ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲಿ ಅಮಾನುಷ ಘಟನೆ ನಡೆದಿದ್ದು, ಶಿವಮೊಗ್ಗ ಗ್ರಾಮಾಂತರ ಭಾಗದ ಕುಂಸಿಯ ಖಾಸಗಿ ಶಾಲೆಯೊಂದರಲ್ಲಿ ಎರಡೂವರೆ ವರ್ಷದ ಪುಟ್ಟ ಕಂದನ ಮೇಲೆ ಹಲ್ಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಕುರಿತಾಗಿ ಶಿಕ್ಷಣ ಇಲಾಖೆಯಲ್ಲೇ ಮಾಹಿತಿ ಇಲ್ಲದಾಗಿದ್ದು, ಹಣದ ಹಪಾಹಪಿಗೆ ಖಾಸಗಿ ಶಾಲೆಗಳು ಕಾನೂನು ಉಲ್ಲಂಘನೆಗೂ ಸಿದ್ದವಾಗಿರುತ್ತಾರ? ಎಂಬುದು ಕಂಡುಬರುತ್ತಿದೆ.
ಚಿಗುರು ಎಂಬ ಖಾಸಗಿ ಶಾಲಾ ಆಡಳಿತ ಮಂಡಳಿ ಎರಡುವರೆ ವರ್ಷದ ಮಗುವನ್ನು ದಾಖಲಾತಿ ಮಾಡಿಕೊಂಡಿದ್ದು, ಬಳಿಕ ಆ ಮಗುವಿಗೆ ಬಾಸುಂಡೆ ಬರುವ ರೀತಿಯಲ್ಲಿ ಹಲ್ಲೆ ಮಾಡಿರುವುದು ಕಂಡುಬಂದಿದೆ.
ಶಾಲೆಯಲ್ಲಿ ಮಗುವಿನ ಮೇಲೆ ಹಲ್ಲೆ ಮಾಡಿರುವುದಲ್ಲದೆ ಆಡಳಿತ ಮಂಡಳಿಯವರು ಪೋಷಕರಿಗೆ ಧಮ್ಕಿ ಹಾಕಿ, ʼಮುಂದೆ ನಿಮ್ಮ ಮಗುವಿನ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ. ಹಾಗಾಗಿ ಎಲ್ಲಿಯೂ ಕೂಡ ಈ ವಿಚಾರ ಬಾಯಿ ಬಿಡಬಾರದುʼ ಎಂದು ತಾಕಿತು ಮಾಡಿದ್ದಾರೆಂದು ಸ್ಥಳೀಯರೊಬ್ಬರು ಈ ದಿನ.ಕಾಮ್‌ಗೆ ಮಾಹಿತಿ ನೀಡಿದ್ದಾರೆ.

ಘಟನೆಗೆ ಸಂಬಂಧಿಸಿದಂತಡ ಈ ದಿನ.ಕಾಮ್ ಶಿವಮೊಗ್ಗ ಡಿಡಿಪಿಐ ಅವರನ್ನು ಸಂಪರ್ಕಿಸಿದಾಗ ಮಾತನಾಡಿ, ಪ್ರಕರಣವನ್ನು ಬಿಇಒ ಗಮನಕ್ಕೆ ತರುವಂತೆ ತಿಳಿಸಿದರು.
ಶಿವಮೊಗ್ಗ ಬಿಇಒ ರಮೇಶ್ ನಾಯ್ಕ್ ಮಾತನಾಡಿ, “ಮಗುವನ್ನು ಮುಟ್ಟಿದರೆ, ಮುಟ್ಟಿದ ಭಾಗದಲ್ಲಿ ಕೆಂಪಾಗತ್ತೆ. ಹಾಗಾಗಿ ಮಗುವಿನ ತೋಳನ್ನು ಹಿಡಿದ ಕಡೆ ಕೆಂಪಾಗಿದೆ” ಎಂದು ಮಾಹಿತಿ ನೀಡಿದರು.
ಎರಡೂವರೆ ವರ್ಷದ ಮಗುವನ್ನು ಶಾಲೆಗೆ ದಾಖಲಾತಿ ಮಾಡಿಕೊಂಡಿರುವುದು ಕಾನೂನು ಬಾಹಿರವಲ್ಲವೇ ಎಂಬ ಪ್ರಶ್ನೆಗೆ, ʼಇಂದು ಬಕ್ರೀದ್ ಹಬ್ಬದ ರಜೆ ಇರುವ ಕಾರಣ ಮಾಹಿತಿ ಪಡೆಯುವುದು ಕಷ್ಟ. ಶಾಲಾದಿನದಲ್ಲಿ ಘಟನೆ ಕುರಿತು ಸಂಪೂರ್ಣ ಮಾಹಿತಿ ಶೀಘ್ರದಲ್ಲಿ ನೀಡಲಾಗುವುದುʼ ಎಂದು ಉತ್ತರಿಸಿದರು.

ಚಿಗುರು ಶಾಲೆಯ ಮುಖ್ಯ ಶಿಕ್ಷಕಿಯನ್ನು ಈ ದಿನ.ಕಾಮ್ ಸಂಪರ್ಕಿಸಿದಾಗ ವರದಿಗಾರರ ಮೇಲೆ ರೆಗಾಡಿ, ದರ್ಪ ತೋರಿದ್ದು, ಬಳಿಕ ʼಘಟನೆ ಆಗೋಗಿದೆ ಇದನ್ನು ದೊಡ್ಡದಾಗಿ ನ್ಯೂಸ್ ಮಾಡಬೇಡಿ. ಮುಂದೆ ಈ ರೀತಿಯ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ. ಈ ಬಗ್ಗೆ ನಾವು ಪೋಷಕರಿಗೂ ತಿಳಿಸಿದ್ದೇವೆ” ಎಂದರು.
“ಮಗುವಿಗೆ ಎಷ್ಟು ವರ್ಷ ಎಂಬುದೇ ನನಗೆ ಮಾಹಿತಿ ಇಲ್ಲ. ರಜೆ ಮುಗಿದ ನಂತರ ಶಾಲೆಗೆ ಬಂದಾಗ ನೋಡುತ್ತೇನೆ” ಎಂದು ತಿಳಿಸಿದರು.
ಘಟನೆ ನಡೆದಿರುವುದಾಗಿ ಶಾಲೆ ಶಿಕ್ಷಕಿಯವರೇ ತಿಳಿಸುತ್ತಿರುವಾಗ, ಶಿವಮೊಗ್ಗ ಜಿಲ್ಲೆಯವರೇ ಆದ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ತಮ್ಮ ತವರೂರಲ್ಲಿ ನಡೆದಿರುವ ಈ ರೀತಿಯ ಘಟನೆ ಕುರಿತು ಏನು ಪ್ರತಿಕ್ರಿಯೆ ನೀಡುತ್ತಾರೆ?. ಈ ಶಾಲೆ ಬಗ್ಗೆ ಏನು ಸೂಕ್ತ ಕ್ರಮ ತೆಗೆದುಕೊಳ್ಳಲ್ಲಿದ್ದಾರೆ. ಕಾನೂನು ಉಲ್ಲಂಘನೆ ಹಾಗೂ ಮಗುವಿನ ದೌರ್ಜನ್ಯ ಕುರಿತು ಶಿಕ್ಷಣ ಇಲಾಖೆ ಮುಂದಿನ ದಿನಗಳಲ್ಲಿ ಯಾವ ರೀತಿಯ ಕ್ರಮ ಜರುಗಿಸಲಿದೆ ಎಂಬುದನ್ನು ಕಾದು ನೋಡಬೇಕು.

ಪೋಷಕರಿಗೆ ಸೂಕ್ತ ರಕ್ಷಣೆ ಹಾಗೂ ಧೈರ್ಯ ನೀಡಬೇಕು ಹಾಗೆಯೆ ಘಟನೆ ಆದಾಗ ಮಗುವಿನ ಜೀವಕ್ಕೆ ಏನಾದರೂ ಅಪಾಯವಾಗಿದ್ದಲ್ಲಿ ಯಾರು ಹೊಣೆಗಾರರಗುತ್ತಿದ್ದರು ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ ಹಾಗೂ ಇಂತಃ ಶಾಲೆಗಳ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕಾಗಿರುವುದು ಅತ್ಯವಶ್ಯವಾಗಿದೆ.

ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.