ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ದುರಂತದಿಂದ ಸಾವನ್ನಪ್ಪಿದ ಹುಣಸಗಿ ತಾಲ್ಲೂಕಿನ ಹೊನಗೇರಾದ ಶಿವಲಿಂಗ ಕುಂಬಾರ್ ಕುಟುಂಬಕ್ಕೆ ಸೋಮವಾರ ಜಿಲ್ಲಾಡಳಿತ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ₹25 ಲಕ್ಷ ಮೊತ್ತದ ಚೆಕ್ ವಿತರಿಸಿದರು.
ಮೃತ ಶಿವಲಿಂಗನ ತಂದೆ ಚಂದಪ್ಪ, ತಾಯಿ ಲಕ್ಷ್ಮೀ, ಅಣ್ಣ ಹೊನ್ನಪ್ಪ ಅವರೊಂದಿಗೆ ಸಚಿವರು ಮಾತನಾಡಿ, ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ʼಮಗನ ಜೀವ ತಂದುಕೊಡಲು ಯಾರಿಂದಲೂ ಸಾಧ್ಯವಿಲ್ಲ. ಇನ್ನೊಬ್ಬ ಮಗ ಹೊನ್ನಪ್ಪನಲ್ಲಿಯೇ ಶಿವಲಿಂಗನನ್ನು ಕಾಣುವ ಮೂಲಕ ನೆಮ್ಮದಿ ಜೀವನ ನಡೆಸಿ. ಹಣದ ಸದ್ಬಳಕೆ ಮಾಡಿಕೊಳ್ಳಿ. ನಿಮ್ಮ ಇನ್ನೊಬ್ಬ ಮಗನಿಗೆ ಇಲ್ಲಿನ ವೈದ್ಯಕೀಯ ಕಾಲೇಜಿನಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನೌಕರಿ ಕೊಡಿಸಲಾಗುವುದುʼ ಎಂದು ಭರವಸೆ ನೀಡಿದರು.
ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ, ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ಜಿಲ್ಲಾಧಿಕಾರಿ ಡಾ.ಸುಶೀಲಾ, ಹೆಚ್ಚುವರಿ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ, ಉಪವಿಭಾಗಾಧಿಕಾರಿ ಹಂಪಣ್ಣ ಸಜ್ಜನ್ ಉಪಸ್ಥಿತರಿದ್ದರು.
ಇದನ್ನೂ ಓದಿ : ವಿಜಯನಗರ | ಜಮೀನಿಗೆ ತೆರಳಿದ ವೇಳೆ ಸಿಡಿಲು ಬಡಿದು ಯುವಕ ಸಾವು