- ಹಂತ-ಹಂತವಾಗಿ ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ
- ಬಸವನಗುಡಿ ಈಜುಕೊಳದ ಎದುರು ನಕ್ಷೆಗೆ ವ್ಯತಿರಿಕ್ತವಾಗಿ ಹೆಚ್ಚುವರಿ ಕಟ್ಟಡ ನಿರ್ಮಾಣ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ದಕ್ಷಿಣ ವಲಯದಲ್ಲಿ ನಕ್ಷೆಗೆ ವ್ಯತಿರಿಕ್ತವಾಗಿ ಒಟ್ಟು 80 ಕಟ್ಟಡಗಳನ್ನು ನಿರ್ಮಾಣ ಮಾಡಿದ್ದು, ಹಂತ-ಹಂತವಾಗಿ ಎಲ್ಲ ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಬಿಬಿಎಂಪಿ ದಕ್ಷಿಣ ವಲಯ ಆಯುಕ್ತ ಜಯರಾಮ್ ರಾಯಪುರ ತಿಳಿಸಿದರು.
ದಕ್ಷಿಣ ವಲಯ ಬಸವನಗುಡಿ ಈಜುಕೊಳದ ಎದುರು ಗುರುವಾರ ಅನಧಿಕೃತ ಕಟ್ಟಡ ತೆರವು ಕಾರ್ಯಾಚರಣೆ ಆರಂಭಿಸಲಾಯಿತು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, “ನಕ್ಷೆಗೆ ವ್ಯತಿರಿಕ್ತವಾಗಿ ಅನಧಿಕೃತವಾಗಿ ನಿರ್ಮಿಸಲಾಗುತ್ತಿರುವ 80 ಕಟ್ಟಡಗಳಿಗೆ ನಗರ ಯೋಜನೆ ಬಿಬಿಎಂಪಿ ಕಾಯ್ದೆ 356(2) ನಲ್ಲಿ ಅಂತಿಮ ಆದೇಶ ಜಾರಿಗೊಳಿಸಿದ್ದು, ಕಟ್ಟಡ ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ” ಎಂದು ಹೇಳಿದರು.
“ಜುಲೈ 19ರಂದು ಬಸವನಗುಡಿಯ ಗಿರಿನಗರದಲ್ಲಿ ಒಂದು ಅಂತಸ್ತು ಹೆಚ್ಚುವರಿಯಾಗಿ ನಿರ್ಮಾಣ ಮಾಡಲಾಗುತ್ತಿದ್ದ ಕಟ್ಟಡವನ್ನು ನಗರ ಯೋಜನೆ ಅಧಿಕಾರಿಗಳು ಹಾಗೂ ವಾರ್ಡ್ ಮಟ್ಟದ ಅಭಿಯಂತರರು ತೆರವುಗೊಳಿಸಿದರು. ಗುರುವಾರ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಪಂಪ ಮಹಾಕವಿ ರಸ್ತೆ, ಬಸವನಗುಡಿ ಈಜುಕೊಳದ ಎದುರು ನಕ್ಷೆಗೆ ವ್ಯತಿರಿಕ್ತವಾಗಿ ಹೆಚ್ಚುವರಿಯಾಗಿ ನಿರ್ಮಿಸಲಾಗುತ್ತಿರುವ ಎರಡು ಅಂತಸ್ತುಗಳನ್ನು ತೆರವುಗೊಳಿಸಲಾಗುತ್ತಿದೆ” ಎಂದರು.
“ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಸಾಕಷ್ಟು ಕಡೆ ನಕ್ಷೆಗೆ ವ್ಯತಿರಿಕ್ತವಾಗಿ ಕಟ್ಟಡಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ ಎಂಬ ದೂರುಗಳನ್ನು ಆಧರಿಸಿ ನಗರ ಯೋಜನಾ ಅಧಿಕಾರಿಗಳು, ಹೆಚ್ಚುವರಿಯಾಗಿ ಕಟ್ಟಿರುವಂತಹ ಅಂತಸ್ತುಗಳನ್ನು ದಾಖಲೆ ಸಹಿತ ಸಾಬೀತುಪಡಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಕ್ಷೆ ಉಲ್ಲಂಘಿಸಿ ನಿರ್ಮಾಣ ಮಾಡಿರುವ ಕಟ್ಟಗಳ ತೆರವಿಗೆ ಆದೇಶ ಹೊರಡಿಸಲಾಗಿದೆ” ಎಂದು ಹೇಳಿದರು.
“ಮುಂದಿನ ದಿನಗಳಲ್ಲಿ ಉಳಿದ ಕಟ್ಟಡಗಳು ನಕ್ಷೆಗೆ ವ್ಯತಿರಿಕ್ತವಾಗಿ ನಿರ್ಮಿಸಲಾಗುತ್ತಿರುವ ಹೆಚ್ಚುವರಿ ಅಂತಸ್ತುಗಳನ್ನು ತೆರವುಗೊಳಿಸಲು ಯೋಜನೆಯನ್ನು ತಯಾರಿಸಲಾಗಿದ್ದು, ತೆರವು ಮಾಡುವ ಕಾರ್ಯವನ್ನು ಮುಂದುವರಿಸಲಾಗುವುದು ಮತ್ತು ನ್ಯಾಯಾಲಯದಲ್ಲಿ ಇದ್ದ ತಡೆಯಾಜ್ಞೆಗಳು ತೆರವಾಗಿದ್ದು, ಅಕ್ರಮವಾಗಿ ಹೆಚ್ಚುವರಿ ನಿರ್ಮಿಸಲಾಗುತ್ತಿರುವ ಅಂತಸ್ತುಗಳನ್ನು ತೆರವುಗೊಳಿಸಲಾಗುತ್ತಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಗಣ್ಯರಿಗೆ ಐಎಎಸ್ ಅಧಿಕಾರಿಗಳು ಸ್ವಾಗತ ಕೋರುವುದರಲ್ಲಿ ಯಾವುದೇ ತಪ್ಪಿಲ್ಲ: ಬ್ರಿಜೇಶ್ ಕಾಳಪ್ಪ
ಉಲ್ಲಂಘನೆಯಾಗಿರುವ ಕಟ್ಟಡಗಳ ವಿವರ
ದಕ್ಷಿಣ ವಲಯ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಪೈಕಿ ಚಿಕ್ಕಪೇಟೆಯಲ್ಲಿ 31 ಕಟ್ಟಗಳು, ಜಯನಗರದಲ್ಲಿ 18 ಕಟ್ಟಡಗಳು, ಬಸವನಗುಡಿಯಲ್ಲಿ 16 ಕಟ್ಟಡಗಳು, ಪದ್ಮನಾಭನಗರದಲ್ಲಿ 9 ಕಟ್ಟಡಗಳು, ಬಿಟಿಎಂ ಬಡಾವಣೆಯಲ್ಲಿ 5 ಕಟ್ಟಡಗಳು ಹಾಗೂ ವಿಜಯನಗರದಲ್ಲಿ 1 ಕಟ್ಟಡ ಸೇರಿದಂತೆ ಒಟ್ಟು 80 ಕಟ್ಟಡಗಳಲ್ಲಿ ಉಲ್ಲಂಘನೆ ಮಾಡಿ ನಕ್ಷೆಗೆ ವ್ಯತಿರಿಕ್ತವಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದು, ಉಲ್ಲಂಘಿಸಿರುವ ಕಟ್ಟಡಗಳನ್ನು ಹಂತ-ಹಂತವಾಗಿ ಎಲ್ಲ ತೆರವುಗೊಳಿಸಲಾಗುವುದು.