- ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 15 ರಂದು ನಡೆಯಲಿದೆ
- ಕುಟುಂಬದವರು ಚೌಕಾಸಿ ಮಾಡಿದ ಬಳಿಕ ₹11 ಸಾವಿರ ಪಡೆಯಲು ಒಪ್ಪಿದ ವೈದ್ಯ
ಬೆಂಗಳೂರಿನ ಯಲಹಂಕದ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಬಡ ಗರ್ಭಿಣಿ ಮಹಿಳೆಗೆ ಸಿಸೇರಿಯನ್ ಮಾಡಲು ವೈದ್ಯರು ₹15,000 ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಆಸ್ಪತ್ರೆಯಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಅವರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಆಸ್ಪತ್ರೆಯ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ಮುಖ್ಯಸ್ಥ ಡಾ ರಾಮಚಂದ್ರ ಅವರು ಗರ್ಭಿಣಿ ಮಹಿಳೆಗೆ ಸಿಸೇರಿಯನ್ ಮಾಡಲು ವಾರ್ಡ್ ಬಾಯ್ ಮೂಲಕ ₹15,000 ಲಂಚದ ಬೇಡಿಕೆ ಇಟ್ಟಿದ್ದರು. ಕುಟುಂಬದವರು ಚೌಕಾಸಿ ಮಾಡಿದ ಬಳಿಕ ₹11 ಸಾವಿರ ಪಡೆಯಲು ಒಪ್ಪಿಕೊಂಡಿದ್ದರು.
ಮಂಜುಳಾ ಎಂಬ ಮಹಿಳೆಗೆ ಸಿಸೇರಿಯನ್ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಲೋಕಾಯುಕ್ತಕ್ಕೆ ಶನಿವಾರ ದೂರು ಬಂದಿತ್ತು. ಲೋಕಾಯುಕ್ತ ಪೊಲೀಸರು ಮಂಗಳವಾರ ಪರಿಶೀಲನೆಗೆ ತೆರಳುವಾಗಲೇ ವೈದ್ಯರು ಗರ್ಭಿಣಿ ಮಹಿಳೆಯ ಪತಿಯಿಂದ ₹10,000 ಪಡೆದಿದ್ದರು.
ಆಸ್ಪತ್ರೆಯ ವಾರ್ಡ್‌ಬಾಯ್ ಲೋಕಾಯುಕ್ತ ಪೊಲೀಸರ ಎದುರು ಹಣ ಪಡೆದಿರುವ ಬಗ್ಗೆ ಒಪ್ಪಿಕೊಂಡಿದ್ದನು. ನಂತರ ಆಸ್ಪತ್ರೆಯ ಪ್ರಸೂತಿ ತಜ್ಞ ಡಾ ರಾಮಚಂದ್ರ ಜತೆ ವಾರ್ಡ್ ಬಾಯ್ ಹಣ ಪಡೆದಿರುವ ಬಗ್ಗೆ ತನಿಖಾ ತಂಡದ ಎದುರು ಮೊಬೈಲ್‌ನಲ್ಲಿ ಮಾತನಾಡಿದ್ದರು.
ಬೆಂಗಳೂರು ನಗರ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಕುಮಾರ್ ಕೆ ಎಂ ಅವರು ವಿಚಾರಣೆ ನಡೆಸುವ ವೇಳೆ, ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳು ಕಾಣೆಯಾಗಿರುವುದು ಕಂಡುಬಂದಿದೆ.
“ಆಸ್ಪತ್ರೆಯಲ್ಲಿ ರೋಗಿಗಳಿಗೆ ಶುದ್ಧವಾದ ಬೆಡ್‌ಶೀಟ್‌ಗಳು ಇಲ್ಲ, ಉತ್ತಮ ಆಹಾರ ಅಥವಾ ಔಷಧಿಗಳನ್ನು ಒದಗಿಸಲಾಗಿಲ್ಲ. ವೈದ್ಯರು ಕರ್ತವ್ಯದ ಸಮಯದಲ್ಲಿ ಹಾಜರಾಗಿ ರೋಗಿಗಳಿಗೆ ಚಿಕಿತ್ಸೆ ಒದಗಿಸುತ್ತಿಲ್ಲ. ಸಿಬ್ಬಂದಿ ಅವರ ಇಚ್ಛೆಯಂತೆ ಕೆಲಸಕ್ಕೆ ಹಾಜರಾಗುತ್ತಿದ್ದಾರೆ” ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಆಸ್ಪತ್ರೆಯ ಸಮರ್ಪಕ ನಿರ್ವಹಣೆ ಹಾಗೂ ಲೋಪದೋಷಗಳನ್ನು ನಿವಾರಿಸುವಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ) ಮತ್ತು ಮುಖ್ಯ ವೈದ್ಯಾಧಿಕಾರಿ ನಿರ್ಲಕ್ಷ್ಯ ವಹಿಸಿರುವುದು ವಿಚಾರಣೆಯಿಂದ ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಹಂತ ಹಂತವಾಗಿ ರಾಜಕಾಲುವೆ ಒತ್ತುವರಿ ತೆರವು: ತುಷಾರ್ ಗಿರಿನಾಥ್
ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿರುವ ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಆಯುಕ್ತರು, ನಿರ್ದೇಶಕರು, ಬೆಂಗಳೂರು ನಗರ ಆರೋಗ್ಯಾಧಿಕಾರಿ, ಯಲಹಂಕ ಸಾರ್ವಜನಿಕ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಹಾಗೂ ಡಾ ರಾಮಚಂದ್ರ ಅವರಿಗೆ ನೋಟಿಸ್ ಜಾರಿಗೆ ಆದೇಶಿಸಿದ್ದಾರೆ.
ಆಸ್ಪತ್ರೆಯ ನ್ಯೂನತೆಗಳನ್ನು ಪರಿಹರಿಸಿ, ನಾಲ್ಕು ವಾರದಲ್ಲಿ ವರದಿ ನೀಡಬೇಕು ಎಂದು ಲೋಕಾಯುಕ್ತರು ತಿಳಿಸಿದ್ದಾರೆ.
ಈ ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 15 ರಂದು ನಡೆಯಲಿದೆ.