ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ್ದ ಕಾಲ್ತುಳಿತ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಗೃಹ ಸಚಿವ ಜಿ ಪರಮೇಶ್ವರ್ ಅವರೇ ಎ1, ಎ2 ಹಾಗೂ ಎ3 ಆರೋಪಿಗಳು. ಅವರ ವೈಫಲ್ಯ ಮತ್ತು ಲೋಪವನ್ನು ಮುಚ್ಚಿಕೊಳ್ಳಲು ಅಧಿಕಾರಿಗಳ ತಲೆದಂಡವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆರೋಪಿಸಿದ್ದಾರೆ. ಸರ್ಕಾರದ ವಿರುದ್ಧ ಜೂನ್ 13ರಂದು ಬೆಂಗಳೂರಿನಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ವಿಜಯೇಂದ್ರ, ಸರ್ಕಾರಕ್ಕೆ ಬಹಿರಂಗ ಪತ್ರ ಬರೆದಿರುವುದಾಗಿ ಹೇಳಿದ್ದಾರೆ. ಪತ್ರವನ್ನು ಪ್ರದರ್ಶಿಸಿದ್ದಾರೆ. ಪತ್ರದಲ್ಲಿ, “ರಾಜ್ಯದ ಇತಿಹಾಸದಲ್ಲಿಯೇ ಜೂನ್ 4 ಕರಾಳ ದಿನವಾಗಿ ಗುರುತಾಗಿದೆ. ಈ ದುರಂತ ಘಟನೆ ಸಂಬಂಧಿ ನೈತಿಕ ಹೊಣೆಹೊತ್ತು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ರಾಜೀನಾಮೆ ನೀಡಬೇಕು. ಆತ್ಮಾವಲೋಕನ ಮಾಡಿಕೊಳ್ಳಬೇಕು” ಎಂದು ಆಗ್ರಹಿಸಿರುವುದಾಗಿ ತಿಳಿಸಿದ್ದಾರೆ.
ಈ ವರದಿ ಓದಿದ್ದೀರಾ?: ಐಪಿಎಲ್‌ನಲ್ಲಿದೆ ಜನ ಮನಸ್ಥಿತಿಯ ಪ್ರತಿಬಿಂಬ: ಸಚಿನ್, ಧೋನಿ, ಕೊಹ್ಲಿ ಸ್ಟಾರ್ ಆಗಿದ್ದೂ ಹೀಗೆ…!
“ಕಾಲ್ತುಳಿತ ಪ್ರಕರಣದಿಂ ಸರ್ಕಾರವು ನುಣುಚಿಕೊಳ್ಳಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸುತ್ತಿದೆ. ಸರ್ಕಾರಕ್ಕೆ ಗೌರವ-ಘಟನೆ ಇದ್ದರೆ, ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಆರ್‌ಸಿಬಿ ಗೆಲುವು ಮತ್ತು ಅದರ ಜನಪ್ರಿಯತೆಯಿಂದ ತಮ್ಮ ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳಲು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಪೈಪೋಟಿಗೆ ಇಳಿದು, ಕಾರ್ಯಕ್ರಮ ಆಯೋಜಿಸಿದರು” ಎಂದು ಆರೋಪಿಸಿದ್ದಾರೆ.
“ರಾಜಕೀಯವಾಗಿ ಲಾಭ ಪಡೆಯಲು ನಡೆಸಿದ ಆತುರದ ಕಾರ್ಯಕ್ರಮದಿಂದ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿದೆ. ಅಲ್ಲದೆ, ಕಾರ್ಯಕ್ರಮದ ಆಯೋಜನೆಯನ್ನು ವಿಧಾನಸೌಧದ ಬಳಿ ಒಬ್ಬರು, ಕ್ರಿಡಾಂಗಣದಲ್ಲಿ ಒಬ್ಬರು ಆಯೋಜಿಸುವ ಜವಾಬ್ದಾರಿ ತೆಗೆದುಕೊಂಡಿದ್ದರು. ಹೀಗಾಗಿಯೇ, ‘ಕ್ರೀಡಾಂಗಣದಲ್ಲಿ ನಡೆದ ದುರ್ಘಟನೆಗೆ ನಾನು ಜವಾಬ್ದಾರನಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆ ಮೂಲಕ ಡಿ.ಕೆ ಶಿವಕುಮಾರ್ ಎಡೆಗೆ ಬೆಟ್ಟು ಮಾಡಿ ತೋರಿಸುತ್ತಿದ್ದಾರೆ” ಎಂದು ವಿಶ್ಲೇಷಿಸಿದ್ದಾರೆ.
ಈ ವರದಿ ಓದಿದ್ದೀರಾ?: ಅಪ್ರಾಪ್ತ ಮಗಳನ್ನೇ ಅತ್ಯಾಚಾರಿಗಳಿಗೆ ಒಪ್ಪಿಸಿದ್ದ ಬಿಜೆಪಿ ಮುಖಂಡೆ! ʼಶಿಸ್ತಿನ ಪಕ್ಷʼದಲ್ಲಿ ಹೀಗೇಕೆ?
“ದುರ್ಘಟನೆಯ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹಸಚಿವರು ರಾಜೀನಾಮೆ ನೀಡಬೇಕು. ರಾಜೀನಾಮೆಯ ಬೇಡಿಕೆಗೆ ಸ್ಪಂದಿಸಬೇಕು. ಇಲ್ಲದಿದ್ದರೆ, ಸರ್ಕಾರವನ್ನು ಕಿತ್ತು ಹಾಕುವ ಕರೆಯೊಂದಿಗೆ ಜೂನ್ 13ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಲಿದೆ” ಎಂದು ತಿಳಿಸಿದ್ದಾರೆ.