ಬೀದರ್ ಜಿಲ್ಲೆಯ ರೈತರ ಬೇಡಿಕೆಗೆ ಅನುಗುಣವಾಗಿ ಸೋಯಾಬೀನ್ ಬಿತ್ತನೆ ಬೀಜ ಪೂರೈಕೆ ಮಾಡಲು ಕ್ರಮ ವಹಿಸಲಾಗಿದ್ದು, ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ಭರವಸೆ ನೀಡಿದ್ದಾರೆ.
‘ಈ ಬಾರಿ ವಾಡಿಕೆಗಿಂತಲೂ ಉತ್ತಮ ಮಳೆಯಾಗಿರುವ ಕಾರಣ ಸೋಯಾಬಿನ್ ಬಿತ್ತನೆ ಬೀಜಕ್ಕೆ ಬೇಡಿಕೆ ಹೆಚ್ಚಾಗಿದೆ. ಪ್ರಸಕ್ತ ಸಾಲಿನಲ್ಲಿ 1,02500 ಕ್ವಿಂಟಾಲ್ ಸೋಯಾಬೀನ್ ಬಿತ್ತನೆ ಬೀಜ ಮಂಜೂರಾಗಿದ್ದು, ಈಗಾಗಲೇ 8,7500 ಕ್ವಿಂಟಾಲ್ ವಿತರಣೆ ಮಾಡಲಾಗಿದೆ.15,000 ಕ್ವಿಂಟಾಲ್ ಸೋಯಾಬೀನ್ ಬಿತ್ತನೆ ಬೀಜ ಬೀದರ್‌ಗೆ ರವಾನೆ ಆಗಿದ್ದು 2-3 ದಿನಗಳಲ್ಲಿ ರೈತರಿಗೆ ಲಭ್ಯವಾಗಲಿದೆ’ ಎಂದು ತಿಳಿಸಿದ್ದಾರೆ.
‘ಕಳೆದ ವರ್ಷ ಜಿಲ್ಲೆಯಲ್ಲಿ 1,12,000 ಕ್ವಿಂಟಾಲ್ ಸೋಯಾಬಿನ್ ಬಿತ್ತನೆ ಬೀಜಗಳ ವಿತರಣೆ ಮಾಡಲಾಗಿತ್ತು. ಈ ಬಾರಿ ಉತ್ತಮ ಪೂರ್ವ ಮುಂಗಾರು ಮಳೆಯಿಂದ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಯಾದಗಿರಿಯಲ್ಲಿಂದು ನಡೆದ ಆರೋಗ್ಯ ಆವಿಷ್ಕಾರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಿಗೆ ಈ ಸಂಬಂಧ ಮನವಿ ಸಲ್ಲಿಸಿದ್ದು,15,000 ಕ್ವಿಂಟಾಲ್ ಸೋಯಾಬೀನ್ ಬಿತ್ತನೆ ಬೀಜ ಹೆಚ್ಚುವರಿಯಾಗಿ ಮಾರುಕಟ್ಟೆಯಲ್ಲಿ ಖರೀದಿಸಿ ವಿತರಿಸಲು ಸಮ್ಮತಿಸಿದ್ದಾರೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಕಳೆದ ಮೂರು ವರ್ಷದಲ್ಲಿ 39 ಬಾಲ ಕಾರ್ಮಿಕರ ರಕ್ಷಣೆ : ಬೇಕಿದೆ ಇನ್ನಷ್ಟು ಬಿಗಿ ಕ್ರಮ
‘ಶೀಘ್ರವೇ ಹೆಚ್ಚುವರಿ ಬಿತ್ತನೆ ಬೀಜವೂ ಬೀದರ್‌ಗೆ ಆಗಮಿಸಲಿದ್ದು, ರೈತರ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜ ವಿತರಿಸಲಾಗುವುದು. ಯಾರೂ ಆತಂಕ ಪಡುವುದು ಬೇಡ’ ಎಂದು ತಿಳಿಸಿದ್ದಾರೆ