ಸರ್ಕಾರಿ ಶಾಲೆಗಳಲ್ಲಿ ತರಗತಿ ಕೊಠಡಿಗಳ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ನಡೆಯಬೇಕಿದ್ದ ದೆಹಲಿ ಸರ್ಕಾರದ ಎಸಿಬಿ ವಿಚಾರಣೆಗೆ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಗೈರುಹಾಜರಾಗಿದ್ದಾರೆ ಎಂದು ವರದಿಯಾಗಿದೆ.
ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಎಎಪಿ ನಾಯಕರಾದ ಮನೀಶ್ ಸಿಸೋಡಿಯಾ ಮತ್ತು ಮಾಜಿ ಲೋಕೋಪಯೋಗಿ ಸಚಿವ ಸತ್ಯೇಂದರ್ ಜೈನ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿ ಸಮನ್ಸ್ ನೀಡಿತ್ತು. ಶುಕ್ರವಾರ ಜೈನ್ ಎಸಿಬಿ ಮುಂದೆ ಹಾಜರಾಗಿದ್ದು, ಎಸಿಬಿ ಐದು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದೆ.
ಇದನ್ನು ಓದಿದ್ದೀರಾ? 2,000 ಕೋಟಿ ರೂ. ಹಗರಣ: ಎಎಪಿ ನಾಯಕ ಮನೀಶ್ ಸಿಸೋಡಿಯಾ ವಿರುದ್ಧ ಮತ್ತೊಂದು ಪ್ರಕರಣ
ಸೋಮವಾರ ಸಿಸೋಡಿಯಾ ಹಾಜರಾಗಬೇಕಿತ್ತು. ಆದರೆ ಮನೀಷ್ ಸಿಸೋಡಿಯಾ ಅವರು ಇಂದು ಬರಲು ಸಾಧ್ಯವಾಗುವುದಿಲ್ಲ ಎಂದು ಅವರ ವಕೀಲರು ತಿಳಿಸಿದ್ದಾರೆ. ಸಿಸೋಡಿಯಾ ಅವರಿಗೆ ಮತ್ತೆ ಸಮನ್ಸ್ ನೀಡಲಾಗುವುದು ಎಂದು ವರದಿ ಉಲ್ಲೇಖಿಸಿದೆ.
ಸಿಸೋಡಿಯಾ ಈ ಸಮನ್ಸ್ ಬರುವುದಕ್ಕೂ ಮುನ್ನವೇ ಬೇರೊಂದು ಕಾರ್ಯಕ್ರಮದಲ್ಲಿ ಹಾಜರಾಗಲು ವೇಳಾಪಟ್ಟಿ ಸಿದ್ಧಪಡಿಸಿದ್ದರು. ಆದ್ದರಿಂದ ಎಸಿಬಿ ಮುಂದೆ ಹಾಜರಾಗಿಲ್ಲ. ಈ ಬಗ್ಗೆ ಎಸಿಬಿಗೆ ಸಿಸೋಡಿಯಾ ಪರ ವಕೀಲರು ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ.
ದೆಹಲಿ ಸರ್ಕಾರಿ ಶಾಲೆಗಳಲ್ಲಿ 12,000ಕ್ಕೂ ಹೆಚ್ಚು ತರಗತಿ ಕೊಠಡಿಗಳ ನಿರ್ಮಾಣದಲ್ಲಿ 2,000 ಕೋಟಿ ರೂ.ಗಳಷ್ಟು ಆರ್ಥಿಕ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ ಏಪ್ರಿಲ್ 30ರಂದು ಎಫ್ಐಆರ್ ದಾಖಲಿಸಿದ್ದು ಸಮನ್ಸ್ ನೀಡಿತ್ತು.
