- ಪಕ್ಷದ ಸಂಘಟನೆಗೆ ಹತ್ತು ಜನರ ತಂಡ ರಚನೆ: ಎಚ್‌ಡಿಕೆ
- ಸದನದ ಒಳಗೂ ಮತ್ತು ಹೊರಗೂ ಒಗ್ಗಟ್ಟಾಗಿ ಹೋರಾಟ
ಬಿಜೆಪಿ ಮತ್ತು ಜೆಡಿಎಸ್ ಎರಡು ಸಹ ವಿರೋಧ ಪಕ್ಷಗಳಾಗಿದ್ದು, ಒಟ್ಟಾಗಿ ಕೆಲಸ ಮಾಡುವ ನಿರ್ಧಾರ ಮಾಡಲಾಗಿದೆ. ಎಲ್ಲರ ಅಭಿಪ್ರಾಯ ಪಡೆದು ಪಕ್ಷದ ಸಂಘಟನೆಗೆ ಹತ್ತು ಜನರ ತಂಡ ರಚನೆ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಅವರ ಜೊತೆ ವಿಧಾನಸೌಧದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಇಡೀ ರಾಜ್ಯದಲ್ಲಿ ಸರ್ಕಾರದ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಧ್ವನಿ ಎತ್ತುವಂತೆ ದೇವಗೌಡರು ಸಂದೇಶ ನೀಡಿದ್ದಾರೆ. ದೇವೇಗೌಡರ ಮಾರ್ಗದರ್ಶನ, ಪಕ್ಷ ಸಂಘಟನೆ ಮೂಲಕ ಯುವಕರ ತಂಡ ರಚನೆ ಮಾಡಲಾಗುತ್ತದೆ” ಎಂದರು.
“ಈ ಸರ್ಕಾರದ ವಿರುದ್ಧ ನಾವು ಒಟ್ಟಾಗಿ ಕೆಲಸ ಮಾಡುವ ನಿರ್ಣಯ ಮಾಡಿದ್ದೇವೆ. ಸದನದ ಒಳಗೆ ಹಾಗೂ ಹೊರಗೆ ಬಿಜೆಪಿ ಮತ್ತು ಜೆಡಿಎಸ್ ಒಗ್ಗಟ್ಟಾಗಿ ಹೋರಾಟ ಮಾಡುವ ನಿರ್ಧಾರ ಮಾಡಿದ್ದೇವೆ. ಇದೆಲ್ಲವೂ ರಾಜ್ಯದ ಜನರ ಹಿತದೃಷ್ಟಿಗೋಸ್ಕರ” ಎಂದು ಎಚ್‌ಡಿಕೆ ಹೇಳಿದರು.
“ಕಲಾಪ ಯಾವ ರೀತಿ ನಡೆಯುತ್ತಿದೆ ಎಂದು ಗಮನಿಸಿದ್ದೀರಿ. ಸದನದ ಕಲಾಪಗಳು ಯಾವ ರೀತಿ ಕುಸಿಯುತ್ತಿದೆ ಎಂಬುದು ಗೊತ್ತಿದೆ. ಎರಡು ನಿಮಿಷಗಳಲ್ಲಿ ಬಗೆಹರಿಸುವ ಸಮಸ್ಯೆಯನ್ನು ದೊಡ್ಡದು ಮಾಡಲಾಯಿತು. ಮದನ್ ಗೋಪಾಲ್ ಎಂಬ ಹಿರಿಯ ಅಧಿಕಾರಿ ಕೂಡ ರಾಜ್ಯ ಸರ್ಕಾರದ ತಪ್ಪಿನ ಬಗ್ಗೆ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ- ಮಣಿಪುರದ ಪೈಶಾಚಿಕ ಕೃತ್ಯ- ಸುಪ್ರೀಮ್ ಉಸ್ತುವಾರಿಯಲಿ ನಡೆಯಲಿ ನ್ಯಾಯಾಂಗ ತನಿಖೆ
ಬಿಜೆಪಿ ಸದಸ್ಯರ ಅನುಚಿತ ವರ್ತನೆ ಖಂಡಿಸಿ ಸಭಾಧ್ಯಕ್ಷರು ಹತ್ತು ಶಾಸಕರನ್ನು ಸದನದಿಂದ ಉಚ್ಚಾಟನೆ ಮಾಡಿದ ವಿಚಾರದ ಬಗ್ಗೆ ಪ್ರಸ್ತಾಪಿಸಿ, “ಶಿಷ್ಟಾಚಾರ ಉಲ್ಲಂಘನೆ ಬಗ್ಗೆ ಸದನದಲ್ಲಿ ಸದಸ್ಯರು ಪ್ರಸ್ತಾಪ ಮಾಡಿದ್ರು. ಹಲವು ಸಭಾಧ್ಯಕ್ಷರು ಕ್ಲಿಷ್ಟಕರ ಸಂದರ್ಭದಲ್ಲಿ ಸುಗಮ ಕಲಾಪ ನಡೆಸಿದ್ದಾರೆ. ಆದರೆ ಇವತ್ತಿನ ಸ್ಪೀಕರ್, ಸದಸ್ಯರಿಗೆ ಊಟಕ್ಕೆ ಬಿಡದೆ ಹೋದ್ರೆ ಹೇಗೆ? ಸಭಾಧ್ಯಕ್ಷರು ಮತ್ತೆ ಕರೆದು ವಾತಾವರಣ ತಿಳಿಗೊಳಿಸಬೇಕಿತ್ತು. ಧರ್ಮೇಗೌಡರಿಗೆ ಹಲ್ಲೆ ಮಾಡಿದವರ ವಿರುದ್ಧ ಹಿಂದೆ ಕ್ರಮ ಆಗಿತ್ತಾ” ಎಂದು ಪ್ರಶ್ನಿಸಿದರು.
ನೈಸ್ ಅಕ್ರಮದ ಚರ್ಚೆಗೆ ಅವಕಾಶ
ಸದನ ಬಹಿಷ್ಕರಿಸಿದ್ದೇವೆ ಎಂದು ಇಂದು ನೈಸ್ ಅಕ್ರಮದ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಭ್ರಷ್ಟಾಚಾರದ ಬಗ್ಗೆ ನಮ್ಮ ಮುಖ್ಯಮಂತ್ರಿಗಳು ಮಾತಾಡ್ತಾರೆ ಅಲ್ವಾ? ನೈಸ್ ಅಕ್ರಮದ ಬಗ್ಗೆ ಏನು ಕ್ರಮ ಆಗಿಲ್ಲ ಅಂತಾ ಟಿ ಬಿ ಜಯಚಂದ್ರ ಹೇಳಿದ್ದಾರೆ. ನೈಸ್ ಸಂಸ್ಥೆಯ ವಿರುದ್ದ ಹೋಗಿ ಮಾಧುಸ್ವಾಮಿ ಅವರು ದಂಡ ಕಟ್ಟಿದ್ರು. ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ದೇವೆಗೌಡರ ಮೇಲೆ ಮಾತೆ ಆಡದಂತೆ ಕೇಸ್ ಹಾಕಿದ್ರು. ಬೊಮ್ಮಾಯಿಯವರು ನಿರಂತರವಾಗಿ ಕೋರ್ಟ್‌ನಲ್ಲಿ ಗೆದ್ದುಕೊಂಡು ಬಂದಿದ್ರು. ಸರ್ಕಾರದ ಪರವಾಗಿ ಕೋರ್ಟ್ ಆದೇಶ ಬರುವಂತೆ ವಾದ ಮಾಡಿ ಕೊಡುಗೆ ನೀಡುವ ಕೆಲಸ ಬೊಮ್ಮಾಯಿ ಮಾಡಿದ್ದಾರೆ” ಎಂದು ಪ್ರಶಂಸಿಸಿದರು.