ಗಾಜಾಕ್ಕೆ ನೆರವು ಸಾಮಗ್ರಿಗಳನ್ನು ಹೊತ್ತು ತೆರಳಿದ್ದ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್ ಮತ್ತು ಇತರರು ಇದ್ದ ದೊಡ್ಡ ದೋಣಿಯನ್ನು ಇಸ್ರೇಲ್ ವಶಕ್ಕೆ ಪಡೆದಿದೆ. ಇದಾದ ಒಂದು ದಿನದಲ್ಲೇ ಗ್ರೆಟಾ ಥನ್‌ಬರ್ಗ್ ಅವರನ್ನು ಮಂಗಳವಾರ ಇಸ್ರೇಲ್‌ನಿಂದ ಗಡಿಪಾರು ಮಾಡಲಾಗಿದೆ
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಇಸ್ರೇಲ್ ವಿದೇಶಾಂಗ ಸಚಿವಾಲಯ, ವಿಮಾನದಲ್ಲಿರುವ ಥನ್‌ಬರ್ಗ್ ಅವರ ಫೋಟೋವನ್ನು ಹಂಚಿಕೊಂಡಿದೆ. “ಗ್ರೆಟಾ ಥನ್‌ಬರ್ಗ್ ಗಡಿಪಾರಾಗಿದ್ದಾರೆ. ಇಸ್ರೇಲ್‌ನಿಂದ ಹೊರಟಿರುವ ಅವರು ಫ್ರಾನ್ಸ್ ಮೂಲಕ ಸ್ವೀಡನ್‌ಗೆ ತೆರಳಲಿದ್ದಾರೆ” ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನು ಓದಿದ್ದೀರಾ? ನಾವಿರುವ ದೊಡ್ಡ ದೋಣಿಯನ್ನು ಇಸ್ರೇಲ್ ಅಪಹರಿಸಿದೆ: ಪರಿಸರ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್
ಥನ್‌ಬರ್ಗ್ ಮತ್ತು ಇತರ ಕಾರ್ಯಕರ್ತರನ್ನು ಪ್ರತಿನಿಧಿಸುವ ಇಸ್ರೇಲ್‌ನಲ್ಲಿರುವ ಕಾನೂನು ಹಕ್ಕುಗಳ ಗುಂಪು ಅದಾಲಾ, ಥನ್‌ಬರ್ಗ್, ಇತರ ಇಬ್ಬರು ಕಾರ್ಯಕರ್ತರು ಮತ್ತು ಪತ್ರಕರ್ತೆಯೊಬ್ಬರು ಗಡಿಪಾರು ಮತ್ತು ಇಸ್ರೇಲ್ ಅನ್ನು ತೊರೆಯಲು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಹಾಗೆಯೇ ಇತರರು ಗಡಿಪಾರು ನಿರಾಕರಿಸಿದ್ದು ಅವರನ್ನು ಬಂಧನದಲ್ಲಿಡಲಾಗಿದೆ. ಅವರ ಪ್ರಕರಣವನ್ನು ಇಸ್ರೇಲಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಲಿದ್ದಾರೆ ಎಂದು ಅದಾಲಾ ಹೇಳಿದೆ.
Greta Thunberg just departed Israel on a flight to Sweden (via France). pic.twitter.com/kWrI9KVoqX
— Israel Foreign Ministry (@IsraelMFA) June 10, 2025
ಯುದ್ಧದಿಂದ ಹಾನಿಗೊಳಗಾದ ಗಾಜಾದಲ್ಲಿರುವ ಜನರಿಗೆ ಸಹಾಯವನ್ನು ಸಾಗಿಸುವ ದೊಡ್ಡ ದೋಣಿ ಮೂಲಕ ಗ್ರೆಟಾ ಥನ್‌ಬರ್ಗ್ ಸೇರಿ 12 ಅಂತಾರಾಷ್ಟ್ರೀಯ ಕಾರ್ಯಕರ್ತರು ಹೊರಟಿದ್ದರು. ಗ್ರೆಟಾ ಮಾತ್ರವಲ್ಲದೇ ಈ ದೊಡ್ಡ ದೋಣಿಯಲ್ಲಿ ಮಾನವ ಹಕ್ಕು ಹೋರಾಟಗಾರ್ತಿ ರಿಮಾ ಹಸನ್, ಸಾಮಾಜಿಕ ಕಾರ್ಯಕರ್ತರಾದ ರೇವಾ ವಿಯಾರ್ಡ್, ಬ್ಯಾಪ್ಟಿಸ್ಟ್ ಆಂಡ್ರೆ, ಪ್ಯಾಸ್ಕಲ್ ರೇಮಂಡ್ ಮೌರಿಯರಾಸ್, ಯಾನಿಸ್ ಮಹಮ್ಡಿ(ಇವರೆಲ್ಲರೂ ಫ್ರಾನ್ಸ್‌ನವರು), ಸೆರ್ಗಿಯೊ ಟೊರಿಬಿಯೊ (ಸ್ಪೇನ್), ಮಾರ್ಕ್ ವ್ಯಾನ್ ರೆನ್ನೆಸ್ (ಡೆನ್ಮಾರ್ಕ್), ಹುಸೇಯಿನ್ ಶುಯೆಬ್ ಒರ್ಡು (ಟರ್ಕಿ), ಯಾಸೆಮಿನ್ ಅಕಾರ್ (ಜರ್ಮನಿ), ಮತ್ತು ಥಿಯಾಗೊ ಅವಿಲಾ (ಬ್ರೆಜಿಲ್) ಇದ್ದರು.
ಆದರೆ ಈ ದೊಡ್ಡ ದೋಣೆಯನ್ನು ಇಸ್ರೇಲಿ ನೌಕಾ ಪಡೆಗಳು ಸೋಮವಾರ ಮುಂಜಾನೆ ಗಾಜಾದ ಕರಾವಳಿಯಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿ ವಶಕ್ಕೆ ಪಡೆದಿದೆ. ಈ ಬೆನ್ನಲ್ಲೇ “ನಾವಿರುವ ದೊಡ್ಡ ದೋಣಿಯನ್ನು ಇಸ್ರೇಲ್ ಅಪಹರಿಸಿದೆ” ಎಂದು ಗ್ರೆಟಾ ಹೇಳಿದ್ದರು. ಆದರೆ ಇಸ್ರೇಲ್ ಈ ಆರೋಪವನ್ನು ಅಲ್ಲಗಳೆದು “ದೊಡ್ಡ ದೋಣಿ ಸುರಕ್ಷಿತವಾಗಿ ಇಸ್ರೇಲ್ ತೀರಕ್ಕೆ ತಲುಪಿದೆ. ಅವರು(ಕಾರ್ಯಕರ್ತರು) ತಮ್ಮ ತಮ್ಮ ದೇಶಗಳಿಗೆ ಮರಳುವ ನಿರೀಕ್ಷೆಯಿದೆ” ಎಂದು ಇಸ್ರೇಲ್ ಹೇಳಿತ್ತು. ಇದೀಗ ಗ್ರೆಟಾ ಗಡಿಪಾರು ಮಾಡಲಾಗಿದೆ.
