ಕುಟುಂಬಸ್ಥರೊಂದಿಗೆ ಜಗಳ ಮಾಡಿಕೊಂಡು, ಹಣ ಕೇಳಲಾಗದೆ, ಖರ್ಚಿ ದುಡ್ಡಿಲ್ಲವೆಂದು ಉದ್ಯಮಿಯೊಬ್ಬರ ಮಗನೊಬ್ಬ ಖೋಟಾ ನೋಟುಗಳನ್ನು ಪ್ರಿಂಟ್ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಟೆಕ್ಸ್‌ಟೈಲ್ಸ್ ಉದ್ಯಮಿಯ ಪುತ್ರ ಕ್ರಿಷ್ ಮಾಲಿ (23) ಬಂಧಿತ ಆರೋಪಿ. ಆತನನ್ನು ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಕ್ರಿಷ್ ಮಾಲಿ ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕೆ ಮನೆಯಲ್ಲಿ ಜಗಳ ಮಾಡಿಕೊಂಡಿದ್ದ. ಜಗಳದ ಕಾರಣಕ್ಕಾಗಿ ತಂದೆ-ತಾಯಿ ಬಳಿ ಹಣ ಕೇಳಲಾಗದೆ ಪರದಾಡಿದ್ದ. ಖರ್ಚಿಗೆ ಹಣವಿಲ್ಲದೆ ಕಂಗಾಲಾಗಿದ್ದ ಕ್ರಿಷ್ ಮಾಲಿ, ಹೋಟೆಲ್‌ವೊಂದರಲ್ಲಿ ರೂಮ್ ಬುಕ್ ಮಾಡಿಕೊಂಡು, ಅಲ್ಲಿಗೆ ಪ್ರಿಂಟರ್, ಸ್ಕ್ಯಾನರ್‌ಗಳನ್ನು ತಂದಿದ್ದಾನೆ. 500 ರೂಪಾಯಿ ಮುಖಬೆಲೆಯ ನಕಲಿ ನೋಟುಗಳನ್ನು ಪ್ರಿಂಟ್ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಹೋಟೆಲ್ ಸಿಬ್ಬಂದಿಗಳು ರೂಮ್‌ಅನ್ನು ಸ್ವಚ್ಛಗೊಳಿಸಲು ಬಂದಾಗ, ಖೋಟಾ ನೋಟ್‌ಗಳನ್ನು ಪ್ರಿಂಟ್ ಮಾಡಿರುವ ವಿಚಾರ ಗೊತ್ತಾಗಿದೆ. ಬಳಿಕ ಆತ ಹೋಟೆಲ್ ಮಾಲೀಕರಿಗೆ ಮಾಹಿತಿ ನೀಡಿದ್ದು, ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಕ್ರಿಷ್ ಮಾಲಿಯ ವಿಳಾಸ ಮತ್ತು ಇತರ ಮಾಹಿತಿಯನ್ನು ಪಡೆದು, ಆತನನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿದ್ದಾರೆ.