ಮುಂಬೈ ಎಂದರೆ ರೈಲು, ರೈಲೆಂದರೆ ಮುಂಬೈ ಎನ್ನುವ ಮಟ್ಟಿಗೆ ಸ್ಥಳೀಯ ರೈಲುಗಳು ಜನಪ್ರಿಯ. ಈ 'ಲೋಕಲ್ ಟ್ರೇನ್'ಗಳು ನಗರದ ಜೀವನಾಡಿ. ಆದರೆ ಆಳುವ ಸರ್ಕಾರಗಳಿಗೆ ಮನುಷ್ಯರು ಮಾತ್ರ ಕಾಣುವುದಿಲ್ಲ...
ಪ್ರಯಾಣಿಕರ ದಟ್ಟಣೆಯಿಂದಾಗಿ ರೈಲಿನಿಂದ ಹೊರಬಿದ್ದು ಐವರು ಪ್ರಯಾಣಿಕರು ಸಾವನ್ನಪ್ಪಿದ ಮುಂಬೈ ರೈಲು ದುರಂತದ ಬಳಿಕ, ಕಳೆದ ಹನ್ನೊಂದು ವರ್ಷಗಳಲ್ಲಿ ಕೇಂದ್ರ ರೈಲ್ವೆ ಇಲಾಖೆ ಕೈಗೊಂಡ ಕ್ರಮಗಳತ್ತ ಗಮನಹೊರಳಿದೆ. ಈ ದುರಂತದ ಬೆನ್ನಲ್ಲೇ ಭಾರತೀಯ ರೈಲ್ವೆ ಮಂಡಳಿಯು ಮುಂಬೈನ ಸ್ಥಳೀಯ ರೈಲುಗಳಲ್ಲಿ ‘ಸ್ವಯಂಚಾಲಿತ ಡೋರ್ ಕ್ಲೋಸ್’ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಿದೆ. ಆದರೆ ಈವರೆಗಿನ ಸಾವಿನ ಹೊಣೆ ಯಾರದ್ದು? ನಿರಂತರವಾಗಿ ಪ್ರಯಾಣಿಕರ ದಟ್ಟಣೆ ಬಗ್ಗೆ ದೂರುಗಳು ಬರುತ್ತಿದ್ದರೂ, ಸಾವು ನೋವುಗಳು ಸಂಭವಿಸಿದರೂ ಸೂಕ್ತ ಕ್ರಮ ಕೈಗೊಂಡಿರಲಿಲ್ಲ. ಅಂದರೆ, ರೈಲ್ವೆ ಇಲಾಖೆ ಜನರ ಬಲಿಗಾಗಿ ಕಾಯುತ್ತಿತ್ತೇ ಎಂಬ ಪ್ರಶ್ನೆಗಳು ಎದ್ದಿವೆ.
ವಿರೋಧ ಪಕ್ಷಗಳು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದೆಡೆ ಬೊಟ್ಟು ಮಾಡಿದರೆ, ಸರ್ಕಾರ ಮಾತ್ರ ಅನಿರೀಕ್ಷಿತವಾಗಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿ ಈ ದುರಂತ ಸಂಭವಿಸಿದೆ ಎಂದು ಪ್ರಯಾಣಿಕರತ್ತ ಬೆರಳು ಮಾಡಿದೆ. ಮುಂಬೈನಲ್ಲಿ ಸ್ಥಳೀಯ ರೈಲುಗಳು ಯಾವಾಗಲೂ ತುಂಬಿರುತ್ತವೆ. ಆದರೆ ಹೆಚ್ಚುವರಿ ರೈಲು ವ್ಯವಸ್ಥೆಯನ್ನು ಮಾಡಿಲ್ಲ. ಇದರಿಂದಾಗಿಯೇ ಈ ಅಪಘಾತ, ಅವಘಡಗಳು ಸಂಭವಿಸುತ್ತಿದೆ ಎನ್ನುತ್ತದೆ ಮುಂಬೈ ರೈಲ್ವೆ ಪ್ರಯಾಣಿಕರ ಸಂಘಟನೆ. ತಮ್ಮ ತಪ್ಪಿನ ಹೊರೆಯನ್ನು ಇನ್ನೊಬ್ಬರ ಮೇಲೆ ಹಾಕಿಬಿಡಲು ಎಷ್ಟೇ ಪ್ರಯತ್ನ ಮಾಡಿದರೂ ಈ ದುರಂತದ ಹೊಣೆ ನೇರವಾಗಿ ರೈಲ್ವೆ ಇಲಾಖೆಯದ್ದು ಎಂಬುದು ಸ್ಪಷ್ಟ.
ಇದನ್ನು ಓದಿದ್ದೀರಾ? ಮುಂಬೈನ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ; 9 ಮಂದಿಗೆ ಗಾಯ
ಮುಂಬೈನ ಜನರು ಸ್ಥಳೀಯ ರೈಲಿನ ಮೇಲೆ ಅವಲಂಭಿಸಿರುವುದೇಕೆ?
ಹಣಕಾಸು ಕೇಂದ್ರ ಮುಂಬೈನ ಜನಸಂಖ್ಯೆ 12.5 ಮಿಲಿಯನ್(1.25 ಕೋಟಿ) ಆಗಿದೆ. ಈ ಪೈಕಿ ಬಹುತೇಕರಿಗೆ ಸ್ಥಳೀಯ ರೈಲುಗಳೇ ತಮ್ಮ ದೈನಂದಿನ ಓಡಾಟದ ಮಾರ್ಗ. ಮುಂಬೈ ಎಂದರೆ ರೈಲು, ರೈಲೆಂದರೆ ಮುಂಬೈ ಎನ್ನುವ ಮಟ್ಟಿಗೆ ಸ್ಥಳೀಯ ರೈಲುಗಳು ಜನಪ್ರಿಯ. ಈ ‘ಲೋಕಲ್ ಟ್ರೇನ್’ಗಳು ನಗರದ ಜೀವನಾಡಿ. ಏಷ್ಯಾದಲ್ಲೇ ಮೊದಲ ಬಾರಿಗೆ ರೈಲು ನಿರ್ಮಾಣವಾಗಿದ್ದು ಮುಂಬೈನಲ್ಲಿ. 1853ರಲ್ಲಿ ಬ್ರಿಟಿಷರು 34 ಕಿಲೋಮೀಟರ್ ರೈಲು ಮಾರ್ಗ ನಿರ್ಮಿಸಿದ್ದು, ಈ ಮಾರ್ಗ ಇಂದು 400 ಕಿಲೋಮೀಟರ್‌ಗಳಿಗಿಂತ ಹೆಚ್ಚಾಗಿದೆ. ಮುಂಬೈನ ಬಹುತೇಕ ಎಲ್ಲಾ ಪ್ರದೇಶಗಳಲ್ಲಿ ಈ ಹಳಿಯಿದೆ.
ನಾವು ಸಂಚಾರದಟ್ಟಣೆಯಿಂದ ದೂರವಿದ್ದು ಹೆಚ್ಚು ದೂರು ಕ್ರಮಿಸಬೇಕಾದರೆ ಸ್ಥಳೀಯ ರೈಲುಗಳು ಉತ್ತಮ ಆಯ್ಕೆ. ಜೊತೆಗೆ ಪ್ರಯಾಣ ವೆಚ್ಚವೂ ಕಡಿಮೆ. ಈ ಸ್ಥಳೀಯ ರೈಲುಗಳು ದಿನವಿಡೀ ಕಾರ್ಯನಿರ್ವಹಿಸುತ್ತದೆ. ಇತರೆ ಸಾರಿಗೆ ಸೌಲಭ್ಯಕ್ಕೆ ಹೋಲಿಸಿದರೆ ಕಡಿಮೆ ಟಿಕೆಟ್ ದರ, ಅತಿ ವೇಗದಲ್ಲಿ ಗಮ್ಯಸ್ಥಳಕ್ಕೆ ತಲುಪಲು ಸಾಧ್ಯವಾಗುವುದೇ ಜನರು ಮುಂಬೈನಲ್ಲಿ ರೈಲಿನ ಮೇಲೆ ಅವಲಂಬಿಸಲು ಕಾರಣ.
ಮುಂಬೈನ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ಆಗುವುದೇಕೆ?
ಮುಂಬೈನ ಪಶ್ಚಿಮ ರೈಲ್ವೆಯಲ್ಲಿ ಪ್ರತಿದಿನ 35 ಲಕ್ಷ ಪ್ರಯಾಣಿಕರು ಪ್ರಯಾಣಿಸಬಲ್ಲ 1,394 ರೈಲುಗಳು ಸಾಗುತ್ತವೆ. ಕೇಂದ್ರ ರೈಲ್ವೆಯಲ್ಲಿ ದಿನಕ್ಕೆ 40 ಲಕ್ಷ ಜನರು ಪ್ರಯಾಣಿಕರಿದ್ದು 1,810 ರೈಲುಗಳು ಸಂಚರಿಸುತ್ತವೆ. ಕಳೆದ ಎರಡು ದಶಕಗಳಲ್ಲಿ ಮುಂಬೈನ ಉಪನಗರ ರೈಲುಗಳಲ್ಲಿ ಸುಮಾರು 51,000 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ರೈಲ್ವೆ ಮತ್ತು ಪಶ್ಚಿಮ ರೈಲ್ವೆಗಳು ಕಳೆದ ವರ್ಷ ಬಾಂಬೆ ಹೈಕೋರ್ಟ್‌ಗೆ ತಿಳಿಸಿವೆ. ಮೃತ 51,802 ಜನರ ಪೈಕಿ 22,481 ಜನರು ಪಶ್ಚಿಮ ರೈಲ್ವೆಯ ಮಾರ್ಗಗಳಲ್ಲಿ, 29,321 ಜನರು ಕೇಂದ್ರ ರೈಲ್ವೆಯ ಮಾರ್ಗಗಳಲ್ಲಿ ಸಾವನ್ನಪ್ಪಿದ್ದಾರೆ.
ಕಲ್ಯಾಣ್, ಥಾಣೆ, ವಸೈ ಮತ್ತು ಬೊರಿವಲಿ ಎಂಬ ನಾಲ್ಕು ನಿಲ್ದಾಣಗಳಲ್ಲಿ ಅತಿ ಹೆಚ್ಚು ಸಾವುಗಳು ಸಂಭವಿಸಿವೆ. ಮುಂಬೈನ ಉಪನಗರ ರೈಲ್ವೆಯಲ್ಲಿ 2024ರಲ್ಲಿ 2,468 ಪ್ರಯಾಣಿಕರು ಮತ್ತು 2023ರಲ್ಲಿ 2,590 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಅಂದರೆ ಪ್ರತಿ ದಿನ ಏಳು ಮಂದಿ ಮೃತಪಟ್ಟಂತೆ. ತಜ್ಞರ ಪ್ರಕಾರ ಸಾಮಾನ್ಯವಾಗಿ ಹೆಚ್ಚು ಜನರು ಓಡಾಡುವಂತಹ ಸಮಯದಲ್ಲಿ ಮುಂಬೈ ರೈಲುಗಳಲ್ಲಿ ಯೋಜಿತ ಸಾಮರ್ಥ್ಯಕ್ಕಿಂತ ಮೂರು ಪಟ್ಟು ಹೆಚ್ಚು ಜನರು ಪ್ರಯಾಣಿಸುತ್ತಾರೆ. ಅಂದರೆ 200 ಜನರನ್ನು ಹೊತ್ತೊಯ್ಯಬಲ್ಲ ರೈಲು ಕೋಚ್ ವಾಸ್ತವವಾಗಿ 600 ಜನರನ್ನು ಕರೆದೊಯ್ಯುತ್ತಿದೆ. ಈ ಅತಿಯಾದ ಜನದಟ್ಟಣೆಯೇ ಇಷ್ಟೊಂದು ಸಾವು ನೋವುಗಳಿಗೆ ಕಾರಣ.
ಇದನ್ನು ಓದಿದ್ದೀರಾ? ಮುಂಬೈ | ಪ್ರಯಾಣಿಕರ ದಟ್ಟಣೆ: ರೈಲಿನಿಂದ ಬಿದ್ದು ಐವರು ಸಾವು, ಹಲವರಿಗೆ ಗಾಯ
ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾಗೆ ಪ್ರತಿಕ್ರಿಯೆ ನೀಡಿರುವ ಉಪನಗರಿಯ ರೈಲ್ವೆ ಪ್ರವಾಸಿ ಮಹಾಸಂಘದ ಕಾರ್ಯಕರ್ತೆ ಲತಾ ಅರ್ಘಡೆ, “ದುಡಿಯುವ ವರ್ಗದ ಜನರು ನಗರದಲ್ಲಿ ಮನೆಗಳನ್ನು ಖರೀದಿಸಲು ಶಕ್ತರಲ್ಲ. ಹಾಗಾಗಿ ಅಂಬರ್ನಾಥ್, ಬದ್ಲಾಪುರ್ ಮತ್ತು ಟಿಟ್ವಾಲಾದಂತಹ ದೂರದ ಉಪನಗರಗಳಲ್ಲಿ ವಾಸಿಸುತ್ತಿದ್ದಾರೆ. ಆದ್ದರಿಂದ ರೈಲು ಸೇವೆ ಮೇಲೆ ಅವಲಂಭಿತರಾಗಿದ್ದಾರೆ. ಬೆಳಿಗ್ಗೆ ಮತ್ತು ಸಂಜೆ ಜನರು ಹೆಚ್ಚಾಗಿ ಓಡಾಡುತ್ತಾರೆ. ಈ ಅವಧಿಯಲ್ಲಿ ರೈಲುಗಳು ಕೆಲವೇ ನಿಮಿಷಗಳಲ್ಲಿ ತುಂಬಿರುತ್ತವೆ. ಪ್ರಯಾಣಿಕರು ನಂತರದ ನಿಲ್ದಾಣಗಳಲ್ಲಿ ಹತ್ತಲೂ ಸಾಧ್ಯವಾಗಲ್ಲ. ಇದರಿಂದಾಗಿ ಜನರು ರೈಲುಗಳಿಂದ ಬೀಳುವುದು ಆಗಾಗ್ಗೆ ಕಂಡುಬರುತ್ತವೆ” ಎಂದು ಹೇಳಿದ್ದಾರೆ.
ಆದರೆ ಈ ಅವಧಿಯಲ್ಲಿ ರೈಲಿನ ಸಂಖ್ಯೆ ಹೆಚ್ಚಿಸಬೇಕು, ಬೋಗಿಗಳ ಸಂಖ್ಯೆ ಹೆಚ್ಚಿಸಬೇಕು ಎಂಬ ಅಭಿಪ್ರಾಯಗಳೂ ಇವೆ. ಜೊತೆಗೆ ಸ್ವಯಂಚಾಲಿತವಾಗಿ ಮುಚ್ಚುವ ಬಾಗಿಲುಗಳನ್ನು ಅಳವಡಿಸಬೇಕು ಎಂದು ಆಗ್ರಹವಿದೆ. ಈ ನಿಟ್ಟಿನಲ್ಲಿ ಈಗಾಗಲೇ ರೈಲ್ವೆ ಮಂಡಳಿ ನಿರ್ಧಾರಕ್ಕೆ ಬಂದಿದೆ.
ಕೋವಿಡ್ ಸಮಯದಲ್ಲಿ ಮುಂಬೈ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಯಿತು. ಆದರೆ ಈಗ ಮತ್ತೆ ಕೋವಿಡ್ ಪೂರ್ವದಷ್ಟೇ ಪ್ರಯಾಣಿಕರ ದಟ್ಟಣೆ ಮುಂಬೈನ ಸ್ಥಳೀಯ ರೈಲುಗಳಲ್ಲಿವೆ. ಪ್ರತಿ ಮೂರು ನಿಮಿಷಕ್ಕೆ ಒಂದು ರೈಲುಗಳು ಓಡಾಡುತ್ತಿವೆ. ಆದರೂ ರೈಲಿನ ಸಂಖ್ಯೆ ಸಾಕಾಗುತ್ತಿಲ್ಲ ಎಂದು ರೈಲ್ವೇ ಅಧಿಕಾರಿಗಳು ಹೇಳುತ್ತಾರೆ.
ಇವೆಲ್ಲವನ್ನು ಹೊರತುಪಡಿಸಿ ಟಿಕೆಟ್ ಪಡೆಯದೆಯೇ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಗಿರುವ ಶಂಕೆಯನ್ನು ರೈಲ್ವೇ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ತನ್ನ ಹೆಸರು ಬಹಿರಂಗಪಡಿಸಲು ಬಯಸದ ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ಈ ಬಗ್ಗೆ ಹಿಂದೂಸ್ತಾನ್ ಟೈಮ್ಸ್‌ಗೆ ಮಾಹಿತಿ ನೀಡಿದ್ದಾರೆ. “ಟಿಕೆಟ್ ಇಲ್ಲದೆ ಪ್ರಯಾಣಿಸುವವರ ಸಂಖ್ಯೆ ಗಣನೀಯವಾಗಿ ಶೇ.30 ಕ್ಕಿಂತ ಹೆಚ್ಚಾಗಿದೆ ಎಂಬ ಅನುಮಾನ ನಮಗಿದೆ. ಸಾಮಾನ್ಯವಾಗಿ ಟಿಕೆಟ್ ಪಡೆಯದೆಯೇ ಶೇಕಡ 15-20ರಷ್ಟು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಸ್ಥಳೀಯ ರೈಲುಗಳ ಒಳಗೆ ಭಾರಿ ಜನದಟ್ಟಣೆ ಉಂಟಾಗಲು ಇದು ಒಂದು ಕಾರಣವೆಂದು ತೋರುತ್ತದೆ” ಎಂದು ತಿಳಿಸಿದ್ದಾರೆ.
ಸ್ಥಳೀಯ ರೈಲುಗಳಿಗೆ ಆದ್ಯತೆ ನೀಡಿ
ಕಿಕ್ಕಿರಿದು ತುಂಬಿದ ರೈಲಿನಿಂದ ಬಿದ್ದು ಪ್ರಯಾಣಿಕರು ಮೃತಪಟ್ಟ ಬಳಿಕ ಮುಂಬೈ ರೈಲ್ವೆ ಪ್ರಯಾಣಿಕರ ಸಂಘವು ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದೆ. ಜನರ ಜೀವನದ ಜೊತೆ ಆಟವಾಡುವುದನ್ನು ನಿಲ್ಲಿಸಿ ಎಂದು ಹೇಳಿದೆ. ಮುಂಬೈ ರೈಲ್ವೆ ಪ್ರಯಾಣಿಕರ ಸಂಘದ ಅಧ್ಯಕ್ಷ ಮಧು ಕೋಟ್ಯಾನ್ ಮತ್ತು ಉಪಾಧ್ಯಕ್ಷ ಸಿದ್ಧೇಶ್ ದೇಸಾಯಿ ದಿವಾ-ಕಲ್ವಾ ಮಾರ್ಗದಲ್ಲಿನ ಅಪಾಯಗಳ ಬಗ್ಗೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕ(ಡಿಆರ್‌ಎಂ), ಜನರಲ್ ಮ್ಯಾನೇಜರ್(ಜಿಎಂ) ಮತ್ತು ರೈಲ್ವೆ ಮಂಡಳಿಗೆ ಈ ಹಿಂದೆ ದೂರು ನೀಡಿದ್ದರು.
ಇದನ್ನು ಓದಿದ್ದೀರಾ? ಥಾಣೆ ದುರಂತ | ‘ಸ್ವಯಂಚಾಲಿತ ಡೋರ್ ಕ್ಲೋಸ್’ ವ್ಯವಸ್ಥೆ ಕಲ್ಪಿಸಲು ರೈಲ್ವೆ ಮಂಡಳಿ ನಿರ್ಧಾರ
“ಪ್ರಯಾಣಿಕರ ಜೀವನದ ಜೊತೆ ಆಟವಾಡುವುದನ್ನು ನಿಲ್ಲಿಸಿ. ಈ ಹಿಂದೆ ಅನೇಕ ಪ್ರಯಾಣಿಕರು ಈ ಮಾರ್ಗದಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಕಲ್ಯಾಣ್ ಮತ್ತು ಥಾಣೆ ನಡುವಿನ ಎರಡು ಹೊಸ ಮಾರ್ಗಗಳು ಪೂರ್ಣಗೊಂಡ ನಂತರ ಪ್ರಯಾಣಿಕರಿಗೆ ಹೆಚ್ಚಿನ ಸ್ಥಳೀಯ ರೈಲು ಸೇವೆಗಳು ಸಿಗುತ್ತವೆ ಎಂದು ನಿರೀಕ್ಷಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆಯ ಸಮಯದಲ್ಲಿ ಹೆಚ್ಚಿನ ಸ್ಥಳೀಯ ರೈಲು ಸೇವೆಗಳ ಭರವಸೆಯನ್ನೂ ನೀಡಿದ್ದರು. ಆದರೆ ಕೇಂದ್ರ ರೈಲ್ವೆ ಇಲಾಖೆ ಈ ನಿರ್ಧಾರವನ್ನು ಹಿಂತೆಗೆದುಕೊಂಡಿದೆ. ಈ ಮಾರ್ಗದಲ್ಲಿ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಿಗೆ ಆದ್ಯತೆ ನೀಡಿದೆ” ಎಂದು ಮುಂಬೈ ರೈಲ್ವೆ ಪ್ರಯಾಣಿಕರ ಸಂಘ ಆರೋಪಿಸಿದೆ.
“ಈ ರೈಲು ದುರಂತಕ್ಕೆ ಮೇಲ್/ಎಕ್ಸ್‌ಪ್ರೆಸ್ ರೈಲುಗಳ ವಿಳಂಬ ಮತ್ತು ಸ್ಥಳೀಯ ರೈಲುಗಳನ್ನು ಸ್ಥಗಿತಗೊಳಿಸುವ ಜನವಿರೋಧಿ ನೀತಿಯೇ ಕಾರಣ. ದಟ್ಟಣೆ ಮತ್ತು ಅಸುರಕ್ಷಿತ ಪ್ರಯಾಣವು ಈ ನೀತಿಯ ನೇರ ಪರಿಣಾಮ. ಅಪಘಾತದ ಜವಾಬ್ದಾರಿಯನ್ನು ಡಿಆರ್‌ಎಂ ಸ್ವೀಕರಿಸಬೇಕು. ರೈಲ್ವೆ ಮಂಡಳಿಯು ಮುಂಬೈ ಸ್ಥಳೀಯ ರೈಲುಗಳ ನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಿ ಸ್ವತಂತ್ರ ಆಡಳಿತವನ್ನು ರಚಿಸಬೇಕು” ಎಂದು ಸಂಘ ಆಗ್ರಹಿಸಿದೆ.
ಸಂಘ ಹೇಳುವಂತೆಯೇ ಮುಂಬೈ ಮಾತ್ರವಲ್ಲ ದೇಶದ ಹಲವು ಭಾಗಗಳಲ್ಲಿ ಕೇಂದ್ರವು ಬಡ ಜನರ ಜೀವಾಳು ಆಗಿರುವ ಸ್ಥಳೀಯ ರೈಲುಗಳಿಗೆ ಆದ್ಯತೆ ನೀಡುತ್ತಿಲ್ಲ. ಆದ್ಯತೆ ಬಿಡಿ, ಇರುವ ರೈಲುಗಳನ್ನು ಸರಿಯಾಗಿ ನಿರ್ವಹಿಸುವ ವ್ಯವಸ್ಥೆಯನ್ನು ಮಾಡುತ್ತಿಲ್ಲ. ನೆಪ ಮಾತ್ರಕ್ಕೆ ಓಡಾಟ ಎಂದಾಗಿದೆ. ಜೊತೆಗೆ ಟಿಕೆಟ್ ದರವೂ ಹೆಚ್ಚಿಸುತ್ತಿದೆ. ರೈಲನ್ನು ಈಗ ಶ್ರೀಮಂತರ ಸಂಚಾರ ವ್ಯವಸ್ಥೆಯನ್ನಾಗಿ ಕೇಂದ್ರ ಪರಿವರ್ತಿಸುತ್ತಿದೆ. ಬಹುತೇಕ ಯಶಸ್ವಿಯೂ ಕಂಡಿದೆ.
ರೈಲುಗಳ ಆಧುನೀಕರಣ ನೆಪದಲ್ಲಿ ಕೇಂದ್ರ ಸರ್ಕಾರವು ಸ್ಥಳೀಯ ರೈಲುಗಳನ್ನು ಹಳಿತಪ್ಪಿಸುತ್ತಿವೆ. ಬೊಕ್ಕಸ ತುಂಬುವ ಇರಾದೆಯಷ್ಟೇ ಕೇಂದ್ರ ಸರ್ಕಾರಕ್ಕೆ ಇರುವುದು. ಪ್ರಸ್ತುತ ಏರುತ್ತಲೇ ಇರುವ ರೈಲು ದರದಿಂದ ಅದು ಸ್ಪಷ್ಟವಾಗುತ್ತದೆ. ಒಂದು ಕಾಲದ ಬಡವರ ವಾಹನ ಅದಾಗಲೇ ಬಡವರಿಗೆ ಕೈಗೆಟುಕದ ಸಂಚಾರವಾಗುವ ಹಂತಕ್ಕೆ ತಲುಪುತ್ತಿದೆ. ಹೆಚ್ಚು ಸಮಯ ಬೇಕಾಗಿಲ್ಲ, ಕೆಲವೇ ವರ್ಷಗಳು ಸಾಕು.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.