“ಸಚಿವ ಸಂಪುಟ ಪುನರ‍್ರಚನೆ ಮಾಡಿದರೆ ಅಧಿಕಾರ ಅನುಭವಿಸಿ ಜಿಡ್ಡುಗಟ್ಟಿ ಹೋಗಿರುವ ಹಳಬರನ್ನು ಸಚಿವ ಸ್ಥಾನದಿಂದ ತೆಗೆದು ಹೊಸಬರಿಗೆ ಹೈಕಮಾಂಡ್ ಅವಕಾಶ ನೀಡಬೇಕು” ಎಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಶಾಸಕ ಬಸವರಾಜ ಶಿವಗಂಗಾ ಅಭಿಪ್ರಾಯಪಟ್ಟರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಹೈಕಮಾಂಡ್ ಈಗಿನ ಸಚಿವರ ರಿಪೋರ್ಟ್ ನೋಡಿ ಅವರನ್ನೆಲ್ಲ ಕೈ ಬಿಡಬೇಕು. ಸಂಪುಟದಲ್ಲಿ 8 ರಿಂದ 10 ಜನರನ್ನು ಬಿಡಬೇಕು” ಎಂದು ತಿಳಿಸಿದರು.
ಸಚಿವ ಸಂಪುಟ ಪುನರ್ರಚನೆ ವಿಚಾರವಾಗಿ ರೀತಿ ಪ್ರತಿಕ್ರಿಯೆ ನೀಡಿದ ಅವರು “ಹೊಸ ಮುಖಗಳಿಗೆ ಅವಕಾಶ ಕೊಡಬೇಕು. 5 ರಿಂದ 6 ಬಾರಿ ಗೆದ್ದ ಶಾಸಕರುಗಳು ಇದುವರೆಗೂ ಸಚಿವರಾಗಿಲ್ಲ. ಅವರಿಗೂ ಸಚಿವ ಸ್ಥಾನ ಸಿಗಬೇಕು. ಎರಡು ವರ್ಷದ ಸಾಧನೆ ಎಂದು ಹೇಳುತ್ತಾರೆ. ಆದರೆ ಕೆಲವು ಸಚಿವರು ಏನು ಸಾಧನೆ ಮಾಡಿಲ್ಲ. ಹೊಸದಾಗಿ ಆಯ್ಕೆಯಾದ ಶಾಸಕರಿಗೆ ಸಚಿವ ಸ್ಥಾನ ನೀಡಿದರೆ ರಾಜ್ಯದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಾರೆ. ಹಳಬರಿಗೆ ಸಚಿವ ಸ್ಥಾನಕ್ಕೆ ಕೋಕ್ ಕೊಟ್ರೆ ಒಳ್ಳೆಯದು. ಹಳಬರು ಅಧಿಕಾರ ಅನುಭವಿಸಿ ಜಿಡ್ಡು ಹಿಡಿದು ಹೋಗಿದ್ದಾರೆ” ಎಂದು ಹೇಳಿದರು.
“ನಾನೇನು ಸನ್ಯಾಸಿಯಲ್ಲ, ನನಗೂ ಅಧಿಕಾರಿ ಕೊಟ್ಟರೆ ನಿಭಾಯಿಸುವೆ. ಹೈಕಮಾಂಡ್ ಸಚಿವ ಸ್ಥಾನ ಕೊಟ್ಟರೆ ಸಮರ್ಥವಾಗಿ ನಿಭಾಯಿಸುತ್ತೇನೆ. ಮಾತ್ರವಲ್ಲ ನಾನು ಆರು ತಿಂಗಳಲ್ಲಿ ಏನ್ ಕೆಲಸ ಮಾಡ್ತಿನಿ ಎಂದು ಬಾಂಡ್
ಬೇಕಾದ್ರೆ ಕೊಡುತ್ತೇನೆ” ಎಂದರು.
“ಜಿಲ್ಲೆಯಲ್ಲಿ ಹಿರಿಯ ಶಾಸಕ ಡಿ.ಜಿ.ಶಾಂತನಗೌಡ್ರು ಇದ್ದಾರೆ. ಅವರು ಹಿರಿಯ ರಾಜಕಾರಣಿ
ಅವರಿಗೆ ಕೊಟ್ರೆ ನಾನು ಖುಷಿ ಪಡುತ್ತೇನೆ. ಒಂದು ಜಿಲ್ಲೆಗೆ ಎರಡು ಸಚಿವ ಸ್ಥಾನ ಕೊಡಬಾರದು ಎಂದೇನಿಲ್ಲ. ಹೈಕಮಾಂಡ್ ಈಗಿನ ಸಚಿವರ ರಿಪೋರ್ಟ್ ನೋಡಿ, ಕೆಲವರನ್ನು ಕೈ ಬಿಡಬೇಕು” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಉಪವಿಭಾಗಾಧಿಕಾರಿಗಳ ಭರವಸೆ ಹಿನ್ನೆಲೆ ಅನಾಥ ಸೇವಾಶ್ರಮ ಅವ್ಯವಹಾರ ಪ್ರತಿಭಟನೆ ತಾತ್ಕಾಲಿಕ ಮುಂದೂಡಿಕೆ
“ಎರಡೂವರೆ ವರ್ಷ ಅಧಿಕಾರ ಹಂಚಿಕೆ ವಿಚಾರ ಕುರಿತು ಈಗ ಮಾತನಾಡುವುದು ಬೇಡ. ಮುಖ್ಯಮಂತ್ರಿ
ಸಿದ್ದರಾಮಯ್ಯ ಅವರು ಉತ್ತಮವಾದ ಕೆಲಸ ಮಾಡುತ್ತಿದ್ದಾರೆ. ಉತ್ತಮ ಆಡಳಿತ, ಉತ್ತಮ ಮಳೆ,
ಬೆಳೆ ಇದೆ. ಈಗ ಈ ವಿಷಯ ಕುರಿತು ಚರ್ಚೆ ಮಾಡುವುದು ಬೇಡ” ಎಂದು ಅಧಿಕಾರ ಹಂಚಿಕೆ ಕುರಿತು ಮೌನವಹಿಸಿದರು.