ನೈಸರ್ಗಿಕವಾಗಿ ಬೆಳೆದ ಬೆಳೆಗಳಿಗೆ ಬಹಳಷ್ಟು ಬೇಡಿಕೆಯಿದ್ದು, ಸಾವಯವ ಪದ್ಧತಿಯು ಕೃಷಿಯನ್ನು ಲಾಭದಾಯಕವಾಗಿಸಲು ರೈತರಿಗೆ ಸಹಕಾರಿಯಾಗಲಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ನಳಿನ್ ಅತುಲ್ ಹೇಳಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ಗಂಗಾವತಿಯ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೊಪ್ಪಳದ ಕೃಷಿ ತಂತ್ರಜ್ಞರ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 2025-26ನೇ ಸಾಲಿನ ಜಿಲ್ಲಾ ಮಟ್ಟದ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನದಡಿ ಸಿಆರ್‌ಪಿ ಹಾಗೂ ಬಿಆರ್‌ಪಿಗಳಿಗೆ ತರಬೇತಿ ಹಾಗೂ ಕಾರ್ಯಾಗಾರ ಮತ್ತು ರೈತ-ವಿಜ್ಞಾನಿ ಚರ್ಚಾಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ದುಬಾರಿಯಾದಂತಹ ರಸಗೊಬ್ಬರಗಳ ಬಳಕೆಯಿಂದ ಕೃಷಿ ಭೂಮಿ ತನ್ನ ಫಲವತ್ತತೆಯನ್ನು ಕಳೆದುಕೊಳ್ಳುವುದರ ಜೊತೆಗೆ, ಇದರಲ್ಲಿ ರೋಗ ಮತ್ತು ಕೀಟಬಾಧೆ ಹೆಚ್ಚಾಗಿ ಕಾಡಲಿದೆ. ಕೃಷಿಯಲ್ಲಿ ರಸಾಯನಿಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಿದ ಕೃಷಿ ಪದಾರ್ಥಗಳಿಗೆ ಹೊರ ದೇಶಗಳಲ್ಲಿ ಬೇಡಿಕೆಯಿಲ್ಲ. ರಸಾಯನಿಕ ಕೃಷಿಯಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಜೊತೆಗೆ ಭೂಮಿಯ ಫಲವತ್ತತೆಯೂ ಸಹ ಹಾಳಾಗುತ್ತದೆ. ನಮ್ಮ ಕೃಷಿಯ ಪದ್ಧತಿಯಲ್ಲಿ ರಸಾಯನಿಕ ಗೊಬ್ಬರಗಳಿಗೆ ಕಡಿವಾಣ ಹಾಕುವುದರ ಮೂಲಕ ಸಾವಯವ ಕೃಷಿಗೆ ಹೆಚ್ಚಿನ ಅದ್ಯತೆ ನೀಡಬೇಕು. ಜಿಲ್ಲೆಯಲ್ಲಿ ರೇಷ್ಮೆ, ತೋಟಗಾರಿಕೆ, ಪಶುಪಾಲನೆ, ಮೀನುಗಾರಿಕೆಗೆ ಉತ್ತೇಜನ ನೀಡುವುದರ ಜೊತೆಗೆ ಜಿಲ್ಲೆಯಲ್ಲಿ ಸಮಗ್ರ ಸಾವಯವ ಕೃಷಿ ಪದ್ಧತಿ ಜಾರಿಗೆ ಎಲ್ಲರೂ ಸಹಕರಿಸಬೇಕು” ಎಂದರು.
“ಮುಂಬರುವ ದಿನಗಳಲ್ಲಿ ಜಿಲ್ಲೆಯ 1.50 ಲಕ್ಷ ಹೆಕ್ಟೆರ್ ತೋಟಗಾರಿಕೆ ಪ್ರದೇಶದ ಅವೃದ್ಧಿಗಾಗಿ ಯೋಜನೆ ರೂಪಿಸಲಾಗಿದ್ದು, ಇದರಿಂದ ರೈತರ ಆದಾಯ ಹೆಚ್ಚಾಗಲಿದೆ. ತೋಟಗಾರಿಕೆ ಟೆಕ್ ಪಾರ್ಕ್ ಹಾಗೂ ರೈಸ್ ಪಾರ್ಕ್ ಸ್ಥಾಪನೆಯಿಂದಾಗಿಯೂ ಜಿಲ್ಲೆಯ ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರಗಳಲ್ಲಿ ಹೆಚ್ಚಿನ ಅಭಿವೃದ್ಧಿಯಾಗಲಿದೆ. ಇದರೊಂದಿಗೆ ಇಲ್ಲಿನ ತೋಟಗಾರಿಕೆ ಬೆಳೆಗಳನ್ನು ಒಂದು ಬ್ಯಾಂಡ್ ಮೂಲಕ ರಫ್ತು ಮಾಡಲು ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು.
ಕೊಪ್ಪಳ ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ರತ್ನಂ ಮಾತನಾಡಿ, “ಕೃಷಿಯಲ್ಲಿ ಹೆಚ್ಚನ ಪ್ರಮಾಣದ ರಸಾಯನಿಕ ಬಳಕೆಯಿಂದಾಗಿ ಭೂಮಿ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ 4.60 ಲಕ್ಷ ಹೆಕ್ಟರ್ ಕೃಷಿ ಭೂಮಿ ಇದ್ದು, ಇದರಲ್ಲಿ ಕೆವಲ 4 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಮಾತ್ರ ಸಾವಯವ ಪದ್ಧತಿಯಲ್ಲಿ ಕೃಷಿ ಮಾಡಲಾಗುತ್ತಿದೆ. ಸಾವಯವ ಕೃಷಿ ಹೆಚ್ಚಿನ ಹಣ ಬೇಕಾಗಿಲ್ಲ ಹಾಗೂ ಅತೀಯಾದ ಶ್ರಮದ ಅವಶ್ಯಕತೆಯೂ ಇರುವುದಿಲ್ಲ. ರೈತರಿಗೆ ತಾಳ್ಮೆ ಇದ್ದರೆ ಸಾಕು ನೈಸರ್ಗಿಕ ಪದ್ಧತಿಯಲ್ಲಿ ಆರೋಗ್ಯಕರ ಬೆಳೆಗಳನ್ನು ಸುಲಭವಾಗಿ ಬೆಳೆಯಬಹುದು. ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನದಡಿ ಸಿಆರ್‌ಪಿ ಹಾಗೂ ಬಿಆರ್‌ಪಿಗಳು ಸಾವಯವ ಕೃಷಿಯ ಅಳವಡಿಕೆಗೆ ರೈತರ ಮನವೊಲಿಸಿ ಜಿಲ್ಲೆಯಲ್ಲಿ ಸಾವಯವ ಕೃಷಿ ವಲಯವನ್ನು ಹೆಚ್ಚಿಸಲು ಕ್ರಮ ವಹಿಸಬೇಕು” ಎಂದರು.
ಇದನ್ನೂ ಓದಿ: ಕೊಪ್ಪಳ | ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ; ಅಪರಾಧಿಗೆ 4 ವರ್ಷ ಜೈಲು ಶಿಕ್ಷೆ
ರಾಯಚೂರಿನ ಕೃಷಿ ವಿಶ್ವವಿದ್ಯಾಲಯದಿಂದ ಇತ್ತೀಚೆಗೆ ಗೌರವ ಡಾಕ್ಟರೇಟ್ ಪದವಿ ಪಡೆದ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಂಡಿರುವ ಪ್ರಗತಿಪರ ರೈತ ಕುಷ್ಟಗಿ ತಾಲ್ಲೂಕಿನ ಮದಲಗಟ್ಟಿಯ ದೇವೇಂದ್ರಪ್ಪ ಬಳೂಟಗಿ ಅವರಿಗೆ ಸನ್ಮಾನಿಸಲಾಯಿತು.
ಜಂಟಿ ಕೃಷಿ ನಿರ್ದೇಶಕರಾದ ಟಿ.ಎಸ್.ರುದ್ರೇಶಪ್ಪ, ರಾಯಚೂರು ಕೃಷಿ ವಿಶ್ವವಿದ್ಯಾಲಯದ ಉಪನ್ಯಾಸಕರು, ವಿಜ್ಞಾನಿಗಳು, ಗಂಗಾವತಿಯ ಕೃಷಿ ವಿಜ್ಞಾನ ಕೇಂದ್ರ ಮತ್ತು ಕೊಪ್ಪಳ ಕೃಷಿ ತಂತ್ರಜ್ಞರ ಸಂಸ್ಥೆಯ ಮುಖ್ಯಸ್ಥರು, ವಿಜ್ಞಾನಿಗಳು, ಕೃಷಿ ಇಲಾಖೆಯ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಸಹಾಯಕ ನಿರ್ದೇಶಕರು ಸೇರಿದಂತೆ ಕೃಷಿ ಇಲಾಖೆಯ ಸಿಬ್ಬಂದಿ ಸಿಆರ್‌ಪಿ ಹಾಗೂ ಬಿಆರ್‌ಪಿಗಳು ಉಪಸ್ಥಿತರಿದ್ದರು.