ಸಭಾಧ್ಯಕ್ಷರ ಪೀಠದ ಹತ್ತಿರ ಹೋಗಿ ಅವರ ಮುಖದ ಮೇಲೆ ಪೇಪರ್ ಎಸೆಯುವುದು ತಪ್ಪು. ನಿನ್ನೆ ನಡೆದ ಘಟನೆ ಪಕ್ಷಾತೀತವಾಗಿ ತಲೆತಗ್ಗಿಸುವಂತ ವಿಚಾರ. ಇನ್ನು ಮುಂದಾದರೂ ಈ ರೀತಿಯ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಬಿಜೆಪಿ ಸದಸ್ಯರಿಗೆ, ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ಕಿವಿಮಾತು ಹೇಳಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಇಡೀ ರಾಷ್ಟ್ರದಲ್ಲಿ ಕೆಂಗಲ್ ಹನುಮಂತಯ್ಯ ಕಟ್ಟಿರುವ ವಿಧಾನಸೌಧಕ್ಕೆ ದೊಡ್ಡ ಗೌರವ ಇದೆ. ವಿಧಾನಸೌಧ ಪ್ರವೇಶಿಸುವಾಗ ತಲೆಬಾಗಿ ನಮಸ್ಕಾರ ಮಾಡಿ, ಒಳಗಡೆ ಹೋಗುತ್ತೇವೆ. ಸದನದಿಂದ ಅಮಾನತ್ತಾಗಿರುವ ಕೆಲವು ಶಾಸಕರಿಗೆ ವಿಧಾನಸಭೆಯೊಳಗೆ ಸುದೀರ್ಘ ಅನುಭವ ಇದೆ. ನಿನ್ನೆ ನಡೆದಿರುವ ಘಟನೆ ಪಕ್ಷಾತೀತವಾಗಿ ಎಲ್ಲರೂ ತಲೆತಗ್ಗಿಸುವ ಘಟನೆ. ಇಂಥ ಘಟನೆ ನಡೆಯಬಾರದಿತ್ತು” ಎಂದು ವಿಷಾದ ವ್ಯಕ್ತಪಡಿಸಿದರು.
“ಬಸನಗೌಡ ಪಾಟೀಲ್ ಯತ್ನಾಳ್‌ಗೆ ಏನಾದರೂ ಸ್ವಲ್ಪ ತೊಂದರೆ ಆಗಿದ್ದರೆ ಯಾರು ಹೊಣೆಯಾಗುತ್ತಿದ್ದರು? ಹೆಚ್ಚುಕಡಿಮೆ ಆಗಿದ್ದರೆ 2023ರಲ್ಲಿ ಕೆಟ್ಟ ಘಟನೆಯೊಂದು ದಾಖಲಾಗಿ ಹೋಗುತ್ತಿತ್ತು. ಐಎಎಸ್ ಅಧಿಕಾರಿಗಳು ಶಿಷ್ಟಾಚಾರ ಪಾಲನೆ ಉಲ್ಲಂಘಿಸಿದ್ದಾರೆ ಎಂದು ಬಿಜೆಪಿಯವರು ಹೇಳುತ್ತಾರೆ. ಹಿಂದೆ ಕೂಡಾ ಈ ರೀತಿ ಘಟನಾವಳಿಗಳು ನಡೆದಿವೆ. ಕಾಂಗ್ರೆಸ್ ವಿಷಾದ ವ್ಯಕ್ತಪಡಿಸಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ” ಎಂದರು.
ಬಿಜೆಪಿ ಜೊತೆ ಮೈತ್ರಿ; ನಾಯಕರಿಂದ ತೀರ್ಮಾನ
ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಜೆಡಿಎಸ್ ನಾಯಕರು ಸಭೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಇಂದು ಸಂಜೆ ಎಚ್ ಡಿ ದೇವೇಗೌಡರು ಊಟಕ್ಕೆ ಕರೆದಿದ್ದಾರೆ. ಸಂಜೆ ದೇವೇಗೌಡ ಜೊತೆ ಸೇರಿ ಚರ್ಚೆ ಬಳಿಕ ತೀರ್ಮಾನ ಮಾಡಲಾಗುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕಲಾಪದಿಂದ ಸದಸ್ಯರ ಅಮಾನತು ಖಂಡಿಸಿ ಬಿಜೆಪಿ ಪ್ರತಿಭಟನೆ
ಅಮಾನತಾದವರ ಪಟ್ಟಿ ಮಾರ್ಷಲ್‌ಗಳಿಗೆ
ಅಮಾನತ್ತಾದ ಬಿಜೆಪಿ ಶಾಸಕರು ವಿಧಾನಸಭೆ ಪ್ರವೇಶಿಸುವ ಸಾಧ್ಯತೆ ಇರುವುದರಿಂದ, ಹತ್ತು ಶಾಸಕರ ಹೆಸರಿನ ಪಟ್ಟಿಯನ್ನು ಸ್ಪೀಕರ್ ಯು ಟಿ ಖಾದರ್ ಅವರು ಮಾರ್ಷಲ್‌ಗಳಿಗೆ ನೀಡಿದ್ದಾರೆ. ಬುಧವಾರ ಸದನದಲ್ಲಿ ಉಂಟಾದ ಗದ್ದಲದ ಕಾರಣಕ್ಕೆ ಬಿಜೆಪಿಯ 10 ಶಾಸಕರನ್ನು ಅಮಾನತು ಮಾಡಲಾಗಿತ್ತು. ಅಮಾನತ್ತಾದ ನಂತರವೂ ಸದಸ್ಯರು ಸದನದ ಬಾವಿಯಲ್ಲೇ ಕುಳಿತಿದ್ದರು. ಮಾರ್ಷಲ್‌ಗಳ ಮುಖಾಂತರ ಬಿಜೆಪಿ ಸದಸ್ಯರನ್ನು ಹೊರಗೆ ಹಾಕಿಸಿದ್ದರು. ಅಮಾನತ್ತಾದ ಶಾಸಕರನ್ನು ವಿಧಾನಸಭೆ ಪ್ರವೇಶದ್ವಾರದಲ್ಲೇ ತಡೆಯುವಂತೆ ಖಾದರ್ ಇಂದು ಸೂಚನೆ ನೀಡಿದ್ದಾರೆ.