ಕಳೆದ ವಾರ ನಡೆದ ಗುಜರಾತ್ ವಿಮಾನ ದುರಂತದ ಬಳಿಕ ಸಿನಿಮಾ ನಿರ್ಮಾಪಕರೊಬ್ಬರು ನಾಪತ್ತೆಯಾಗಿದ್ದು, ಅವರ ಮೊಬೈಲ್ ಫೋನ್ ಅಪಘಾತ ಸ್ಥಳದಿಂದ ಕೇವಲ 700 ಮೀಟರ್ ದೂರದಲ್ಲಿರುವುದಾಗಿ ಪತ್ತೆಯಾಗಿದೆ. ವಿಮಾನ ಅಪಘಾತದಲ್ಲಿ ಮೃತಪಟ್ಟವರಲ್ಲಿ ಅವರೂ ಒಬ್ಬರಾಗಿರುವ ಆತಂಕದಲ್ಲಿರುವ ಕುಟುಂಬಸ್ಥರು ಸದ್ಯ ತಮ್ಮ ಡಿಎನ್‌ಎ ಮಾದರಿ ನೀಡಿದ್ದಾರೆ.
ಜೂನ್ 12ರಂದು ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟಿದ್ದ ಏರ್‌ಇಂಡಿಯಾ AI-171 ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು ಕೆಲವೇ ಕ್ಷಣಗಳಲ್ಲಿ ವೈದ್ಯಕೀಯ ಕಾಲೇಜಿನ ಆವರಣಕ್ಕೆ ಅಪ್ಪಳಿಸಿದೆ. ವಿಮಾನದಲ್ಲಿದ್ದ 242 ಮಂದಿಯಲ್ಲಿ 241 ಮಂದಿ ಮತ್ತು ಹಾಸ್ಟೆಲ್, ಮೆಸ್‌ನಲ್ಲಿದ್ದ ಒಟ್ಟ 29 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆದರೆ ಈವರೆಗೂ ಮೃತರ ಅಧಿಕೃತ ಅಂಕಿಅಂಶ ಬಿಡುಗಡೆಯಾಗಿಲ್ಲ.
ಇದನ್ನು ಓದಿದ್ದೀರಾ? ಗುಜರಾತ್ ವಿಮಾನ ದುರಂತ | ಕಾಡುವ ಹಲವು ಪ್ರಶ್ನೆಗಳು, ತಜ್ಞರೇನು ಹೇಳುತ್ತಾರೆ?
ನರೋಡಾ ನಿವಾಸಿ ಮಹೇಶ್ ಕಲಾವಾಡಿಯಾ, ಮಹೇಶ್ ಜಿರಾವಾಲಾ ಎಂದೂ ಕರೆಯಲಾಗುವ ಸಂಗೀತ ಆಲ್ಬಮ್ ನಿರ್ದೇಶಕರು, ಸಿನಿಮಾ ನಿರ್ಮಾಪಕರಾಗಿದ್ದಾರೆ. ಗುಜರಾತ್ ವಿಮಾನ ದುರಂತ ನಡೆದ ಮಧ್ಯಾಹ್ನ ಲಾ ಗಾರ್ಡನ್ ಪ್ರದೇಶದಲ್ಲಿ ಯಾರನ್ನೋ ಭೇಟಿಯಾಗಲು ಹೋಗಿದ್ದರು, ಆದರೆ ಮರಳಿ ಬಂದಿಲ್ಲ ಎಂದು ಪತ್ನಿ ಹೇತಲ್ ಹೇಳಿದ್ದಾರೆ.
“ನನ್ನ ಗಂಡ ಮಧ್ಯಾಹ್ನ 1:14ಕ್ಕೆ ನನಗೆ ಕರೆ ಮಾಡಿ ತನ್ನ ಮೀಟಿಂಗ್ ಮುಗಿದಿದೆ, ಮನೆಗೆ ಬರುತ್ತಿರುವುದಾಗಿ ತಿಳಿಸಿದರು. ಆದರೆ ಮನೆಗೆ ಬರದಿದ್ದಾಗ ನಾನು ಫೋನ್‌ಗೆ ಕರೆ ಮಾಡಿದೆ ಆದರೆ ಅದು ಸ್ವಿಚ್ ಆಫ್ ಆಗಿತ್ತು. ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಅವರ ಮೊಬೈಲ್ ಫೋನ್‌ನ ಕೊನೆಯ ಸ್ಥಳವು ಅಪಘಾತ ನಡೆದ ಸ್ಥಳದಿಂದ 700 ಮೀಟರ್ ದೂರದಲ್ಲಿ ಕಾಣಿಸಿಕೊಂಡಿದೆ” ಎಂದು ಹೇಳಿದ್ದಾರೆ.
“ಮಧ್ಯಾಹ್ನ 1:40ರ ಸುಮಾರಿಗೆ(ವಿಮಾನ ದುರಂತ ನಡೆದ ಸಮಯ) ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ಅವರ ಸ್ಕೂಟರ್ ಮತ್ತು ಮೊಬೈಲ್ ಫೋನ್ ಕಾಣೆಯಾಗಿದೆ. ಇದೆಲ್ಲವೂ ಅಸಾಮಾನ್ಯ. ಅವರು ಮನೆಗೆ ಬರಲು ಆ ಮಾರ್ಗದಲ್ಲಿ ಎಂದಿಗೂ ಬಂದಿಲ್ಲ. ಅಪಘಾತದಿಂದ ಮೃತಪಟ್ಟವರಲ್ಲಿ ಅವರೂ ಒಬ್ಬರಾಗಿರುವ ಆತಂಕವಿದೆ. ಆದ್ದರಿಂದ ನಾವು ಡಿಎನ್ಎ ಮಾದರಿಗಳನ್ನು ಸಲ್ಲಿಸಿದ್ದೇವೆ” ಎಂದು ಹೇತಲ್ ತಿಳಿಸಿದ್ದಾರೆ.
ಹಲವು ಮೃತದೇಹಗಳು ಗುರುತಿಸಲಾಗದಷ್ಟು ಸುಟ್ಟುಹೋಗಿವೆ ಅಥವಾ ಸಂಪೂರ್ಣವಾಗಿ ತುಂಡು ತುಂಡಾಗಿದೆ. ಸದ್ಯ ಮೃತರ ಪತ್ತೆಗಾಗಿ ಡಿಎನ್‌ಎ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಈವರೆಗೆ ಡಿಎನ್ಎ ಹೊಂದಾಣಿಕೆಯ ಮೂಲಕ 47 ಮೃತರ ಗುರುತು ಪತ್ತೆಯಾಗಿದೆ.
