ಮೋದಿ ಪ್ರಚಾರ ವೈಖರಿಯೆಂದರೆ ಅದು ಕೇವಲ ʼಒನ್ ಮ್ಯಾನ್ ಶೋʼ, ಅಲ್ಲಿ ಉಳಿದವರು ಅತಿಥಿ ಅಭ್ಯಾಗತರು ಮಾತ್ರ. ಹಾಗೆ ಬಂದು ಹೀಗೆ ಮರೆಯಾಗಬೇಕು. ಕ್ಯಾಮೆರಾಗಳ ವಿಚಾರದಲ್ಲಿಯಂತೂ ಬೇರೆಯವರ ಮುಖಗಳಿಗೆ ಅಕ್ಷರಶಃ ದಿಗ್ಬಂಧನವಿರುತ್ತದೆ. ಆರ್‌ಸಿಬಿ ಯಶಸ್ಸಿನಲ್ಲಿ ತಾನೂ ಭಾಗವಾಗಲು ತಹತಹಿಸಿದ ರಾಜ್ಯ ಸರ್ಕಾರಕ್ಕೆ ಸರಿಯಾಗಿ ಪ್ರಚಾರ ಗಿಟ್ಟಿಸಿಕೊಳ್ಳುವ ಉದ್ದೇಶವಾದರೂ ಇತ್ತೇ ಎನ್ನುವ ಪ್ರಶ್ನೆ ಮೂಡದೇ ಇರದು.
ಕಂಡವರ ಯಶಸ್ಸಿನಲ್ಲಿ ಪಾಲು ಕೇಳುವ, ಅವರ ಬೆನ್ನ ಮೇಲೆ ಕೂತು ತಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರವೃತ್ತಿ ರಾಜಕಾರಣದಲ್ಲಿ ಇಂದು ನಿನ್ನೆಯದಲ್ಲ. ಇದಕ್ಕೆ ನಿದರ್ಶನವಾಗಿ ಕಳೆದ ಹನ್ನೊಂದು ವರ್ಷಗಳ ತಮ್ಮ ಆಡಳಿತಾವಧಿಯಲ್ಲಿ ಪ್ರಧಾನಿ ಮೋದಿಯವರು ಕೈಗೊಂಡ ನೂರಾರು ಪ್ರಚಾರ ಕಾರ್ಯಕ್ರಮಗಳನ್ನು ಗಮನಿಸಬಹುದು. ಇದು ನವ ಭಾರತ, ಹೊಸ ಶಕ್ತಿ, ಚೈತನ್ಯದಿಂದ ಕಂಗೊಳಿಸುತ್ತಿರುವ ಭಾರತ ಎಂದು ಹೇಳುತ್ತಾ, ದೇಶದ ಯಾವುದೇ ಕ್ಷೇತ್ರದಲ್ಲಿ ಏನೊಂದು ಸಾಧನೆ, ಯಶಸ್ಸು ಸಂಭವಿಸಿದರೂ ಅದನ್ನು ತಮ್ಮ ನಾಯಕತ್ವಕ್ಕೆ ಆರೋಪಿಸಿಕೊಳ್ಳುವುದನ್ನು ಕಾಣಬಹುದು. ತಾನು ಈ ದೇಶಕ್ಕೆ ನೀಡಿರುವ ಸಮರ್ಥ ನಾಯಕತ್ವ, ಹೊಸ ಅಲೋಚನೆ, ದೂರದರ್ಶಿತ್ವ, ಆತ್ಮವಿಶ್ವಾಸವೇ ದೇಶದ ಎಲ್ಲ ರಂಗಗಳಲ್ಲಿನ ಸರ್ವಸಾಧನೆಗೂ ಕಾರಣ ಎಂದು ಕೈ ಮೇಲೆತ್ತಿ ಕ್ಯಾಮೆರಾಗಳೆಡೆಗೆ ಬೀಸುವ ಯಾವುದೇ ಅವಕಾಶವನ್ನೂ ಅವರು ಈ ಹನ್ನೊಂದು ವರ್ಷಗಳ ಅವಧಿಯಲ್ಲಿ ತಪ್ಪಿಸಿಲ್ಲ.
ಯಾವುದೇ ಒಂದು ಸಂಸ್ಥೆಯು ಒಂದೇ ದಿನದಲ್ಲಿ ಯಾವುದೇ ಕ್ಷೇತ್ರದಲ್ಲಿ ಮಹತ್ವದ, ಗುರುತರ ಸಾಧನೆ ಮಾಡಲಾಗದು. ಅದರ ಹಿಂದೆ, ಅನೇಕ ವರ್ಷಗಳ, ಕೆಲ ಬಾರಿ ಅನೇಕ ದಶಕಗಳ ಶ್ರಮ, ನೀತಿನಿರೂಪಣೆಗಳ ಫಲವಿರುತ್ತದೆ. ಹಿಂದೆ ಯಾರೋ ದೂರದರ್ಶಿತ್ವದಿಂದ ತೆಗೆದುಕೊಂಡ ನಿರ್ಧಾರಗಳ ಫಲವನ್ನು ಇಂದು ನಾವು ಪಡೆಯುತ್ತಿರುತ್ತೇವೆ, ಅದೇ ರೀತಿ, ಹಿಂದಿನ ಅಚಾತುರ್ಯಗಳ ಸಮಸ್ಯೆಯನ್ನು ಸಹ ಇಂದು ಅನುಭವಿಸುತ್ತಿರುತ್ತೇವೆ. ಬೆಳವಣಿಗೆಯ ಪಥದಲ್ಲಿ ಇದು ಸರ್ವೇಸಾಮಾನ್ಯ. ಹಿಂದಿನ ನಿರ್ಧಾರಗಳ ಯಶಸ್ಸಿನಿಂದ ಪ್ರೇರಣೆ ಪಡೆದು ಮತ್ತಷ್ಟು ದೂರದರ್ಶಿತ್ವ, ಕ್ರಿಯಾಶೀಲತೆಯಿಂದ ಮುಂದುವರೆಯುವುದು, ಹಿಂದಿನ ತಪ್ಪುಗಳಿಂದ ಪಾಠ ಕಲಿತು ಒಪ್ಪಓರಣಗೊಳ್ಳುವುದು ಇದು ಪ್ರಗತಿಯ ಪಥದಲ್ಲಿ ಸಾಗುವ ಪರಿ. ಆದರೆ, ಪ್ರಧಾನಿ ಮೋದಿಯವರ ಪ್ರಕಾರ ಅವರು ಅಧಿಕಾರದಲ್ಲಿ ಆಸೀನರಾಗುವುದಕ್ಕಿಂತ ಮುನ್ನ ಭಾರತ ಕರಾಳ ಯುಗದಲ್ಲಿತ್ತು, ಅವರ ಆಸೀನಾನಂತರ ಒಮ್ಮೆಲೇ ಜಗಮಗಿಸುತ್ತಿದೆ! ಇಷ್ಟೇ ಏಕೆ, ನೈಜ ಅರ್ಥದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದೇ ಮೋದಿಯವರು ಪ್ರಧಾನಿಯಾದ ನಂತರ ಎಂದು ಅವರ ಕಟ್ಟರ್ ಅನುಯಾಯಿಗಳು ಎದೆಯುಬ್ಬಿಸಿ ಹೇಳಿಕೊಳ್ಳುವುದನ್ನು ತಾವುಗಳೂ ಕೇಳಿರುತ್ತೀರಿ.
ತಾವು ಎಡವಿದಾಗ, ವಿಫಲರಾದಾಗ ಮೋದಿಯವರಿಗೆ ಥಟ್ಟನೆ ಇತಿಹಾಸದ ನೆನಪಾಗುತ್ತದೆ. ತನ್ನ ವೈಫಲ್ಯದ ಮೂಲ ಈ ಹಿಂದೆ ಆಡಳಿತ ನಡೆಸಿದ ಸರ್ಕಾರಗಳು ಇರಿಸಿದ ತಪ್ಪು ಹೆಜ್ಜೆಯಲ್ಲಿದೆ ಎಂದು ಅವರು ಇತಿಹಾಸದ ಪುಟಗಳನ್ನು ಹೆಕ್ಕುತ್ತಾರೆ. ಹೀಗೆ ತಮ್ಮ ವೈಫಲ್ಯಗಳಿಗೆ ಮಾತ್ರವೇ ಇತಿಹಾಸದತ್ತ ಬೆರಳು ಮಾಡುವ ಮೋದಿಯವರು ತಾವು ಚಪ್ಪರಿಸುವ ಬಹುತೇಕ ಯಶಸ್ಸುಗಳಿಗೆ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಇರಿಸಿದ ಹೆಜ್ಜೆಗಳು ಕಾರಣ ಎನ್ನುವುದನ್ನು ಪ್ರಜ್ಞಾಪೂರ್ವಕವಾಗಿಯೇ ಮರೆಮಾಚುತ್ತಾರೆ. ಅವರ ಪ್ರಚಾರ ತಂಡವಂತೂ ಕ್ರಿಸ್ತಶಕ, ಕ್ರಿಸ್ತಪೂರ್ವದ ರೀತಿಯಲ್ಲಿ ಮೋದಿಶಕ, ಮೋದಿಪೂರ್ವ ಎನ್ನುವ ಕಪ್ಪುಬಿಳುಪಿನ ಸರಳರೇಖೆಯ ಕಾಲಘಟ್ಟವನ್ನು ದೇಶದ ಮುಂದೆ ಇರಿಸಿಬಿಟ್ಟಿದೆ. ಮೋದಿಪೂರ್ವದಲ್ಲಿ ಎಲ್ಲವೂ ಕಪ್ಪು, ತಪ್ಪು! ಮೋದಿಶಕೆಯಲ್ಲಿ ಎಲ್ಲವೂ ಬಿಳಿಪು, ತಂಪುತಂಪು! ಇದು ಅವರು ಸಾಮಾಜಿಕವಾಗಿ ಕಟ್ಟುವ ಸಂಕಥನದ ಪರಿ. ಇಂತಹದ್ದೊಂದು ಸಾರ್ವಜನಿಕ ಕಲ್ಪನೆಯನ್ನು ಮೂಡಿಸುವ ಸಲುವಾಗಿ ಅವರ ಪ್ರಚಾರ ತಂಡ ಯಾವ ಹೊತ್ತಿನಲ್ಲಿ ಮೋದಿಯವರು ಎಲ್ಲಿರಬೇಕು, ಯಾವ್ಯಾವ ಸಾಧನೆಯ ಫಸಲಿನ ಕೊಯ್ಲಿನಲ್ಲಿ ಪಾಲು ಕೇಳಬೇಕು ಎಂದು ವ್ಯಾಪಕ ತಯ್ಯಾರಿ ನಡೆಸುತ್ತದೆ. ಈ ವಿಚಾರದಲ್ಲಿ ಅವರ ಪ್ರಚಾರ ತಂಡಕ್ಕೆ ನೂರಕ್ಕೆನೂರರಷ್ಟು ಅಂಕ ಲಭಿಸಬೇಕು. ಮೋದಿ ಸರ್ಕಾರದಲ್ಲಿ ಅಪಾರ ಸಮಯಪ್ರಜ್ಞೆಯಿಂದ, ದೂರದರ್ಶಿತ್ವದಿಂದ ಕೆಲಸ ಮಾಡುತ್ತಿರುವ ಅಂಗವೆಂದರೆ ಅದು ಅವರ ಪ್ರಚಾರ ತಂಡ ಎಂಬುದರಲ್ಲಿ ಎರಡು ಮಾತಿಲ್ಲ!

ಉಪಗ್ರಹಗಳ ಉಡಾವಣೆಯಿಂದ ಹಿಡಿದು, ರಸ್ತೆ, ಸುರಂಗ, ಸೇತುವೆಗಳ ಉದ್ಘಾಟನೆಯವರೆಗೆ; ಕ್ರೀಡಾಪಟುಗಳ ವೈಯಕ್ತಿಕ ಸಾಧನೆಯಿಂದ ಆರಂಭಿಸಿ ಸೇನೆ ತೋರುವ ಶೌರ್ಯ, ಪರಾಕ್ರಮದವರೆಗೆ; ಸರ್ಕಾರದ ಅಲ್ಪ ಪಾತ್ರವಿರುವ ಅಥವಾ ಅದೂ ಇರದ ಖಾಸಗಿ ವಲಯಗಳ ಯಶೋಗಾಥೆಗಳಿಂದ ಹಿಡಿದು ಆರ್ಥಿಕ ಪ್ರಗತಿಯ ಹಾದಿಯಲ್ಲಿ ತನ್ನಷ್ಟಕ್ಕೇ ಕುಂಟುತ್ತಲೋ, ತೆವಳುತ್ತಲೋ, ಏಳುಬೀಳುತ್ತಲೋ ದೇಶವು ಮುಟ್ಟುವ ಗುರಿಗಳವರೆಗೆ ಎಲ್ಲವೂ ಪ್ರಚಾರಕ್ಕೆ ಒದಗಿ ಬರುವ ಸರಕು-ಸಾಧನಗಳೆಂದು ಮೋದಿಯವರ ಪ್ರಚಾರ ತಂಡ ನೋಡುತ್ತದೆ. ವರ್ಷದ ಮುನ್ನೂರೈವತ್ತಾರು ದಿನವೂ ಅವರನ್ನು ಮೆರೆಸಲು ಅವಕಾಶಗಳನ್ನು ಹುಡುಕುತ್ತದೆ. ಕನಿಷ್ಠ ಆತ್ಮವಿಮರ್ಶೆಯೂ ಇಲ್ಲದ, ಗರಿಷ್ಠ ಪ್ರಚಾರದ ಗೀಳಿನಿಂದ ಕೂಡಿರುವ ಈ ತಂಡ ಇತಿಹಾಸಕ್ಕೆ ವಿಸ್ಮೃತಿಯ ಪರದೆಯನ್ನೂ, ತರ್ಕಕ್ಕೆ ಭಾವೋನ್ಮಾದದ ಮುಸುಕನ್ನು ಹೊದಿಸುವಲ್ಲಿ ಸದಾ ಕಾರ್ಯತತ್ಪರವಾಗಿರುತ್ತದೆ.
ಯಶಸ್ಸು, ಅದು ಯಾರದ್ದೇ ಅಗಲಿ, ಅದರಲ್ಲಿ ತಮ್ಮ ಪಾಲಿನ ಹಕ್ಕುಸಾಧನೆ ಮಾಡಲು ಏನೆಲ್ಲಾ ಅವಕಾಶವಿದೆ ಎಂದು ನೋಡುವ ಪ್ರಚಾರದ ವಿಕೃತಿ ಇಂದು ದೇಶದೆಲ್ಲೆಡೆ ಒಂದು ಪಿಡುಗಿನ ರೀತಿಯಲ್ಲಿ ವ್ಯಾಪಿಸಿಕೊಂಡಿದೆ. ಇಂತಹ ವಿಕೃತಿಯ ಅಸಹ್ಯ ಪ್ರದರ್ಶನಕ್ಕೆ ಯಾವ ಪಕ್ಷಗಳೂ ಹೊರತಾಗಿಲ್ಲ. ಐಪಿಎಲ್‌ನಲ್ಲಿ ಗೆದ್ದು ಬೀಗಿದ್ದ ಆರ್‌ಸಿಬಿಯ ವಿಜಯಯಾತ್ರೆಯ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದ ಪ್ರಕರಣವೂ ಕೂಡ ಇಂತಹದ್ದೇ ವಿಕೃತಿಯ ಫಲ. ಗೆದ್ದೆತ್ತಿನ ಬಾಲ ಹಿಡಿಯಲು ನಾ ಮುಂದು, ತಾ ಮುಂದು ಎಂದು ಹೋದವರು, ಕನಿಷ್ಠ ಎಚ್ಚರವನ್ನೂ ಮರೆತವರು ಇಂದು ದೇಶಾದ್ಯಂತ ಆಕ್ರೋಶವನ್ನು ಎದುರಿಸುತ್ತಿದ್ದಾರೆ.
ಭಟ್ಟಂಗಿಗಳ ಬಲೆ, ಹುಂಬತನದ ಶಿಲೆ
ಭಟ್ಟಂಗಿಗಳು, ಸಾರ್ವಜನಿಕವಾಗಿ ಸದಭಿಪ್ರಾಯ ಹೊಂದಿರದ ವಂದಿಮಾಗಧರನ್ನು ತಮ್ಮ ಸುತ್ತ ಹುಲುಸಾಗಿ ಬೆಳೆಯುಲು ಬಿಟ್ಟರೆ ಹೇಗೆ ಆಂತರ್ಯದ ಕಣ್ಣು, ಕಿವಿಗಳು ಚುರುಕು ಕಳೆದುಕೊಳ್ಳುತ್ತವೆ, ಅವರಿಂದಾಗಿ ತಮ್ಮಲ್ಲಿ ಆವರಿಸಿಕೊಳ್ಳುವ ಸ್ವಯಂತೃಪ್ತ ಭಾವ ತಮ್ಮನ್ನು ಎಲ್ಲಿಗೆ ಒಯ್ದು ನಿಲ್ಲಿಸುತ್ತದೆ ಎನ್ನುವುದು ರಾಜ್ಯದ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರಿಗೆ ಈಗ ಅರಿವಿಗೆ ಬಂದಿರಬಹುದು. ಇಂತಹದ್ದೊಂದು ದೊಡ್ಡ ಕಹಿ ಘಟನೆಯ ಮೂಲಕ ಅವರು ಇದನ್ನು ತಿಳಿಯುವ ಅಗತ್ಯವಿರಲಿಲ್ಲ. ಆದರೆ, ಹಾಗಾಗಿದ್ದು ವಿಪರ್ಯಾಸ. ಇನ್ನು ತಮ್ಮನ್ನು ತಾವೇ ಅಪೂರ್ವ ಸಂಘಟಕ, ಚಾಣಾಕ್ಷ ತಂತ್ರಗಾರ, ಪ್ರಚಾರ ತಂತ್ರದಲ್ಲಿ ನಿಸ್ಸೀಮ ಎಂದು ಭಾವಿಸಿದಂತಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಈ ಘಟನೆ ನಿರ್ಣಾಯಕ ಪಾಠವಾಗಬೇಕಿದೆ. ಗಿಮಿಕ್ ರಾಜಕಾರಣ ತರುವ ಆಪತ್ತು, ಅದು ನೀಡುವ ಹೊಡೆತವನ್ನು ಅವರು ತಮ್ಮ ಎಂದಿನ ಶೈಲಿಯಲ್ಲಿಯೇ ಹುಂಬವಾಗಿ, ಗಂಭೀರವಾಗಿ ನಿರ್ಲಕ್ಷಿಸುತ್ತಲೇ ಬಂದವರು. ಆದರೆ, ಈಗ ಅವರ ತಲೆ ಬಂಡೆಗೆ ತಾಕಿದೆ, ಹಾಗಿದ್ದೂ ಈ ಕ್ಷಣಕ್ಕೂ ತಮ್ಮ ತಲೆಯೇ ಬಂಡೆಗಿಂತ ಗಟ್ಟಿ ಎಂದು ಅವರು ಭಾವಿಸಿದರೆ ಅದರ ಫಲ ಅವರೇ ಅನುಭವಿಸಬೇಕಾಗುತ್ತದೆ.

ಶಿವಕುಮಾರ್ ಅವರು ಕಳೆದ ಕೆಲ ತಿಂಗಳಿಂದ ಸಾಲುಸಾಲಾಗಿ ಕೆಟ್ಟ ಸುದ್ದಿಗಳ ಕೇಂದ್ರದಲ್ಲಿದ್ದಾರೆ. ವೈಯಕ್ತಿಕ ರಾಜಕಾರಣ, ಪಕ್ಷ ರಾಜಕಾರಣ, ಸರ್ಕಾರದ ಆಡಳಿತ ಎಲ್ಲವನ್ನೂ ಕಲಸುಮೇಲೊಗರ ಮಾಡಿಕೊಂಡಿರುವ ಅವರಿಗೆ ಕಠಿಣ ಲಕ್ಷ್ಮಣ ರೇಖೆ ಹಾಗೂ ನಿರ್ದಿಷ್ಟ ವಿಷಯಗಳ ಬಗ್ಗೆ ಮಾತ್ರವೇ ತಮ್ಮ ಗಮನ, ಶಕ್ತಿಯನ್ನು ಕೇಂದ್ರೀಕರಿಸುವಂತೆ ಹೈಕಮಾಂಡ್ ತಾಕೀತು ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ, ತಾವು ಹೊಂದಿರುವ ಖಾತೆ, ಬೆಂಗಳೂರು ಉಸ್ತುವಾರಿ ಜವಾಬ್ದಾರಿಗಳು ಇವೆಲ್ಲಕ್ಕೂ ಅವರು ನ್ಯಾಯ ಸಲ್ಲಿಸಬಲ್ಲರೇ ಎನ್ನುವ ಗಂಭೀರ ಪ್ರಶ್ನೆಗೆ ಉತ್ತರ ಹುಡುಕುವ ಜವಾಬ್ದಾರಿ ಹೈಕಮಾಂಡ್ ಮೇಲಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದು ಎರಡು ವರ್ಷಗಳಾದ ಹೊತ್ತಿನಲ್ಲಿ ಕಂದಾಯ ಗ್ರಾಮಗಳಲ್ಲದ ಹಟ್ಟಿ, ತಾಂಡಾದಂತಹ ಜನವಸತಿ ಪ್ರದೇಶಗಳ ನಿವಾಸಿಗಳಿಗೆ ಹಕ್ಕುಪತ್ರವನ್ನು ನೀಡುವಂತಹ ಕ್ರಾಂತಿಕಾರಕ ಹೆಜ್ಜೆ ಇರಿಸಿತ್ತು. ಆ ಮೂಲಕ ದೇಶದ ಗಮನ ಸೆಳೆದಿತ್ತು. ಆದರೆ, ಎರಡು ವರ್ಷ ಈ ಸಂಭ್ರಮಕ್ಕೆ ಮೊದಲಿಗೆ ಮಳೆ ತಣ್ಣೀರೆರಚಿದರೆ, ಈಗ ಕಾಲ್ತುಳಿತ ಮಂಕುಕವಿಸಿದೆ. ಮಳೆಯಿಂದ ಬೆಂಗಳೂರಿನಲ್ಲಿ ಉಂಟಾದ ಆವಾಂತರ, ಕಾಲ್ತುಳಿತದಿಂದ ದೇಶದುದ್ದಗಲಕ್ಕೂ ಹರಾಜದ ರಾಜ್ಯ ಸರ್ಕಾರದ ಮಾನ ಈ ಎರಡೂ ನಿರ್ವಹಿಸಬಹುದಾಗಿದ್ದ ಲೋಪಗಳು.
ಬದಲಾಗದಿರಲಿ ರಾಜ್ಯ ಸರ್ಕಾರದ ಆದ್ಯತೆಗಳು
ರಾಜ್ಯ ಸರ್ಕಾರದ ಮುಂದೆ ಹತ್ತುಹಲವು ಗಂಭೀರ ಸವಾಲುಗಳಿವೆ. ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಥವಾಗಿ ತೂಗಿಸಿಕೊಂಡು ಹೋಗುವುದು, ಅದರೊಟ್ಟಿಗೆ ಅಭಿವೃದ್ಧಿ ಕಾರ್ಯಗಳಿಗೂ ಹಣ ಹೊಂದಿಸುವುದು, ಅನುದಾನ ಬರುತ್ತಿಲ್ಲವೆಂದು ಹಿಡಿಶಾಪ ಹಾಕುತ್ತಿರುವ ಶಾಸಕರನ್ನು ಸಮಾಧಾನಪಡಿಸುವುದು, ಸಂಪುಟ ವಿಸ್ತರಣೆಯಾಗುತ್ತದೆ ಎಂದು ಕಾದುಕೂತಿರುವ ಅತೃಪ್ತರನ್ನು ತಣಿಸಿ ಇರಿಸಿಕೊಳ್ಳುವುದು, ಬಲಪಂಥೀಯ ಶಕ್ತಿಗಳ ಚಿತಾವಣೆಯಿಂದ ಪದೇಪದೇ ಕೋಮು ಉದ್ವಿಗ್ನತೆ ಕಾಣುತ್ತಿರುವ ಕರಾವಳಿಯಲ್ಲಿ ಜನಜೀವನವನ್ನು ಸೌಹಾರ್ದತೆಯೆಡೆಗೆ ತರುವುದು, ಅನುದಾನ ಕೊಡದೆ ಸತಾಯಿಸುವ ಕೇಂದ್ರವನ್ನು ಎದುರಿಸುತ್ತಲೇ ಸಂಪನ್ಮೂಲಗಳನ್ನು ಹುಡುಕಿಕೊಳ್ಳುವುದು, ಕೇಂದ್ರ ಹಾಗೂ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಸತತವಾಗಿ ನಡೆಸುವ ಅಪಪ್ರಚಾರವನ್ನು ಸಮರ್ಥವಾಗಿ ಮೆಟ್ಟಿ ನಿಲ್ಲುವುದು, ಪಕ್ಷಪಾತಿ ಮಾಧ್ಯಮಗಳ ಅಪಪ್ರಚಾರಗಳನ್ನು ಎದುರಿಸುವುದು ಹೀಗೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇಂತಹ ಹೊತ್ತಿನಲ್ಲಿ ಬೇಡದ ಶೋಕಿಗೆ, ಗಿಮಿಕ್ ಪ್ರಚಾರದ ತುರಿಕೆಗೆ ವಿಧಾನಸೌಧದ ಮೆಟ್ಟಿಲುಗಳ ಮೇಲೆಯೇ ಸರ್ಕಾರ ಮಕಾಡೆ ಬೀಳುವ ಅವಶ್ಯಕತೆ ಇತ್ತೇ?
ಕರ್ನಾಟಕಕ್ಕೂ ಆರ್‌ಸಿಬಿಗೂ ಭಾವುಕತೆಯ ಆಚೆಗೆ ಯಾವ ಗಟ್ಟಿಯಾದ ಸಂಬಂಧವಿದೆ? ಖಾಸಗಿ ಸಂಸ್ಥೆಯ ಮಾಲೀಕತ್ವದ ತಂಡ, ಶುದ್ಧ ವ್ಯಾವಹಾರಿಕತೆಯೇ ತುಂಬಿರುವ ಆಟ, ಹುಚ್ಚು ಅಭಿಮಾನ ಇದೆಲ್ಲದರಲ್ಲಿ ಸರ್ಕಾರ ನೇರವಾಗಿ ಪಾಲ್ಗೊಳ್ಳುವ ದರ್ದು ಏನಿದೆ? ಸರ್ಕಾರಕ್ಕೆ ಮಾಡಲಿಕ್ಕೆ ಇಂತದ್ದರ ಆಚೆಗೆ ಸಾಕಷ್ಟು ಕೆಲಸಗಳಿರುತ್ತವೆ. ಖಾಸಗಿಯಾಗಿ ಇಟ್ಟುಕೊಳ್ಳಬೇಕಾದ ಅಭಿಮಾನ, ಭೇಟಿ, ಶುಭಾಶಯ, ಸನ್ಮಾನಗಳಿಗೆ ಸರ್ಕಾರಿ ಕಾರ್ಯಕ್ರಮದ ಸ್ವರೂಪ ನೀಡುವ ಅಗತ್ಯ ಎಳ್ಳಷ್ಟೂ ಇರುವುದಿಲ್ಲ.
ಮೋದಿ ಪ್ರಚಾರ ವೈಖರಿಯೆಂದರೆ ಅದು ಕೇವಲ ʼಒನ್ ಮ್ಯಾನ್ ಶೋʼ, ಅಲ್ಲಿ ಉಳಿದವರು ಅತಿಥಿ ಅಭ್ಯಾಗತರು ಮಾತ್ರ. ಹಾಗೆ ಬಂದು ಹೀಗೆ ಮರೆಯಾಗಬೇಕು. ಕ್ಯಾಮೆರಾಗಳ ವಿಚಾರದಲ್ಲಿಯಂತೂ ಬೇರೆಯವರ ಮುಖಗಳಿಗೆ ಅಕ್ಷರಶಃ ದಿಗ್ಬಂಧನವಿರುತ್ತದೆ. ಆರ್‌ಸಿಬಿ ಯಶಸ್ಸಿನಲ್ಲಿ ತಾನೂ ಭಾಗವಾಗಲು ತಹತಹಿಸಿದ ರಾಜ್ಯ ಸರ್ಕಾರಕ್ಕೆ ಸರಿಯಾಗಿ ಪ್ರಚಾರ ಗಿಟ್ಟಿಸಿಕೊಳ್ಳುವ ಉದ್ದೇಶವಾದರೂ ಇತ್ತೇ ಎನ್ನುವ ಪ್ರಶ್ನೆ ಮೂಡದೇ ಇರದು. ಕಾರ್ಯಕ್ರಮವನ್ನು ಸಂಘಟಿಸಿದ್ದ ರೀತಿಯನ್ನು ನೋಡಿದವರಿಗೆ ವೇದಿಕೆಯ ಮೇಲೆಯೇ ಕಾಲ್ತುಳಿತವಾಗಿದ್ದರೂ ಅಚ್ಚರಿ ಎನಿಸುತ್ತಿರಲಿಲ್ಲ!
ಕಳೆದ ಎರಡು ವರ್ಷಗಳಿಂದ ದೇಶದ ರಾಜಕಾರಣದಲ್ಲಿ ಯಾವುದಾದರೊಂದು ರಾಜ್ಯವು ಪದೇಪದೇ ಚರ್ಚೆಯ ಕೇಂದ್ರದಲ್ಲಿದ್ದರೆ ಅದು ಕರ್ನಾಟಕ ಮಾತ್ರ. ಮಾಧ್ಯಮಗಳು, ಮೇಲ್ವರ್ಗದ ವ್ಯವಸ್ಥಿತ ಅಪಪ್ರಚಾರಗಳ ನಡುವೆಯೂ ಈ ಸರ್ಕಾರ ತನ್ನ ಜನಪರ ಕಾರ್ಯಕ್ರಮಗಳಿಂದಾಗಿ, ಅಸಾಧ್ಯವೆನಿಸುವ ಕಲ್ಯಾಣ ಕಾರ್ಯಕ್ರಮಗಳನ್ನು ಸಾಧ್ಯವಾಗಿಸಿ ತೋರಿಸಿದ ಕಾರಣಕ್ಕಾಗಿ ಪರ-ವಿರೋಧಗಳ ಚರ್ಚೆಯ ಕೇಂದ್ರದಲ್ಲಿತ್ತು. ಅಭಿವೃದ್ಧಿಯ ವಿಚಾರದಲ್ಲಿಯೂ ಈ ಹಿಂದಿನ ಸರ್ಕಾರಗಳ ಹೋಲಿಕೆಯಲ್ಲಿ ಉತ್ತಮವಾಗಿಯೇ ಹೆಜ್ಜೆ ಇರಿಸಿತ್ತು. ಬಿಜೆಪಿಯ ರಾಷ್ಟ್ರೀಯ ನಾಯಕರೂ ಸಹ ದೇಶದ ಇತರೆ ರಾಜ್ಯಗಳಿಗಿಂತ ಹೆಚ್ಚು ತಲೆಕೆಡಿಸಿಕೊಂಡಿರುವುದು ಕರ್ನಾಟಕದ ಬಗ್ಗೆಯೇ. ಇದಕ್ಕೆ ಕಾರಣ, ಈ ಸರ್ಕಾರ ಜನಪರ ಕಾರ್ಯಕ್ರಮಗಳು ಹಾಗೂ ಅಭಿವೃದ್ಧಿ ಯೋಜನೆಗಳನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಸಫಲವಾದರೆ ಅದು ದೇಶದಲ್ಲಿ ಅಭಿವೃದ್ಧಿ ರಾಜಕಾರಣದ ಚರ್ಚೆಗೆ ದೊಡ್ಡದೊಂದು ಮಾದರಿಯನ್ನೇ ನೀಡುತ್ತದೆ ಎನ್ನುವುದು. ಜನಪರ-ಜನಪ್ರಿಯ ಕಾರ್ಯಕ್ರಮಗಳ ಅಭಿವೃದ್ಧಿ ಮಾದರಿಯು ಹಿಂದುತ್ವವಾದಿ ಸಿದ್ಧಾಂತದ ಮತರಾಜಕಾರಣದ ಪ್ರಭಾವವನ್ನು ಕುಗ್ಗಿಸಲಿದೆ ಎನ್ನುವ ಆತಂಕ ಬಿಜೆಪಿಗಿದೆ.
ಮತ್ತೊಂದೆಡೆ, ಕರ್ನಾಟಕದ ಈ ಮಾದರಿ ಯಶಸ್ವಿಯಾಗುವುದು ಕಾಂಗ್ರೆಸ್ ಪಾಲಿಗೆ ಅತ್ಯಗತ್ಯ. ಹಾಗಾದಲ್ಲಿ ಮಾತ್ರ ಅದು ದೇಶದೆಲ್ಲೆಡೆ ಸಂವಿಧಾನವಾದಿ, ಜಾತ್ಯತೀತ ಹಾಗೂ ಜನಪರ ಗ್ಯಾರಂಟಿ ಕಾರ್ಯಕ್ರಮಗಳ ರಾಜಕಾರಣವನ್ನು ಮುನ್ನೆಲೆಗೆ ತರಲು ಸಾಧ್ಯ. ಆದರೆ, ಆಡಳಿತ ವೈಫಲ್ಯವನ್ನು ಬಿಂಬಿಸುವಂತಹ ಹತ್ತು ಹಲವು ಕಳಂಕಗಳು ರಾಜ್ಯ ಸರ್ಕಾರಕ್ಕೆ ಮೆತ್ತಿಕೊಂಡರೆ ಆಗ ಇಂತಹ ಚರ್ಚೆಗಳಿಗೆ ಅವಕಾಶವೇ ಇರುವುದಿಲ್ಲ. ಹಾಗಾಗಿ, ಕಾಲ್ತುಳಿತದ ಘಟನೆಯು ಬಿಜೆಪಿ ಪಾಲಿಗೆ ಅನಾಯಾಸವಾಗಿ ಒದಗಿ ಬಂದಿರುವ ಅಸ್ತ್ರವಾಗಿದೆ. ಈ ಪ್ರಕರಣದಿಂದ ಬಿಜೆಪಿಗೆ ಆಗಿರುವ ಮತ್ತೊಂದು ಲಾಭವೆಂದರೆ, ಮೋದಿ ಸರ್ಕಾರ ತನ್ನ ಮೂರನೇ ಅವಧಿಯ ಮೊದಲ ವರ್ಷವನ್ನು ಮುಗಿಸಿದ್ದು ಸತತ ಹನ್ನೊಂದು ವರ್ಷಗಳ ಕಾಲ ಆಡಳಿತದಲ್ಲಿದೆ. ಸಹಜವಾಗಿಯೇ ಈ ಸಂದರ್ಭದಲ್ಲಿ ತನ್ನ ಆಡಳಿತದ ಬಗ್ಗೆ ನಡೆಯಬೇಕಿದ್ದ ಚರ್ಚೆಗಳು, ವಿಮರ್ಶೆಗಳು, ಟೀಕೆಗಳು ಕಾಲ್ತುಳಿತದಿಂದಾಗಿ ಹಳಿ ತಪ್ಪಿರುವುದು ಅದಕ್ಕೆ ಸಂತಸ ತಂದಿದೆ. ದೇಶದ ಗಮನ ಸದ್ಯಕ್ಕೆ ಕಾಲ್ತುಳಿತ ಪ್ರಕರಣದ ಮೇಲಿರುವುದರಿಂದ ಹಾಗೂ ಗೋದಿ ಮಾಧ್ಯಮಗಳ ಇದನ್ನೇ ಹಗಲಿರುಳು ಜಿಗಿಯುತ್ತಿರುವುದರಿಂದ ಮೋದಿ ಸರ್ಕಾರವು ಮತ್ತಷ್ಟು ನಿರಾಳವಾಗಿ, ನಿರಾತಂಕವಾಗಿ ತನ್ನ ವೈಭವೀಕರಣದಲ್ಲಿ ತೊಡಗುವಂತಾಗಿದೆ.
ಇದನ್ನೂ ಓದಿ ವಿಷಮ ವಿಶ್ವ | ದಕ್ಷಿಣ ಆಫ್ರಿಕಾದ ಕಪ್ಪು ಜನರ ದುರಂತ ಬದುಕುಗಳು- ತಳಬುಡವಿಲ್ಲದ ಟ್ರಂಪ್ ಬಡಬಡಿಕೆಗಳು