ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಮಂಡಳಿಯ ʼಆರೋಗ್ಯ ಆವಿಷ್ಕಾರʼ ಯೋಜನೆಯಡಿ ಆರೋಗ್ಯ ಇಲಾಖೆಯ ವಿವಿಧ ಕಾಮಗಾರಿಗಳಿಗೆ ನಾಳೆ ಯಾದಗಿರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು ಚಾಲನೆ ನೀಡಲಿದ್ದು, ಕಾರ್ಯಕ್ರಮದ ಸಿದ್ಧತೆ ಭರದಿಂದ ನಡೆದಿದೆ.
ಕೆಕೆಆರ್‌ಡಿಬಿ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಜರುಗುವ ವಿಭಾಗ ಮಟ್ಟದ ಕಾರ್ಯಕ್ರಮ ಇದಾಗಿದೆ. ಯಾದಗಿರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮಕ್ಕಾಗಿ ಭರ್ಜರಿ ತಯಾರಿ ನಡೆದಿದೆ.
ನಾಳೆ (ಜೂ.14) ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮ ಸ್ಥಳಕ್ಕೆ ಶಾಸಕ ಚನ್ನಾರಡ್ಡಿ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು.
ಶಾಸಕ ಚನ್ನಾರೆಡ್ಡಿ ಪಾಟೀಲ್ ಮಾತನಾಡಿ, ʼ₹440.68 ಕೋಟಿ ವೆಚ್ಚದ ಆರೋಗ್ಯ ಅವಿಷ್ಕಾರ ಯೋಜನೆಯಡಿ ಕಲ್ಯಾಣ ಕರ್ನಾಟಕ ಭಾಗದ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ಸಮಾರಂಭಕ್ಕೆ ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್, ಸಚಿವರಾದ ದಿನೇಶ ಗುಂಡೂರಾವ ಸೇರಿದಂತೆಯೇ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳು ಆಗಮಿಸಲಿದ್ದಾರೆʼ ಎಂದು ಹೇಳಿದರು.
ʼಯಾದಗಿರಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವಡಗೇರಾದಲ್ಲಿ ಮೂರು ಎಕರೆ ಜಾಗದಲ್ಲಿ 50 ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಾಣ, ನಗರಕ್ಕೆ ಹೊಂದಿಕೊಂಡಿರುವ ಭೀಮಾ ಸೇತುವೆ ಹಳೆಯದಾಗಿದ್ದು, ಹೊಸ ಸೇತುವೆಗಾಗಿ ಮತ್ತು ನಗರದಲ್ಲಿ ಯುಜಿಡಿ ಕಾಮಗಾರಿಗಾಗಿ ಮಂಜೂರಾದ ₹350 ಕೋಟಿ ಈಗ ₹55 ಕೋಟಿ ಬಂದಿದ್ದು, ಉಳಿದ ಅನುದಾನ ಬಿಡುಗಡೆ ಸೇರಿದಂತೆಯೇ ಇತರೇ ಬೇಡಿಕೆಗಳಿಗೆ ಸಿಎಂ ಅವರನ್ನು ಒತ್ತಾಯಿಸಲಾಗುವುದುʼ ಶಾಸಕರು ಹೇಳಿದರು.
ಆರೋಗ್ಯ ಅವಿಷ್ಕಾರದಲ್ಲಿ ಕಲ್ಯಾಣದಲ್ಲಿ 1,200 ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ, 6 ಸಮುದಾಯ ಆರೋಗ್ಯ ಕೇಂದ್ರ ಸ್ಥಾಪನೆ, 1 ನಗರ ಆರೋಗ್ಯ ಕೇಂದ್ರಕ್ಕೂ ಚಾಲನೆ, 14 ಸಿಎಚ್‌ಸಿಗಳನ್ನು 100 ಹಾಸಿಗೆಗೆ ಮೇಲ್ದರ್ಜೆಗೆ ಏರಿಸುವುದು, 3 ಸಿಎಚ್‌ಸಿಗಳನ್ನು 100 ರಿಂದ 1500 ಹಾಸಿಗೆಗೆ ಮೇಲ್ದರ್ಜೆಗೇರಿಸುವುದು, 30 ಹಾಸಿಗೆ 3 ಸಿಎಚ್‌ಸಿಗಳನ್ನು 150 ಹಾಸಿಗೆಗೆ ಹೆಚ್ಚಿಸುವುದು, 2 ಪಿಎಚ್‌ಸಿಗಳನ್ನು 100 ಹಾಸಿಗೆಗೆ ಮೇಲ್ದರ್ಜೆಗೆ ಏರಿಸಲಾಗುತ್ತದೆ.
ಇದನ್ನೂ ಓದಿ: ಸಾಂವಿಧಾನಿಕ ಪ್ರತಿಜ್ಞೆಯಡಿ ಮದುವೆ; ಸ್ಥಳೀಯರ ಚಿತ್ತ, ಹೊಸಮನಿ ಕುಟುಂಬದ ಸುತ್ತ
ಯಾದಗಿರಿ ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರವಾಸದ ಹಿನ್ನಲೆಯಲ್ಲಿ ಸೂಕ್ತ ಬಂದೋಬಸ್ತ್‌ಗಾಗಿ ತೆಗೆದುಕೊಂಡ ಕ್ರಮಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಮತ್ತು ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ.ಶ್ರೀನಿವಾಸ, ಹೆಚ್ಚುವರಿ ಎಸ್.ಪಿ.ಧರಣೇಶ್ ಗುರುವಾರ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು.