ತಾಯಿ ಮತ್ತು ಮಗಳ ಮೃತದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕತ್ತನಹಳ್ಳಿಯಲ್ಲಿ ನಡೆದಿದೆ. ಸಿಇಟಿಯಲ್ಲಿ ಮಗಳಿಗೆ ಕಡಿಮೆ ಅಂಕ ಬಂದ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಮೃತರನ್ನು ಮಹದೇವಮ್ಮ (40) ಮತ್ತು ಮಗಳು ಪ್ರಿಯಾ (20) ಎಂದು ಗುರುತಿಸಲಾಗಿದೆ.
ಪ್ರಿಯಾ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದಿದ್ದರು. ವೃತ್ತಿಪರ ಉನ್ನತ ಶಿಕ್ಷಣಕ್ಕಾಗಿ ಸಿಇಟಿ, ಎನ್‌ಇಟಿ ಪರೀಕ್ಷೆಗಳನ್ನು ಬರೆದಿದ್ದರು. ಆದರೆ, ಸಿಇಟಿಯಲ್ಲಿ ಕಡಿಮೆ ಅಂತ ಬಂದಿದ್ದ ಕಾರಣ ಮನನೊಂದು ಪ್ರಿಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳ ಸಾವಿನಿಂದ ದಿಗ್ಭ್ರಾಂತಿಗೊಂಡ ತಾಯಿಯೂ ಮಗಳ ಮೃತದೇಹದ ಪಕ್ಕದಲ್ಲಿಯೇಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಆದಾಗ್ಯೂ, ಮಹದೇವಮ್ಮ ಅವರ ಪತಿ ಜಯರಾಮು ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪಗಳೂ ಕೇಳಿಬಂದಿವೆ. ವರದಕ್ಷಿಣೆ ವಿಚಾರವಾಗಿ ಪದೇ-ಪದೇ ಮಹದೇವಮ್ಮ ಜೊತೆ ಜಯರಾಮು ಜಗಳ ಮಾಡುತ್ತಿದ್ದರು.ಆತನೇ ಕೊಲೆ ಮಾಡಿ ಆತ್ಮಹತ್ಯೆಯೆಂದು ಬಿಂಬಿಸಿರಬಹುದು ಎಂದೂ ಆರೋಪಿಸಲಾಗುತ್ತಿದೆ.
ಘಟನೆ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.