ದಲಿತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ ಬರೋಬ್ಬರಿ 13 ವರ್ಷಗಳ ಬಳಿಕ ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಲಯವು ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 32,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಉತ್ತರ ಪ್ರದೇಶದ ಜಹಾಂಗೀರ್‌ಗಂಜ್ ಪ್ರದೇಶದ ಅಂಬೇಡ್ಕರ್ ನಗರದಲ್ಲಿ 2012ರ ಏಪ್ರಿಲ್ 25ರಂದು ಘಟನೆ ನಡೆದಿತ್ತು. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿರುವ ಪೋಕ್ಸೋ ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ವಿಶೇಷ ನ್ಯಾಯಾಲಯವು ತೀರ್ಪು ಪ್ರಕಟಿಸಿದೆ.
ಕೃತ್ಯ ನಡೆದಿದ್ದ ದಿನ ಸಂತ್ರಸ್ತ ಬಾಲಕಿಯ ತಂದೆ ಇದ್ದಕ್ಕಿದ್ದಂತೆ ಮೂರ್ಛೆ ಹೋಗಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದು ರಾತ್ರಿ, ಬಾಲಕಿಯನ್ನು ಗ್ರಾಮದ ತೌಫಿಕ್ ಮತ್ತು ಮೊಹಮ್ಮದ್ ಶಮಿ ಎಂಬವರು ಅಪಹರಿಸಿದ್ದರು. ಸಂತ್ರಸ್ತೆಯು ಕುಟುಂಬವು ಬಾಲಕಿಗಾಗಿ ಹುಡುಕಾಟ ನಡೆಸಿತ್ತು. ಇದೇ ವೇಳೆ, ಸಂತ್ರಸ್ತೆಯ ಮನೆಯಲ್ಲಿ ತೌಫಿಕ್ ಮೊಬೈಲ್ ಪತ್ತೆಯಾಗಿತ್ತು. ಆರೋಪಿ ತೌಫಿಕ್‌ನನ್ನು ಬಾಲಕಿ ಬಗ್ಗೆ ವಿಚಾರಿಸಿದಾಗ, ಆತನ ಸಂತ್ರಸ್ತೆಯ ಕುಟುಂಬಸ್ಥರಿಗೆ ಬೆದರಿಕೆ ಹಾಕಿದ್ದನೆಂದು ಆರೋಪಿಸಲಾಗಿತ್ತು.
ಬಳಿಕ, ಬಾಲಕಿಯ ಕುಟುಂಬವು ಪ್ರಮುಖ ಆರೋಪಿ (ಅಪರಾಧಿ) ತೌಫಿಕ್, ಶಮಿ ಹಾಗೂ ರೌಫ್ ವಿರುದ್ಧ ದೂರು ನೀಡಿದ್ದರು. ಅವರ ದೂರಿನ ಆಧಾರದ ಮೇಲೆ ಜಹಾಂಗೀರ್‌ಗಂಜ್ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ತನಿಖೆ ವೇಳೆ ಆರೋಪಿ ತೌಫಿಕ್ ತನ್ನ ಸ್ಬೇಹಿತ ಅಯೋಧ್ಯಾ ಪ್ರಸಾದ್ ಎಂಬಾತ ಸಹಾಯದಿಂದ ಬಾಲಕಿಯನ್ನು ಮುಂಬೈಗೆ ಕರೆದೊಯ್ದು, ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ ಎಂಬುದು ತಿಳಿದುಬಂಂದಿತ್ತು. ಪೊಲೀಸರು ತೌಫಿಕ್ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಮ್ ವಿಲಾಸ್ ಸಿಂಗ್ ಅವರು ಪ್ರಮುಖ ಆರೋಪಿ ತೌಫಿಕ್‌ನನ್ನು ಅಪರಾಧಿ ಎಂದು ಘೋಷಿಸಿದ್ದಾರೆ. ಆತನಿಗೆ ಜೀವಾವಧಿ ಶಿಕ್ಷೆ ಮತ್ತು 32,000 ರೂ. ದಂಡ ವಿಧಿಸಿದ್ದಾರೆ. ಇತರ ಆರೋಪಿಗಳಾದ ಶಮಿ ಮತ್ತು ಅಯೋಧ್ಯಾ ಪ್ರಸಾದ್ ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಳಿಸಲಾಗಿದೆ.