ವಿಧಾನಸೌಧದಲ್ಲಿ ನಡೆದ ಆರ್‌ಸಿಬಿ ಆಟಗಾರರ ಸನ್ಮಾನ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರವೇ ಆಯೋಜಿಸಿತ್ತು. ಪೊಲೀಸರು ಲಾಠಿಚಾರ್ಜ್ ನಡೆಸಿದ್ದರಿಂದ ಕಾಲ್ತುಳಿತ ಸಂಭವಿಸಿದೆ ಎಂದು ಆರ್‌ಸಿಬಿಯ ಕಾರ್ಯಕ್ರಮ ನಿರ್ವಹಣೆ ಮಾಡಿದ್ದ ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆ ಡಿಎನ್‌ಎ ಹೈಕೋರ್ಟ್‌ಗೆ ತಿಳಿಸಿದೆ.
11 ಮಂದಿ ಕಾಲ್ತುಳಿತಕ್ಕೆ ಸಂಬಂಧಿಸಿದ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಆರ್‌ಸಿಬಿ ಸಂಸ್ಥೆ ಹಾಗೂ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿವೆ. ಇದರಲ್ಲಿ ಸರ್ಕಾರದ ವಿರುದ್ಧವೇ ಗಂಭೀರ ಆರೋಪ ಮಾಡಲಾಗಿದೆ. ಕಾಲ್ತುಳಿತ ಸಂಭವಿಸಲು ಸರ್ಕಾರವೇ ಕಾರಣ. ಸ್ವತಃ ಮುಖ್ಯಮಂತ್ರಿಗಳೇ ಜನರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು ಎಂದು ನೇರವಾಗಿ ದೂರಿದೆ.
ಈ ಹಿಂದೆ ಭಾರತ ಟಿ-20 ವಿಶ್ವಕಪ್ ಗೆದ್ದಾಗ ಮುಂಬೈನಲ್ಲಿ ಗೆಲುವಿನ ಮೆರವಣಿಗೆ ನಡೆಸಲಾಗಿತ್ತು. 3 ಲಕ್ಷ ಜನರಿದ್ದರೂ ಯಾವುದೇ ಅವಘಡಗಳಾಗಿರಲಿಲ್ಲ. ವಾಂಖೇಡೆ ಕ್ರೀಡಾಂಗಣದ ಸಾಮರ್ಥ್ಯ 32,000 ಇದ್ದರೂ ಸಮಸ್ಯೆ ಆಗಲಿಲ್ಲ. ಜೂ.3 ರಂದೇ ಆರ್‌ಸಿಬಿ ವಿಕ್ಟರಿ ಪರೇಡ್‌ಗೆ ಅನುಮತಿ ಕೋರಿ ಪತ್ರವನ್ನು ಬರೆಯಲಾಗಿತ್ತು. ಆದರೆ ತೆರೆದ ಬಸ್ ಪರೇಡ್‌ಗೆ ಪೊಲೀಸರು ಅನುಮತಿ ನಿರಾಕರಣೆ ಮಾಡಿದ್ದರು ಎಂದು ಹೈಕೋರ್ಟ್‌ಗೆ ತಿಳಿಸಿದೆ.
ಇದನ್ನು ಓದಿದ್ದೀರಾ? ರಾಜ್ಯ ಕ್ರಿಕೆಟ್ ಸಂಸ್ಥೆ ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್ ಮಧ್ಯಂತರ ಆದೇಶ
ವಿಧಾನಸೌಧ ಕಾರ್ಯಕ್ರಮಕ್ಕೆ ಹೆಚ್ಚಿನ ಭದ್ರತೆ ನೀಡಲಾಗಿತ್ತು. ಕ್ರೀಡಾಂಗಣದ ಬಳಿ ಅಗತ್ಯವಿದ್ದಷ್ಟು ಪೊಲೀಸರು ನಿಯೋಜನೆ ಮಾಡದ ಕಾರಣ ಡಿಎನ್‌ಎನಿಂದಲೇ 584 ಖಾಸಗಿ ಸಿಬ್ಬಂದಿ ನೇಮಕ ಮಾಡಲಾಗಿತ್ತು. ಸರ್ಕಾರ ತನ್ನ ವೈಫಲ್ಯ ಮುಚ್ಚಿಟ್ಟುಕೊಳ್ಳಲು ಬಂಧನಕ್ಕೆ ಆದೇಶಿಸಿದೆ ಎಂದು ಕೋರ್ಟ್‌ಗೆ ಹೇಳಿದೆ
ನಮಗೂ, ಈ ಕಾರ್ಯಕ್ರಮಕ್ಕೆ ಯಾವುದೇ ಸಂಬಂಧವಿಲ್ಲ. ಕೇವಲ ಆಟಗಾರರನ್ನು ಕರೆದು ತರುವುದಷ್ಟೇ ನಮ್ಮ ಕೆಲಸ. ಸರ್ಕಾರದ ಅನುಮತಿ ಪಡೆದ ನಂತರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಜೂ.3ರಂದೇ ಅನುಮತಿ ದೊರಕಿರುವುದಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ ದೃಢೀಕರಿಸಿತ್ತು. ಕೆಎಸ್‌ಸಿಎ ಮಾಹಿತಿ ಆಧರಿಸಿಯೇ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ. ನಾವು ಯಾವುದೇ ತಪ್ಪು ಮಾಡಿಲ್ಲ ಎಂದು ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆ ಕೋರ್ಟ್‌ಗೆ ತಿಳಿಸಿದೆ.