ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಪತ್ತೆಹಚ್ಚಿ, ಬೇರು ಸಮೇತ ಅಂತಹ ಶಕ್ತಿಗಳನ್ನು ರಾಜ್ಯದಿಂದ ಕಿತ್ತೊಗೆಯಲು ನಾವು ಸದಾ ಸಿದ್ಧರಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನ 10 ಕಡೆಗಳಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಆರೋಪದ ಮೇಲೆ ಐವರು ಶಂಕಿತ ಉಗ್ರರನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬುಧವಾರ ಬೆಳಗ್ಗೆ ಬಂಧಿಸಿದ್ದರು. ಈ ಸಂಬಂಧ ಸಿಸಿಬಿ ಪೊಲೀಸರನ್ನು ಅಭಿನಂದಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
“ಬೆಂಗಳೂರಿನಲ್ಲಿ ವಿದ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ಬಂಧಿಸುವ ಮೂಲಕ ಸಂಭವಿಸಬಹುದಾಗಿದ್ದ ಭಾರೀ ಅನಾಹುತವನ್ನು ವಿಫಲಗೊಳಿಸಿರುವ ರಾಜ್ಯದ ಸಿಸಿಬಿ ಪೊಲೀಸರಿಗೆ ಅಭಿನಂದನೆಗಳು” ಎಂದು ಸಿಎಂ ತಿಳಿಸಿದ್ದಾರೆ.
“ಭಯೋತ್ಪಾದಕ ಚಟುವಟಿಕೆಗಳು ಸೇರಿದಂತೆ ಯಾವುದೇ ತೆರನಾದ ದೇಶವಿರೋಧಿ ಚಟುವಟಿಗಳಲ್ಲಿ ತೊಡಗಿರುವವರನ್ನು ಪತ್ತೆಹಚ್ಚಿ, ಬೇರು ಸಮೇತ ಅಂತಹ ಶಕ್ತಿಗಳನ್ನು ರಾಜ್ಯದಿಂದ ಕಿತ್ತೊಗೆಯಲು ನಾವು ಸದಾ ಸಿದ್ಧರಿದ್ದೇವೆ. ನಾಡಿನ ಪ್ರತಿಯೊಬ್ಬರಿಗೂ ಸುರಕ್ಷತೆಯ ಬದುಕು ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ” ಎಂದು ಭರವಸೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸ್ಫೋಟಕ್ಕೆ ಸಂಚು; ಐವರು ಶಂಕಿತ ಉಗ್ರರ ಬಂಧನ
ಕಾಂಗ್ರೆಸ್ ಇನ್ನಾದರೂ ತುಷ್ಟೀಕರಣ ರಾಜಕೀಯ ಬಿಡಲಿ: ಬಿಜೆಪಿ
ಇದಕ್ಕೂ ಮುನ್ನಾ ಘಟನೆಯ ಕುರಿತು ಟ್ವೀಟ್ ಮಾಡಿದ್ದ ಬಿಜೆಪಿಯು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತ್ತು.
“ಬೆಂಗಳೂರಿಗೆ ಬಾಂಬಿಡಲು ಮುಂದಾದವರ ರಕ್ಷಣೆ ರಾಜ್ಯ ಸರ್ಕಾರ ಮಾಡದಿರಲಿ. ಕರ್ನಾಟಕದಲ್ಲಿ ಡಿ ಕೆ ಶಿವಕುಮಾರ್ ಅವರ ಅವರ ‘ಬ್ರದರ್ಸ್’ ವಿಧ್ವಂಸಕ ಕೃತ್ಯ ಎಸಗಲು ಹೊಂಚು ಹಾಕಿ ಸಿಕ್ಕಿಬಿದ್ದಿದ್ದಾರೆ. ಸಿದ್ದರಾಮಯ್ಯ ಅವರ ತುಘಲಕ್ ಸರ್ಕಾರದ ಆಗಮನದಿಂದಾಗಿ ಮತಾಂಧ ಜಿಹಾದಿಗಳು ಉಗ್ರರ ಸಖ್ಯ ಬೆಳೆಸಿ ಬಾಲ ಬಿಚ್ಚಿದ್ದಾರೆ. ಕಾಂಗ್ರೆಸ್ ಇನ್ನಾದರೂ ತುಷ್ಟೀಕರಣ ರಾಜಕೀಯ ಬಿಟ್ಟು, ದೇಶದ ಭದ್ರತೆ, ಸುರಕ್ಷತೆಗೆ ಒತ್ತು ನೀಡಲಿ” ಎಂದು ಬಿಜೆಪಿ ಆಗ್ರಹಿಸಿತ್ತು.
