ಸ್ಯಾಂಡಲ್ವುಡ್ ನಟ ಡಾರ್ಲಿಂಗ್ ಕೃಷ್ಣ ಹಾಗೂ ಹಿರಿಯ ಬಹುಭಾಷಾ ನಟ ಪ್ರಕಾಶ್ ರಾಜ್ ಮುಖ್ಯ ಭೂಮಿಕೆಯಲ್ಲಿರುವ ಆರ್ಸಿ ಸ್ಟುಡಿಯೋಸ್ ನಿರ್ಮಾಣದ ಬಹು ನಿರೀಕ್ಷಿತ ʼಫಾದರ್ʼ ಚಿತ್ರದ ಹೊಸ ಪೋಸ್ಟರ್ವೊಂದು ಬಿಡುಗಡೆಯಾಗಿದೆ.
ನಾಳೆ (ಜೂ.12) ಡಾರ್ಲಿಂಗ್ ಕೃಷ್ಣ ಅವರ ಹುಟ್ಟುಹಬ್ಬ. ನಾಯಕನ ಹುಟ್ಟುಹಬ್ಬಕ್ಕೆ ವಿಭಿನ್ನ ಹಾಗೂ ವಿಶೇಷ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಆರ್ಸಿ ಸ್ಟುಡಿಯೋಸ್ ಹಾಗೂ ಚಿತ್ರತಂಡ ಕೃಷ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ.
ʼಲವ್ ಮಾಕ್ಟೇಲ್ʼ ಜೋಡಿ ಇಲ್ಲೂ ಒಂದಾಗಿದೆ. ಡಾರ್ಲಿಂಗ್ ಕೃಷ್ಣ ಅವರಿಗೆ ಅಮೃತಾ ಅಯ್ಯಂಗಾರ್ ನಾಯಕಿಯಾಗಿದ್ದು, ಅನೇಕ ನುರಿತ ಕಲಾವಿದರು ತಾರಾಬಳಗದಲ್ಲಿದ್ದಾರೆ.
ಅಪ್ಪ – ಮಗನ ಬಾಂಧವ್ಯದ ಕುರಿತ ಭಾವನಾತ್ಮಕ ಕಥೆಗೆ, ಎಮೋಷನಲ್ ಕಂಟೆಟ್ ಸಿನಿಮಾಗಳ ಮೇಲೆ ಹೆಚ್ಚು ಒಲವಿರುವ ನಿರ್ದೇಶಕ ಆರ್.ಚಂದ್ರು ಬಂಡವಾಳ ಹೂಡಿದ್ದಾರೆ. ಈಗಾಗಲೇ ಕಿಚ್ಚ ಸುದೀಪ್ ರಿಲೀಸ್ ಮಾಡಿದ್ದ ಚಿತ್ರದ ಫಸ್ಟ್ ಲುಕ್ ಗೆ ಒಳ್ಳೆಯ ಪ್ರತಿಕ್ರಿಯೆಗಳು ಬಂದಿದ್ದವು. ಮೈಸೂರು, ಧರ್ಮಸ್ಥಳ, ಮಂಗಳೂರು, ಬೆಂಗಳೂರು, ವಾರಣಾಸಿ ಸೇರಿ ಮುಂತಾದ ಕಡೆಗಳಲ್ಲಿ ಚಿತ್ರೀಕರಣಗೊಂಡಿದೆ.
ಇದನ್ನೂ ಓದಿ: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಪಿನಾಕ
ಮುಂಬೈನ ಖ್ಯಾತ ಉದ್ಯಮಿ ಆನಂದ್ ಪಂಡಿತ್ ಅರ್ಪಿಸುವ, ಅಲಂಕಾರ್ ಪಾಂಡ್ಯನ್ ಅವರ ಸಹಯೋಗದಲ್ಲಿ ಆರ್ಸಿ ಸ್ಟುಡಿಯೋಸ್ ಈ ಸಿನಿಮಾ ನಿರ್ಮಿಸಿದರೆ, ರಾಜ್ ಮೋಹನ್ ನಿರ್ದೇಶನ ಮಾಡಿದ್ದಾರೆ. ಸುಜ್ಞಾನ್ ಛಾಯಾಗ್ರಹಣವಿದೆ. ನಕುಲ್ ಅಭಯಂಕರ್ ಸಂಗೀತ ಸಂಯೋಜನೆ “ಫಾದರ್” ಚಿತ್ರಕ್ಕಿದ್ದು, ಹೆಚ್ಚು ನಿರೀಕ್ಷೆ ಮೂಡಿಸಿದೆ.