಾಳೆಹೊನ್ನೂರಿನಲ್ಲಿ ಕೆಲಸದಲ್ಲಿದ್ದರು. ಅವರಿಗಿಂತ ಮೊದಲೇ ಟೆಲಿಫೋನ್‌ ಆಪರೇಟರ್‌ ಆಗಿದ್ದ ಅವರ ಮಡದಿ ರಾಣಿ ಅವರು ನಾನು ಉಪವಿಭಾಗದಲ್ಲಿದ್ದಾಗಲೇ ಪರಿಚಿತರಾಗಿದ್ದರು. 1978 ಅಥವಾ 1979ರಲ್ಲಿ ಇಂದೂಧರ ಅವರಿಗೆ ಪ್ರಜಾವಾಣಿಯಲ್ಲಿ ಕೆಲಸ ದೊರೆತು, ಕೂಡಲೇ ಜಾಯಿನ್‌ ಆಗಬೇಕೆಂದು ಆದೇಶ ಬಂದಿತು. ಇಲಾಖಾ ನಿಯಮದ ಪ್ರಕಾರ ಸಿಬ್ಬಂದಿಯೊಬ್ಬರು ಐದು ವರ್ಷ ಸೇವೆ ಪೂರ್ಣವಾಗುವ ಮೊದಲೇ ಕೆಲಸ ಬಿಡಬೇಕಾಗಿದ್ದಲ್ಲಿ ಒಂದು ತಿಂಗಳ ನೋಟೀಸ್‌ ನೀಡಬೇಕು ಇಲ್ಲವೇ ಒಂದು ತಿಂಗಳ ಸಂಬಳ ಕಟ್ಟಬೇಕು ಎಂಬ ಕರಾರಿತ್ತು. ಆಗಿನ್ನೂ ಹಣಕಾಸಿನ ಅಡಚಣೆಯಲ್ಲಿದ್ದ ಇಂದೂಧರ ಅವರಿಗೆ ಇವೆರಡೂ ಕಷ್ಟದ ವಿಚಾರಗಳಾಗಿದ್ದವು. ಆಗ ನಾನು ವಿಭಾಗ ಇಂಜಿನಿಯರ್‌ ಭಟ್‌ ಅವರಲ್ಲಿ ಮಾತಾಡಿ ಎರಡರಿಂದಲೂ ʻಆಫ್‌ ದ ರೆಕಾರ್ಡ್ʼ ವಿನಾಯ್ತಿ ಕೊಡಿಸಿದ್ದೆ.

ಇಲ್ಲಿನ ಕೆಲಸದಲ್ಲಿ ನನಗೆ ಸಂತೋಷ ಸಮಾಧಾನ ಕೊಟ್ಟಿರುವ ವಿಚಾರವೊಂದಿದೆ. ನನ್ನ ಕಮ್ಯೂನಿಸ್ಟ್‌ ವಿಚಾರಗಳ ಫಲವಾಗಿ ನಾನು ಇಲಾಖೆಯ ಲೈನ್‌ಮೆನ್, ಲೈನ್ ಸೂಪರ್‌ವೈಸರ್ಗಳು, ನಾಲ್ಕನೇ ದರ್ಜೆ ಸಹಾಯಕರು ಮತ್ತಿತರ ತಳಹಂತದ ನೌಕರರೊಂದಿಗೆ ಹೆಚ್ಚು ಬೆರೆಯುತ್ತಿದ್ದೆ, ಕಚೇರಿ ಕೆಲಸಗಳ ವಿಚಾರದಲ್ಲಿ ಅವರಿಗೆ ಸಾಧ್ಯವಿದ್ದಷ್ಟೂ ಸಹಾಯ ಮಾಡುತ್ತಿದ್ದೆ. ನಾನು ಸಿಬ್ಬಂದಿಯ ಸಂಬಳ ಸಾರಿಗೆಗಳಿಗೆ ಸಂಬಂಧಿಸಿದ ಅಕೌಂಟ್ಸ್ ಸೆಕ್ಷನ್‌ನಲ್ಲಿ ಕೆಲಸ ಮಾಡುತ್ತಿದ್ದುದು ಇದಕ್ಕೆ ಇನ್ನಷ್ಟು ಅನುಕೂಲವಾಗಿತ್ತು. ಈ ವಿಭಾಗದಲ್ಲಿ ಸಾಮಾನ್ಯವಾಗಿ ಎಲ್ಲರೂ ಸಿಬ್ಬಂದಿ-ಸ್ನೇಹಿಗಳಾಗಿಯೇ ಇರುತ್ತಿದ್ದರು. ದೂರದೂರದ‌ ರಿಮೋಟ್‌ ಹಳ್ಳಿಗಳಲ್ಲಿ ಅಥವಾ ಕಾಡು ಗುಡ್ಡಗಳ ನಡುವೆಲ್ಲೋ ಇರುತ್ತಿದ್ದ ಟೆಲಿಫೋನ್ ಎಕ್ಸ್ಚೇಂಜ್‌ಗಳಲ್ಲಿ ದುಡಿಯುವ ಈ ಸಿಬ್ಬಂದಿಗೆ ಅಕೌಂಟ್ಸ್‌ ವಿಭಾಗದೊಂದಿಗೆ ʻಅವಿನಾಭಾವ ಸಂಬಂಧʼ! ಅವರ ಓಟಿ/ಟಿಎ ಬಿಲ್‌ಗಳು, ಪಿಎಫ್‌‌ ಅಡ್ವಾನ್ಸ್‌, ಮತ್ತಿತರ ವಿಚಾರಗಳಿಗಾಗಿ ಅಷ್ಟು ದೂರದಿಂದ ಕಷ್ಟ ಬಿದ್ದು ಫೋನ್‌ ಮಾಡುತ್ತಿದ್ದರು. ಎಷ್ಟೋ ವೇಳೆ ಅವರು ಟೆಲಿಫೋನ್‌ ಕಂಬದ ಮೇಲೆ ಹತ್ತಿ ದುರಸ್ತಿ ಕೆಲಸ ಮಾಡುತ್ತಿದ್ದಾಗ ಅಲ್ಲಿಂದಲೇ ಕನೆಕ್ಟ್‌ ಮಾಡಿಕೊಂಡು ಫೋನ್‌ ಮಾಡುವುದಿತ್ತು. ಮಳೆಗಾಲದಲ್ಲಂತೂ ಅವರ ಪಾಡು ತೀರಾ ಕಷ್ಟದಾಯಕ. ನಾನು ಯೂನಿಯನ್ ʻಲೀಡರ್ʼ ಆಗಿದ್ದರಿಂದ ಅವರ ಎಲ್ಲ ಕೆಲಸಗಳಿಗೂ ನನಗೇ ಫೋನ್‌ ಮಾಡುತ್ತಿದ್ದರು. ಅನೇಕ ವೇಳೆ ರಜೆ ಮತ್ತಿತರ ವಿಚಾರಗಳಿಗೆ ಸಂಬಂಧಿಸಿದ ಎಷ್ಟಾಬ್ಲಿಶ್‌ಮೆಂಟ್ ಸೆಕ್ಷನ್ನಿನ ಕೆಲಸಗಳಿಗೂ ನನಗೇ ಫೋನ್‌ ಮಾಡುತ್ತಿದ್ದರು. ಹೀಗಾಗಿ, ಕಚೇರಿಯ ಆಂತರಿಕ ಫೋನು ಒಂದೊಂದು ಸೆಕ್ಷನ್ನಿಗೆ ಒಂದೊಂದರಂತೆ ಇದ್ದರೆ, ನಮ್ಮ ಸೆಕ್ಷನ್‌ ಮುಖ್ಯಸ್ಥರು ನನ್ನ ಮೇಜಿಗೇ ಅದರ ಒಂದು ಎಕ್ಸ್‌ಟೆನ್ಶನ್‌ ಫೋನನ್ನು ಕೊಡಿಸಿಬಿಟ್ಟಿದ್ದರು. ಹೀಗೆ ದಿನದಲ್ಲಿ ನನ್ನ ಸಾಕಷ್ಟು ಹೊತ್ತು ಫೋನ್‌ ಅಟೆಂಡ್‌ ಮಾಡುವುದರಲ್ಲಿ, ಅವರುಗಳ ಕೆಲಸಕ್ಕಾಗಿ ಅಥವಾ ಯೂನಿಯನ್ನಿನ ಕೆಲಸಕ್ಕಾಗಿ ಆಚೀಚೆ ಓಡಾಡುವುದರಲ್ಲೇ ಹೋಗುತ್ತಿತ್ತು. ಭಾನುವಾರ ಅಥವಾ ಇತರ ರಜಾ ದಿನಗಳಲ್ಲಿ ಆಫೀಸಿಗೆ ಹೋಗಿ ಕೂತು, ಬಾಕಿ ಉಳಿದ ನನ್ನ ಕೆಲಸಗಳನ್ನು ಪೂರೈಸಬೇಕಾಗುತ್ತಿತ್ತು.

ಇನ್ನೊಮ್ಮೆ, ಟೆಲಿಫೋನ್‌ ಬಿಲ್ಸ್ ಟೈಪಿಂಗ್ ಸೆಕ್ಷನ್ನಿನಲ್ಲಿ ಖಾಲಿಬಿದ್ದ ಒಂದು ಕೆಲಸ ಸರದಿಯ ಪ್ರಕಾರ ನನ್ನ ಪಾಲಿಗೆ ಬಂದಿತು. ಅದರಲ್ಲಿ ಹೆಚ್ಚುವರಿ ಅಲೋಯೆನ್ಸ್‌ ಸಿಗುತ್ತಿತ್ತು. ಆದರೆ ಟೆಲಿಫೋನ್‌ ಬಿಲ್‌ಗಳು ಸಕಾಲದಲ್ಲಿ ರವಾನೆ ಆಗಿಬೇಕಾದ್ದರಿಂದ ಅಲ್ಲಿ ಆಯಾ ದಿನದ ಕೆಲಸದ ಟಾರ್ಗೆಟ್‌ ಮುಗಿಸಬೇಕಾಗಿತ್ತು, ಹೆಚ್ಚು ಉಳಿಸಿಕೊಳ್ಳುವಂತಿರಲಿಲ್ಲ. ಹೀಗಾಗಿ ಕಚೇರಿಯೊಳಗಿನ ನನ್ನ ಪರೋಪಕಾರದ ಓಡಾಟಕ್ಕೆ ಸ್ವಲ್ಪ ಬ್ರೇಕ್‌ ಬಿತ್ತು. ಆಗ ಯೂನಿಯನ್ನಿನ ಸಂಗಾತಿಗಳು, ತಿಂಗಳಿಗೊಮ್ಮೆ ವಿಭಾಗ ಇಂಜಿನಿಯರ್‌ ಜೊತೆ ನಡೆಯುವ ಸಮನ್ವಯ ಸಭೆಯಲ್ಲಿ, ನನ್ನನ್ನು ಪುನಃ ಅಕೌಂಟ್ಸ್‌ ಸೆಕ್ಷನ್ನಿಗೇ ಕೊಡಬೇಕೆಂಬ ವಿಶಿಷ್ಟ ಬೇಡಿಕೆ ಇಟ್ಟರು. ʻಇಲ್ಲಪ್ಪ, ಅದು ಸರದಿಯ ಪ್ರಕಾರ ಅವರಿಗೆ ಬಂದಿದೆ, ಅದರಲ್ಲಿ ಅವರಿಗೆ ಹೆಚ್ಚುವರಿ ಅಲೋಯೆನ್ಸ್‌ ಸಿಗುತ್ತದೆ. ಅದು ಅವರ ಹಕ್ಕು. ಅದನ್ನು ತಪ್ಪಿಸಲು ಆಗಲ್ಲʼ ಅಂತ ಸಾಹೇಬರು ಹೇಳಿದರೆ, “ಸಾರ್‌, ಅವರ ಅಲೋಯೆನ್ಸ್‌ಗಿಂತ ಸ್ವಲ್ಪ ಹೆಚ್ಚೇ ಹಣವನ್ನು ನಾವು ಯೂನಿಯನ್ನಿನಿಂದ ಭರಿಸ್ತೀವಿ, ಅವರನ್ನು ವಾಪಸ್‌ ಕೊಡಿ” ಅಂತ ದುಂಬಾಲು ಬಿದ್ದರು. ಕೊನೆಗೂ ಒಂದು ತಿಂಗಳೊಳಗೆ ನನ್ನನ್ನು ವಾಪಸ್‌ ಅಕೌಂಟ್ಸ್‌ ಸೆಕ್ಷನ್ನಿಗೆ ಹಾಕಿಸಿಕೊಂಡೇ ಬಿಟ್ಟರು!

ಈ ಅವಧಿಯಲ್ಲಿ ಇಲಾಖೆಯಲ್ಲಿ ಗಮನಾರ್ಹವಾದ ಮುಷ್ಕರ, ಹೋರಾಟಗಳು ನಡೆಯಲಿಲ್ಲವಾದರೂ ಆಡಳಿತ ವರ್ಗದ ಜೊತೆ ಮುಸುಕಿನ ಗುದ್ದಾಟದಂತಹ ನಿರಂತರ ಸಂಘರ್ಷ ಇದ್ದೇ ಇರುತ್ತಿತ್ತು. ಮತ್ತೊಂದೆಡೆ ಹೊರಗಡೆಯೂ ಸತತ ಚಟುವಟಿಕೆಗಳು. ಇದರ ಮಧ್ಯೆಯೇ ನಾವು, ಅಂದರೆ ನಾನು, ಹೇಮಾ, ರತಿರಾವ್‌ ಸೇರಿಕೊಂಡು, ಒಂಟಿಕೊಪ್ಪಲ್‌ ಒಳಗಡೆ ಹುದುಗಿಹೋಗಿರುವ ಪಡುವಾರಹಳ್ಳಿಯಲ್ಲಿ ಎಳೆಯ ವಯಸ್ಸಿನಲ್ಲೇ ಶಾಲೆ ತೊರೆದು ಕೂಲಿ ಕೆಲಸಕ್ಕೆ ಹೋಗುವ ಹದಿಹರಯದ ಮಕ್ಕಳಿಗಾಗಿ ಸಂಜೆ ಶಾಲೆ ಹಾಗೂ ಅಲ್ಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಗಣಿತ ಮತ್ತು ಇಂಗ್ಲಿಷ್‌ ಪಾಠದ ಉಚಿತ ತರಗತಿ ನಡೆಸುತ್ತಿದ್ದೆವು. ದಲಿತ ಕಲಾ ಮಂಡಳಿಯ ಭಾಗವಾಗಿ ಆಗಾಗ ಹಳ್ಳಿಗಳಿಗೆ ಹೋಗಿ ದಲಿತ ಕೇರಿಗಳಲ್ಲಿ ಚರ್ಚೆ-ಪ್ರಚಾರ, ಒಳ್ಳೊಳ್ಳೆಯ ಕ್ರಾಂತಿಕಾರಿ ಹೋರಾಟದ ಹಾಡು, ಕೋಲಾಟ, ಬೀದಿ ನಾಟಕ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಿದ್ದೆವು. ಯಾವುದಾದರೂ ಕಾರ್ಖಾನೆಗಳ ಕಾರ್ಮಿಕರು ಮುಷ್ಕರ-ಪ್ರತಿಭಟನೆ ನಡೆಸುತ್ತಿದ್ದರೆ ಅಲ್ಲಿಯೂ ಇಂತಹ ಕಾರ್ಯಕ್ರಮ ನೀಡಿ ಅವರನ್ನು ಬೆಂಬಲಿಸುತ್ತಿದ್ದೆವು. ಮೇ ದಿನದ ರ‍್ಯಾಲಿ ನಡೆದಾಗಲೂ ಪಾಲ್ಗೊಂಡು ಕಾರ್ಯಕ್ರಮ ನೀಡುತ್ತಿದ್ದೆವು. ದಲಿತ ಸಂಘರ್ಷ ಸಮಿತಿಯ ಎಲ್ಲ ಹೋರಾಟಗಳಲ್ಲೂ ಸಕ್ರಿಯವಾಗಿ ಭಾಗಿಯಾಗುತ್ತಿದ್ದೆವು.

ಈ ಸಮಯದಲ್ಲಿ ಸುದೀರ್ಘ 71 ದಿನಗಳ ಕಾಲ ನಡೆದ ಒಂದು ದೊಡ್ಡ ಮಟ್ಟದ ವಿದ್ಯಾರ್ಥಿ ಹೋರಾಟ ಇಡೀ ನಗರದ ಗಮನ ಸೆಳೆಯಿತು. ಆಗಿನ ಮುಖ್ಯಮಂತ್ರಿ ದೇವರಾಜ ಅರಸರ ಹತ್ತಿರದ ಸಂಬಂಧಿ ಎನ್ನಲಾಗಿದ್ದ ಡಿ. ವಿಜಯದೇವರಾಜ ಅರಸು ಎಂಬ ಪ್ರೊಫೆಸರ್ ಆಗ ಮೈಸೂರು ವಿವಿಗೆ ಉಪಕುಲಪತಿ ಆಗಿದ್ದರು. (ಆಗ ಛಾನ್ಸೆಲರ್‌ ಮತ್ತು ವೈಸ್‌ ಛಾನ್ಸೆಲರ್‌ರನ್ನು ಕುಲಪತಿ, ಉಪಕುಲಪತಿ ಎನ್ನಲಾಗುತ್ತಿತ್ತು, ಕುಲಾಧಿಪತಿ ಮತ್ತು ಕುಲಪತಿ ಎಂಬ ಬದಲಾವಣೆ ಆಮೇಲೆ ಬಂದಿತು. ಹಾಗಾಗಿ ಕುವೆಂಪು, ದೇಜಗೌ ಅವರೆಲ್ಲ ʻಉಪಕುಲಪತಿಗಳುʼ ಮಾತ್ರ, ʻಕುಲಪತಿʼಗಳಲ್ಲ!) ಉಪಕುಲಪತಿ ಡಿ.ವಿ.ಅರಸು ಅವರು ವಿದ್ಯಾರ್ಥಿಗಳ ಹಲವಾರು ಸೌಕರ್ಯಗಳಿಗೆ ಕತ್ತರಿ ಹಾಕಿದ್ದರು; ವಿಶೇಷವಾಗಿ ವಿಜ್ಞಾನ ವಿಷಯಗಳ ಸಂಶೋಧನೆಗೆ ಅಗತ್ಯವಿದ್ದ ಸೌಕರ್ಯಗಳನ್ನು ಕಡಿತ ಮಾಡಿ ಆದೇಶ ಹೊರಡಿಸಿದ್ದರು. ಮುಖ್ಯವಾಗಿ ಸಸ್ಯಶಾಸ್ತ್ರದ ಸಂಶೋಧನಾ ವಿದ್ಯಾರ್ಥಿಗಳು ಕುಕ್ಕರಹಳ್ಳಿ ಕೆರೆಗೂ ವಿವಿ ಕ್ಯಾಂಪಸ್ಸಿಗೂ ನಡುವಿನ ಕೆಲವು ಎಕರೆ ಪ್ರದೇಶದಲ್ಲಿ ತಮ್ಮ ಸಂಶೋಧನಾ ತಾಕುಗಳನ್ನು ಮಾಡಿಕೊಂಡು ಅಲ್ಲಿ ಸಂಶೋಧನೆಗೆ ಬೇಕಾದ ವಿವಿಧ ಬೆಳೆಗಳನ್ನು ಬೆಳೆದುಕೊಳ್ಳುತ್ತಿದ್ದರು. ಅದಕ್ಕೆ ಅವರಿಗೆ ಸಾಕಷ್ಟು ನೆರವಿನ ಆಳುಕಾಳು, ಟ್ರಾಕ್ಟರು, ಪಂಪ್‌ಸೆಟ್ ಮುಂತಾದ ಸೌಕರ್ಯಗಳು ಬೇಕಿದ್ದವು. ಆದರೆ ಉಪಕುಲಪತಿಗಳ ಆದೇಶದ ಪ್ರಕಾರ ಅದನ್ನೆಲ್ಲ ಹಿಂಪಡೆಯಲಾಯಿತು ಇಲ್ಲವೇ ತೀವ್ರವಾಗಿ ಕಡಿತಗೊಳಿಸಲಾಯಿತು. ವಿದ್ಯಾರ್ಥಿಗಳು ಹೋಗಿ ಎಷ್ಟೇ ಮನವಿ ಮಾಡಿದರೂ ಅವರು ಜಗ್ಗಲಿಲ್ಲ. ಇದರ ಜೊತೆಗೆ ಇನ್ನಿತರ ಸಮಸ್ಯೆಗಳೂ ಸೇರಿ ವಿದ್ಯಾರ್ಥಿಗಳು ಕಂಗೆಟ್ಟರು, ರೊಚ್ಚಿಗೆದ್ದರು. ಏಜಾಜ಼್ ಅಹಮದ್‌ ಎಂಬ ಸಂಶೋಧನಾ ವಿದ್ಯಾರ್ಥಿಯ ಮುಂದಾಳತ್ವದಲ್ಲಿ, ಆಗಿನ ವಿವಿ ಕೇಂದ್ರ ಕಚೇರಿಯಾಗಿದ್ದ ಕ್ರಾಫರ್ಡ್‌ ಹಾಲ್‌ ಆವರಣದಲ್ಲಿ ಅಹೋರಾತ್ರಿ ಧರಣಿ ಆರಂಭಿಸಿ, ಕೆಲವು ದಿನಗಳ ನಂತರ ಏಜಾಜ಼್ ಮತ್ತು ಇತರ ನಾಲ್ಕು ಜನ ವಿದ್ಯಾರ್ಥಿಗಳು ಉಪವಾಸ ಸತ್ಯಾಗ್ರಹ ಆರಂಭಿಸಿದರು. ವಿವಿಯ ಬಹುಪಾಲು ವಿಭಾಗಗಳ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದರು. ಮಾನಸ ಗಂಗೋತ್ರಿ ಕ್ಯಾಂಪಸ್ ಉದ್ವೇಗದಿಂದ ಗಿಜಿಗುಡುವ ತಾಣವಾಯಿತು. ಕ್ರಾಫರ್ಡ್‌ ಹಾಲ್‌ ಬಳಿ ಬಿಸಿಲಲ್ಲಿಯೇ ದಿನವೂ ಸಾವಿರಾರು ವಿದ್ಯಾರ್ಥಿಗಳು ನೆರೆದರೂ ಹೋರಾಟ ಅತ್ಯಂತ ಶಾಂತಿಯುತವಾಗಿಯೇ ಮುಂದುವರಿಯಿತು.

CRAWFORDHALLVARSITY
ಮೈಸೂರು ಯುನಿವರ್ಸಿಟಿಯ ಕ್ರಾಫರ್ಡ್‌ ಹಾಲ್‌

ಮೈಸೂರಿನ ಎಲ್ಲ ಜನಪರ ಹೋರಾಟಗಳ ಅವಿಭಾಜ್ಯ ಭಾಗವಾಗಿದ್ದ ಹಾಗೂ ವಿವಿ ಜೀವಶಾಸ್ತ್ರ ವಿಭಾಗದ ಪ್ರೊಫೆಸರ್‌ ಮತ್ತು ಎಚ್‌ಓಡಿ ಆಗಿದ್ದ ಡಾ. ಎ. ರಾಮಲಿಂಗಂ ಅವರು ಹೋರಾಟ ನಿರತ ವಿದ್ಯಾರ್ಥಿಗಳ ಬೆನ್ನಿಗೆ ದೃಢವಾಗಿ ನಿಂತರು. ನಮ್ಮ ವಿದ್ಯಾರ್ಥಿ ಸ್ನೇಹಿತರ ಬಳಗ (ಶೆಣೈ, ರಾಜಾಸಾಬ್, ವೇಣು ಮತ್ತಿತರರು) ಅತ್ಯಂತ ಸಕ್ರಿಯ ಪಾತ್ರ ವಹಿಸಿತು. ನಾನು ಕೂಡ ಸಂಜೆ ಆಫೀಸಿನ ನಂತರ ಅಥವಾ ರಜಾ ದಿನಗಳಲ್ಲಿ ಅಲ್ಲಿ ಹೋಗಿ ನಮ್ಮ ವಿದ್ಯಾರ್ಥಿ ಮಿತ್ರರ ಜೊತೆ ಬೆರೆಯುತ್ತಿದ್ದೆ. ಏಜಾಜ಼್ ಅಲ್ಲಿ ಉಪವಾಸದ ನೇತೃತ್ವ ವಹಿಸಿದ್ದರೆ ವೇಣು ಇಡೀ ವಿದ್ಯಾರ್ಥಿ ವೃಂದದ ಸಂಘಟನೆಯ ಮುಂಚೂಣಿ ನಾಯಕನಾಗಿ ಗುರುತುಗೊಂಡ. ಆದರೆ ಎಷ್ಟೇ ದಿಟ್ಟ ಹೋರಾಟ ಮಾಡಿದರೂ,‌ ಮೈಸೂರಿನ ಬಹುಪಾಲು ಪತ್ರಿಕೆಗಳು ವಿದ್ಯಾರ್ಥಿ ಚಳವಳಿಗೆ ಬೆಂಬಲ ನೀಡಿದರೂ ಉಪಕುಲಪತಿ ತನ್ನ ಪಟ್ಟು ಸಡಿಲಿಸಲೇ ಇಲ್ಲ. ಬದಲಿಗೆ 71ನೇ ದಿನ ಪೊಲೀಸರೇ ವಿದ್ಯಾರ್ಥಿಗಳ ನಡುವಿನಿಂದ ಪೊಲೀಸರ ಕಡೆಗೆ ಒಂದೆರಡು ಕಲ್ಲು ಒಗೆದು, “ವಿದ್ಯಾರ್ಥಿಗಳು ಹಿಂಸಾಚಾರಕ್ಕೆ ಇಳಿದಿದ್ದಾರೆ” ಎಂದು ಆರೋಪಿಸಿ ತೀವ್ರ ಲಾಠಿ ಚಾರ್ಜ್‌ ನಡೆಸಿ, ಹೋರಾಟವನ್ನು ಹೊಸಕಿಬಿಟ್ಟರು. ಇಷ್ಟು ದೀರ್ಘವಾದ ಶಾಂತಿಯುತವಾದ ಸಮರಶೀಲವಾದ ಹೋರಾಟ ಯಾವ ಪ್ರಮಾಣಕ್ಕೆ ಯಶಸ್ವಿ ಆಗಬೇಕಾಗಿತ್ತೋ ಆ ಮಟ್ಟಿಗೆ ಆಗಲಿಲ್ಲವಾದರೂ, ಎಲ್ಲ ಹೋರಾಟಗಳಂತೆ ಇಲ್ಲಿಯೂ ಹಲಕೆಲವು ಸುಧಾರಣೆಗಳು ಖಂಡಿತ ಉಂಟಾದುದನ್ನು ಮರೆಯುವಂತಿಲ್ಲ.

ಈ ಎಲ್ಲಾ ರೀತಿಗಳಲ್ಲಿ ನನ್ನೊಳಗೆ ಕ್ರಾಂತಿಕಾರಿ ವಿಚಾರಗಳು ಗಟ್ಟಿಗೊಳ್ಳುತ್ತ ಬಂದಂತೆ ಅದನ್ನು ಹೊರಗಡೆ ದಮನಿತ ಶೋಷಿತ ಜನರ ನಡುವೆ ಪ್ರಯೋಗಕ್ಕೆ ಹಚ್ಚುವ ಪ್ರಯತ್ನಗಳೂ ನಡೆಯುತ್ತ ಬಂದವು. ಇದರ ಫಲವಾಗಿ 1977-78ರ ಹೊತ್ತಿಗಾಗಲೇ ನನ್ನ ಬದುಕನ್ನು ಕ್ರಾಂತಿಕಾರಿ ಚಳವಳಿ-ಹೋರಾಟಕ್ಕೇ ಮುಡಿಪಾಗಿಸಬೇಕೆಂಬ ನಿರ್ಧಾರ ನನ್ನೊಳಗೆ ಗಟ್ಟಿಯಾಗುತ್ತ ಬಂತು. ಅದಕ್ಕೆ ಪೂರಕವಾಗಿ ಆದಷ್ಟೂ ಸರಳ ಬದುಕನ್ನು ರೂಢಿಸಿಕೊಂಡೆ. ನನ್ನ ಜೊತೆಗಾರರು, ಬ್ಯಾಚ್‌ಮೇಟ್‌ಗಳೆಲ್ಲ ಒಳ್ಳೊಳ್ಳೆಯ ಬಟ್ಟೆಗಳನ್ನು ಹಾಕಿಕೊಂಡು ಸಂಜೆ ಹೊತ್ತು ಪೇಟೆ ಸುತ್ತಾಡಿ ಸಿನಿಮಾ ನೋಡಿ ಶೋಕಿ ಮಾಡುವುದು, ಇಲ್ಲವೇ, ಹೆಚ್ಚುಹೆಚ್ಚು ಮುಂಬಡ್ತಿಗಳಿಗಾಗಿ ಇಲಾಖಾ ಪರೀಕ್ಷೆಗೆ ಕಟ್ಟಿ, ಮೇಲಧಿಕಾರಿಗಳಿಂದ ಟ್ಯೂಶನ್‌ ಹೇಳಿಸಿಕೊಂಡು ಓದಿಕೊಳ್ಳುವುದು ಮಾಡುತ್ತಿದ್ದರೆ, ನಾನು ಮೇಲೆ ಹೇಳಿದಂತೆ ನನ್ನನ್ನು ಸಮಾಜಕ್ಕೆ ಅರ್ಪಿಸಿಕೊಳ್ಳಲು ನಿರ್ಧರಿಸಿದೆ. ನಡುವೆ ಒಮ್ಮೆ ಇಲಾಖಾ ಪರೀಕ್ಷೆಗೂ ಕಟ್ಟಿ ಕೆಲವು ತಿಂಗಳು ಓದಿದೆ. ಆದರೆ ಮೇಲಧಿಕಾರಿಯಾಗಿ ಸಹೋದ್ಯೋಗಿಗಳ ಮೇಲೆ ಅಲ್ಪಸ್ವಲ್ಪವಾದರೂ ದರ್ಪ ದಮನ ಶೋಷಣೆ ಮಾಡಲೇಬೇಕಾಗುತ್ತದೆ ಎಂದು ಅನ್ನಿಸಿ ಆ ಪ್ರಯತ್ನಕ್ಕೆ ಸಲಾಂ ಹೊಡೆದೆ. ಹಾಗೆ ಮುಂಬಡ್ತಿ ಪಡೆದ ಮೂರ್ನಾಲ್ಕು ಮಂದಿ ಸಹೋದ್ಯೋಗಿಗಳು ದೊಡ್ಡದೊಡ್ಡ ಹುದ್ದೆಗಳನ್ನು ತಲುಪಿ ನಿವೃತ್ತರಾಗಿದ್ದಾರೆ. ಆದರೆ ನಾನೇನೋ ಕಳೆದುಕೊಂಡೆ(ನೇನೋ) ಎಂಬ ಹಳಹಳಿಕೆ ನನ್ನನ್ನೆಂದೂ ಕಾಡಿದ್ದಿಲ್ಲ.

ಹೀಗೆ ಸಾಗುತ್ತಿದ್ದ ನನ್ನ ಬದುಕು 1979ರಲ್ಲಿ ಒಂದು ದೊಡ್ಡ ತಿರುವು ಪಡೆಯಿತು.

sirimane nagaraj
ಸಿರಿಮನೆ ನಾಗರಾಜ್
+ posts

ಲೇಖಕರು, ಸಾಮಾಜಿಕ ಹೋರಾಟಗಾರರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಸಿರಿಮನೆ ನಾಗರಾಜ್
ಸಿರಿಮನೆ ನಾಗರಾಜ್
ಲೇಖಕರು, ಸಾಮಾಜಿಕ ಹೋರಾಟಗಾರರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X