ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಕರ್ತವ್ಯನಿರತ ಪೊಲೀಸ್ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ದೇವದುರ್ಗ ಶಾಸಕಿ ಕರೆಮ್ಮ ಜಿ ನಾಯಕ ಅವರ ಪುತ್ರ ಸಂತೋಷ ಗೋಪಾಲಕೃಷ್ಣ ನಾಯಕ, ವಿಚಾರಣೆಗೆ ಕೋರ್ಟ್ ಹಾಜರಾಗದ ಹಿನ್ನೆಲೆಯಲ್ಲಿ ಬಂಧನಕ್ಕೆ ಜಿಲ್ಲಾ ಸತ್ರ ನ್ಯಾಯಾಲಯ ಇತ್ತೀಚೆಗೆ ವಾರೆಂಟ್ ಜಾರಿ ಮಾಡಿದೆ.
ಕಳೆದ ವರ್ಷ ಕೃಷ್ಣಾ ನದಿಯಿಂದ ಅಕ್ರಮವಾಗಿ ಮರಳು ಸಾಗಣೆ ಮಾಡುವ ವೇಳೆ ಕರ್ತವ್ಯದಲ್ಲಿದ್ದ ಕಾನ್‌ಸ್ಟೆಬಲ್ ಹನುಮಂತ ಎನ್ನುವವರು ಟ್ರ್ಯಾಕ್ಟರ್ ತಡೆದಿದ್ದರು. ಈ ಸಂಬಂಧ ಮಾತುಕತೆಗೆಂದು ಪ್ರವಾಸಿ ಮಂದಿರಕ್ಕೆ ಕರೆಸಿ ಶಾಸಕಿಯ ಪುತ್ರ ಸಂತೋಷ, ಶಾಸಕರ ಆಪ್ತ ಸಹಾಯಕರಾದ ರಫಿ, ಇಲಿಯಾಜ್ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಜಾತಿ ನಿಂದನೆ ಮಾಡಲಾಗಿದೆಯೆಂದು ದೂರು ನೀಡಿದ್ದರು.
ಪ್ರಕರಣ ಕುರಿತು ಬಹುತೇಕರು ಜಾಮೀನು ಪಡೆದಿದ್ದರು. ಜಿಲ್ಲಾ ಕೋರ್ಟ್‌ನಲ್ಲಿ ವ್ಯಾಜ್ಯ ನಡೆಯುತ್ತಿದ್ದು, ವಿಚಾರಣೆಗೆ ಸಂತೋಷ ಗೈರಾದ ಹಿನ್ನೆಲೆಯಲ್ಲಿ ಬಂಧನ ಮಾಡಿ ವಿಚಾರಣೆಗೆ ಹಾಜರುಪಡಿಸುವಂತೆ ಪೊಲೀಸರಿಗೆ ಕೋರ್ಟ್ ಸೂಚನೆ ನೀಡಿದೆ.
ಪ್ರಕರಣ ಸಂಬಂಧ ಸಂತೋಷನ ವಿರುದ್ಧ ಸೆಕ್ಷನ್ 143, 147, 323, 332, 353, 342, 504, 1490 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಮುಂದಿನ ವಿಚಾರಣೆ ನಡೆಯುವ ಜು.5ರಂದು ಆರೋಪಿಯನ್ನು ಹಾಜರುಪಡಿಸಲು ಸೂಚಿಸಿದೆ. ಕೋರ್ಟ್ ಬಂಧನ ಆದೇಶ ನೀಡಿದರೂ ಪೊಲೀಸರು ಸಂತೋಷನನ್ನು ಬಂಧಿಸಲು ಹಿಂದೇಟು ಹಾಕಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.
ಈ ಸುದ್ದಿ ಓದಿದ್ದೀರಾ? ಬಂಟ್ವಾಳ | ಪಾಣೆಮಂಗಳೂರು ಹಳೆ ಸೇತುವೆ ಮೇಲೆ ಸಂಚಾರ ನಿಷೇಧ: ಆದೇಶ ಹೊರಡಿಸಿದ ತಹಶೀಲ್ದಾರ್
ಕೋರ್ಟ್‌ನಿಂದ ವಾರೆಂಟ್ ಜಾರಿಯಾದರೂ ಕ್ಯಾರೆ ಎನ್ನದ ಆರೋಪಿ, ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿಯನ್ನು ಭೇಟಿಯಾಗಿ ಅವರೊಂದಿಗೆ ಫೋಟೋ ಕೊಡುತ್ತ ಕಾಲ ಹರಣ ಮಾಡುತ್ತಿದ್ದಾರೆ.
ಪ್ರವಾಸಿ ಮಂದಿರದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಸಂತೋಷ, ಗೋಪಾಲಕೃಷ್ಣ ಸೇರಿ ಕೆಲವರ ವಿರುದ್ಧ ಕೇಸ್ ದಾಖಲಾಗಿತ್ತು. ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಸಂತೋಷ ಬಂಧನ ವಾರೆಂಟ್ ಬಗ್ಗೆ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆಂದು ಲಿಂಗಸೂಗೂರು ಡಿವೈಎಸ್‌ಪಿ ದತ್ತಾತ್ರೇಯ ಕರ್ನಾಡ್ ತಿಳಿಸಿದ್ದಾರೆ.