ಸಾವಿರಾರು ನಮೂನೆಯ ಭತ್ತದ ಬೀಜಗಳು, ನೂರಾರು ಜಾತಿಯ ಸಿರಿಧಾನ್ಯ ತಳಿಗಳು, ನೂರಕ್ಕೂ ಹೆಚ್ಚು ದ್ವಿದಳ ಮತ್ತು ಏಕದಳ ಧಾನ್ಯಗಳ ಬೀಜದ ತೆನೆಗಳು, ತರಹೇವಾರಿ ತರಕಾರಿಯ ನೂರಾರು ಜಾತಿಯ ಬೀಜಗಳು ಹಾಗೂ ಹತ್ತಾರು ನಮೂನೆಯ ಗೆಡ್ಡೆ ಗೆಣಸುಗಳು ಬೆಂಗಳೂರಿನಲ್ಲಿ ಇಂದು ಆರಂಭಗೊಂಡ ‘ದೇಸಿ ಬೀಜೋತ್ಸವ’ದಲ್ಲಿ ನೆರೆದಿದ್ದ ಜನರ ಗಮನ ಸೆಳೆದವು.
ಕೃಷಿ ತಂತ್ರಜ್ಞರ ಸಂಸ್ಥೆ, ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗ, ಕ್ರಾಪ್ಸ್4ಎಚ್‌ಡಿ ಹಾಗೂ ಕೀ ಸ್ಟೋನ್ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ಮತ್ತು ಭಾನುವಾರ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ‘ದೇಸಿ ಬೀಜೋತ್ಸವ’ ನಡೆಯುತ್ತಿದೆ. ಸಾವಿರಾರು ರೈತರು ಭಾಗಿಯಾಗಿ ದೇಸಿ ಬೀಜಗಳ ಬಗ್ಗೆ ಉಪಯುಕ್ತ ಮಾಹಿತಿ ಪಡೆಯುತ್ತಿದ್ದಾರೆ.
ಭವಿಷ್ಯದ ಬಳಕೆಗಾಗಿ ಬೀಜಗಳನ್ನು ಸಂಗ್ರಹಿಸಿ, ಸಂರಕ್ಷಿಸಿ, ಮತ್ತು ಅವುಗಳ ಮೊಳಕೆಯೊಡೆಯುವ ಸಾಮರ್ಥ್ಯವನ್ನು ಕಾಪಾಡುವ ಕಾರ್ಯದಲ್ಲಿ ‘ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗ’ ಕಳೆದ 15 ವರ್ಷದಿಂದ ತೊಡಗಿದೆ. ಈ ಬಳಗವು ವರ್ಷದ ಪ್ರತಿ ತಿಂಗಳು ರಾಜ್ಯದ ನಾನಾ ಭಾಗದಲ್ಲಿ ಬೀಜಗಳ ಸಂರಕ್ಷಣೆ ಕುರಿತು ಕಾರ್ಯಾಗಾರ ಆಯೋಜಿಸುತ್ತ ಬರುತ್ತಿದೆ. ಇದರ ಭಾಗವಾಗಿಯೇ ಜೂ. 14 ಮತ್ತು 15ರಂದು ಎರಡು ದಿನ ‘ದೇಸಿ ಬೀಜೋತ್ಸವ’ವನ್ನು ಆಯೋಜಿಸಲಾಗಿದೆ. ಕಳೆದ ಸಾರಿ ಮೈಸೂರಿನಲ್ಲಿ ದೇಸಿ ಬೀಜೋತ್ಸವ ಕಾರ್ಯಕ್ರಮ ನಡೆದಿತ್ತು.
ಎರಡು ದಿನದ ಕಾರ್ಯಾಗಾರಕ್ಕೆ ಕರ್ನಾಟಕದ ಪ್ರತಿ ಜಿಲ್ಲೆಯಿಂದ ರೈತರು ಬೀಜ ಸಂರಕ್ಷಕರು, ಬೀಜ ಮಾತೆಯರು ಆಗಮಿಸಿದ್ದಾರೆ. ಅಷ್ಟೇ ಅಲ್ಲದೇ ಕೇರಳ, ಹೈದ್ರಾಬಾದ್, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಒಡಿಶಾ, ಪಶ್ಚಿಮ ಬಂಗಾಳದಿಂದಲೂ ರೈತರು ಮತ್ತು ಬೀಜ ಸಂರಕ್ಷರು ಆಗಮಿಸಿದ್ದು ‘ದೇಸಿ ಬೀಜೋತ್ಸವʼದ ಮೆರಗನ್ನು ಮತ್ತಷ್ಟು ಹೆಚ್ಚಿಸಿದೆ.

ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗದ ನಿರ್ದೇಶಕಿ ಅನಿತಾ ಅವರು ಈ ದಿನ.ಕಾಮ್ ಜೊತೆ ಮಾತನಾಡಿ, “ಇಲ್ಲಿ ಸಿಗುವಂತಹ ಬೀಜಗಳು ಬೇರೆ ರಾಜ್ಯದಲ್ಲಿ ಎಲ್ಲೂ ಸಿಗುವುದಿಲ್ಲ. ಕೃಷಿಗೆ ಸಂಬಂಧಿಸಿದಂತೆ ಸಾವಿರಾರು ಬಗೆಯ ಬೀಜಗಳ ಸಂಗ್ರಹವನ್ನು ಬೀಜೋತ್ಸವದಲ್ಲಿ ಕಾಣಬಹುದು. ಕರ್ನಾಟಕ ಸೇರಿ ಹತ್ತಾರು ರಾಜ್ಯಗಳಿಂದ ಪ್ರತಿನಿಧಿಗಳು ಆಗಮಿಸಿದ್ದಾರೆ. ರೈತರಿಗೂ ಬೇರೆ ಬೇರೆ ಜಾತಿಯ ಬೀಜಗಳ ಬಗ್ಗೆ ಮಾಹಿತಿ ದೊರಕುತ್ತಿದೆ” ಎಂದು ಹೇಳಿದರು.
“ದೇಸಿ ಬೀಜೋತ್ಸವ ಎಂಬುದು ಕೇವಲ ವೀಕ್ಷಣೆಗೆ ಸೀಮಿತವಾಗಿಲ್ಲ. ಇಲ್ಲಿ ಬೀಜಗಳ ಮಾರಾಟ ಮಳಿಗೆಗಳು ಇವೆ. ಒಂದೊಂದು ಮಳಿಗೆಯಲ್ಲಿ ದೇಸಿಯ ಬೀಜಗಳನ್ನು ಕಾಣಬಹುದು. ನಮ್ಮಲ್ಲಿ ದೊರಕುವ ಬೀಜಗಳಿಗೂ ಬೇರೆ ಖಾಸಗಿಯಾಗಿ ದೊರಕುವ ಹೈಬ್ರೀಡ್ ಬೀಜಗಳಿಗೂ ಬಹಳ ವ್ಯತ್ಯಾಸವಿದೆ. ನಾವು ಬೀಜಗಳನ್ನು ದೇಸಿ ಕೃಷಿ ಪದ್ದತಿಯಿಂದ ಸಂಗ್ರಹಿಸುತ್ತೇವೆ. ಅಂದರೆ ಯಾವುದೇ ರಾಸಾಯನಿಕ ಸಿಂಪಡಣೆ ಅಥವಾ ಗೊಬ್ಬರ ರಹಿತವಾಗಿ ಬೆಳೆದ ಬೆಳೆಗಳಿಂದ ನಾವು ಬೀಜ ರಕ್ಷಿಸುತ್ತೇವೆ” ಎಂದು ತಿಳಿಸಿದರು.

ಹವಾಮಾನ ವೈಪರಿತ್ಯ ತಡೆದುಕೊಳ್ಳುವ ಶಕ್ತಿ ಈ ಬೀಜಗಳಿಗಿದೆ
“ಇತ್ತೀಚಿನ ದಶಕಗಳಲ್ಲಿ ಹವಾಮಾನ ವೈಪರೀತ್ಯ ರೈತರನ್ನು ಬಹಳ ಬಾಧಿಸುತ್ತಿದೆ. ಎರಡು ದಿನ ಜೋರು ಮಳೆಯಾದರೆ ಸಾಕು ಅದನ್ನು ತಡೆದುಕೊಳ್ಳುವ ಶಕ್ತಿ ಖಾಸಗಿ ಮಾರುಕಟ್ಟೆಯ ಬೀಜಗಳಿಗೆ ಇರುವುದಿಲ್ಲ. ಆದರೆ ನಮ್ಮ ಬೀಜಗಳಿಗೆ ಹಮಾಮಾನ ವೈಪರೀತ್ಯ ತಡೆದುಕೊಳ್ಳಬಲ್ಲ ಶಕ್ತಿ ಇದೆ. ಹೆಚ್ಚು ಮಳೆಯಾಗಲಿ ಅಥವಾ ಕಡಿಮೆ ಮಳೆಯಾಗಲಿ ಉತ್ತಮ ಇಳುವರಿ ದೇಸಿ ಬೀಜಗಳಿಂದ ಸಿಗುತ್ತದೆ” ಎಂದು ವಿವರಿಸಿದರು.
“ರಾಜ್ಯ ಸರ್ಕಾರ ನಮ್ಮ ದೇಸಿ ಬೀಜೋತ್ಸವನ್ನು ಗುರುತಿಸಬೇಕು. ಈಗಾಗಲೇ ಸರ್ಕಾರ ಬೀಜ ಬ್ಯಾಂಕ್ ಸ್ಥಾಪಿಸುವುದಾಗಿ ಹೇಳಿದೆ. ನಾವು ನೆರವು ಕೊಡಲು ಸಿದ್ಧ. ವಿಶ್ವವಿದ್ಯಾಲಯಗಳು ನಮ್ಮ ದೇಸಿ ಬೀಜಗಳ ಮೇಲೆ ಸಂಶೋಧನೆ ನಡೆಸಿ ಹೆಚ್ಚಿನ ರೈತರಿಗೆ ಮನವರಿಕೆ ಮಾಡುವ ಕಾರ್ಯವಾಗಬೇಕಿದೆ. ಈ ಕಾರ್ಯಕ್ರಮದಿಂದ ನಾವಿದನ್ನು ನಿರೀಕ್ಷೆ ಮಾಡುತ್ತೇವೆ” ಎಂದು ಹೇಳಿದರು.

ದೇಸಿ ಸೀಡ್ ಪ್ರೊಡ್ಯೂಸರ್ ಕಂಪನಿಯ ಸದಸ್ಯ ಮನು ಮಾತನಾಡಿ, “ತರಕಾರಿ, ವಿವಿಧ ಬೆಳೆಗಳ ನೂರಾರು ಬಗೆಯ ದೇಸಿ ಬೀಜಗಳು ಲಭ್ಯವಿದೆ. ದೇಶಾದ್ಯಂತ ನಮ್ಮ ಬೀಜಗಳಿಗೆ ಬೇಡಿಕೆ ಜಾಸ್ತಿ. ನಾವು ರೈತರಿಂದ ಬೀಜಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತೇವೆ. ಬಂದ ಲಾಭದಲ್ಲಿ ರೈತರಿಗೂ ಹಂಚಿಕೆ ಮಾಡುತ್ತೇವೆ. ವರ್ಷಕ್ಕೆ 1 ಕೋಟಿ ರೂ.ವರೆಗೂ ವ್ಯವಹಾರವಾಗುತ್ತದೆ” ಎಂದರು.
ರೈತರಿಂದ ರೈತರಿಗೆ ಮಾಹಿತಿ
ಆಯೋಜಕ ಶಾಂತ್‌ಕುಮಾರ್ ಮಾತನಾಡಿ, “ದೇಸಿ ಬೀಜೋತ್ಸವದಲ್ಲಿ 40 ಮಳಿಗೆಗಳನ್ನು ಹಾಕಲಾಗಿದೆ. ಎಲ್ಲವೂ ಭರ್ತಿಯಾಗಿದೆ. ಗುಣಮಟ್ಟದ ಬೀಜಗಳನ್ನು ಮಾರಾಟ ಮಾಡುವುದು ನಮ್ಮ ಕಾರ್ಯಕ್ರಮದ ಮೂಲ ಉದ್ದೇಶ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆಗಮಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು” ಎಂದು ಹೇಳಿದರು.

“ಇಲ್ಲಿ ಕೇವಲ ಬೀಜಗಳ ಮಾರಾಟವೇ ಮುಖ್ಯವಿಲ್ಲ. ರೈತರಿಂದ ರೈತರಿಗೆ ಮಾಹಿತಿ ಪಡೆಯುವ ಅವಕಾಶವನ್ನು ಬೀಜೋತ್ಸವ ಒದಗಿಸಿಕೊಡುತ್ತದೆ. ಬೀಜದ ತಳಿಗಳ ಬಗ್ಗೆಯೂ ತಜ್ಞರು ಮನವರಿಕೆ ಮಾಡಿಕೊಡುತ್ತಾರೆ. ಮೌಲ್ಯವರ್ಧಿತ ಬೀಜಗಳ ಸಂಗ್ರಹವನ್ನು ನಾವಿಲ್ಲಿ ಕಾಣಬಹುದು. ಇಲ್ಲಿಯ ಬೀಜಗಳನ್ನು ಬಳಸಿಕೊಂಡು ಇದರಿಂದ ಬೆಳೆ ತೆಗದು ಮರಳಿ ಇದರಿಂದ ಬೀಜ ಸಂಗ್ರಹ ಮಾಡಿಕೊಂಡರೆ ಇನ್ನೊಬ್ಬರ ಬಳಿ ಬೀಜಗಳ ಮೊರೆ ಹೋಗುವುದು ತಪ್ಪುತ್ತದೆ” ಎಂದು ವಿವರಿಸಿದರು.
“ಬೀಜೋತ್ಸವದ ಅಂಗವಾಗಿ ಚರ್ಚೆ, ಅನುಭವ ಹಂಚಿಕೆ, ಸಂವಾದ ಸೇರಿದಂತೆ ಹಲವು ಬಗೆಯ ಕಾರ್ಯಕ್ರಮಗಳನ್ನು ಎರಡು ದಿನ ನಡೆಸಲಾಗುತ್ತದೆ. ಬೀಜ ಸಂರಕ್ಷಕರನ್ನು ಸನ್ಮಾನಿಸುವ ಜತೆಗೆ, ತಳಿ ಸಂರಕ್ಷರ ವಿವರಗಳ ಕೈಪಿಡಿ ಬಿಡುಗಡೆ ಮಾಡಲಾಗುವುದು” ಎಂದರು.

ಉತ್ತರ ಕರ್ನಾಟಕ ಊಟಕ್ಕೆ ಮನಸೋತ ಜನ
ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗದೊಂದಿಗೆ ಗುರುತಿಸಿಕೊಂಡಿರುವ ನಾಲೈದು ಉತ್ತರ ಕರ್ನಾಟಕ ಮಹಿಳಾ ಸಂಘಗಳಿಂದ ಸಂಪೂರ್ಣ ಉತ್ತರ ಕರ್ನಾಟಕದ ಆಹಾರ ಮೇಳ ಕೂಡ ಇದರ ಭಾಗವಾಗಿಯೇ ಆಯೋಜಿಸಲಾಗಿತ್ತು. ದೇಸಿ ಬೀಜೋತ್ಸವಕ್ಕೆ ಬಂದ ಜನ ಊಟದ ರುಚಿಯನ್ನು ಕೂಡ ಸವೆದರು.
ಧಾರವಾಡ ಜಿಲ್ಲಿಯ ರುಕ್ಮಿಣಿ ಮಹಿಳಾ ಸಂಘದ ಸದಸ್ಯೆ ಮಾತನಾಡಿ, “ಸಹಜ ಸಮೃದ್ಧ ಜೊತೆ 15 ವರ್ಷದಿಂದ ಕೆಲಸ ಮಾಡುತ್ತಿದ್ದೇವೆ. ಮೈಸೂರು, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಬೆಂಗಳೂರು ಕಡೆಗೆಲ್ಲ ಇಂತಹ ಕಾರ್ಯಕ್ರಮ ಆಯೋಜನೆ ಆಗುತ್ತದೆ. ನಾವು ಮನೆಯಿಂದಲೇ ಮಾಡಿದ ಉತ್ತರ ಕರ್ನಾಟಕದ ಎಲ್ಲ ಬಗೆಯ ಊಟವನ್ನು ಇಲ್ಲಿ ಊಣಬಡಿಸುತ್ತೇವೆ” ಎಂದು ಹೇಳಿದರು.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.