ಗುಜರಾತ್‌ನ ಅಹಮದಾಬಾದ್‌ನಿಂದ ಲಂಡನ್‌ಗೆ ಹಾರಿದ ಏರ್ ಇಂಡಿಯಾ ಬೋಯಿಂಗ್ 787 ವಿಮಾನ(AI 171) ವಿಮಾನ ಗುರುವಾರ(ಜೂನ್ 12) ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾಗಿದ್ದು ದುರಂತದಲ್ಲಿ 230 ಮಂದಿ ಪ್ರಯಾಣಿಕರು ಮತ್ತು 12 ಸಿಬ್ಬಂದಿಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ದುರಂತದ ಬಗ್ಗೆ ಹಲವು ಸಂಸ್ಥೆಗಳು ತನಿಖೆ ನಡೆಸಲಿದೆ.
ಈ ದುರಂತದ ಬೆನ್ನಲ್ಲೇ ಬೋಯಿಂಗ್ 787 ವಿಮಾನದಲ್ಲಿ ಈ ಹಿಂದೆ ಹಲವು ಸಮಸ್ಯೆಗಳು ಕಾಣಿಸಿಕೊಂಡಿರುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಹಾಗೆಯೇ ಈವರೆಗೂ ಈ ವಿಮಾನ ಅಪಘಾತದ ಕಾರಣ ನಿಗೂಢವಾಗಿದೆ. ಈ ಹಿನ್ನೆಲೆ ಹಲವು ಸಂಸ್ಥೆಗಳು ಈ ಅವಘಡದ ಬಗ್ಗೆ ತನಿಖೆ ನಡೆಸಲು ಆರಂಭಿಸಿದೆ.
ಇದನ್ನು ಓದಿದ್ದೀರಾ? ಬೋಯಿಂಗ್ 787 ವಿಮಾನಗಳ ತಾಂತ್ರಿಕ ದೋಷಗಳ ಬಗ್ಗೆ ಎಚ್ಚರಿಸಿದ್ದ ಎಂಜಿನಿಯರ್ ನಿಗೂಢ ಸಾವು; ಮತ್ತೆ ಮುನ್ನೆಲೆಗೆ
ಈಗಾಗಲೇ ವಿಮಾನ ಅಪಘಾತ ತನಿಖಾ ಬ್ಯೂರೋ(AAIB) ತನಿಖೆಯನ್ನು ಕೈಗೆತ್ತಿಕೊಳ್ಳಲಿದೆ. ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ(ICAO) ನಿಗದಿಪಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿ AAIB ಔಪಚಾರಿಕ ತನಿಖೆಯನ್ನು ಪ್ರಾರಂಭಿಸಿದೆ ಎಂದು ವರದಿಯಾಗಿದೆ. ಈಗಾಗಲೇ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಸ್ಥಳಕ್ಕೆ ಭೇಟಿ ನೀಡಿದೆ.
ಇದನ್ನು ಹೊರತುಪಡಿಸಿ ಅಪಘಾತದ ಬಗ್ಗೆ ವಿವರವಾದ ಪರಿಶೀಲನೆ ನಡೆಸಲು ಸರ್ಕಾರ ಬಹು ವಿಭಾಗಗಳ ತಜ್ಞರನ್ನು ಒಳಗೊಂಡ ‘ಉನ್ನತ ಮಟ್ಟದ ಸಮಿತಿ’ಯನ್ನು ರಚಿಸುತ್ತಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಸಮಿತಿಯು ವಾಯುಯಾನ ಸುರಕ್ಷತೆಯನ್ನು ಬಲಪಡಿಸಲು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ ಎನ್ನಲಾಗಿದೆ.
ಇನ್ನು ಅಮೆರಿಕದ ವಾಯುಯಾನ ನಿಯಂತ್ರಕ ಫೆಡರಲ್ ವಿಮಾನಯಾನ ಆಡಳಿತ(FAA) ಏರ್ ಇಂಡಿಯಾ ವಿಮಾನ ಅಪಘಾತದ ಬಗ್ಗೆ ಮಾಹಿತಿ ಪಡೆಯುವ ನಿಟ್ಟಿನಲ್ಲಿ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ(NTSB)ನೊಂದಿಗೆ ಸಂಪರ್ಕದಲ್ಲಿದೆ ಎಂದು ತಿಳಿಸಿದೆ.
ಇದನ್ನು ಓದಿದ್ದೀರಾ? ಕಳೆದ ಐದು ವರ್ಷಗಳಲ್ಲಿ ಜಗತ್ತು ಕಂಡ ಭೀಕರ ವಿಮಾನ ದುರಂತಗಳಿವು
“ಅಂತಾರಾಷ್ಟ್ರೀಯವಾಗಿ ಯಾವುದೇ ಅವಘಡ ಸಂಭವಿಸಿದಾಗ ಅಲ್ಲಿನ ಸರ್ಕಾರ ತನಿಖೆಯನ್ನು ಮುನ್ನಡೆಸುತ್ತದೆ. ಎನ್‌ಟಿಎಸ್‌ಬಿ ಅಮೆರಿಕದ ಅಧಿಕೃತ ಪ್ರತಿನಿಧಿಯಾಗಿರುತ್ತದೆ. ಎಫ್‌ಎಎ ತಾಂತ್ರಿಕ ಬೆಂಬಲವನ್ನು ಒದಗಿಸುತ್ತದೆ. ಎನ್‌ಟಿಎಸ್‌ಬಿ ಸಮನ್ವಯದೊಂದಿಗೆ ತಕ್ಷಣವೇ ತಂಡವನ್ನು ರಚಿಸಲು ನಾವು ಸಿದ್ಧರಿದ್ದೇವೆ” ಎಂದು ಹೇಳಿಕೆಯಲ್ಲಿ ಹೇಳಿದೆ.
“DOT(ಯುಎಸ್ ಸಾರಿಗೆ ಇಲಾಖೆ) ಮತ್ತು FAA ಯಾವಾಗಲೂ ಸುರಕ್ಷತೆಗೆ ಮೊದಲ ಆದ್ಯತೆ ನೀಡುತ್ತದೆ. ಸತ್ಯಾಂಶದ ತನಿಖೆ ನಡೆಸಲಾಗುತ್ತದೆ. ಸದ್ಯ ನಾವು ಎಫ್‌ಎಎ ಮುಖಾಂತರ ಎನ್‌ಟಿಎಸ್‌ಬಿಯಿಂದ ತಂಡವನ್ನು ನಿಯೋಜಿಸುವ ಪ್ರಕ್ರಿಯೆಯಲ್ಲಿದ್ದೇವೆ. ನಮ್ಮಲ್ಲಿ ಜಿಇ ಮತ್ತು ಬೋಯಿಂಗ್ ಕೂಡಾ ಇವೆ. ಅವುಗಳ ತಮ್ಮ ತನಿಖಾಧಿಕಾರಿಗಳನ್ನು ಭಾರತದಲ್ಲಿ ನಿಯೋಜಿಸುತ್ತಿದ್ದಾರೆ. ಭಾರತ ತನಿಖೆಯ ನೇತೃತ್ವ ವಹಿಸಲಿ. ಭಾರತಕ್ಕೆ ಅಗತ್ಯವಿರುವ ಯಾವುದೇ ಸಹಾಯವನ್ನು ಒದಗಿಸಲು ನಾವು ಸಿದ್ಧರಿದ್ದೇವೆ” ಎಂದು ಯುಎಸ್ ಸಾರಿಗೆ ಕಾರ್ಯದರ್ಶಿ ಸೀನ್ ಡಫಿ ಅವರು ತಿಳಿಸಿರುವುದಾಗಿ ಫಾರ್ಚೂನ್ ಇಂಡಿಯಾ ವರದಿ ಮಾಡಿದೆ.
