ಮೈಸೂರು ಜಿಲ್ಲೆ, ಹುಣಸೂರು ಪಟ್ಟಣದಲ್ಲಿ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಪ್ರೊ. ಕೃಷ್ಣಪ್ಪ ರವರ ಜಯಂತಿ ಕಾರ್ಯಕ್ರಮದಲ್ಲಿ ಪ್ರೊ. ಸಿದ್ದೇಗೌಡ ಮಾತನಾಡಿ ‘ ಪ್ರೊ. ಬಿ. ಕೃಷ್ಣಪ್ಪ ದಮನಿತರ ನಾಯಕ ‘ ಎಂದರು.
” 70 ರ ದಶಕದಲ್ಲಿ ದಸಂಸವನ್ನ ಸ್ಥಾಪನೆ ಮಾಡಿದ್ದು ಪ್ರೊ. ಕೃಷ್ಣಪ್ಪ. ದಲಿತರ ಮೇಲೆ ನಡೆಯುತ್ತಿದ್ದ ಶೋಷಣೆ, ದಬ್ಬಾಳಿಕೆ, ದೌರ್ಜನ್ಯಗಳನ್ನು ಕಣ್ಣಾರೆ ಕಂಡು ಸಮುದಾಯಗಳ ಹಕ್ಕು ಬಾದ್ಯತೆಗಳ ಬಗ್ಗೆ ಹೋರಾಟ ಮಾಡಲು ದಲಿತ ಚಳುವಳಿಯನ್ನು ಪ್ರಾರಂಭಿಸಿದರು. ರಾಜ್ಯದುದ್ದಗಲಕ್ಕೂ ಸಂಚಾರ ಮಾಡಿ ಶೋಷಣೆಗೊಳಗಾಗುತ್ತಿದ್ದ ದಲಿತರಲ್ಲಿ ಒಂದು ರೀತಿಯ ಭರವಸೆಯನ್ನು ಮೂಡಿಸಿ ಹೋರಾಟದ ಮನೋಭಾವನೆಯ ಕಿಚ್ಚನ್ನು ಹಚ್ಚಿದರು. “
ಡಾ. ಬಿ.ಆರ್. ಅಂಬೇಡ್ಕರ್ ರವರ ತತ್ವ, ಸಿದ್ಧಾಂತಗಳನ್ನು ಮೈಗೂಡಿಸಿಕೊಂಡಿದ್ದ ಇವರು ಸರ್ಕಾರಿ ಕೆಲಸದಲ್ಲಿದ್ದುಕೊಂಡು ಬರುವ ಅರ್ಧ ಸಂಬಳವನ್ನು ದಲಿತರ ಕಷ್ಟ, ದುಃಖ, ದುಮ್ಮಾನಗಳಿಗೆ ಬಳಸುತ್ತಿದ್ದರು. ಕೃಷ್ಣರಾಜ ನಗರದ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ನಾನು ಅವರ ಶಿಷ್ಯನಾಗಿದ್ದೆ. ನನಗೆ ಇದು ಹೆಮ್ಮೆಯ ವಿಷಯ. ಅವರಿಂದ ಸಾಕಷ್ಟು ವಿಚಾರಗಳನ್ನು ತಿಳಿದುಕೊಳ್ಳುವ ಸದಾವಕಾಶ ಲಭಿಸಿದ್ದು ನನ್ನ ಜೀವಿತಾವಧಿಯಲ್ಲಿ ಎಂದಿಗೂ ಮರೆಯಲಾರದ ಅನುಭವ.
ವಿದ್ಯಾರ್ಥಿ ದೆಸೆಯಲ್ಲಿ ಪ್ರಭಾವಿತನಾಗಿ ಸಾಮಾಜಿಕ ಜೀವನದ ಕಡೆಗೆ ಗಮನ ಹರಿಸಲು, ಪ್ರಗತಿಪರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಲು ಕಾರಣರಾದರು. ಕಾಲೇಜಿನಲ್ಲಿ ಉಪನ್ಯಾಸ ನೀಡಲು ನಿಂತರೆ ಇಡೀ ತರಗತಿಯೇ ನಿಶ್ಯಬ್ದವಾಗುತ್ತಿತ್ತು. ನಮಗರಿವಿಲ್ಲದಂತೆ ಅಪಾರವಾದ ಗೌರವ ಹೆಚ್ಚುತ್ತಿತ್ತು. ಶಿಸ್ತಿನ ಸಿಪಾಯಿಯಾಗಿದ್ದ ಕೃಷ್ಣಪ್ಪನವರು ನೊಂದವರ ಕಂಡರೆ ಮರುಗುತ್ತಿದ್ದರು. ಶೋಷಿತ ಸಮುದಾಯದ ಮೇಲಾಗುತಿದ್ದ ದೌರ್ಜನ್ಯ ಬಾಧಿಸುತಿತ್ತು.
ಆದರ್ಶ ವ್ಯಕ್ತಿಯಾಗಿದ್ದ ಕೃಷ್ಣಪ್ಪನವರಿಗೆ ಯಾವುದೇ ಜಾತಿ, ಧರ್ಮ, ಭಾಷೆಯ ಬೇಧವಿರಲಿಲ್ಲ. ಬಡವರು, ನೊಂದವರ ಕಂಡರೆ ಮರುಗುವ ತಾಯಿ ಹೃದಯವಿತ್ತು. ದಲಿತ ಸಮುದಾಯದವರಾಗಿ ಅಪರೂಪದಲ್ಲಿ ಅಪರೂಪದ ವ್ಯಕ್ತಿತ್ವದವರಾಗಿದ್ದರು. ಇಂತಹ ಮೇರು ವ್ಯಕ್ತಿ ನಮ್ಮ ನಡುವೆ ನಮ್ಮ ಊರಿನಲ್ಲಿ ಇದ್ದರು ಎಂದರೆ ಅದಕ್ಕಿಂತ ಹೆಮ್ಮೆಯ ವಿಚಾರ ಮತ್ತೊಂದಿರಲು ಸಾಧ್ಯವಿಲ್ಲ. ಅವರ ಒಡನಾಟ ಮೆಲಕು ಹಾಕುವ ಸಂದರ್ಭ ಒದಗಿಸಿಕೊಟ್ಟ ದಸಂಸ ಆಯೋಜಕರಿಗೆ ಆಭಾರಿ ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ಹೊಸೂರು ಕುಮಾರ್ ಮಾತನಾಡಿ ” ಪ್ರೊ. ಬಿ. ಕೃಷ್ಣಪ್ಪ ನವರು ದಲಿತ ಚಳುವಳಿಯನ್ನು ಪ್ರಾರಂಭಿಸಿದವರು. ಹಾಗೆಯೇ, ಪ್ರೊ. ನಂಜುಂಡಸ್ವಾಮಿಯವರು ರೈತ ಚಳುವಳಿಯನ್ನು ಪ್ರಾರಂಭಿಸಿದವರು. ಈ ಇಬ್ಬರು ನಾಯಕರು ರಾಜ್ಯ ಕಂಡ ಮಹಾನ್ ನಾಯಕರಾಗಿದ್ದಾರೆ. ಇವರುಗಳು ಹಾಕಿಕೊಟ್ಟ ಹೋರಾಟದ ಹಾದಿಯಲ್ಲಿ ಲಕ್ಷಾಂತರ ದಲಿತ ಮತ್ತು ರೈತ ಕಾರ್ಯಕರ್ತರು, ನಾಯಕರು ಇಂದಿಗೂ ಹೋರಾಟ ಮಾಡುತ್ತಿದ್ದಾರೆ. ಶೋಷಿತ ಸಮಾಜದ ಧ್ವನಿಯಾಗಿ ದಸಂಸ ಸಂಘಟನೆಯನ್ನು ಹುಟ್ಟು ಹಾಕಿ ಹೋರಾಟದ ಹಾದಿಯಲ್ಲಿ ಸಾಗಿದವರು. ಇಂತಹ ಮಹನೀಯರ ಹಾದಿಯಲ್ಲಿ ಎಲ್ಲರೂ ಸಾಗಬೇಕಾಗಿದೆ ” ಎಂದು ಆಶಿಸಿದರು.
ದಸಂಸ ಮುಖಂಡ ನಿಂಗರಾಜ್ ಮಲ್ಲಾಡಿ ಮಾತನಾಡಿ ‘ ಪ್ರೊ. ಬಿ. ಕೃಷ್ಣಪ್ಪ ನವರು ತಮ್ಮ ಹೋರಾಟದ ದಿನಗಳಲ್ಲಿ ದಲಿತರ ಮನೆಯಲ್ಲಿ ಹೋರಾಟದ ಹಣತೆಯನ್ನು ಹಚ್ಚಿದ್ದೇನೆ, ಅದು ಆರದಂತೆ ಕಾಪಾಡಿಕೊಳ್ಳಿ ‘ ಎಂದು ಹೇಳುತ್ತಿದ್ದರು. ಅವರ ಆಶಯದಂತೆ ನಡೆದುಕೊಳ್ಳುವುದು ನಮ್ಮೆಲ್ಲರ ಭಾಧ್ಯತೆಯಾಗಿದೆ ಎಂದರು.
ಈ ವಿಶೇಷ ವರದಿ ಓದಿದ್ದೀರಾ?ಮೈಸೂರು | 1886 ರಲ್ಲಿ ಬ್ರಿಟಿಷರೇ ನಿರ್ಮಿಸಿದ ಕನ್ನಡ ಶಾಲೆಯಲ್ಲೀಗ 600 ಕ್ಕೂ ಅಧಿಕ ಮಕ್ಕಳ ಕಲಿಕೆ
ಕಾರ್ಯಕ್ರಮದಲ್ಲಿ ಡೀಡ್ ಸಂಸ್ಥೆಯ ನಿರ್ದೇಶಕ ಶ್ರೀಕಾಂತ್, ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ನಾಗಣ್ಣ ದೇವಾಡಿಗ, ದೇವೇಂದ್ರ ಕುಳುವಾಡಿ, ಕಿರಿಜಾಜಿ ಗಜೇಂದ್ರ, ಬಲ್ಲೇನಹಳ್ಳಿ ಕೆಂಪರಾಜು, ಅಲೆಮಾರಿ ಸಂಘದ ಶೇಖರ, ಮಲ್ಲಿಕ್ ಪಾಷ, ಬಿಳಿಗೆರೆ ಸಣ್ಣಯ್ಯ, ಕಲ್ಕುಣಿಕೆ ಪಾರ್ವತಿ, ಅಲೆಮಾರಿ ಸಂಘದ ಶಿವು, ಮಲ್ಲಿಗೆ, ಶಿವಮ್ಮ, ದಾಸಪ್ಪ. ಶೋಭಮ್ಮ ಸೇರಿದಂತೆ ಹಲವರು ಇದ್ದರು.