ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ನಕಲಿ ನೋಟು ಚಲಾವಣೆ ಮಾಡುತ್ತಿದ್ದ ಆರೋಪದ ಮೇರೆಗೆ, ಭದ್ರಾವತಿ ನ್ಯೂ ಟೌನ್ ಠಾಣೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.ಭದ್ರಾವತಿಯ ಭಂಡಾರಹಳ್ಳಿ ಎದುರಿನ ನಾಗಮ್ಮ ಲೇಔಟ್ ನಿವಾಸಿ, ರಿಯಲ್ ಎಸ್ಟೇಟ್ ಕೆಲಸ ಮಾಡುವ ರಂಗೇಗೌಡ (57) ಬಂಧಿತ ಆರೋಪಿಯಾಗಿದ್ದಾನೆ.
ಆರೋಪಿಯಿಂದ 500 ರೂಪಾಯಿ. ಮುಖಬೆಲೆಯ 13 ನೋಟುಗಳು ಹಾಗೂ 200 ರೂಪಾಯಿ., 100 ರೂಪಾಯಿ., 50 ರೂಪಾಯಿ. ಮುಖಬೆಲೆಯ ತಲಾ 1 ನಕಲಿ ನೋಟು ಹಾಗೂ ಕೃತ್ಯಕ್ಕೆ ಬಳಸಿದ್ದ ಡಿಸ್ಕವರ್ ಬೈಕ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಆರೋಪಿಯು ಬೇರೆಡೆಯೂ ನಕಲಿ ನೋಟುಗಳ ಚಲಾವಣೆ ಮಾಡಿರುವ ಕುರಿತಾಗಿ ಪೊಲೀಸರ ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ OFP 790829 ಹಾಗೂ 9TV 978202 ಕ್ರಮ ಸಂಖ್ಯೆಯ 500 ಮುಖ ಬೆಲೆಯ ನೋಟುಗಳು ಕಂಡುಬಂದಲ್ಲಿ, ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆ ಅಥವಾ ಶಿವಮೊಗ್ಗ ಪೊಲೀಸ್ ಕಂಟ್ರೋಲ್ ರೂಮ್ ಗೆ ಮಾಹಿತಿ ನೀಡುವಂತೆ ಜಿಲ್ಲಾ ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಭದ್ರಾವತಿ ನಗರದ ಕೂಲಿ ಬ್ಲಾಕ್ ಶೆಡ್ ನಿವಾಸಿ ಅಜಯ್ ಎಂಬುವರಿಗೆ 12-6-2025 ರ ಸಂಜೆ ಡಿಸ್ಕವರ್ ಬೈಕ್ ನಲ್ಲಿ ಆಗಮಿಸಿದ ಆರೋಪಿಯು, 500 ರೂ. ನಕಲಿ ನೋಟು ನೀಡಿ ವ್ಯಾಪಾರ ಮಾಡಿ ತೆರಳಿದ್ದ. ಈ ಕುರಿತಂತೆ ಅಜಯ್ ಅವರು ಪೊಲೀಸರಿಗೆ ದೂರು ನೀಡಿದ್ದರು.ಭದ್ರಾವತಿ ಡಿವೈಎಸ್ಪಿ ನಾಗರಾಜ್, ಇನ್ಸ್‌ಪೆಕ್ಟರ್ ಮಂಜುನಾಥ್, ಪಿಎಸ್ಐ ರಮೇಶ್, ಎಎಸ್ಐ ಮಂಜಪ್ಪ, ಸಿಬ್ಬಂದಿಗಳಾದ ನವೀನ್, ವಿಜಯ್, ಶ್ರೀಧರ್, ಮಾರುತಿ ಪಾಟೀಲ್, ಪ್ರಸನ್ನ, ರಘು, ನಾಗರಾಜಪ್ಪರವರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖಾ ತಂಡದ ಉತ್ತಮ ಕಾರ್ಯವನ್ನು ಶಿವಮೊಗ್ಗ ಜಿಲ್ಲೆಯ ಪೊಲೀಸ್ ಅಧೀಕ್ಷಕರು ಅಭಿನಂದಿಸಿದ್ದಾರೆ.
