230 ಮಂದಿ ಪ್ರಯಾಣಿಕರು ಮತ್ತು 12 ಮಂದಿ ಸಿಬ್ಬಂದಿಗಳ ದಾರುಣ ಸಾವಿಗೆ ಕಾರಣವಾದ ಅಹಮದಾಬಾದ್ ವಿಮಾನ ದುರಂತ ಕುರಿತು ತನಿಖೆ ಆರಂಭವಾಗಿದು, ಘಟನಾ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಭೇಟಿ ನೀಡಿದ್ದಾರೆ.
ಅಹಮದಾಬಾದ್‌ನಲ್ಲಿ ನಡೆದ ದುರಂತ ಘಟನೆಯ ನಂತರ, ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ ನಿಗದಿಪಡಿಸಿರುವ ಅಂತರರಾಷ್ಟ್ರೀಯ ನಿಯಮಗಳಿಗೆ ಅನುಗುಣವಾಗಿ ವಿಮಾನ ಅಪಘಾತ ತನಿಖಾ ಬ್ಯೂರೋ (ಇದು ನಾಗರಿಕ ವಿಮಾನಯಾನ ಸಚಿವಾಲಯದ ಅಡಿಯಲ್ಲಿ ಸ್ವತಂತ್ರ ನಿಯಂತ್ರಕ ಸಂಸ್ಥೆಯಾಗಿದೆ) ಔಪಚಾರಿಕ ತನಿಖೆಯನ್ನು ಪ್ರಾರಂಭಿಸಿದೆ ಎಂದು ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಾಪು ಅವರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ವಿಮಾನ ದುರಂತ ಘಟನೆಯ ಬಳಿಕ ವಿಮಾನ ನಿಲ್ದಾಣದಲ್ಲಿ ಎಲ್ಲ ವಿಮಾನ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಘಟನೆ ಬೆನ್ನಲ್ಲೇ ವಿಮಾನ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಅತ್ಯಂತ ಎಚ್ಚರಿಕೆಯಿಂದ ಅನುಸರಿಸಲಾಗುತ್ತಿದೆ. ಅಹಮದಾಬಾದ್ ವಿಮಾನ ನಿಲ್ದಾಣವು ಸಂಜೆ 4.05 ರಿಂದ ವಿಮಾನ ಕಾರ್ಯಾಚರಣೆಗಳಿಗೆ ಲಭ್ಯವಿರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೆಡಿಕಲ್ ಕಾಲೇಜು ಹಾಸ್ಟೆಲ್ ಮೇಲೆಯೇ ವಿಮಾನ ಪತನವಾಗಿದ್ದರಿಂದ ಅಲ್ಲಿದ್ದವರೂ ಅನೇಕರು ಮೃತಪಟ್ಟಿದ್ದಾರೆ. ಸಾವಿನ ಬಗ್ಗೆ ಅಧಿಕೃತ ಘೋಷಣೆ ಡಿಎನ್ಎ ಪರೀಕ್ಷೆಯ ನಂತರ ಪ್ರಕಟವಾಗಲಿದೆ.
ಮೋದಿ, ಶಾ ರಾಜೀನಾಮೆ ನೀಡಲಿ
ಲಂಡನ್‌ಗೆ ಅಲಹಾಬಾದ್‌ನಿಂದ ಹೊರಟಿದ್ದ ಏರ್ ಇಂಡಿಯಾ ವಿಮಾನ ಪತನವಾಗಿದೆ. ಇದರ ನೈತಿಕ ಹೊಣೆ ಹೊತ್ತು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಆಗ್ರಹಿಸಿದ್ದಾರೆ. 1950ರಲ್ಲಿ ರೈಲು ಅಪಘಾತ ಸಂಭವಿಸಿದಾಗ, ಲಾಲ್ ಬಹದ್ದೂರ್ ಶಾಸ್ತ್ರಿ ರಾಜೀನಾಮೆ ನೀಡಿದ್ದರು. ಅದೇ ನೈತಿಕತೆಯ ಆಧಾರದಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ನಾಗರಿಕ ವಿಮಾನ ಸಚಿವ ರಾಮ್ ಮೋಹನ್ ನಾಯ್ಡು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.