ಉದ್ಯಮಿ ವಿಜಯ ಮಲ್ಯ ಅವರು ಇತ್ತೀಚೆಗೆ ಪಾಡ್‌ಕಾಸ್ಟ್ ಸಂದರ್ಶನದಲ್ಲಿ ತಾವು ಭಾರತದ ಬ್ಯಾಂಕುಗಳಲ್ಲಿ ಪಡೆದಿದ್ದ ಸಾಲಕ್ಕಿಂತ ಎರಡು ಪಟ್ಟು ಹೆಚ್ಚು ಮರುಪಾವತಿ ಮಾಡಿರುವುದಾಗಿ ಹೇಳಿಕೊಂಡಿದ್ದರು. ಪಡೆದಿದ್ದ 6 ಸಾವಿರ ಕೋಟಿ ರೂ. ಸಾಲಕ್ಕೆ 14,000 ಕೋಟಿ ರೂ. ಮರುಪಾವತಿ ಮಾಡಿದ್ದೇನೆ ಎಂದು ಪ್ರತಿಪಾದಿಸಿದ್ದರು. ಈ ಬೆನ್ನಲ್ಲೇ, ಹಣಕಾಸು ಸಚಿವಾಲಯವು ವಿಜಯ್ ಮಲ್ಯ ಅವರ ಸಾಲದ ಕುರಿತು ಅಂಕಿಅಂಶ ಬಿಡುಗಡೆ ಮಾಡಿದೆ. ವಿಜಯ್ ಮಲ್ಯ ಪಡೆದಿರುವ ಒಟ್ಟು ಸಾಲ 17,781 ಕೋಟಿ ರೂ. ಅದರಲ್ಲಿ, ಇನ್ನೂ 6,848 ಕೋಟಿ ರೂ. ಬಾಕಿ ಇದೆ ಎಂದು ಹೇಳಿದೆ.
ಹಣಕಾಸು ಸಚಿವಾಲಯದ ಸಾಲ ವಸೂಲಾತಿ ನ್ಯಾಯಾಧೀಕರಣದ ಪ್ರಕಾರ, ಕಿಂಗ್ ಫಿಷರ್ ಏರ್ ಲೈನ್ಸ್ 2013ರ ಜೂನ್‌ನಲ್ಲಿ 6,848 ಕೋಟಿ ರೂ. ಅನುತ್ಪಾದಕ ಸಾಲವನ್ನು ಪಡೆದಿತ್ತು. ಈ ಸಾಲವು 2025ರ ಜೂನ್ 10ರ ವೇಳೆಗೆ ಸಾಲ, ಬಡ್ಡಿ, ಚಕ್ರಬಡ್ಡಿ ಎಲ್ಲವನ್ನೂ ಒಳಗೊಂಡು 17,781 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಈ ಮೊತ್ತದಲ್ಲಿ10,815 ಕೋಟಿ ರೂಪಾಯಿ ಹಣವನ್ನು ಬ್ಯಾಂಕುಗಳು ವಸೂಲಿ ಮಾಡಿವೆ. ಇನ್ನೂ, 6,848 ಕೋಟಿ ರೂ. ಸಾಲ ಬಾಕಿ ಇದೆ.
“ವಿಜಯ ಮಲ್ಯ ಅವರು ಬ್ಯಾಂಕ್‌ಗಳಿಗೆ ಸಾಲ ಮರುಪಾವತಿಸಿರುವುದಾಗಿ ಹೇಳಿಕೊಂಡಿರುವ ಮೊತ್ತದಲ್ಲಿ ಬಡ್ಡಿ, ಚಕ್ರಬಡ್ಡಿ ಸೇರಿಲ್ಲ. ಸಾಲದ ಮೂಲ ಮೊತ್ತದ ಬಗ್ಗೆ ಮಾತ್ರವೇ ಹೇಳಿದ್ದಾರೆ. ಸಾಲದ ಮೊತ್ತಕ್ಕೆ ವಿಧಿಸಲಾಗಿರುವ ಬಡ್ಡಿ, ಚಕ್ರಬಡ್ಡಿ, ದಂಡದ ಕುರಿತು ಅವರು ಯಾವುದೇ ಮಾತನಾಡಿಲ್ಲ. ಅವರ ಸಾಲಕ್ಕೆ ಬಡ್ಡಿ ಮತ್ತು ಇತರ ಶುಲ್ಕಗಳು ಸೇರಿ 10,933 ಕೋಟಿ ರೂ.ಗಳನ್ನು ವಿಧಿಸಲಾಗಿದೆ. ಒಟ್ಟಾರೆ ವಿಜಯ್ ಮಲ್ಯ ಸಾಲವು ಪ್ರಸ್ತುತ 17,781 ಕೋಟಿ ರೂ. ಆಗಿದೆ” ಎಂದು ತಿಳಿಸಿದೆ.
ಬ್ಯಾಂಕ್‌ವಾರು ವಿಜಯ್ ಮಲ್ಯ ಸಾಲ ಮತ್ತು ವಸೂಲಿಯಾದ ಮೊತ್ತ;

ವಿಜಯ್ ಮಲ್ಯ ಅವರು ಸಾಲ ಪಡೆಯುವಾಗ ಒತ್ತಿ ಇಟ್ಟಿದ್ದ ಗೋವಾದಲ್ಲಿರುವ ಕಿಂಗ್‌ಫಿಷರ್ ವಿಲ್ಲಾ ಸೇರಿದಂತೆ ಮಲ್ಯ ಅವರ ಆಸ್ತಿಗಳಿಗೆ ಸಂಬಂಧಿಸಿದ 10,815 ಕೋಟಿ ರೂ. ಮೌಲ್ಯದ ಷೇರುಗಳನ್ನು ಬ್ಯಾಂಕ್‌ಗಳು ಮಾರಾಟ ಮಾಡಿ, ಸಾಲವನ್ನು ವಸೂಲಿ ಮಾಡಿವೆ. ಆದಾಗ್ಯೂ, ಇನ್ನೂ 6,848 ಕೋಟಿ ರೂ. ಸಾಲ ಬಾಕಿ ಇದೆ ಎಂದು ಸಚಿವಾಲಯ ವಿವರಿಸಿದೆ.