ವಮೊಗ್ಗ ಜಿಲ್ಲೆಯ ಗ್ರಾಮಾಂತರ ಭಾಗದ ತುಪ್ಪೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕೊರಗಿ ಎಂಬ ಗ್ರಾಮದಲ್ಲಿ ಮಳೆ ಅವಾಂತರದ ಬಗ್ಗೆ ಸ್ಥಳೀಯರು ನೀಡಿದ್ದ ಮಾಹಿತಿ ಆಧರಿಸಿ ಈದಿನ ಡಾಟ್ ಕಾಮ್ ‘ಶಿವಮೊಗ್ಗ | ತುಪ್ಪೂರಿನ ಕೊರಗಿಯಲ್ಲಿ ಮಳೆ ಅವಾಂತರ: ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ’ ಎಂದು ಜೂನ್ 12ರಂದು ವರದಿ ಮಾಡಿತ್ತು. ಆ ಬಳಿಕ ಸ್ಥಳಕ್ಕೆ ಭೇಟಿ ನೀಡಿರುವ ತುಪ್ಪೂರು ಗ್ರಾಮ ಪಂಚಾಯತ್‌ನ ಅಧಿಕಾರಿಗಳು, ಜನಪ್ರತಿನಿಧಿಗಳು, “ಈ ಸಮಸ್ಯೆಯು ಅಣ್ಣ-ತಮ್ಮಂದಿರ ವೈಯಕ್ತಿಕ ಮನಸ್ತಾಪ. ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ಸೂಚಿಸಲಾಗಿದೆ” ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪತ್ರದ ಮೂಲಕ ಮಾಹಿತಿ ನೀಡಿರುವ ಗ್ರಾಮ ಪಂಚಾಯತ್ ಪಿಡಿಒ ಜಯಶ್ರೀ, “ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ತಾಲೂಕು ಕುಂಸಿ ಹೋಬಳಿ ತುಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರಗಿ ಗ್ರಾಮದಲ್ಲಿ ಮಳೆಯ ಅವಾಂತರ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಎಂದು ಸೋಷಿಯಲ್ ಮೀಡಿಯದಲ್ಲಿ ಈ ದಿನ ಮಾಧ್ಯಮವು ವರದಿ ಮಾಡಿತ್ತು. ಈ ಕುರಿತು ಕೊರಗಿ ಗ್ರಾಮಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ತುಪ್ಪೂರು ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸ್ಥಳ ಪರಿಶೀಲನೆ ಮಾಡಿದ್ದೇವೆ. ಈ ವಿಚಾರವು ಸಂಪೂರ್ಣವಾಗಿ ಅಣ್ಣ-ತಮ್ಮಂದಿರ ವೈಯಕ್ತಿಕ ಮನಸ್ತಾಪದ ಜಗಳ” ಎಂದು ತಿಳಿಸಿದ್ದಾರೆ.

“ಅಣ್ಣ-ತಮ್ಮಂದಿರ ವೈಯಕ್ತಿಕ ಮನಸ್ತಾಪದ ಜಗಳವನ್ನು ಗ್ರಾಮ ಪಂಚಾಯಿತಿಗೆ ವಿಷಯ ತಿಳಿಸಿಲ್ಲ. ಅಲ್ಲದೇ, ಇದನ್ನು ನೇರವಾಗಿ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಿದ್ದಾರೆ. ಈ ವಿಷಯ ತಿಳಿದ ತಕ್ಷಣ ಸ್ಥಳ ಪರಿಶೀಲಿಸಿ ವಿಜಯ ಇವರ ಜಮೀನಿನಲ್ಲಿ ಇರುವ ಕಾಲುವೆಯಲ್ಲಿ ಕಸ ಕಟ್ಟಿಕೊಂಡಿದ್ದು. ಆ ಕಸವನ್ನು ತೆಗೆಸಿ ನೀರು ಸರಾಗವಾಗಿ ಹರಿಯುವಂತೆ ಕಾಲುವೆ ಸರಿಪಡಿಸಲಾಗಿದೆ. ಇನ್ನು ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸಲು ತಿಳಿಸಲಾಗಿದೆ. ಜಮೀನಲ್ಲಿರುವ ಕಾಲುವೆಗೆ ಪೈಪ್ ಹಾಕಿಕೊಳ್ಳುವಂತೆ ತಿಳಿಸಲಾಯಿತು” ಎಂದು ಪಿಡಿಒ ಜಯಶ್ರೀ ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಶಿವಮೊಗ್ಗ | ತುಪ್ಪೂರಿನ ಕೊರಗಿಯಲ್ಲಿ ಮಳೆ ಅವಾಂತರ: ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ
“ಇನ್ನು ಮುಂದೆ ಏನಾದರೂ ಸಮಸ್ಯೆಗಳು ಸಂಭವಿಸಿದಲ್ಲಿ ನೇರವಾಗಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗೆ ತಿಳಿಸುವಂತೆಯೂ, ತಿಳಿಸಿದಲ್ಲಿ ಸಮಸ್ಯೆ ಪರಿಹರಿಸಲು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯು ಯಾವ ಸಮಯದಲ್ಲಾದರು ಸಾರ್ವಜನಿಕರ ಜೊತೆ ನಿಲ್ಲುವುದಾಗಿ ಅಲ್ಲಿನ ಜನರಿಗೆ ತಿಳಿಸಲಾಯಿತು” ಎಂದು ತುಪ್ಪೂರು ಗ್ರಾಮ ಪಂಚಾಯತ್ ಪಿಡಿಒ ಜಯಶ್ರೀ ಅವರು ಶಿವಮೊಗ್ಗ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಕಳುಹಿಸಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

