ಬಡವರ ಹಾಗೂ ಸಣ್ಣ ರೈತರ ಪ್ರಕರಣವನ್ನು ಆರು ತಿಂಗಳೊಳಗಾಗಿ ಇತ್ಯರ್ಥಪಡಿಸಲು ಅನುಕೂಲವಾಗುವಂತೆ ಸಿವಿಲ್ ನ್ಯಾಯಾಲಯಗಳಲ್ಲಿ ಕಾನೂನು ಪ್ರಕ್ರಿಯೆಯ ಸಂಹಿತೆ ತಿದ್ದುಪಡಿಗೆ ವಿಧಾನಸಭೆ ಅಂಗೀಕಾರ ನೀಡಿದೆ.
ಬುಧವಾರದ ಅಧಿವೇಶನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ಗಲಾಟೆ ನಡುವೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಅವರು ಕಾನೂನು ಪ್ರಕ್ರಿಯೆಯ ಸಂಹಿತೆ ತಿದ್ದುಪಡಿ ವಿಧೇಯಕ ಮಂಡಿಸಿದರು.
“ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣಗಳು ಹತ್ತಾರು ವರ್ಷಗಳಿಂದ ಬಾಕಿ ಉಳಿದಿದೆ. ಅವುಗಳು ಇತ್ಯರ್ಥಗೊಳ್ಳದೆ ಬಡವರಿಗೆ ನ್ಯಾಯ ದೊರೆಯುತ್ತಿಲ್ಲ. ನ್ಯಾಯಾಲಯದ ವೆಚ್ಚ ಭರಿಸುವ ಆರ್ಥಿಕ ಶಕ್ತಿಯೂ ಬಡವರಲ್ಲಿ ಕುಗ್ಗುತ್ತಿದೆ” ಎಂದು ಎಚ್ ಕೆ ಪಾಟೀಲ್ ಅವರು ವಿಧೇಯಕವನ್ನು ಸಮರ್ಥಿಸಿಕೊಂಡರು.
ಮುಂದುವರಿದು, “ನಮ್ಮ ಸರ್ಕಾರ ಸಿಪಿಸಿಗೆ ತಿದ್ದುಪಡಿ ತರುತ್ತಿದೆ. ಇದರ ಪ್ರಕಾರ ಬಡವರ ಪ್ರಕರಣಗಳು ತ್ವರಿತವಾಗಿ ವಿಚಾರಣೆಯಾಗಿ ಆರು ತಿಂಗಳಲ್ಲಿ ವಿಲೇವಾರಿ ಆಗಬೇಕಿದೆ. ಮಹತ್ವದ ಹಾಗೂ ಕ್ರಾಂತಿಕಾರಿಯಾದ ಈ ಕಾನೂನು ಬಡವರಿಗೆ ಹಾಗೂ ರೈತರಿಗೆ ವರದಾನವಾಗಲಿದೆ” ಎಂದರು.
ಜೆಡಿಎಸ್, ಬಿಜೆಪಿ ಸದಸ್ಯರ ಧರಣಿ ಗದ್ದಲದ ನಡುವೆ ಚರ್ಚೆ ಇಲ್ಲದೆ ವಿಧೇಯಕ ಧ್ವನಿಮತದ ಮೂಲಕ ಅಂಗೀಕಾರಗೊಂಡಿತ್ತು.