ಈ ದಿನ ಸಂಪಾದಕೀಯ | ಅಪಾಯಕಾರಿ ಪ್ಲಾಸ್ಟಿಕ್: ಮನ್ಸೂರ್ ಮಾತುಗಳನ್ನು ಸರ್ಕಾರ-ಜನ ಆಲಿಸುವರೇ?

Date:

Advertisements
ಜೀವಸಂಕುಲ ಪೊರೆಯುವ ಪರಿಸರವನ್ನು ಉಳಿಸದಿದ್ದರೆ, ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕದಿದ್ದರೆ, ನಮ್ಮ ಮುಂದಿನ ಪೀಳಿಗೆ ಸರಾಗವಾಗಿ ಉಸಿರಾಡುವುದಕ್ಕೂ ಕಷ್ಟವಾಗಲಿದೆ ಎಂಬ ಸತ್ಯವನ್ನು ಸರ್ಕಾರ ಮತ್ತು ಜನ ಅರಿಯಬೇಕಿದೆ.

ಜೂನ್ ಬಂತೆಂದರೆ, ಆಳುವ ಸರ್ಕಾರಗಳಿಗೆ ಪರಿಸರ ದಿನ ನೆನಪಾಗುತ್ತದೆ. ಪರಿಸರ ಇಲಾಖೆಯ ವತಿಯಿಂದ ಜೂ. 5ರಂದು ಕಾರ್ಯಕ್ರಮ ಆಯೋಜಿಸಿ, ಒಂದಷ್ಟು ಘೋಷಣೆಗಳನ್ನು ಮೊಳಗಿಸಿ, ಮಕ್ಕಳು-ಮುದುಕರಿಂದ ಗಿಡ ನೆಡಿಸಿ, ಸುದ್ದಿ ಮಾಡಿ ಕೈ ತೊಳೆದುಕೊಳ್ಳುತ್ತಾರೆ. ಆದರೆ, ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮತ್ತದೇ ಉದಾಸೀನತೆ ಮುಂದುವರೆಯುತ್ತದೆ.

ಇವುಗಳ ನಡುವೆಯೇ ಜಾಗತಿಕ ಮಟ್ಟದಲ್ಲಿ ‘ಪ್ಲಾಸ್ಟಿಕ್ ಮಾಲಿನ್ಯಕ್ಕೆ ಅಂತ್ಯ ಹಾಡುವುದು’ ಈ ಬಾರಿಯ ವಿಶ್ವ ಪರಿಸರ ದಿನದ ಮುಖ್ಯ ವಿಷಯವಾಗಿದೆ. ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟ್ ಪ್ರೋಗ್ರಾಮ್(UNEP) ನೇತೃತ್ವದಲ್ಲಿ #BeatPlasticPollution ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.

ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ಮಾಲಿನ್ಯಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜುಲೈ 1, 2022ರಿಂದ ಜಾರಿಗೆ ಬರುವಂತೆ ಆಯ್ದ 19 ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ವಿತರಣೆ, ದಾಸ್ತಾನು, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದೆ.

Advertisements

ಹಾಗೆಯೇ ರಾಜ್ಯ ಸರ್ಕಾರ ಕೂಡ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದೆ. ಕಳೆದ ಫೆಬ್ರವರಿಯಲ್ಲಿ ಪ್ಲಾಸ್ಟಿಕ್‌ ವಸ್ತುಗಳ ಅತಿಯಾದ ಬಳಕೆಯಿಂದ ಆರೋಗ್ಯ ಮತ್ತು ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ತಡೆಯುವ ದೃಷ್ಟಿಯಿಂದ ಸರ್ಕಾರಿ ಸಭೆ-ಸಮಾರಂಭಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಬಾಟಲ್ ನೀರಿನ ಬಳಕೆ/ಸರಬರಾಜು ಮಾಡುವುದನ್ನು ನಿಷೇಧಿಸಿದೆ.

ಅದರ ಮುಂದುವರೆದ ಭಾಗವಾಗಿ ಮಾರ್ಚ್ 2025ರಿಂದ ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ನಿಷೇಧಿಸಿದೆ. ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿರುವುದು ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ಸಕಾಲಿಕ ಕ್ರಮವಾಗಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ರೌಡಿಶೀಟರ್ ಸುಹಾಸ್ ಹತ್ಯೆ ತನಿಖೆಗೆ ಎನ್‌ಐಎ ಪ್ರವೇಶ: ಸಮಾಜಕ್ಕೆ ಕೊಟ್ಟ ಸಂದೇಶವೇನು?

ಹಾಗೆಯೇ ಸದ್ಯ ಬಳಕೆಯಾಗುತ್ತಿರುವ ಪಾಲಿಥಿನ್ ಪೊಟ್ಟಣಗಳ ಬದಲಿಗೆ ಜೈವಿಕವಾಗಿ ವಿಘಟನೆಯಾಗುವ (ಬಯೋ ಡಿಗ್ರೇಡಬಲ್) ಪ್ಲಾಸ್ಟಿಕ್ ಪೊಟ್ಟಣದಲ್ಲಿ ನಂದಿನಿ ಹಾಲಿನ ಪೂರೈಕೆಯನ್ನು ಬಮೂಲ್ ಆರಂಭಿಸಿದೆ. ಜೊತೆಗೆ ರಾಜ್ಯದ ದೇವಸ್ಥಾನಗಳಲ್ಲಿ ಆಗಸ್ಟ್ 15ರಿಂದ ನೀರಿನ ಬಾಟಲ್ ಸೇರಿ ಎಲ್ಲ ರೀತಿಯ ಪ್ಲಾಸ್ಟಿಕ್‌ಗಳ ಬಳಕೆ ನಿಷೇಧಿಸಲಾಗುವುದು ಎಂದು ಮುಜರಾಯಿ ಇಲಾಖೆ ಸುತ್ತೋಲೆ ಹೊರಡಿಸಿದೆ.

ಸರ್ಕಾರಗಳ ಕಡೆಯಿಂದ ಕಾಲಕಾಲಕ್ಕೆ ನಿಷೇಧ ಹೇರುವ ಕ್ರಮಗಳಾಗುತ್ತಿವೆ. ಆದರೆ, ನಿಷೇಧ ಎನ್ನುವುದು ಕೇವಲ ಬಾಯಿ ಉಪಚಾರದ ಮಾತಾಗದೆ ಕೃತಿಗೆ ಇಳಿಯಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜೊತೆಗೆ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಕುರಿತು ವ್ಯಾಪಕವಾಗಿ ಜಾಗೃತಿ ಮೂಡಿಸುವ ಕೆಲಸವೂ ಆಗಬೇಕು. ಜನರೂ ಅಷ್ಟೆ, ಪ್ಲಾಸ್ಟಿಕ್ ಎನ್ನುವುದು ವಿಷ, ಅದು ಮಣ್ಣಿನಲ್ಲಿ ಕರಗಲು ಕನಿಷ್ಠ 500 ವರ್ಷಗಳು ಬೇಕು, ಅದರಿಂದ ಎಷ್ಟೆಲ್ಲ ಅನಾಹುತ ಆಗುತ್ತದೆ ಎನ್ನುವುದು ಗೊತ್ತಿದ್ದರೂ ಕುರುಡಾಗಿ ಅದರ ಬೆನ್ನುಬೀಳುವ ಪ್ರವೃತ್ತಿಯನ್ನು ಬಿಡಬೇಕು.

ಇತ್ತೀಚಿನ ವರ್ಷಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಎನ್ನುವುದು ಅವಿಭಾಜ್ಯ ಅಂಗ ಎನ್ನುವಂತೆ ನಮ್ಮನ್ನು ಆವರಿಸಿಬಿಟ್ಟಿದೆ. ನಮ್ಮ ಅಗತ್ಯತೆಗಳಿಗೆ ತಕ್ಕಂತೆ ಪ್ಲಾಸ್ಟಿಕ್‌ ಹೊಂದಾಣಿಕೆಯಾಗುತ್ತ ಹೋಗುವುದರಿಂದ ಮತ್ತು ಒದಗಿ ಬರುವುದರಿಂದ ಅದರ ಬಳಕೆಯಿಂದಾಗುವ ಸಾಧಕ–ಬಾಧಕಗಳ ಕುರಿತು ತಲೆ ಕೆಡಿಸಿಕೊಳ್ಳದೆ ಉಪಯೋಗಿಸುತ್ತಿದ್ದೇವೆ. ವರ್ತಮಾನದಲ್ಲಿ ಹೆಚ್ಚು ಆರಾಮವನ್ನು ಕಳಪೆ ಪ್ಲಾಸ್ಟಿಕ್‌ನ ಸೌಲಭ್ಯಗಳು ನೀಡಿದರೂ ಭವಿಷ್ಯದಲ್ಲಿ ಗಂಡಾಂತರಕ್ಕೆ ದಾರಿ ತೆರೆಯಬಹುದು ಎಂಬ ಅರಿವನ್ನು ಸದಾ ಹೊಂದಿರಬೇಕು.

‘ಒಂದು ಟನ್ ಪೇಪರ್ ತಯಾರಿಸಲು 17 ಮರಗಳನ್ನು ಕತ್ತರಿಸಬೇಕು. ಮರ ಇಲ್ಲ ಅಂದರೆ ಸ್ವಚ್ಛಗಾಳಿ ಇಲ್ಲ, ಮಳೆ ಇಲ್ಲ, ನೀರು-ನೆರಳಿಲ್ಲ. ಹೂವು, ಹಣ್ಣು, ಹಸಿರಿಲ್ಲ. ಅದರ ಮೇಲೆ ಕೂತು ಆಡುವ ಪ್ರಾಣಿ ಪಕ್ಷಿಗಳಿಲ್ಲ. ಕ್ರಿಮಿ ಕೀಟಗಳಿಲ್ಲ. ಅವೆಲ್ಲ ಇಲ್ಲವೆಂದ ಮೇಲೆ ನಮ್ಮ ಬದುಕೂ ಇಲ್ಲ. ಈ ಜೀವನಚಕ್ರವನ್ನು ಪ್ರತಿಯೊಬ್ಬರೂ ಅರಿತರೆ, ನಮ್ಮ ಸುತ್ತಣ ಪರಿಸರವನ್ನು ಕಾಪಾಡಿಕೊಂಡರೆ, ಮುಂದಿನ ತಲೆಮಾರು ಕೊಂಚ ನೆಮ್ಮದಿಯಾಗಿ ಬದುಕಬಹುದು’ ಎನ್ನುತ್ತಾರೆ ಒಣ ಕಸ ಸಂಗ್ರಹಿಸುವ ಸಮಾಜ ವಿಜ್ಞಾನಿ ಮನ್ಸೂರ್ ಗೌಸ್.

ಮನ್ಸೂರ್ ಓದು ಬರಹ ಬಲ್ಲವರಲ್ಲ. ಶಾಲೆ-ಕಾಲೇಜಿಗಳ ಮೆಟ್ಟಿಲು ಕೂಡ ಕಂಡವರಲ್ಲ. ಆದರೆ, ಬಾಲ್ಯದಿಂದಲೇ ಕಸ ಸಂಗ್ರಹಿಸುವ ಕೆಲಸದಲ್ಲಿ ಪಿಎಚ್.ಡಿ ಪಡೆದವರು. ಪರಿಸರದ ಬಗ್ಗೆ ವಿಜ್ಞಾನಿಯಂತೆ ವಿದ್ವತ್ಪೂರ್ಣವಾಗಿ ಮಾತನಾಡಬಲ್ಲವರು. ಪ್ಲಾಸ್ಟಿಕ್‌ನಿಂದ ಆಗುವ ಅನಾಹುತಗಳ ಕುರಿತು ಹೊರದೇಶಗಳಲ್ಲಿ ವಿಚಾರ ಮಂಡನೆ ಮಾಡಿದವರು. ‘ನೀವು ಹಾಕಿರೋ ಶರ್ಟಿನಲ್ಲಿರುವ ಬಟನ್, ಜೇಬಿನಲ್ಲಿರುವ ಪೆನ್, ಬಾಚಣಿಗೆ, ಬೆಲ್ಟ್, ಚಪ್ಪಲಿ, ಶೂಸ್, ವಾಟರ್ ಬಾಟಲ್ ಎಲ್ಲವೂ ಪ್ಲಾಸ್ಟಿಕ್. 50 ಗ್ರಾಂ ಸಾಸಿವೆಯಿಂದ ಹಿಡಿದು 5 ಕೆಜಿ ಆಶೀರ್ವಾದ್ ಗೋಧಿ ಹಿಟ್ಟಿನವರೆಗೆ; ಬೆಳಗ್ಗೆ ಎದ್ದ ತಕ್ಷಣ ಹಲ್ಲುಜ್ಜುವ ಬ್ರೆಷ್‌ನಿಂದ ಹಿಡಿದು ರಾತ್ರಿ ಮಲಗಲು ಬಲ್ಬ್ ಆರಿಸುವ ಸ್ವಿಚ್‌ವರೆಗೆ ಪ್ಲಾಸ್ಟಿಕ್ ನಮ್ಮ ಬದುಕಿನೊಂದಿಗೆ ಬೆರೆತುಹೋಗಿದೆ. ನಿಷೇಧ ಕಷ್ಟ. ಬದಲಿಗೆ ಬಳಸಿದ ನಂತರ ಅದನ್ನು ಎಲ್ಲೆಂದರಲ್ಲಿ ಎಸೆಯದೆ, ಕಸಸಂಗ್ರಹಿಸುವವರಿಗೆ ನೀಡಿದರೆ; ಅವರು ಅದನ್ನು ವಿಂಗಡಿಸಿ, ಮರುಬಳಕೆ ಘಟಕಗಳಿಗೆ ತಲುಪಿಸಿದರೆ; ಅದು ಉಪಉತ್ಪನ್ನವಾಗಿ ಬಳಕೆಗೆ ಬರುತ್ತದೆ. ಹಾಗೆ ಮಾಡದಿದ್ದರೆ, ಪರಿಸರಕ್ಕೆ ಮಾರಕ ಮತ್ತು ನರಕ’ ಎಂದು ತಿಳಿಹೇಳುತ್ತಾರೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ‘ಮೋದಿ ಶರಣಾಗಿದ್ದಾರೆ’ ಎಂಬ ರಾಹುಲ್ ಹೇಳಿಕೆಯು ಹಲವು ಪ್ರಶ್ನೆಗಳನ್ನು ಎತ್ತುತ್ತದೆ   

ಮುಂದುವರೆದು, ‘ಸರಕಾರವೇ ಮುಂದೆ ನಿಂತು ಈ ಕಸ ವಿಂಗಡಣೆ, ರೀಸೈಕ್ಲಿಂಗ್ ಪ್ಲಾಂಟ್, ಮಾರ್ಕೆಟಿಂಗ್ ಮಾಡುವಂತಾದರೆ, ಸಾವಿರಾರು ಜನಕ್ಕೆ ಉದ್ಯೋಗ ಕೊಡಬಹುದು. ವ್ಯಾಪಾರ ವಹಿವಾಟು ಕ್ಷೇತ್ರವನ್ನು ವಿಸ್ತರಿಸಬಹುದು. ಜನರ- ಸರಕಾರದ ಆದಾಯ ಹೆಚ್ಚಾಗಿ ಆರ್ಥಿಕ ಸ್ಥಿತಿ ಸುಧಾರಿಸಬಹುದು’ ಎಂದು ಅರ್ಥಶಾಸ್ತ್ರಜ್ಞರಂತೆಯೂ ಮಾತನಾಡುತ್ತಾರೆ.

ತ್ಯಾಜ್ಯ ಜೀವಿ ಮನ್ಸೂರ್ ಮಾತುಗಳನ್ನು ಆಳುವ ಸರ್ಕಾರ ಮತ್ತು ಜನ ಆಲಿಸಬೇಕಾಗಿದೆ. ಆ ಜವಾಬ್ದಾರಿ ನಮ್ಮದೇ ಎಂದು ಅರಿತು ಅಳವಡಿಸಿಕೊಳ್ಳಬೇಕಿದೆ. ಜೀವಸಂಕುಲ ಪೊರೆಯುವ ಪರಿಸರವನ್ನು ಉಳಿಸದಿದ್ದರೆ, ನಮ್ಮ ಮುಂದಿನ ಪೀಳಿಗೆ ಸರಾಗವಾಗಿ ಉಸಿರಾಡುವುದಕ್ಕೂ ಕಷ್ಟವಾಗಲಿದೆ ಎಂಬ ಸತ್ಯವನ್ನು ಅರಿಯಬೇಕಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X