ಕರ್ನಾಟಕದಲ್ಲಿ ಈವರೆಗೂ ದಲಿತ ವ್ಯಕ್ತಿ ಮುಖ್ಯಮಂತ್ರಿ ಆಗಿಲ್ಲ. ಈ ವಿಷಯ ಚುನಾವಣೆ ಸಂದರ್ಭದಲ್ಲಿ ಮಾತ್ರವೇ ಮುನ್ನೆಲೆಗೆ ಬಂದು ನಂತರ ಗೌಣವಾಗಿಬಿಡುತ್ತದೆ. ರಾಜ್ಯದಲ್ಲಿ ಅಧಿಕಾರ ನಡೆಸಿರುವ ಮೂರು ಪಕ್ಷಗಳು ಈವರೆಗೂ ದಲಿತ ವ್ಯಕ್ತಿಯನ್ನು ಸಿಎಂ ಮಾಡುವ ಬದ್ಧತೆ ತೋರಿಲ್ಲ. ಆದರೆ, ದಲಿತ ಸಿಎಂ ಹೆಸರಿನಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಮಾತ್ರ ನಿಲ್ಲಿಸಿಲ್ಲ.
ಅದರ ಮುಂದುವರಿದ ಭಾಗವಾಗಿ ಈಗ ದಲಿತ ಸಿಎಂ ವಿಚಾರವಾಗಿ ಬಿಜೆಪಿಯು ಕಾಂಗ್ರೆಸ್ ಕಾಲೆಳೆದಿದೆ. “ಕಾಂಗ್ರೆಸ್‌ಗೆ ನಿಜಕ್ಕೂ ದಲಿತರ ಮೇಲೆ ಕಾಳಜಿ ಇದ್ದರೆ, ಇದೀಗ ಬಹುಮತದೊಂದಿಗೆ ಅವಕಾಶವೂ ಇದೆ, ದಲಿತ ನಾಯಕರೊಬ್ಬರನ್ನು ಸಿಎಂ ಮಾಡಿ, ಇಲ್ಲವೇ ಡೋಂಗಿತನ ನಿಲ್ಲಿಸಿ” ಎಂದು ತಿರುಗೇಟು ನೀಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, “ಕಾಂಗ್ರೆಸ್ ದಲಿತರ ಶ್ರೇಯೋಭಿವೃದ್ಧಿಯ ಬಗ್ಗೆ ಮಾತನಾಡುವುದು ಭೂತದ ಬಾಯಲ್ಲಿ ಭಗವದ್ಗೀತೆಯಂತೆ. ಕಾಂಗ್ರೆಸ್ 6 ದಶಕಗಳ ಕಾಲ ದಲಿತರನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಂಡು ಅವರ ಬದುಕನ್ನು ಕತ್ತಲಲ್ಲಿರಿಸಿತ್ತು. ಅವರ ಬದುಕಿಗೆ ‘ಹೊಸ ಬೆಳಕು’ ನೀಡಿದ್ದು ಬಿಜೆಪಿ” ಎಂದು ಸಮರ್ಥಿಸಿಕೊಂಡಿದೆ.
“ಸ್ವಾತಂತ್ರ್ಯ ಭಾರತದಲ್ಲಿ ಕಾಂಗ್ರೆಸ್ ದಲಿತರಿಗೆ ಮಾಡಿರುವ ಮಹಾಮೋಸಗಳು ಜಗಜ್ಜಾಹೀರಾಗಿವೆ” ಎಂದು ಹೇಳಿರುವ ಬಿಜೆಪಿ ಹಲವು ಘಟನೆಗಳನ್ನು ಪಟ್ಟಿ ಮಾಡಿದೆ.
“ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರನ್ನು ಎರಡು ಬಾರಿ ಚುನಾವಣೆಯಲ್ಲಿ ಸೋಲಿಸಿ, ನಿರಂತರವಾಗಿ ಅವಮಾನಿಸಿದ್ದು ಕಾಂಗ್ರೆಸ್. ಹಿರಿಯ ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕೆ ಎಚ್ ಮುನಿಯಪ್ಪ, ಡಾ. ಜಿ ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸದೆ ಅವಮಾನ ಮಾಡುತ್ತಿರುವುದು ಕಾಂಗ್ರೆಸ್” ಎಂದು ಆರೋಪಿಸಿದೆ.
“ದಲಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಸೌಜನ್ಯಕ್ಕೂ ಅಭಿನಂದನೆ ಸಲ್ಲಿಸದ ಕಾಂಗ್ರೆಸ್. ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿಯಿಟ್ಟಾಗ ಮತಾಂಧರ ಪರ ನಿಂತಿದ್ದು ಕಾಂಗ್ರೆಸ್. ದಲಿತ ಮಕ್ಕಳಿಗೆ ನೀಡುವ ಹಾಸಿಗೆ, ದಿಂಬು, ತಟ್ಟೆ, ಲೋಟಗಳಲ್ಲಿ ಸಹ ಭ್ರಷ್ಟಾಚಾರ ನಡೆಸಿ, ಮಕ್ಕಳಿಗೆ ತೊಂದರೆ ನೀಡಿದ್ದು ಕಾಂಗ್ರೆಸ್” ಎಂದು ದೂರಿದೆ.