ಜೂನ್ 12ರಂದು ಅಹಮದಾಬಾದ್‌ನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ 245 ಮಂದಿ ಪ್ರಯಾಣಿಕರು ಮತ್ತು 8 ಮಂದಿ ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ದುರ್ಘಟನೆಗೆ ವಿಮಾನದಲ್ಲಿನ ತಾಂತ್ರಿಕ ಸಮಸ್ಯೆಗಳೇ ಕಾರಣವೆಂದು ಹೇಳಲಾಗುತ್ತಿದೆ. ದುರ್ಘಟನೆಯಿಂದಾಗಿ, ಏರ್ ಇಂಡಿಯಾ ಸಂಸ್ಥೆಯ ವಿಮಾನಗಳ ಕುರಿತ ವಿಶ್ವಾಸಾರ್ಹತೆಯು ಕುಂದುತ್ತಿದೆ. ಇದೇ ಸಮಯದಲ್ಲಿ ಏರ್ ಇಂಡಿಯಾ ವಿಮಾನಗಳ ವಿರುದ್ಧ ಗಂಭೀರ ದೂರುಗಳು ಕೇಳಿಬರುತ್ತಿವೆ. ವಿಮಾನಗಳಲ್ಲಿ ಸಮಸ್ಯೆಗಳೂ ಕೂಡ ಕಂಡುಬರುತ್ತಿರುವ ಬಗ್ಗೆ ವರದಿಗಳಾಗುತ್ತಿವೆ.
ಜೂನ್ 13ರಂದು ದುಬೈನಿಂದ ರಾಜಸ್ಥಾನದ ಜೈಪುರಕ್ಕೆ ಹೊರಟಿದ್ದ ‘ಏರ್ ಇಂಡಿಯಾ ಎಕ್ಸ್‌ಪ್ರೆಸ್ – IX 196’ ವಿಮಾನದಲ್ಲಿ 5 ಗಂಟೆಗಳ ಕಾಲ ‘ಎಸಿ’ ಕೆಲಸ ಮಾಡುತ್ತಿರಲಿಲ್ಲ. ದುಬೈನ ಹೆಚ್ಚಿನ ಶೆಕೆಯ ನಡುವೆಯೂ ವಿಮಾನದಲ್ಲಿ ಎಸಿ ಇಲ್ಲದೆ ಐದು ಗಂಟೆಗಳ ಕಾಲ ಇರಬೇಕಾಯಿತು ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
“ಅಂದು ರಾತ್ರಿ 7.25ಕ್ಕೆ ಹೊರಡಬೇಕಿದ್ದ ವಿಮಾನವು ಮಧ್ಯರಾತ್ರಿ 12:45ಕ್ಕೆ ಹೊರಟಿತು. ವಿಮಾನದಲ್ಲಿನ ತಾಂತ್ರಿಕ ಸಮಸ್ಯೆಯ ಕಾರಣದಿಂದಾಗಿ ವಿಮಾನ ಹೊರಡುವುದು 5 ಗಂಟೆ ತಡವಾಯಿತು. ಆದರೆ, ಈ 5 ಗಂಟೆಗಳ ಕಾಯುವಿಕೆಯ ಸಮಯದಲ್ಲಿ ವಿಮಾನದಲ್ಲಿ ಎಸಿ ಕೂಡ ಕೆಲಸ ಮಾಡುತ್ತಿರಲಿಲ್ಲ” ಎಂದು ಪ್ರಯಾಣಿಕರು ದೂರಿದ್ದಾರೆ.
ಪ್ರಯಾಣಿಕರೊಬ್ಬರು ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ; ವಿಮಾನದಲ್ಲಿ ಕುಳಿತಿದ್ದ ವೃದ್ದರು ಮತ್ತು ಮಕ್ಕಳು ಸೇರಿದಂತೆ ಜನರು ಎಸಿ ಇಲ್ಲದೆ, ಶೆಕೆಯಿಂದ ಬೆವರು ಸುರಿಸುತ್ತಿರುವುದು ಕಂಡುಬಂದಿದೆ.
ಈ ಲೇಖನ ಓದಿದ್ದೀರಾ?: ಕಳೆದ ಐದು ವರ್ಷಗಳಲ್ಲಿ ಜಗತ್ತು ಕಂಡ ಭೀಕರ ವಿಮಾನ ದುರಂತಗಳಿವು
“ದುಬೈನಲ್ಲಿ ಹೊರಗಿನ ತಾಪಮಾನವು ಸುಮಾರು 40 ಡಿಗ್ರಿ ಸೆಲ್ಸಿಯಸ್ ಇತ್ತು. ಜೊತೆಗೆ, ಕ್ಯಾಬಿನ್ ಒಳಗಿನ ಶಾಖವೂ ಹೆಚ್ಚುತ್ತಿತ್ತು. ಕೆಲವು ವೃದ್ಧರು ತಮ್ಮ ಆರೋಗ್ಯ ಸ್ಥಿತಿ ಹದಗೆಡುತ್ತಿದೆ ಎಂದು ಆತಂಕಗೊಂಡಿದ್ದರು. ಪ್ರಯಾಣಿಕರಿಗೆ ಕುಡಿಯಲು ಸಾಕಷ್ಟು ನೀರನ್ನೂ ನೀಡಲಿಲ್ಲ” ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ಜೂನ್ 13ರಂದು ದುಬೈನಿಂದ ಭಾರತಕ್ಕೆ ಹೊರಟಿದ್ದ ಪ್ರಯಾಣಿಕರು ವಿಮಾನದಲ್ಲಿನ ತಾಂತ್ರಿಕ ಸಮಸ್ಯೆ ಮತ್ತು ಎಸಿ ಕೆಲಸ ಮಾಡದೇ ಇರುವ ಬಗ್ಗೆ ದೂರಿದ್ದರು. ಇಂದು(ಜೂನ್ 15) ಉತ್ತರ ಪ್ರದೇಶದ ಗಾಜಿಯಾಬಾದ್‌ನ ಹಿಂಡನ್ ವಿಮಾನ ನಿಲ್ದಾಣದಿಂದ ಪಶ್ಚಿಮ ಬಂಗಾಳದ ಕೋಲ್ಕತ್ತಾಗೆ ತೆರಳಬೇಕಿದ್ದ ‘ಏರ್ ಇಂಡಿಯಾ ಎಕ್ಸ್‌ಪ್ರೆಸ್ IX 1511’ ವಿಮಾನವು ರನ್‌ವೇ ನಲ್ಲಿಯೇ ಒಂದು ಗಂಟೆ ನಿಂತಿದ್ದು, ಬಳಿಕ ಹಾರಾಟ ಆರಂಭಿಸಿದೆ. ಇದಕ್ಕೂ ತಾಂತ್ರಿಕ ದೋಷವೇ ಕಾರಣವೆಂದು ಹೇಳಲಾಗಿದೆ.
ಈ ವರದಿ ಓದಿದ್ದೀರಾ?: ಅಹಮದಾಬಾದ್ ವಿಮಾನ ದುರಂತಕ್ಕೆ ಇದೇ ಮುಖ್ಯ ಕಾರಣ: ಕ್ಯಾಪ್ಟನ್ ಸ್ಟೀವ್ ವಿವರಣೆ
ವಿಮಾನವು ಟೇಕ್ ಆಫ್ ಆಗುವ ಸ್ವಲ್ಪ ಸಮಯಕ್ಕೂ ಮುನ್ನ, ರನ್‌ವೇನಲ್ಲಿ ಚಲಿಸುವಾಗ ಅನಿರೀಕ್ಷಿತ ತಾಂತ್ರಿಕ ದೋಷಗಳು ಕಂಡುಬಂದಿವೆ. ಇದರಿಂದಾಗಿ, ವಿಮಾನವು ಪ್ರಯಾಣ ಆರಂಭಿಸಲು ಒಂದು ಗಂಟೆ ವಿಳಂಬವಾಗಿದೆ. ಏರ್ ಇಂಡಿಯಾದ ಅಂಗಸಂಸ್ಥೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಯು ವಿಳಂಬವನ್ನು ಒಪ್ಪಿಕೊಂಡಿದ್ದು, ಪ್ರಯಾಣಿಕರಲ್ಲಿ ಕ್ಷಮೆಯಾಚಿಸಿದೆ.
“ನಮ್ಮ ಹಿಂಡನ್-ಕೋಲ್ಕತ್ತಾ ವಿಮಾನದಲ್ಲಿ ಅನಿರೀಕ್ಷಿತ ದೋಷಗಳು ಕಂಡುಬಂದಿದ್ದರಿಂದ ವಿಮಾನದ ಹಾರಾಟ ವಿಳಂಬವಾಯಿತು. ಅನಾನುಕೂಲತೆಯ ಕಾರಣಕ್ಕಾಗಿ ಟಿಕೆಟ್ ಬುಕಿಂಗ್‌ಅನ್ನು ರದ್ದು ಮಾಡಿದ ಪ್ರಯಾಣಿಕರಿಗೆ ಪೂರ್ಣ ಹಣವನ್ನು ಮರುಪಾವತಿ ಮಾಡಲಾಗಿದೆ. ಅನಾನುಕೂಲಕ್ಕಾಗಿ ವಿಷಾಧಿಸುತ್ತೇವೆ” ಎಂದು ಸಂಸ್ಥೆಯು ಹೇಳಿಕೊಂಡಿದೆ.