ಬೀದರ್ ಜಿಲ್ಲೆಯಲ್ಲಿ ಖಾಸಗಿ ಶಾಲಾ, ಕಾಲೇಜುಗಳ ಡೊನೇಷನ್ ಹಾವಳಿ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ನಮ್ಮ ಕರ್ನಾಟಕ ಸೇನೆ ಆಗ್ರಹಿಸಿದೆ.
ಈ ಕುರಿತು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಬರೆದ ಮನವಿ ಪತ್ರವನ್ನು ಸೇನೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ಬೀದರ್ ನಗರದಲ್ಲಿ ಬುಧವಾರ ಇಲಾಖೆಯ ಅಧಿಕಾರಿಗೆ ಸಲ್ಲಿಸಿದರು.
ʼಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಪಾಟೀಲ ಮಾತನಾಡಿ, ʼಶುಲ್ಕದ ವಿಚಾರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಇಲಾಖೆಯ ನಿಯಮ ಗಾಳಿ ತೂರುತ್ತಿವೆ. ಬಸ್‍ಗಾಗಿ ವಿದ್ಯಾರ್ಥಿಗಳ ಪಾಲಕರಿಂದ ಪ್ರತ್ಯೇಕ ಶುಲ್ಕ ವಸೂಲಿ ಮಾಡುತ್ತಿವೆ. ಅದಾಗಿಯೂ ಬಸ್/ವ್ಯಾನ್‍ಗಳಲ್ಲಿ ಸೀಟು ಸಿಗದೆ ಮಕ್ಕಳು ಜೋತಾಡಿಕೊಂಡು ಹೋಗುವ ಪರಿಸ್ಥಿತಿ ಇದೆʼ ಎಂದು ದೂರಿದರು.
ಶುಲ್ಕ ಪಾವತಿಸದ ವಿದ್ಯಾರ್ಥಿಗಳನ್ನು ಪೀಡಿಸುತ್ತಿವೆ. ಶಾಲಾ ಕಾಲೇಜುಗಳ ಶುಲ್ಕದ ಹೊರೆ ತಾಳದೆ ಬಡ ಹಾಗೂ ಮಧ್ಯಮ ವರ್ಗದ ಪಾಲಕರು ಆತ್ಮಹತ್ಯೆ ಮಾಡಿಕೊಂಡ ನಿದರ್ಶನಗಳಿವೆ. ಮಳೆಗಾಲದಲ್ಲಿ ಮಾತ್ರ ಮೇಲೇಳುವ ನಾಯಿ ಕೊಡೆಗಳಂತೆ ಖಾಸಗಿ ಶಾಲಾ, ಕಾಲೇಜುಗಳು ತಲೆ ಎತ್ತುತ್ತಿರುವುದು ಆಘಾತಕಾರಿ. ಖಾಸಗಿ ಶಾಲಾ, ಕಾಲೇಜು ನಡೆಸುವ ಸಂಸ್ಥೆಗಳು ಶಿಕ್ಷಣವನ್ನು ವ್ಯಾಪಾರವಾಗಿಸುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕಾಗಿದೆ. ಆದರೆ, ಶಿಕ್ಷಣ ಇಲಾಖೆ ಮೌನವಾಗಿರುವುದನ್ನು ಗಮನಿಸಿದರೆ ಇಲಾಖೆ ಖಾಸಗಿ, ಶಾಲಾ ಕಾಲೇಜುಗಳೊಂದಿಗೆ ಶಾಮೀಲಾದಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆʼ ಎಂದು ಆರೋಪಿಸಿದರು.
ʼಸರ್ಕಾರದ ಮಾನದಂಡಗಳನ್ನು ಅನುಸರಿಸದ ಶಾಲಾ, ಕಾಲೇಜುಗಳನ್ನು ಮುಲಾಜಿಲ್ಲದೆ ಮುಚ್ಚಿಸಬೇಕು. ಇಲ್ಲವಾದಲ್ಲಿ ಶಿಕ್ಷಣ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದುʼ ಎಂದು ಎಚ್ಚರಿಸಿದರು.
ಇದನ್ನೂ ಓದಿ : ಬೀದರ್ | ವಕ್ಫ್ ತಿದ್ದುಪಡಿ ಕಾಯ್ದೆ ಹಿಂಪಡೆಯಲು ಆಗ್ರಹಿಸಿ ರಾಷ್ಟ್ರಪತಿಗೆ ಮನವಿ
ಸೇನೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂಜು ಯಾದವ್, ಸಂಘಟನಾ ಕಾರ್ಯದರ್ಶಿಗಳಾದ ಜಿತೇಂದ್ರ ರಾಠೋಡ್, ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಅನಿಲ್ ರಾಜಗೀರಾ, ನಗರ ಘಟಕದ ಅಧ್ಯಕ್ಷ ಸಂತೋಷ್ ಪಾಟೀಲ, ಸಂತೋಷ ಮಳಚಾಪುರೆ, ಮಂಜುನಾಥ ಪಾಟೀಲ, ರಾಮಶೆಟ್ಟಿ ಹುಣಜೆ ಇದ್ದರು.