ಮಣಿಪುರದಲ್ಲಿ ಮೈಥೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ಮಣಿಪುರದ ರಾಜಧಾನಿ ಇಂಫಾಲ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ದಾಳಿಗಳು ಹೆಚ್ಚಾಗಿವೆ. ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆಂಬ ಆರೋಪದ ಮೇಲೆ ಮೈಥೇಯಿ ಸಮುದಾಯದ ಸಂಘಟನೆ ‘ಅರಾಂಬೈ ಟೆಂಗೋಲ್’ನ (ಎಟಿ) ಪ್ರಮುಖ ನಾಯಕ ಕಾನನ್ ಸಿಂಗ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಬಂಧನವನ್ನು ಖಂಡಿಸಿ ಸಮುದಾಯ ಯುವಕರು ಪ್ರತಿಭಟನೆ ನಡಸಿದ್ದಾರೆ. ಮಾತ್ರವಲ್ಲದೆ, ತಲೆ ಮೇಲೆ ಪೆಟ್ರೋಲ್ ಸುರಿದುಕೊಂಡಿದ್ದು, ಬೆಂಕಿ ಹಚ್ಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.
ಶನಿವಾರ, ಕಾನನ್ ಸಿಂಗ್ ಎಂಬಾತನ್ನು ಪೊಲೀಸರು ಬಂಧಿಸಿದ್ದು, ಶನಿವಾರ ರಾತ್ರಿ ಇಂಫಾಲ್‌ನಲ್ಲಿ ಹಲವಾರು ಮಂದಿ ಪ್ರತಿಭಟನೆ ನಡೆಸಿದ್ದಾರೆ. ರಸ್ತೆಗಳಲ್ಲಿ ಟೈರ್‌ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂಬ ಆರೋಪಗಳೂ ಇವೆ.
ಪ್ರತಿಭಟನೆಗೆ ಸಂಬಂಧಿಸಿದ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ವಿಡಿಯೋವೊಂದರಲ್ಲಿ, ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿರುವ ಯುವಕರ ಗುಂಪೊಂದು ಪೆಟ್ರೋಲ್ ಬಾಟಲಿಗಳನ್ನು ತಂದು, ತಮ್ಮ ಮೇಲೆ ಸುರಿದುಕೊಳ್ಳುತ್ತಿರುವುದು ಸೆರೆಯಾಗಿದೆ. ಅವರಲ್ಲಿ ಓರ್ವ ಯುವಕ, “ನಾವು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದೇವೆ. ಪ್ರವಾಹದ ಸಮಯದಲ್ಲಿ ನೀವು (ಆಡಳಿತ) ಮಾಡಬೇಕಿದ್ದ ಕೆಲಸಗಳನ್ನು ನಾವು ಮಾಡಿದ್ದೇವೆ. ಈಗ ನೀವು ನಮ್ಮನ್ನು ಬಂಧಿಸುತ್ತಿದ್ದೀರಿ. ನಮ್ಮನ್ನು ನಾವು ಕೊಂದುಕೊಳ್ಳುತ್ತೇವೆ” ಎಂದು ಹೇಳಿರುವುದು ಕಂಡುಬಂದಿದೆ.
Arambai Tenggol cadres have threatened to self-immolate following the arrest of their NIA-wanted army chief, Kanan, along with four senior members, including Volen and Marcus. Several injuries have reportedly occurred due to alleged police brutality during the crackdown.… pic.twitter.com/5Xai4ds18N
— Maj Digvijay Singh Rawat, Kirti Chakra (@Dig_raw21) June 7, 2025
ಕಾಕನ್ ಸಿಂಗ್ ಈ ಹಿಂದೆ ಪೊಲೀಸ್ ಕಾನ್ಸ್‌ಸ್ಟೆಬಲ್ ಆಗಿದ್ದರು. 2024ರ ಫೆಬ್ರವರಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮೊಯಿರಾಂಗ್ದೆಮ್ ಅಮಿತ್ ಅವರ ಮನೆಯ ಮೇಲಿನ ದಾಳಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಯ ಅಪಹರಣ ಪ್ರಕರಣದಲ್ಲಿ ಕಾಕನ್ ಸಿಂಗ್ ಕೂಡ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಬಳಿಕ, ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು. ನಂತರ, ಅವರು ‘ಅರಾಂಬೈ ಟೆಂಗೋಲ್’ ಸಂಘಟನೆ ಸೇರಿಸಿದ್ದರು ಎಂದು ವರದಿಯಾಗಿದೆ.
ಕಳೆದ ಮೂರು ವರ್ಷಗಳಿಂದ ಜನಾಂಗೀಯ ಹಿಂಸಾಚಾರದಿಂದ ನಲುಗಿರುವ ಮಣಿಪುರದಲ್ಲಿ ಸುಮಾರು 200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಆದಾಗ್ಯೂ, ಪ್ರಧಾನಿ ಮೋದಿ ಮಣಿಪುರಕ್ಕೆ ಭೇಟಿ ನೀಡಿಲ್ಲ. ಹಿಂಸಾಚಾರವನ್ನು ತಡೆಯುವ ಪ್ರಯತ್ನ ಮಾಡಿಲ್ಲ. ಸದ್ಯ, ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಹೆಚ್ಚಾಗಿದೆ. ಬಿಷ್ಣುಪುರ, ಇಂಫಾಲ್ ಪಶ್ಚಿಮ, ಇಂಫಾಲ್ ಪೂರ್ವ, ತೌಬಲ್ ಹಾಗೂ ಕಾಕ್ಚಿಂಗ್ – ಐದು ಜಿಲ್ಲೆಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಇಂಟರ್‌ನೆಟ್ ಸೇವೆಯನ್ನು ಐದು ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ.
ಇದೇ ವರ್ಷದ ಫೆಬ್ರವರಿ 9 ರಂದು ಮಣಿಪುರಲ್ಲಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರು ರಾಜೀನಾಮೆ ನೀಡಿ, ಸರ್ಕಾರವನ್ನು ವಿಸರ್ಜಿಸಿದರು. ಸದ್ಯ, ಮಣಿಪುರದಲ್ಲಿ ಜನರಿಂದ ಆಯ್ಕೆಯಾದ ಸರ್ಕಾರವಿಲ್ಲ. ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ. ರಾಜ್ಯಾಪಾಲ ಎ.ಕೆ ಭಲ್ಲಾ ನೇತೃತ್ವದಲ್ಲಿ ಕಾರ್ಯಾಂಗವು ರಾಜ್ಯವನ್ನು ನಿಭಾಯಿಸುತ್ತಿದೆ. ಈ ನಡುವೆ, ಸರ್ಕಾರ ರಚನೆಗೆ ಬಿಜೆಪಿ ಮತ್ತೆ ಮುಂದಾಗಿದೆ. ರಾಜ್ಯಪಾಲರನ್ನು ಭೇಟಿ ಮಾಡಿ, ಸರ್ಕಾರ ರಚನೆ ಕುರಿತು ಚರ್ಚಿಸಿದೆ.