ವಿಶ್ವದ ಅತೀ ಎತ್ತರದ ರೈಲ್ವೆ ಸೇತುವೆ ಎಂದೇ ಖ್ಯಾತಿ ಪಡೆದಿರುವುದು ಜಮ್ಮು ಮತ್ತು ಕಾಶ್ಮೀರದ ಚೆನಾಬ್ ಸೇತುವೆ. ಈ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉದ್ಘಾಟಿಸಿದ್ದಾರೆ. ಉತ್ತಮ ಫೋಟೋಶೂಟ್ ಕೂಡ ನಡೆಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ.
ಅಂದಹಾಗೆ, 359 ಮೀಟರ್ ಉದ್ದದ ಈ ಸೇತುವೆಯು ನೆಲಮಟ್ಟದಿಂದ ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರವಾಗಿದೆ. ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ನಡುವಿನ 272 ಕಿ.ಮೀ ರೈಲ್ವೆ ಮಾರ್ಗದ ಭಾಗವಾಗಿದೆ. ಈ ಯೋಜನೆಗೆ 2003ರಲ್ಲಿ ಅನುಮೋದನೆ ನೀಡಲಾಗಿತ್ತು. 2008ರಲ್ಲಿ ಯೋಜನೆಯ ಕಾಮಗಾರಿ ಆರಂಭವಾಗಿತ್ತು. ಅಂದಿನಿಂದ ಇಂದಿನವರೆಗೆ ಬರೋಬ್ಬರಿ 17 ವರ್ಷಗಳ ಕಾಲ ಕಾಮಗಾರಿ ನಡೆದಿದ್ದು, ಇದೀಗ ಉದ್ಘಾಟನೆಗೊಂಡಿದೆ.
ಈ ಬೃಹತ್ ಸೇತುವೆಯ ಯಶಸ್ವಿ ನಿರ್ಮಾಣದಲ್ಲಿನ ಪ್ರಮುಖ ರುವಾರಿಗಳಲ್ಲಿ ಪ್ರೊಫೆಸರ್ ಜಿ ಮಾಧವಿ ಲತಾ ಅವರೂ ಕೂಡ ಒಬ್ಬರು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (IISc) ಪ್ರಾಧ್ಯಾಪಕಿಯಾಗಿರುವ ಮಾಧವಿ ಲತಾ ಅವರು ಚೆನಾಬ್ ಸೇತುವೆ ಯೋಜನೆಯಲ್ಲಿ ಭೂತಾಂತ್ರಿಕ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ. ತಮ್ಮ 17 ವರ್ಷಗಳ ಕಾಲಾವಧಿಯನ್ನು ಯೋಜನೆಗಾಗಿ ವ್ಯಯಿಸಿದ್ದಾರೆ.
ಸೇತುವೆ ನಿರ್ಮಾಣದ ಗುತ್ತಿಗೆ ಪಡೆದಿದ್ದ ಆಫ್ಕಾನ್ಸ್ ಕಂಪನಿಯೊಂದಿಗೆ ಸಕ್ರಿಯವಾಗಿ ಕೆಲಸ ಮಾಡಿರುವ ಮಾಧವಿ ತಲಾ ಅವರು ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಭೂಪ್ರದೇಶಗಳಿಂದ ಉಂಟಾಗುವ ಅಡೆತಡೆಗಳ ಮೇಲೆ ಅಧ್ಯಯನ ನಡೆಸಿ, ಅದನ್ನು ಎದುರಿಸಲು ಅಗತ್ಯ ಯೋಜನೆಗಳನ್ನು ರೂಪಿಸುವಲ್ಲಿ ತೊಡಗಿಸಿಕೊಂಡಿದ್ದರು.
ಜಿ ಮಾಧವಿ ಲತಾ ಯಾರು?
ಅವರು ಪ್ರಸ್ತುತ ಬೆಂಗಳೂರಿನ IIScಯಲ್ಲಿ HAG ಪ್ರಾಧ್ಯಾಪಕರಾಗಿದ್ದಾರೆ. ಡಾ. ಲತಾ 1992ರಲ್ಲಿ ಜವಾಹರಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯದಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. ನಂತರ, ಅವರು ವಾರಂಗಲ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಎಂ.ಟೆಕ್ ಪದವಿ ಪಡೆದಿದ್ದು, ಚಿನ್ನದ ಪದಕವನ್ನೂ ಪಡೆದಿದ್ದಾರೆ. ಅವರು ಜಿಯೋಟೆಕ್ನಿಕಲ್ ಎಂಜಿನಿಯರಿಂಗ್‌ನಲ್ಲಿ ವಿಶೇಷ ನೈಪುಣ್ಯತೆ ಹೊಂದಿದ್ದಾರೆ.
ಡಾ. ಲತಾ ಅವರು 2000ರಲ್ಲಿ ಮದ್ರಾಸ್ ಐಐಟಿಯಲ್ಲಿ ಜಿಯೋಟೆಕ್ನಿಕಲ್ ಎಂಜಿನಿಯರಿಂಗ್‌ನಲ್ಲಿ ಡಾಕ್ಟರೇಟ್ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಮಾತ್ರವಲ್ಲದೆ, ಅದಾದ ಬಳಿಕ ಇದೇ ವಿಷಯದಲ್ಲಿ ಹಲವಾರು ಪ್ರಶಸ್ತಿಗಳನ್ನೂ ಪಡೆದಿದ್ದಾರೆ.
2021ರಲ್ಲಿ, ಡಾ. ಲತಾ ಅವರಿಗೆ ಭಾರತೀಯ ಜಿಯೋಟೆಕ್ನಿಕಲ್ ಸೊಸೈಟಿಯಿಂದ ಅತ್ಯುತ್ತಮ ಮಹಿಳಾ ಜಿಯೋಟೆಕ್ನಿಕಲ್ ಸಂಶೋಧಕಿ ಪ್ರಶಸ್ತಿ ಲಭಿಸಿದೆ.
ಚೆನಾಬ್ ಸೇತುವೆ ಯೋಜನೆಯಲ್ಲಿ ಡಾ. ಲತಾ ಅವರ ಪಾತ್ರ
ಚೆನಾಬ್ ಸೇತುವೆಯ ನಿರ್ಮಾಣದಲ್ಲಿ ಭೂಪ್ರದೇಶದ ಸವಾಲು, ಹವಾಮಾನ ಪರಿಸ್ಥಿತಿಗಳು ಹಾಗೂ ಎತ್ತರದ ಪ್ರದೇಶದಲ್ಲಿ ನಿರ್ಮಾಣ ಕಾರ್ಯಗಳು ಕಷ್ಟಕರವಾದ ಪ್ರಯತ್ನವಾಗಿದ್ದವು.
ಈ ಲೇಖನ ಓದಿದ್ದೀರಾ?: ವಿಶ್ವ ಪರಿಸರ ದಿನ 2025: ಬನ್ನಿ… ಪ್ಲಾಸ್ಟಿಕ್ ಮಾಲಿನ್ಯಕ್ಕೆ ಅಂತ್ಯ ಹಾಡೋಣ…
ಡಾ.ಲತಾ ಅವರ ತಂಡವು ಎಲ್ಲ ಅಡೆತಡೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ‘ಡಿಸೈನ್ ಆ್ಯಸ್ ಯು ಗೋ ಅಪ್ರೋಚ್’ ಎಂಬ ವಿಧಾನವನ್ನು ಅಳವಡಿಸಿಕೊಂಡಿತು. ಈ ವಿಧಾನವು ಬಿರುಕು ಬಿಟ್ಟ ಬಂಡೆಗಳು, ಗುಪ್ತ ಕುಳಿಗಳು ಹಾಗೂ ವಿಭಿನ್ನ ಶಿಲಾ ಗುಣಲಕ್ಷಣಗಳಂತಹ ಭೌಗೋಳಿಕ ಪರಿಸ್ಥಿತಿಗಳನ್ನು ಅಧ್ಯಯನ ನಡೆಸಿ, ಯೋಜನೆಯನ್ನು ರೂಪಿಸುತ್ತದೆ.
ಅವರು ಇತ್ತೀಚೆಗೆ ಇಂಡಿಯನ್ ಜಿಯೋಟೆಕ್ನಿಕಲ್ ಜರ್ನಲ್‌ನ ಮಹಿಳಾ ವಿಶೇಷ ಸಂಚಿಕೆಯಲ್ಲಿ, ‘ಡಿಸೈನ್ ಆ್ಯಸ್ ಯು ಗೋ: ದಿ ಕೇಸ್ ಸ್ಟಡಿ ಆಫ್ ಚೆನಾಬ್ ರೈಲ್ವೆ ಬ್ರಿಡ್ಜ್’ ಎಂಬ ಶೀರ್ಷಿಕೆಯಡಿ ಪ್ರಬಂಧವನ್ನು ಪ್ರಕಟಿಸಿದರು. ಸೇತುವೆಯ ವಿನ್ಯಾಸವು ನಿರಂತರವಾಗಿ ವಿಕಸನಗೊಂಡಿದೆ ಎಂಬುದನ್ನು ಆ ಪ್ರಬಂಧದಲ್ಲಿ ವಿವರಿಸಿದ್ದಾರೆ. ಒಟ್ಟಾರೆ ರಚನೆ, ಸ್ಥಳ ಹಾಗೂ ವಿನ್ಯಾಸವು ಕಾಮಕಾರಿ ನಡೆಯುತ್ತಿದ್ದ ಪ್ರದೇಶದ ಭೌಗೋಳಿಕ ಪರಿಸ್ಥಿತಿಗೆ ಸರಿಹೊಂದುವ ಯೋಜನೆಯನ್ನು ರೂಪಿಸಿದ್ದರ ಬಗ್ಗೆ ವಿವರಿಸಿದ್ದಾರೆ.