ಬೆಂಗಳೂರನ್ನು ಟಾರ್ಗೆಟ್ ಮಾಡಿ ನಗರದ 10 ಕಡೆ ಸ್ಪೋಟ ನಡೆಸಲು ಸಂಚು ರೂಪಿಸಿದ್ದ ಶಂಕಿತ ಉಗ್ರರನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ದ ಪೊಲೀಸರು ಬಂಧಿಸಿದ್ದಾರೆ. ಇದೀಗ ಬಂಧಿತ ಆರೋಪಿಗಳ ಪೈಕಿ ಓರ್ವನ ಮನೆಯಲ್ಲಿ ನಾಲ್ಕು ಗ್ರೆನೇಡ್ ಪತ್ತೆಯಾಗಿದೆ.
ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿರುವ ಬಂಧಿತ ಶಂಕಿತ ಉಗ್ರ ಜಾಹೀದ್ ತಬ್ರೇಜ್ ಮನೆಯಲ್ಲಿ ಗ್ರೆನೇಡ್ ಇಟ್ಟಿರುವುದನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದಾರೆ.
ಪ್ರಮುಖ ಆರೋಪಿ ಜುನೈದ್ ವಿದೇಶದಲ್ಲಿದ್ದುಕೊಂಡು ಅಪರಿಚಿತ ವ್ಯಕ್ತಿಯನ್ನು ಜಾಹೀದ್‌ಗೆ ಪರಿಚಯ ಮಾಡಿ ಆತನಿಂದ ಗ್ರೆನೇಡ್ ಪೂರೈಕೆ ಮಾಡಿಸಿದ್ದನು. ಜುನೈದ್ ಮಾತಿನಂತೆ ಶಂಕಿತ ಉಗ್ರ ಜಾಹೀದ್ ತಬ್ರೇಜ್ ಪಾರ್ಸಲ್ ಮೂಲಕ ಬಂದಿದ್ದ ಗ್ರೆನೇಡ್ ಅನ್ನು ಸುರಕ್ಷಿತವಾಗಿ ತಮ್ಮ ಮನೆಯಲ್ಲಿ ಕೆಮಿಕಲ್ ಮತ್ತು ಮರಳು ತುಂಬಿದ್ದ ಚೀಲದಲ್ಲಿ ಇಟ್ಟುಕೊಂಡಿದ್ದನು ಎಂದು ತಿಳಿದುಬಂದಿದೆ.
ಈ ಬಗ್ಗೆ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಜಂಟಿ ಪೊಲೀಸ್ ಆಯುಕ್ತ ಡಾ. ಎಸ್ ಡಿ ಶರಣಪ್ಪ, “ಶಂಕಿತ ಐವರು ಉಗ್ರರನ್ನು ನ್ಯಾಯಲಯಕ್ಕೆ ಹಾಜರು ಪಡಿಸಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಆರೋಪಿ ಜಾಹೀದ್ ತಲೆಮರೆಸಿಕೊಂಡು ವಿದೇಶದಲ್ಲಿರುವ ಪ್ರಮುಖ ಆರೋಪಿ ಜತೆಗೆ ಸಂಪರ್ಕದಲ್ಲಿದ್ದನು” ಎಂದು ತಿಳಿಸಿದರು.
“ಶಂಕಿತ ಉಗ್ರ ಜಾಹೀದ್ ಪ್ರಮುಖ ಆರೋಪಿ ನೀಡಿದ್ದ ಗ್ರೆನೇಡ್ ಅನ್ನು ತನ್ನ ಮನೆಯಲ್ಲಿ ಸುರಕ್ಷಿತವಾಗಿಟ್ಟಿದ್ದನು. ಆರೋಪಿ ನೀಡಿದ ಮಾಹಿತಿ ಮೇರೆಗೆ ಬಾಂಬ್ ಸ್ಕ್ವಾಡ್ ಕರೆದುಕೊಂಡು ಸಿಸಿಬಿ ತಂಡ ಆರೋಪಿ ಮನೆ ಪರಿಶೀಲನೆ ನಡೆಸಿದೆ. ಈ ವೇಳೆ ನಾಲ್ಕು ಜೀವಂತ ಗ್ರೆನೇಡ್ ಸಿಕ್ಕಿದೆ. ಆರೋಪಿ ಮನೆಯ ಬೀರುವಿನಲ್ಲಿ ಗ್ರೆನೇಡ್‌ಗಳನ್ನು ಬಟ್ಟೆಯಲ್ಲಿ ಸುತ್ತಿ ಸುರಕ್ಷಿತವಾಗಿಟ್ಟಿದ್ದನು. ಯಾವುದೇ ಕ್ಷಣದಲ್ಲಿ ಬೇಕಾದರೂ ಬಳಸಬಹುದಾದ 4 ಗ್ರೆನೇಡ್ ಜಪ್ತಿ ಮಾಡಲಾಗಿದೆ” ಎಂದು ಮಾಹಿತಿ ನೀಡಿದರು.
“ಬೇರೊಬ್ಬ ವ್ಯಕ್ತಿಯ ಮೂಲಕ ಗ್ರೆನೇಡ್ ಪಾರ್ಸಲ್ ನೀಡಲಾಗಿದೆ. ಇದನ್ನು ಪಾರ್ಸಲ್ ಮಾಡಿದರವರು ಯಾರು ಎಂಬ ಬಗ್ಗೆ ಪತ್ತೆ ಮಾಡಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಇದಕ್ಕಾಗಿ ಸಿಸಿಬಿ ವಿಶೇಷ ತಂಡ ರಚನೆ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ತಲೆಮರೆಸಿಕೊಂಡಿರುವ ಆರೋಪಿ ವಿದೇಶದಲ್ಲಿರುವ ಮಾಹಿತಿ ಇದೆ. ಆರೋಪಿ ಪತ್ತೆಗಾಗಿ ಬೇರೆ ಬೇರೆ ತನಿಖಾ ಸಂಸ್ಥೆಗಳನ್ನು ಸಂಪರ್ಕಿಸಿದ್ದೇವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ | ಅನಧಿಕೃತ 80 ಕಟ್ಟಡಗಳ ತೆರವಿಗೆ ಸೂಚನೆ: ಆಯುಕ್ತ ಜಯರಾಮ್ ರಾಯಪುರ
ಪೊಲೀಸರೇ ಗ್ರೆನೇಡ್ ತಂದಿಟ್ಟಿದ್ದಾರೆ: ಶಂಕಿತ ಉಗ್ರನ ಸಹೋದರ
ಬುಧವಾರ ಬಂಧನವಾದ ಐವರು ಶಂಕಿತ ಉಗ್ರರ ಪೈಕಿ ಜಾಹಿದ್ ತಬ್ರೇಜ್ ಎಂಬುವವನ ಮನೆಯಲ್ಲಿ ನಾಲ್ಕು ಜೀವಂತ ಗ್ರೆನೇಡ್ ಪತ್ತೆಯಾಗಿದ್ದು, ಈ ಗ್ರೆನೇಡ್‌ಗಳನ್ನು ಪೊಲೀಸರೇ ತಂದಿಟ್ಟಿದ್ದಾರೆ ಎಂದು ಶಂಕಿತ ಉಗ್ರ ಜಾಹಿದ್ ತಬ್ರೇಜ್ ಸಹೋದರ ಅವೇಜ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಗುರುವಾರ ಬೆಳಿಗ್ಗೆ ಪೊಲೀಸರು ತಮ್ಮನನ್ನು ಮನೆಗೆ ಕರೆದುಕೊಂಡು ಬಂದು ಗ್ರೆನೇಡ್ ತಂದು ಇಟ್ಟಿದ್ದಾರೆ. ನನ್ನ ಸಹೋದರ ಅಲ್ಯೂಮಿನಿಯಂ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದನು. ಯಾರ ತಂಟೆಗೆ ಹೋಗದೆ ತನ್ನ ಪಾಡಿಗೆ ತಾನಿದ್ದನು. ಇಂತಹ ಕೆಲಸ ಮಾಡುವವನಲ್ಲ” ಎಂದು ಹೇಳಿದರು.
“ನಮ್ಮ ಮನೆಯಲ್ಲಿ ನಾವಿಬ್ಬರೆ ದುಡಿಯುವವರು. ನಾವು ಸಂಸಾರಸ್ಥರು, ನಾವು ಏಕೆ ಗ್ರೆನೇಡ್ ಇಟ್ಟುಕೊಳ್ಳುತ್ತೇವೆ. ನನ್ನ ತಮ್ಮ ಈ ರೀತಿಯ ಕೆಲಸ ಮಾಡುವುದಿಲ್ಲ. ಜಾಹೀದ್ ಕ್ಯಾಬ್ ಓಡಿಸುವಾಗ ಜುನೈದ್ ಪರಿಚಯವಾಗಿದ್ದ. ಬಳಿಕ 2017ರಲ್ಲಿ ಜುನೈದ್ ಜೊತೆ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ. ಈ ಘಟನೆ ಬಳಿಕ ಜಾಹೀದ್ ಜುನೈದ್ ಸಹವಾಸವನ್ನೇ ಬಿಟ್ಟಿದ್ದನು” ಎಂದರು.