ವಿಜಯ ಮಲ್ಯ ಮೇಲಿರುವುದು ಸಾಲ ತೀರಿಸದ ಆರೋಪವೊಂದೇ ಅಲ್ಲ. ಅವರ ಮೇಲೆ ಅಪರಾಧ ಸಂಚು, ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪಗಳೂ ಇವೆ.
ಐಪಿಎಲ್ ಫೈನಲ್‌ನಲ್ಲಿ ಆರ್‍ಸಿಬಿ ತಂಡ ಗೆಲ್ಲುತ್ತಿದ್ದಂತೆ, ಆಟಗಾರರು ಕಪ್ ಎತ್ತಿ ಕುಣಿದಾಡುತ್ತಿದ್ದಂತೆ, ದೂರದ ಲಂಡನ್‌ನಲ್ಲಿ ವಿಜಯ ಮಲ್ಯ ಕೂಡ ಕುಣಿದಾಡುತ್ತಿದ್ದರು. ಅದನ್ನವರು ವಿಡಿಯೋ ಮಾಡಿ ಸಾಮಾಜಿಕ ಜಾಣತಾಣಗಳಲ್ಲಿ ಹರಿದಾಡಿಸಿದ್ದರು. ಆ ವಿಡಿಯೋ ವೈರಲ್ ಆಗಿತ್ತು. 2016ರಿಂದ ಕಣ್ಮರೆಯಾಗಿದ್ದ ವಿಜಯ ಮಲ್ಯ ಆ ವಿಡಿಯೋ ಮೂಲಕ ಮತ್ತೆ ಸುದ್ದಿಯಾಗಿದ್ದರು.
ವಿಜಯ ಮಲ್ಯರ ಸಂಭ್ರಮಕ್ಕೆ ಕಾರಣವಿದೆ. ಏಕೆಂದರೆ ಈ ಆರ್‍ಸಿಬಿಯ ಮೂಲಪುರುಷರೇ ಮಲ್ಯ. ಬೆಂಗಳೂರು ರಾಯಲ್ ಚಾಲೆಂಜರ್ಸ್ ಫ್ರಾಂಚೈಸಿ ಹುಟ್ಟುಹಾಕಿ, ಕೆಲ ವರ್ಷಗಳವರೆಗೆ ಆಟಗಾರರನ್ನು ಸಾಕಿ, ಸುದ್ದಿಯಲ್ಲಿದ್ದ ಮಲ್ಯ 2016ರಲ್ಲಿ ಯಾರಿಗೂ ಸುಳಿವು ಕೊಡದಂತೆ ಕಣ್ಮರೆಯಾಗಿದ್ದರು. ಆಮೇಲೆ ತಿಳಿದ ವಿಷಯವೆಂದರೆ, ಮಲ್ಯ ಹಲವು ಬ್ಯಾಂಕ್‌ಗಳಿಂದ ಸಾವಿರಾರು ಕೋಟಿ ಸಾಲ ಎತ್ತಿದ್ದರು, ತೀರಿಸಲು ಆಗದಿದ್ದಾಗ ದೇಶ ತೊರೆದು ಓಡಿಹೋಗಿದ್ದರು.
ಕರಾವಳಿ ಕೊಂಕಣಿ ಮೂಲದ, 70ರ ಹರೆಯದ ವಿಜಯ ಮಲ್ಯ ಉದ್ಯಮಿ. ಯುನೈಟೆಡ್ ಬ್ರೇವರೀಸ್ ಎಂಬ ಕಂಪನಿ ಆರಂಭಿಸಿ ಯುಬಿ ಹೆಸರಿನ ಬಿಯರ್ ತಯಾರಿಸಿ, ಮದ್ಯ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದ್ದರು. ಅದರಿಂದ ಬಂದ ಲಾಭದಲ್ಲಿ ಸ್ಟಡ್(ಕುದುರೆ ಸಾಕುವ ಜಾಗ) ಫಾರ್ಮ್, ವಿಮಾನ ಹಾರಾಟ ಸಂಸ್ಥೆ, ರಿಯಲ್ ಎಸ್ಟೇಟ್ ವಹಿವಾಟು ಮತ್ತು ಫರ್ಟಿಲೈಸರ್ ಕ್ಷೇತ್ರಕ್ಕೂ ಕಾಲಿಟ್ಟು ಕ್ಲಿಕ್ ಆಗಿದ್ದರು. ವ್ಯಾಪಾರ, ವಹಿವಾಟು ವೃದ್ಧಿಸುತ್ತಿದ್ದಂತೆ ಲೈಫ್ ಸ್ಟೈಲ್, ಪಾರ್ಟಿಗಳು, ಎಲೀಟ್ ಸರ್ಕಲ್, ಶೋಕಿಯೂ ಜೋರಾಗಿತ್ತು. ಅದಕ್ಕೆ ಇಂಬು ನೀಡುವಂತೆ ಹತ್ತಾರು ಪ್ರತಿಷ್ಠಿತ ಕ್ಲಬ್‌ಗಳ ಸದಸ್ಯತ್ವ. ಬೆಂಗಳೂರಿನ ಹೃದಯಭಾಗದಲ್ಲಿ ಯುಬಿ ಟವರ್‍ನ ಮಾಲೀಕತ್ವ. ರೇಸ್‌ನಲ್ಲಿ ಕುದುರೆಗಳನ್ನು ಓಡಿಸುವುದು, ಅವುಗಳ ಮೇಲೆ ಬೆಟ್ ಕಟ್ಟುವುದು, ಸುಂದರಿಯರ ಸ್ಪರ್ಧೆ ಏರ್ಪಡಿಸುವುದು, ಕ್ರಿಕೆಟ್ ಮತ್ತು ಎಫ್-1 ರೇಸ್ ತಂಡಗಳಿಗೆ ಹಣ ಹೂಡುವುದು- ಎಲ್ಲವೂ ಇತ್ತು. ಕ್ಯಾಲೆಂಡರ್ ನೆಪದಲ್ಲಿ ದೇಶದ ಸುರ ಸುಂದರಿಯರನ್ನೆಲ್ಲ ಸೇರಿಸಿ, ಗೋವಾ, ಮಾಲ್ಡೀವ್ಸ್, ಪಿಲಿಪೈನ್ಸ್ ಬೀಚ್‌ಗಳಲ್ಲಿ ತುಂಡುಡುಗೆಯಲ್ಲಿ ಓಡಾಡಿಸಿ, ವೈಭವೋಪೇತ ಪಾರ್ಟಿಗಳನ್ನು ವ್ಯವಸ್ಥೆ ಮಾಡಿಸಿ, ಅಲ್ಲಿಗೆ ದೇಶದ ಗಣ್ಯರನ್ನು ಕರೆದು ಮೋಜು-ಮಸ್ತಿ ಮಾಡಿಸುವುದೂ ಇತ್ತು.
ಈ ಎಲ್ಲ ಶೋಕಿಗಳ, ವ್ಯವಹಾರಗಳ ಅನುಕೂಲಕ್ಕಾಗಿ ರಾಜಕಾರಣಕ್ಕೂ ಧುಮುಕಿದ್ದರು. ಜನತಾದಳ, ಕಾಂಗ್ರೆಸ್ ಮತ್ತು ಬಿಜೆಪಿ- ಮೂರೂ ಪಕ್ಷಗಳ ಮುಖಂಡರೊಂದಿಗೆ- ಸುಬ್ರಮಣಿಯನ್ ಸ್ವಾಮಿ, ದೇವೇಗೌಡ, ಯಡಿಯೂರಪ್ಪ, ಎಸ್.ಎಂ. ಕೃಷ್ಣರ ಸಖ್ಯ ಸಂಪಾದಿಸಿದ್ದರು. ಕೋಟಿ ಕೋಟಿ ಕೊಟ್ಟು ಶಾಸಕರನ್ನು ಖರೀದಿಸಿ 2 ಬಾರಿ ರಾಜ್ಯಸಭಾ ಸದಸ್ಯರಾಗಿಯೂ ಆಯ್ಕೆಯಾಗಿದ್ದರು. ತಮ್ಮದೇ ಆದ ಹೊಸ ರಾಜಕೀಯ ಪಕ್ಷವನ್ನೂ ಹುಟ್ಟುಹಾಕಿದ್ದರು.
ಇದನ್ನು ಓದಿದ್ದೀರಾ?: ಐಪಿಎಲ್ ಗೆಲುವಿನ ನಂತರ ಆರ್‌ಸಿಬಿ ಮಾರಾಟವಾಗಲಿದೆಯೇ? ಮೌನ ಮುರಿದ ಮಾಲೀಕ ಸಂಸ್ಥೆ ಡಿಯಾಜಿಯೊ
ಇಂತಹ ವಿಕ್ಷಿಪ್ತ ಗುಣಗಳುಳ್ಳ ವಿಲಾಸಿ ಉದ್ಯಮಿ ಮಲ್ಯ, 2016ರಲ್ಲಿ ದೇಶ ತೊರೆದು ಲಂಡನ್ ವಾಸಿಯಾಗಿದ್ದರು. ಹತ್ತು ವರ್ಷಗಳ ನಂತರ, ಆರ್‍ಸಿಬಿ ಗೆದ್ದಾಗ ಲಂಡನ್‌ನಲ್ಲಿ ವಿಜಯೋತ್ಸವ ಆಚರಿಸಿ, ವಿಡಿಯೋ ಹಂಚಿಕೊಂಡಿದ್ದರು. ಅದೇ ಸಮಯದಲ್ಲಿ ಖಾಸಗಿ ಪಾಡ್‌ಕಾಸ್ಟ್‌ನಲ್ಲಿ ಪಾಲ್ಗೊಂಡು, ಕಿಂಗ್‌ಫಿಷರ್ ಏರ್‍ಲೈನ್ಸ್ ವಿಫಲವಾಗಿದ್ದಕ್ಕೆ ಎಲ್ಲರ ಕ್ಷಮೆ ಕೇಳಿದ್ದರು. ಹಾಗೆಯೇ ತಮ್ಮ ಮೇಲಿದ್ದ ಹಣಕಾಸು ವಂಚನೆ ಆರೋಪಗಳಿಗೆ ಉತ್ತರಿಸುತ್ತ, ”ನೀವು ನನ್ನನ್ನು ಓಡಿಹೋದವ ಎಂದು ಕರೆಯಬಹುದು. ಆದರೆ ನಾನು ಓಡಿಹೋಗಲಿಲ್ಲ. ಈಗಾಗಲೇ ನಿಗದಿಯಾದ ಪ್ರವಾಸಕ್ಕಾಗಿ ವಿದೇಶಕ್ಕೆ ಹಾರಿದ್ದೆ. ನಾನೇಕೆ ಹಿಂದಿರುಗಲಿಲ್ಲ ಎನ್ನುವ ಕಾರಣ ನನಗೆ ನ್ಯಾಯಸಮ್ಮತವಾಗಿದೆ. ಹೀಗಾಗಿ ನೀವು ಓಡಿಹೋದವನೆಂದು ಕರೆಯಬಹುದು. ಆದರೆ ‘ಕಳ್ಳ’ ಎಂದು ಕರೆಯೋದು ಏಕೆ? ನನ್ನಿಂದ ಏನು ಕಳ್ಳತನ ನಡೆದಿದೆ?” ಎಂಬ ‘ನೈತಿಕ’ ಪ್ರಶ್ನೆ ಎತ್ತಿದ್ದಾರೆ.

ಅದೇ ಪಾಡ್‌ಕಾಸ್ಟ್‌ನಲ್ಲಿ ಅವರು, ”ಆರ್‍ಸಿಬಿಯನ್ನು ನಾನು ಕೊಂಡುಕೊಂಡಿದ್ದು ಕ್ರಿಕೆಟ್ ಮೇಲಿನ ಪ್ರೀತಿಯಿಂದ ಅಲ್ಲ. ನನ್ನ ರಾಯಲ್ ಚಾಲೆಂಜ್ ಬ್ರ್ಯಾಂಡಿನ ವ್ಹಿಸ್ಕಿಯನ್ನು ಮಾರುಕಟ್ಟೆ ಮಾಡುವ ಒಂದೇ ಉದ್ದೇಶದಿಂದ. ಆರ್‍ಸಿಬಿಯಿಂದಾಗಿ Royal Challenge ವ್ಹಿಸ್ಕಿಯ ಮಾರುಕಟ್ಟೆ ಸಿಕ್ಕಾಪಟ್ಟೆ ಹೆಚ್ಚಾಯಿತು” ಎಂಬ ಸತ್ಯವನ್ನು ಹೊರಗೆಡವಿದ್ದಾರೆ. ಹಾಗೆಯೇ ನಿರ್ದಿಷ್ಟ ಶರತ್ತುಗಳಡಿಯಲ್ಲಿ ಭಾರತಕ್ಕೆ ಮರಳಲು ಸಿದ್ಧವಿರುವುದಾಗಿ ಕೇಂದ್ರ ಸರ್ಕಾರಕ್ಕೆ ‘ಕರೆ’ ಕಳಿಸಿದ್ದಾರೆ. ”ಭಾರತದಲ್ಲಿ ನ್ಯಾಯಸಮ್ಮತ ಮತ್ತು ಗೌರವಪೂರ್ಣ ಜೀವನದ ಭರವಸೆ ದೊರಕಿದರೆ, ಹಿಂದಿರುಗುವ ಬಗ್ಗೆ ನಿಜಕ್ಕೂ ಯೋಚಿಸುತ್ತೇನೆ” ಎಂದು ಮಲ್ಯ ಹೇಳಿದ್ದಾರೆ. ಸಾಲದು ಎಂದು, ಸಾಲ ತೆಗೆದುಕೊಂಡಿದ್ದ ಬ್ಯಾಂಕ್‌ಗಳಿಗೆ ಬಾಕಿ ಹಣ ತೀರಿಸಿರುವುದಾಗಿಯೂ ಹೇಳಿಕೊಂಡಿದ್ದಾರೆ.
ಕಂತೆಗೆ ತಕ್ಕ ಬೊಂತೆ ಎಂಬಂತೆ, ಮಲ್ಯರ ಸ್ನೇಹಿತ ಉದ್ಯಮಿ ಹರ್ಷ ಗೋಯೆಂಕಾ ಮಲ್ಯ ಪರವಾಗಿ ಮಾತನಾಡಿದ್ದಾರೆ. ಅವರು ಎಕ್ಸ್‌ನಲ್ಲಿ ”ವಿಜಯ್ ಮಲ್ಯ ಐಷಾರಾಮಿ ಜೀವನ ನಡೆಸಿದರು, ಸಾಲ ತೀರಿಸಲಿಲ್ಲ, ಹೌದು. ಆದರೆ ಇತರ ಬೃಹತ್ ವಂಚಕರಿಗೆ ಹೋಲಿಸಿದರೆ ಅವರ 9 ಸಾವಿರ ಕೋಟಿ ದೊಡ್ಡದೇನೂ ಅಲ್ಲ. ಇವರಿಗಿಂತ ದೊಡ್ಡ ವಂಚಕರು ಬ್ಯಾಂಕ್‌ಗಳಿಂದ ಇನ್ನೂ ಹೆಚ್ಚು ರಿಯಾಯಿತಿ ಪಡೆದು ಆರಾಮಾಗಿದ್ದಾರೆ. ಬಾಕಿ ಇದ್ದರೆ ಬ್ಯಾಂಕ್‌ಗಳು ಕೇಳಲಿ. ಅದು ಬಿಟ್ಟು ಇವರೊಬ್ಬರನ್ನೇ ಗುರಿ ಮಾಡುವುದು ಸರಿಯಲ್ಲ. ನ್ಯಾಯ ಎಲ್ಲರಿಗೂ ಸಮಾನವಾಗಿರಬೇಕು” ಎಂದು ಬ್ಯಾಟ್ ಬೀಸಿದ್ದಾರೆ.
ಉದ್ಯಮಿ ಹರ್ಷ ಗೋಯೆಂಕಾರಿಗೆ ಉತ್ತರಿಸುವ ನೆಪದಲ್ಲಿ ಮಲ್ಯ, ”ಧನ್ಯವಾದಗಳು ಹರ್ಷ. ಬ್ಯಾಂಕ್‌ಗಳು ನನ್ನಿಂದ 6,203 ಕೋಟಿ ಬಾಕಿಗೆ ವಿರುದ್ಧವಾಗಿ 14,100 ಕೋಟಿ ವಸೂಲಿ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಬರವಣಿಗೆಯಲ್ಲೇ ದೃಢಪಡಿಸಿದೆ. ನನ್ನ ಬಗ್ಗೆ ಮಾತ್ರ ಏಕೆ ಈ ತಾರತಮ್ಯ?” ಎಂದು ಸಮಜಾಯಿಷಿ ಕೊಟ್ಟುಕೊಂಡಿದ್ದಾರೆ.
ಹೌದು ಮಲ್ಯ ಹೇಳುತ್ತಿರುವುದರಲ್ಲಿ ಸತ್ಯವಿದೆ. ಕಳೆದ ಡಿಸೆಂಬರ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಗೆ ನೀಡಿದ ಮಾಹಿತಿಯಲ್ಲಿ, ಮಲ್ಯ ಆಸ್ತಿಗಳನ್ನು ಮಾರಾಟ ಮಾಡಿ ವಿವಿಧ ಬ್ಯಾಂಕ್‌ಗಳಿಗೆ 14,000 ಕೋಟಿ ವಾಪಸು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಆದರೆ, ಮಲ್ಯ ಮೇಲಿರುವುದು ಸಾಲ ತೀರಿಸದ ಆರೋಪವೊಂದೇ ಅಲ್ಲ. ಅವರ ಮೇಲೆ ಅಪರಾಧ ಸಂಚು, ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪಗಳೂ ಇವೆ. ಕಿಂಗ್‌ಫಿಷರ್ ಏರ್‍ಲೈನ್ಸ್ ಕೇಸಿನಲ್ಲಿ ಅವರನ್ನು ಬ್ಯಾಂಕ್ ಅಧಿಕಾರಿಗಳು ವಶಕ್ಕೆ ಪಡೆದದ್ದೂ ಇದೆ. ತನಿಖಾ ಸಂಸ್ಥೆಗಳು ಅವರ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಿರುವುದೂ ಉಂಟು.
ಅದೆಲ್ಲಕ್ಕಿಂತ ಹೆಚ್ಚಾಗಿ, ಮಲ್ಯರ ಹತ್ತಾರು ವ್ಯವಹಾರಗಳಲ್ಲಿ, ಕಂಪನಿಗಳಲ್ಲಿ ದುಡಿಯುತ್ತಿದ್ದ ಸಾವಿರಾರು ಜನ ಉದ್ಯೋಗಿಗಳಿಗೆ ಸಂಬಳ ಕೊಡದೆ ಸತಾಯಿಸಿದ್ದಾರೆ. ಆ ಕುಟುಂಬಗಳು ಹಸಿವಿನಿಂದ ಸಾಯುವಂತೆ ಮಾಡಿದ್ದಾರೆ. ಅವರ ಆತ್ಯಹತ್ಯೆಗೂ ಕಾರಣರಾಗಿದ್ದಾರೆ.
2016ರಲ್ಲಿ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್(CBI) ಮಲ್ಯ ಅವರ ಮೇಲೆ ಕಿಂಗ್‌ಫಿಷರ್ ಏರ್‍ಲೈನ್ಸ್‌ಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದೆ. 17 ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಂದ 6,900 ಕೋಟಿ ರೂ.ಗಳ ಸಾಲ ಪಡೆದು, ತೀರಿಸದೆ ವಂಚಿಸಿರುವುದಕ್ಕೆ ವಿಜಯ ಮಲ್ಯ ಮತ್ತು ಕಿಂಗ್‌ಫಿಷರ್ ಏರ್‍ಲೈನ್ಸ್ ವಿರುದ್ಧ ಸಿಬಿಐ ಅಪರಾಧ ಸಂಚು ಮತ್ತು ವಂಚನೆಯ ಆರೋಪದಡಿ ಪ್ರಕರಣ ದಾಖಲಿಸಿದೆ.
ಇದನ್ನು ಓದಿದ್ದೀರಾ?: ಕಾಲ್ತುಳಿತ | ನಮ್ಮದು ತಪ್ಪಿಲ್ಲ ಎನ್ನುತ್ತಿರುವ ಎಲ್ಲರೂ; ಹಾಗಾದರೆ ಜನರೆ ಹೊಣೆಗಾರರಾದರೇ?
2017ರಲ್ಲಿ ವಿಜಯ ಮಲ್ಯರಿಗೆ ಐಡಿಬಿಐ ಬ್ಯಾಂಕ್ ಸಾಲ ನೀಡುವಾಗ ಕಡ್ಡಾಯವಾಗಿ ಪಾಲಿಸಲೇಬೇಕಾದ ಸಾಲ ಪ್ರಕ್ರಿಯೆಗಳನ್ನು ಪಾಲಿಸದೆ 900 ಕೋಟಿ ರೂ.ಗಳ ಸಾಲ ನೀಡಿದೆ. ಸಾಲ ಪಡೆಯಲು ಮಲ್ಯ ಸಾಲ ಪ್ರಕ್ರಿಯೆಗಳನ್ನು ಪಾಲಿಸದೆ, ಅಧಿಕಾರಿಗಳನ್ನು ಭ್ರಷ್ಟಗೊಳಿಸಿದರು, ವಂಚಿಸಿದರು ಎಂಬ ಆರೋಪದೊಂದಿಗೆ ಮತ್ತೊಂದು ಪ್ರಕರಣವನ್ನು ಸಿಬಿಐ ದಾಖಲಿಸಿದೆ.

2024ರಲ್ಲಿ, ಇಂಡಿಯನ್ ಓವರ್‍ಸೀಸ್ ಬ್ಯಾಂಕ್‌ನಿಂದ ಪಡೆದ 180 ಕೋಟಿ ರೂ.ಗಳ ಸಾಲವನ್ನು ಮರುಪಾವತಿಸದೆ ವಂಚಿಸಿರುವ ಬಗ್ಗೆ ಸಿಬಿಐ ವಿಶೇಷ ನ್ಯಾಯಾಲಯವು ಜಾಮೀನಿಲ್ಲದ ಬಂಧನ ವಾರಂಟ್ ಹೊರಡಿಸಿದೆ.
ಜಾರಿ ನಿರ್ದೇಶನಾಲಯ(ED) ಅಕ್ರಮ ಹಣ ವರ್ಗಾವಣೆ(PMLA) ಕೇಸ್ ಅಡಿಯಲ್ಲಿ ಕೇಸ್ ದಾಖಲಿಸಿದೆ. ಮಲ್ಯ ಬ್ಯಾಂಕ್‌ಗಳಿಂದ ಪಡೆದ 3,457 ಕೋಟಿ ಸಾಲದ ಹಣವನ್ನು ಅಕ್ರಮವಾಗಿ ವಿಮಾನ ಬಾಡಿಗೆಗೆ, ಕಾರ್ಪೊರೇಟ್ ಜೆಟ್ ಓಡಾಟಕ್ಕೆ, ಫೋರ್ಸ್ ಇಂಡಿಯಾ ಎಫ್-1 ತಂಡಕ್ಕೆ ಮತ್ತು ಐಪಿಎಲ್‌ನ ರಾಯಲ್ ಚಾಲೆಂಜರ್ಸ್‌ಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ಪ್ರಕರಣ ದಾಖಲಿಸಿದೆ.
2012-2015ರವರೆಗೆ ಕಿಂಗ್‌ಫಿಷರ್ ಏರ್‍ಲೈನ್ಸ್ ವಿಮಾನ ಪ್ರಯಾಣಿಕರಿಂದ ಸಂಗ್ರಹಿಸಿದ 100 ಕೋಟಿ ಸೇವಾ ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸದೆ ಇರುವ ಕಾರಣಕ್ಕೆ ಸೇವಾ ತೆರಿಗೆ ಇಲಾಖೆ ಪ್ರಕರಣ ದಾಖಲಿಸಿದೆ. ಈ ಕೇಸಿನಲ್ಲಿ ಮಲ್ಯ ಮತ್ತು ಇತರರ ವಿರುದ್ಧ ಮುಂಬೈ ಕೋರ್ಟ್ ನಾನ್ ಬೇಲಬಲ್ ವಾರೆಂಟ್ ಇಷ್ಯೂ ಮಾಡಿದ್ದೂ ಇದೆ.
ಇಷ್ಟೆಲ್ಲ ಸಂಚು, ವಂಚನೆ, ಅಕ್ರಮ ಹಣ ವರ್ಗಾವಣೆಗಳಂತಹ ಅಪರಾಧಗಳನ್ನು ಎಸಗಿದ ಮಲ್ಯ, ಸಾಲ ತೀರಿಸಿದ್ದೇನೆ ಎಂದು ಹೇಳುತ್ತಿದ್ದಾರೆ. ಅಷ್ಟೇ ಅಲ್ಲ, ಮಲ್ಯ ಕರ್ನಾಟಕ ಹೈಕೋರ್ಟ್‌ಗೆ ಮೊರೆಹೋಗಿ ಸಾಲ ಮರುಪಾವತಿ ಪ್ರಕ್ರಿಯೆಯನ್ನು ಪ್ರಶ್ನಿಸಿದ್ದಾರೆ. ಅವರ ವಕೀಲರ ಮೂಲಕ, ಡಿಆರ್‌ಟಿ ಆದೇಶದಡಿ 6,200 ಕೋಟಿ ಮರುಪಾವತಿಯಾಗಿದೆ. ಅಲ್ಲದೆ 10,200 ಕೋಟಿ ವಸೂಲಿ ಆಗಿದೆ ಎಂದು ನ್ಯಾಯಾಲಯದ ಮೇಲ್ವಿಚಾರಕರು ಹೇಳಿದ್ದಾರೆ. ಸಂಸತ್ತಿನಲ್ಲಿ ಹಣಕಾಸು ಸಚಿವೆಯೇ 14,000 ಕೋಟಿ ವಾಪಸು ಪಡೆದಿರುವುದಾಗಿ ಹೇಳಿಕೆ ಕೊಟ್ಟಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಅಸಲಿಗೆ ವಿಜಯ್ ಮಲ್ಯ ಎಸ್‌ಬಿಐನಿಂದ 1,939 ಕೋಟಿ- ಇದರ ಬಡ್ಡಿ 3,269 ಕೋಟಿ; ಪಿಎನ್‌ಬಿಯಿಂದ 1,197 ಕೋಟಿ- ಇದರ ಬಡ್ಡಿ 1,887 ಕೋಟಿ; ಐಡಿಬಿಐಯಿಂದ 939 ಕೋಟಿ- ಇದರ ಬಡ್ಡಿ 1,451 ಕೋಟಿ; ಬಿಓಎಲ್(ಬಿಲ್ ಆಫ್ ಲ್ಯಾಂಡಿಂಗ್)ನಿಂದ 708 ಕೋಟಿ- ಇದರ ಬಡ್ಡಿ 1,051 ಕೋಟಿ; ಬಿಓಬಿ(ಬಿಗಿನಿಂಗ್ ಆಫ್ ಬಿಸಿನೆಸ್)ನಿಂದ 605 ಕೋಟಿ- ಇದರ ಬಡ್ಡಿ 975 ಕೋಟಿ. ಹೀಗೆ ವಿಜಯ ಮಲ್ಯ ಅವರು ಬ್ಯಾಂಕ್‌ಗಳಿಗೆ ಕೊಡಬೇಕಾಗಿರುವ ಒಟ್ಟು ಮೊತ್ತ 17,781 ಕೋಟಿ. ಮಲ್ಯರ ಆಸ್ತಿಗಳನ್ನು ಸರ್ಕಾರ ಮಾರಾಟ ಮಾಡಿ ಬ್ಯಾಂಕ್‌ಗಳಿಗೆ ಕೊಟ್ಟಿರುವ ಮೊತ್ತ 10,814 ಕೋಟಿ. ಮಿಕ್ಕಿದ್ದು ಯಾರು ಕೊಡುತ್ತಾರೆ?
ಮಲ್ಯ ಬ್ಯಾಂಕ್‌ಗಳಿಂದ ಎತ್ತಿದ ಸಾವಿರಾರು ಕೋಟಿ ಸಾಲ ತೀರಿಸಿದರೋ, ಇಲ್ಲವೋ ಎಂಬುದು ಮುಖ್ಯವಲ್ಲ. ಅದು ಚರ್ಚೆಯ ವಿಷಯವೂ ಇಲ್ಲ. ಇರುವುದು ಮಲ್ಯ ವಿರುದ್ಧದ ಪ್ರಕರಣಗಳು ಅಪರಾಧ ಸಂಚು, ಹಣಕಾಸು ವಂಚನೆ ಮತ್ತು ಗಂಭೀರ ಕಾನೂನು ಉಲ್ಲಂಘನೆಗಳ ಕುರಿತು. ದೇಶದ ಕಾಯ್ದೆ ಕಾನೂನುಗಳನ್ನು ಉಲ್ಲಂಘಿಸುವ ಉಳ್ಳವರ ಧಿಮಾಕನ್ನು ಕುರಿತು. ಮಾಡುವುದೆಲ್ಲವನ್ನು ಮಾಡಿ ಈಗ ಸಂತನ ಪೋಸು ಕೊಡುತ್ತಿರುವ ಕುರಿತು.
ಇದನ್ನು ಓದಿದ್ದೀರಾ?: ಐಪಿಎಲ್‌ನಲ್ಲಿದೆ ಜನ ಮನಸ್ಥಿತಿಯ ಪ್ರತಿಬಿಂಬ; ಸಚಿನ್, ಧೋನಿ, ಕೊಹ್ಲಿ ಸ್ಟಾರ್ ಆಗಿದ್ಧೂ ಹೀಗೆ….!
ಹಾಗೆಯೇ, ಬ್ಯಾಂಕ್‌ಗಳು ಸಾಮಾನ್ಯರಿಗೆ ಸಾಲ ಕೊಡುವಾಗ ಅವರಿಂದ ಚಿನ್ನ, ಸ್ಥಿರಾಸ್ತಿ, ಬಾಂಡ್‌ಗಳು ಮೊದಲಾದ ನಿಖರವಾಗಿ ಮೌಲ್ಯ ನಿರ್ಧಾರ ಮಾಡಲು ಸಾಧ್ಯವಾಗುವಂತಹ ಆಸ್ತಿಗಳನ್ನು ಕೊಲ್ಯಾಟರಲ್ ಸೆಕ್ಯುರಿಟಿ ಆಗಿ ಪಡೆಯುತ್ತವೆ. ಸ್ವಲ್ಪ ಹೆಚ್ಚುಕಡಿಮೆಯಾದರೂ ಸಾಲ ನೀಡುವುದನ್ನು ನಿರಾಕರಿಸುತ್ತವೆ. ಅಕಸ್ಮಾತ್ ಕೊಟ್ಟರೆ, ಸಾಲ ಮರುಪಾವತಿಗೆ ರೌಡಿಗಳನ್ನು ಬಿಟ್ಟು ಜೀವ ತೆಗೆಯುತ್ತವೆ. ಅದೇ ಬ್ಯಾಂಕ್‌ಗಳು ವಿಜಯ ಮಲ್ಯರಂತಹ ಶ್ರೀಮಂತ ಉದ್ಯಮಿಗೆ ಸಾಲ ಕೊಡುವಾಗ ಕಂಪನಿಯ ಲೋಗೋ ಆದ ‘ಕಿಂಗ್‌ಫಿಷರ್'(ಮಿಂಚುಳ್ಳಿ)ಯನ್ನು ಕೊಲ್ಯಾಟರಲ್ ಸೆಕ್ಯುರಿಟಿಯಾಗಿ ಪಡೆದಿದ್ದರಂತೆ. ಅಂದರೆ, ಬ್ಯಾಂಕ್ ಅಧಿಕಾರಿಗಳು ಎಂತಹ ವೃತ್ತಿಪರರು, ಯಾವೆಲ್ಲ ನೀತಿ-ನಿಬಂಧನೆಗಳನ್ನು ಪಾಲಿಸುವವರು… ನೋಡಿ?
ಬ್ಯಾಂಕ್ ಅಧಿಕಾರಿಗಳಿಗಿಂತಲೂ ಒಂದು ಕೈ ಮೇಲೆ ಎನ್ನುವಂತೆ, ವಿಜಯ ಮಲ್ಯ ಬ್ಯಾಂಕ್‌ಗಳಿಗೆ ವಂಚಿಸಿ ದೇಶ ತೊರೆದು ಓಡಿಹೋಗುವಾಗ ಆಗಿನ ಕೇಂದ್ರ ಸರ್ಕಾರದ ಪ್ರಭಾವಿ ಮಂತ್ರಿ- ಬಿಜೆಪಿಯ ಅರುಣ್ ಜೈಟ್ಲಿಗೆ ತಿಳಿಸಿದ್ದರಂತೆ. ಆ ಸಂದರ್ಭದಲ್ಲಿ ಅವರು ಘನತೆವೆತ್ತ ರಾಜ್ಯಸಭಾ ಸದಸ್ಯರಾಗಿದ್ದರು. ಜೈಟ್ಲಿಗೆ ಗೊತ್ತಿದ್ದೂ ಸುಮ್ಮನಾಗಿದ್ದರು.

ಇಂತಹ ಮಲ್ಯ ಈಗ ಸಂತನಂತೆ, ಸಾಲ ತೀರಿಸಿದ್ದೇನೆ, ನ್ಯಾಯ ಸಿಕ್ಕಿದರೆ ಭಾರತಕ್ಕೆ ಬರುತ್ತೇನೆ, ಗೌರವದಿಂದ ಬದುಕುತ್ತೇನೆ ಎನ್ನುತ್ತಿದ್ದಾರೆ. ಆರ್‍ಸಿಬಿ ಎಂಬ ಕುಲಾಂತರಿ ತಂಡ ಐಪಿಎಲ್ ಫೈನಲ್ ಗೆದ್ದ ಖುಷಿಯಲ್ಲಿರುವ ಅಭಿಮಾನಿಗಳು, ವಿಜಯ ಮಲ್ಯನ ಬಗ್ಗೆ ಅನುಕಂಪದಿಂದ ಮಾತನಾಡಲಾರಂಭಿಸಿದ್ದಾರೆ.
ಅದಕ್ಕೆ ತಕ್ಕಂತೆ, ಗೌತಮ್ ಅದಾನಿ ಎಂಬ ಶ್ರೀಮಂತ ಉದ್ಯಮಿಯನ್ನು ಬೆನ್ನಿಗೆ ಕಟ್ಟಿಕೊಂಡು ವಿದೇಶ ತಿರುಗುವ, ಸಾವಿರಾರು ಕೋಟಿಗಳ ವ್ಯವಹಾರ ಕುದುರಿಸಿಕೊಟ್ಟಿರುವ, ಹಲವು ಹಲ್ಲಂಡೆಗಳನ್ನು ಮುಚ್ಚಿಹಾಕಿರುವ ಪ್ರಧಾನಿ ಮೋದಿಯವರಿಗೆ, ಮಲ್ಯ ಪುಟ್ಟ ಮೀನಿನಂತೆ ಕಂಡು, ಕರೆಸಿಕೊಂಡರೂ ಆಶ್ಚರ್ಯವಿಲ್ಲ.
ಇದು ಮೋದಿ ಭಾರತ- ಬಡವರನ್ನು ಬಿಂಬಿಸುವ, ಬಲ್ಲಿದರನ್ನು ಬೆಂಬಲಿಸುವ ಭಾರತ!

ಲೇಖಕ, ಪತ್ರಕರ್ತ